ಐತಿಹಾಸಿಕ ಕವನ - *ಗಂಡುಗಲಿ ಕುಮಾರ ರಾಮ*

ಐತಿಹಾಸಿಕ ಕವನ - *ಗಂಡುಗಲಿ ಕುಮಾರ ರಾಮ*

ಕವನ

ಕನ್ನಡ ನಾಡಿನ,ಚಿನ್ನದ ಬೀಡಿನ

ರನ್ನದ ರಾಮನು ಗಂಡುಗಲಿ||

ಕನ್ನವ ಹಾಕುವ,ನನ್ನಿಯ ನಾಡುವ

ಕುನ್ನಿಗೆ ಸಿಂಹ ಸ್ವಪ್ನದಲಿ ||೧||

 

ಪರನಾರಿಯಣ್ಣ,ಶಿರಕಾಯೊವಣ್ಣ

ಪರಶಿವನಾಂಶದ ರಾಮಣ್ಣ |

ಧರಣಿಗೆ ಕುತ್ತನು,ತರುವಂತ ಶತೃಗೆ

ಮರಣದ ದೀಕ್ಷೆಯ ನೀಡುವನು ||೨||

 

ಕಂಪನ ಹುಟ್ಟಿಸೊ,ಕಂಪಿಲ ರಾಯನ

ಸಂಪಿಗೆ ಸುಂದರ ಯುವರಾಜ |

ಇಂಪಿನ ದನಿಯವ,ಕೆಂಪನೆ ಬಣ್ಣವ

ಕಂಪನು ಮೂಡಿಸೊ ರವಿತೇಜ||೩||

 

ಮುತ್ತಿನ ಚೆಂಡಿನ,ನೆತ್ತಿಯ ಮೇಲಕೆ

ಬಿತ್ತದು ಹೊಡೆತವು ರಾಮನದು |

ಎತ್ತರ ಜಿಗಿಯಿತು,ಚಿತ್ತವ ಕೆಡಿಸಿತು

ಬಿತ್ತದು ಮಾತೆಯ ಮನೆಯೊಳಗೆ||೪||

 

ಚೆಂಡನು ಬೇಡಲು,ಗಂಡ್ಹುಲಿ ಬಂದುದ

ಕಂಡಳು ಕಾಮದ ಚಿಕ್ಕಮ್ಮ |

ಕೆಂಡದ ಕಾಮವ,ತುಂಡರಿಸೆನ್ನಲು

ಬೆಂಡೆಯ ತೋರಿದ ಕಂದಮ್ಮ ||೫||

 

ಅದರೊಳು ಕೆತ್ತಿತು,ಗಧಗಧ ನಡುಗಿಸೊ

ಮುದವನು ನೀಡುವ ಮಾತೊಂದ|

ಓದಿದಳು ಮಾತೆಯು,ತೊದಲುವ ದನಿಯಲಿ

ಪದವನು ಪರನಾರಿ ಸೋದರ ||೬||

 

ಕೋಪಿಸಿ ಕೊಂಡಳು,ರೂಪಸಿ ಪಾಪಿಯು

ಶಾಪವ ಹಾಕುತ ಮನದಲ್ಲಿ |

ಅಪವಾದ ಕೊಡುತ,ತಾಪದಿ ದೂರಲು

ಕೋಪದಿ ಪಿತ ಸುತನ ವಧಿಸಲು||೭||

 

ಕಮ್ಮಟ ದುರ್ಗದ,ಹೆಮ್ಮೆಯ ಪುತ್ರನು

ಬಿಮ್ಮನೆ ರಾಜ್ಯವನಾಳುತಿರೆ|

ಅಮ್ಮನ ಸಂಚಿಗೆ,ಕಮ್ಮಟ ಕೀರ್ತಿಯು

ಸುಮ್ಮನೆ ಮಣ್ಣಿನ ಪಾಲಾಯ್ತು ||೮||

 

-*ಶ್ರೀ ಈರಪ್ಪ ಬಿಜಲಿ.ಕೊಪ್ಪಳ*

 

ಚಿತ್ರ್