ಐಟಿ ಉದ್ಯೋಗಕ್ಕೆ ವಿದಾಯ, ಕೃಷಿಕನಾಗಿ ಮೂರು ಪಟ್ಟು ಆದಾಯ!

ಐಟಿ ಉದ್ಯೋಗಕ್ಕೆ ವಿದಾಯ, ಕೃಷಿಕನಾಗಿ ಮೂರು ಪಟ್ಟು ಆದಾಯ!

“ಸಂಬಳದ ಕೆಲಸದ ಸುಳಿಯಿಂದ ಹೊರ ಬರಬೇಕಾದರೆ ಧೈರ್ಯ ಬೇಕು” ಎಂದು ಸಾಪ್ಟ್-ವೇರ್ ಇಂಜಿನಿಯರ್ ಉದ್ಯೋಗ ತೊರೆದು ಈಗ ಕೃಷಿಯಲ್ಲಿ ತೊಡಗಿರುವ ಅನುಪ್ ಪಾಟೀಲ್ (೨೮ ವರುಷ) ಹೇಳುವಾಗ ಕಿವಿಗೊಡ ಬೇಕಾಗುತ್ತದೆ.
ಯಾಕೆಂದರೆ, ವರುಷಕ್ಕೆ ರೂ.೬.೫ ಲಕ್ಷ ವೇತನ ಪಡೆಯುತ್ತಿದ್ದ ಅನುಪ್ ಪಾಟೀಲ್ ಆ ಸುಳಿಯಲ್ಲಿ ನಾಲ್ಕು ವರುಷ ಸಿಲುಕಿದ್ದರು. ಎರಡು ವರುಷಗಳ ಮುಂಚೆ ಆ ಸುಳಿಯಿಂದ ಪಾರಾದ ಅನುಪ್ ಈಗ ಕೃಷಿಕರಾಗಿ ಗಳಿಸುತ್ತಿರುವ ಆದಾಯ ವರುಷಕ್ಕೆ ರೂ.೨೦ ಲಕ್ಷ!
ಅದೊಂದು ದಿನ ತನ್ನ ಉದ್ಯೋಗಕ್ಕೆ ರಾಜೀನಾಮೆಯಿತ್ತು, ಕಚೇರಿಯಿಂದ ಹೊರ ನಡೆದರು ಅನುಪ್. ಮುಂದಿನ ಮೂರು ತಿಂಗಳು ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೃಷಿಕರನ್ನು ಭೇಟಿ ಮಾಡಿದರು. ಅದೇ ಅವಧಿಯಲ್ಲಿ ಯಾವ್ಯಾವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎಂಬ ಬಗ್ಗೆ ಅಧ್ಯಯನ ಮಾಡಿದರು.
ಅನಂತರ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತನ್ನ ಹಳ್ಳಿ ನಗ್ರಾಲೆಗೆ ಮರಳಿದ ಅನುಪ್, ಅಲ್ಲಿ ಕೃಷಿಯಲ್ಲಿ ತೊಡಗಿದರು. ಈಗ ಅವರ ೧೨ ಎಕ್ರೆ ಹೊಲದಲ್ಲಿ ಬಹುಬೆಳೆಗಳ ಕೃಷಿ: ಹಸುರು ಮತ್ತು ಹಳದಿ ಕ್ಯಾಪ್ಸಿಕಮ್, ಸಿಹಿಜೋಳ, ಕಬ್ಬು ಮತ್ತು ಚೆಂಡುಮಲ್ಲಿಗೆ.
೨೦೧೬ರಲ್ಲಿ ಕೃಷಿಯಲ್ಲಿ ತೊಡಗಿದಾಗ ಹಲವರು ತನ್ನನ್ನು ನಿರುತ್ಸಾಹಗೊಳಿಸಿದ್ದನ್ನು ನೆನೆಯುತ್ತಾರೆ ಅನುಪ್. ಕಳೆದ ಹಲವು ವರುಷಗಳಲ್ಲಿ ಆರಾಮದ ಜೀವನ ನಡೆಸಿದ ಅನುಪ್ ಪಾಟೀಲರಿಗೆ ಕೃಷಿಯ ಕಷ್ಟದ ಬದುಕಿಗೆ ಹೊಂದಿಕೊಳ್ಳಲಾಗದು ಎಂದವರು ಅನೇಕರು. ಆಗ ಸಂಕಲ್ಪ ಮಾಡಿದರು ಅನುಪ್, ಕೃಷಿಯಲ್ಲಿ ಯಶಸ್ಸು ಸಾಧಿಸಲೇ ಬೇಕೆಂದು. ಮೊದಲ ಬೆಳೆಯಾಗಿ ಕಬ್ಬು ಬೆಳೆದೇ ಬಿಟ್ಟರು.
ಅನಂತರ, ಸಹಾಯಧನ ಪಡೆದು ಪಾಲಿಹೌಸ್ ನಿರ್ಮಿಸಿದರು. ಅದರಲ್ಲಿ ಶುರುವಿಟ್ಟರು ಬಣ್ಣದ ಕ್ಯಾಪ್ಸಿಕಮ್ ಕೃಷಿ. ಅವರು ಖರೀದಿಸಿ ತಂದು ನೆಟ್ಟ ೭,೦೦೦ ಕ್ಯಾಪ್ಸಿಕಮ್ ಸಸಿಗಳಲ್ಲಿ ೧,೦೦೦ ಸಸಿಗಳು ಸತ್ತು ಹೋದವು. ಛಲ ಬಿಡದ ಅನುಪ್ ಪುನಃ ೧,೦೦೦ ಕ್ಯಾಪ್ಸಿಕಮ್ ಸಸಿಗಳನ್ನು ನೆಟ್ಟು ಬೆಳೆಸಿದರು. ಅಂತೂ ಉತ್ತಮ ಫಸಲು ಪಡೆದು, ಮೊದಲ ಪ್ರಯತ್ನದಲ್ಲೇ ಲಾಭ ಗಳಿಸಿದರು.
“ಕ್ಯಾಪ್ಸಿಕಮ್ ಸಸಿಗಳನ್ನು ನೆಡುವ ಮುಂಚೆಯೇ ಖರೀದಿದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆ – ಕ್ಯಾಪ್ಸಿಕಮ್ ಬೆಲೆ ಮತ್ತು ಎಷ್ಟು ಕ್ಯಾಪ್ಸಿಕಮ್ ಮಾರಾಟ ಮಾಡುತ್ತೇನೆಂದು. ಇದರಿಂದ ಅನುಕೂಲವಾಯಿತು. ಜೊತೆಗೆ, ಗುಣಮಟ್ಟದ ಬಗ್ಗೆ ಬಹಳ ನಿಗಾ ವಹಿಸಿದೆ. ಒಪ್ಪಂದ ಮಾಡಿಕೊಂಡ ಖರೀದಿದಾರರಿಗೆ ಎ-ಗ್ರೇಡ್ ಕ್ಯಾಪ್ಸಿಕಮ್ ಮಾತ್ರ ಮಾರಾಟ ಮಾಡಿದೆ. ಉಳಿದ ಫಸಲನ್ನು ಇಲ್ಲಿನ ಮಾರುಕಟ್ಟೆಯಲ್ಲೇ ಮಾರಿದೆ. ಇದರಿಂದಾಗಿ ಖರೀದಿದಾರರು ಬೆಲೆ ಬಗ್ಗೆ ನನ್ನಲ್ಲಿ ಚೌಕಾಸಿ ಮಾಡಲಿಲ್ಲ” ಎಂದು ತನ್ನ ಆರಂಭದ ಅನುಭವ ನೆನಪು ಮಾಡಿಕೊಳ್ಳುತ್ತಾರೆ ಅನುಪ್.
ಪಾಲಿಹೌಸಿನಲ್ಲಿ ಅನುಪ್ ಪಾಟೀಲ್ ಬೆಳೆದ ಮೊದಲ ಹೂವಿನ ಬೆಳೆ ಸೇವಂತಿಗೆ. ಅವರು ಅದರ ಕೃಷಿಯ ಮಾಹಿತಿ ಪಡೆದದ್ದು ಬೆಂಗಳೂರಿನ ರೈತರಿಂದ. ಮೊದಲ ೨೦ ದಿನಗಳು ಆ ಸಸಿಗಳಿಗೆ ದಿನದ ೨೪ ಗಂಟೆ ಬೆಳಕು ಬೇಕೆಂದು ತಿಳಿದಿದ್ದರು. ಅದಕ್ಕಾಗಿ, ಎಲ್‍ಇಡಿ ಬಲ್ಬುಗಳನ್ನು ರಾತ್ರಿಯಿಡೀ ಉರಿಸಿದರು. ಅಂತೂ ಉತ್ತಮ ಫಸಲು ಬಂತು. ಆದರೆ, ಮಾರುಕಟ್ಟೆಯಲ್ಲಿ ಸೇವಂತಿಗೆಯ ಬೆಲೆ ಕುಸಿಯಿತು. ಹಾಗಾಗಿ ಕಡಿಮೆ ಬೆಲೆಗೆ ಸೇವಂತಿಗೆ ಮಾರಾಟ ಮಾಡಿ, ನಷ್ಟ ಅನುಭವಿಸಿದರು. ಇದರಿಂದಾಗಿ ಕೃಷಿಯಲ್ಲಿ ಲಾಭ ಇರುತ್ತದೆ; ಹಾಗೆಯೇ ನಷ್ಟವೂ ಇರುತ್ತದೆ ಎಂಬ ದೊಡ್ಡ ಪಾಠ ಕಲಿತೆ ಎನ್ನುತ್ತಾರೆ ಅನುಪ್ ಪಾಟೀಲ್.
೨೦೧೮ರ ಕೊನೆಯಲ್ಲಿ ನಾಲ್ಕು ಎಕರೆಯಲ್ಲಿ ಚೆಂಡುಮಲ್ಲಿಗೆ ಬೆಳೆಸಿದರು ಅನುಪ್. ಅದರ ಫಸಲನ್ನು ಕಿಲೋಕ್ಕೆ ರೂ.೪೦ – ೫೦ ದರದಲ್ಲಿ ಮಾರಲು ಸಾಧ್ಯವಾಯಿತು. ಜೊತೆಗೆ, ಸಿಹಿಜೋಳ ಮತ್ತು ಕ್ಯಾಪ್ಸಿಕಮ್ ಕೃಷಿಯಿಂದಲೂ ಆದಾಯ ಗಳಿಕೆ.
ಇವೆಲ್ಲದರ ಜೊತೆಗೆ ಮೀನು ಸಾಕಣೆ ಶುರು ಮಾಡಿದರು ಅನುಪ್. ಯಾಕೆಂದರೆ, ಅವರ ಜಮೀನಿನ ಒಂದು ಭಾಗದಲ್ಲಿ ನೀರು ಬಸಿದು ಹೋಗುತ್ತಿರಲಿಲ್ಲ. ಅಲ್ಲಿ ಒಂದೂವರೆ ಎಕ್ರೆಯಲ್ಲಿ ಮೀನು ಸಾಕಣೆ ಕೆರೆ ನಿರ್ಮಿಸಿ, ಕಾಟ್ಲಾ ಮತ್ತು ಸಿಪ್ರಿನಸ್ ಜಾತಿಯ ಮೀನು ಸಾಕಿದರು. ಅದರಿಂದಲೂ ಲಾಭ ಗಳಿಸಲು ಸಾಧ್ಯವಾಯಿತು.
ಸ್ನಾತಕೋತ್ತರ ಪದವೀಧರೆಯಾದ ಪತ್ನಿಯ ಸಹಕಾರದಿಂದ ಫಾರ್ಮಿನ ಕೆಲಸಕಾರ್ಯಗಳನ್ನೆಲ್ಲ ನಿರ್ವಹಿಸುತ್ತಿದ್ದಾರೆ. ಅಂದೊಮ್ಮೆ ಉದ್ಯೋಗಿಯಾಗಿದ್ದ ಅನುಪ್ ಈಗ ತಮ್ಮ ಹೊಲದಲ್ಲಿ ೧೦ – ೧೫ ಕೆಲಸಗಾರರಿಗೆ ಉದ್ಯೋಗ ನೀಡಿದ್ದಾರೆ.
“ಪ್ರತಿಯೊಬ್ಬರ ಅನುಭವದಿಂದಲೂ ಕಲಿಯಲು ಸಾಧ್ಯವಿದೆ. ಸಣ್ಣ ರೈತನೂ ಉಪಯುಕ್ತ ಮಾಹಿತಿ ನೀಡಬಲ್ಲ. ಎಲ್ಲರಿಂದಲೂ ಕಲಿಯುವ ಉತ್ಸಾಹವೇ ನನ್ನ ಯಶಸ್ಸಿಗೆ ಕಾರಣ. ಯಾವುದೇ ವಿಷಯದ ಬಗ್ಗೆ ಯಾರ ಬಳಿ ಬೇಕಾದರೂ ಪ್ರಶ್ನೆ ಕೇಳಲು ನಾನು ತಯಾರು” ಎಂದು ತನ್ನ ಯಶಸ್ಸಿನ ಗುಟ್ಟನ್ನು ಹಂಚಿಕೊಳ್ಳುತ್ತಾರೆ ಅನುಪ್.
“ಇವತ್ತಿಗೂ ಕೃಷಿ ಎಂಬುದು ದೊಡ್ಡ ಅವಕಾಶಗಳ ಲೋಕ. ಅಲ್ಲಿ ಸಾಧ್ಯತೆಗಳು ಬಹಳ. ನಾವು ಪ್ರಯೋಗ ಮಾಡಲು ತಯಾರಿರಬೇಕು ಅಷ್ಟೇ. ಶಾಲಾಕಾಲೇಜು ಶಿಕ್ಷಣ ಪಡೆದ ಹೆಚ್ಚೆಚ್ಚು ಜನರು ಕೃಷಿಯನ್ನೊಂದು ವ್ಯವಹಾರವಾಗಿ ಪರಿಗಣಿಸಿ ಕೃಷಿಯಲ್ಲಿ ತೊಡಗಿದರೆ, ಬೇರೆ ಯಾವುದೇ ಕೈಗಾರಿಕೆಗಿಂತಲೂ ಹೆಚ್ಚಿನ ಲಾಭ ಗಳಿಸಲು ಸಾಧ್ಯ” ಎಂದು ಅನುಪ್ ಪಾಟೀಲ್ ಹೇಳುತ್ತಿದ್ದರೆ ನಾವು ಕಿವಿಗೊಡಲೇ ಬೇಕಾಗುತ್ತದೆ.
ಆಧಾರ: ದ ಬೆಟರ್ ಇಂಡಿಯಾ ವೆಬ್-ಸೈಟ್