ಐತಿಹಾಸಿಕ ತೀರ್ಪು

ಅಖಿಲ ಭಾರತ ನಾಗರಿಕ ಸೇವಾ (ಸಿವಿಲ್ ಸರ್ವಿಸ್) ಹುದ್ದೆಗಳ ಪರೀಕ್ಷೆಗಳಲ್ಲಿ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (ಎಕನಾಮಿಕಲಿ ವೀಕರ್ ಸೆಕ್ಷನ್ -ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೂ ನೀಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಕೊನೆಗೂ ಫಲ ದೊರೆತಿದೆ. ಈ ತಾರತಮ್ಯದ ವಿರುದ್ಧ ಮಧ್ಯಪ್ರದೇಶ ಮೈಹಾರ್ ನಗರದ ಆದಿತ್ಯ ನಾರಾಯಣ ಪಾಂಡೆ ಎಂಬುವವರು ಮಧ್ಯಪ್ರದೇಶ ಹೈಕೋರ್ಟ್ ನ ಮೊರೆ ಹೋಗಿದ್ದರು. ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಹಾಗೂ ನ್ಯಾಯಮೂರ್ತಿ ಸುರೇಶ್ ಜೈನ್ ಅವರಿದ್ದ ಪೀಠ ಮಹತ್ವದ ಮಧ್ಯಂತರ ಆದೇಶವನ್ನು ಮಂಗಳವಾರ (ಫೆ. ೧೮) ಪ್ರಕಟಿಸಿದೆ. ಇಡಬ್ಲ್ಯುಎಸ್ ವರ್ಗದವರಿಗೆ ಗರಿಷ್ಟ ವಯೋಮಿತಿಯಲ್ಲಿ ಐದು ವರ್ಷ ವಿನಾಯಿತಿ ನೀಡಬೇಕಲ್ಲದೆ, ಇತರ ಮೀಸಲು ಅಭ್ಯರ್ಥಿಗಳಿಗೆ ನೀಡುವಂತೆ ಗರಿಷ್ಟ ೯ ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ಒದಗಿಸಬೇಕು ಎಂದು ಈ ಪರೀಕ್ಷೆಗಳನ್ನು ಸಂಘಟಿಸುವ ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ ಸಿ) ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಇದು ಐತಿಹಾಸಿಕ ತೀರ್ಪು ಎಂದೇ ಪರಿಗಣಿತವಾಗುತ್ತಿದೆ. ಏಕೆಂದರೆ, ಆರ್ಥಿಕವಾಗಿ ಹಿಂದುಳಿದವರನ್ನು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಇದುವರೆಗೆ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡಲಾಗುತ್ತಿತ್ತು. ಸಾಮಾನ್ಯ ವರ್ಗದವರಿಗೆ ನಿಗದಿ ಪಡಿಸಿದ ಮಾನದಂಡಗಳನ್ನೇ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೂ ಅನ್ವಯಿಸಲಾಗುತ್ತಿತ್ತು. ಆದರೆ ಈ ಅಭ್ಯರ್ಥಿಗಳು ಮೀಸಲು ಅಭ್ಯರ್ಥಿಗಳಿಗೆ ಸಮವಾಗಿದ್ದು, ಅವರಿಗೆ ಸಿಗುವ ಸೌಲಭ್ಯಗಳನ್ನೇ ನೀಡುವುದು ನ್ಯಾಯೋಜಿತ ಎಂಬ ವಾದ ವ್ಯಾಪಕವಾಗಿತ್ತು.
ಯುಪಿಎಸ್ ಸಿ ೨೦೨೫ನೇ ಸಾಲಿನ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಒಟ್ಟು ೧೧೨೯ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಅನುವು ಮಾಡಿಕೊಂಡಿದ್ದು, ಆ ಪೈಕಿ ನಾಗರಿಕ ಸೇವಾ ಪರೀಕ್ಷೆಗೆ ೯೭೯, ಭಾರತೀಯ ಅರಣ್ಯ ಸೇವೆಗೆ ೧೫೦ ಹುದ್ದೆಗಳನ್ನು ಮೀಸಲಿರಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಅಂಗವಿಕಲರಿಗೆ ಮತ್ತು ಮಾಜಿ ಯೋಧರಿಗೆ ಗರಿಷ್ಟ ೫ ವರ್ಷ ಹಾಗೂ ಹಿಂದುಳಿದ ವರ್ಗದವರಿಗೆ ೩ ವರ್ಷಗಳ ವಯೋಮಿತಿ ಸಡಿಲಿಕೆಯು ನಾಗರಿಕ ಸೇವಾ ಹುದ್ದೆಗಳ ಪರೀಕ್ಷೆಯಲ್ಲಿ ಈಗಾಗಲೇ ಇದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗರಿಷ್ಟ ೬ ಬಾರಿ, ಹಿಂದುಳಿದ ವರ್ಗದವರು ೯ ಬಾರಿ ಪರೀಕ್ಷೆಗೆ ಹಾಜರಾಗಿ ತಮ್ಮ ಪ್ರತಿಭೆ/ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದವರು ಪರೀಕ್ಷೆಗೆ ಹಾಜರಾಗಲು ಯಾವುದೇ ಮಿತಿ ನಿಗದಿಪಡಿಸಲಾಗಿಲ್ಲ. ಈ ಸೌಲಭ್ಯವನ್ನು ಆರ್ಥಿಕವಾಗಿ ಹಿಂದುಳಿದವರಿಗೂ ವಿಸ್ತರಿಸಬೇಕೆಂಬ ವಾದವನ್ನು ಹಲವರು ಮುಂದಿಟ್ಟಿದ್ದರು. ಈ ವಾದವನ್ನು ಹೈಕೋರ್ಟ್ ನ್ಯಾಯಾಧೀಶರು ಪುರಸ್ಕರಿಸಿದ್ದು, ಇದರಿಂದ ಎಲ್ಲ ಆರ್ಥಿಕ ಹಿಂದುಳಿದ ಅಭ್ಯರ್ಥಿಗಳಿಗೆ ಸೌಲಭ್ಯ ದೊರೆಯಲಿರುವುದು ಸ್ವಾಗತಾರ್ಹವಾಗಿದೆ. ಆದರೆ ಇದು ಕೇವಲ ಮಧ್ಯಂತರ ಆದೇಶ ಎಂದು ಸ್ಪಷ್ಟ ಪಡಿಸಿರುವ ಹೈಕೋರ್ಟ್ ನ್ಯಾಯಾಧೀಶರು, ಅಂತಿಮ ತೀರ್ಪಿಗೆ ಇದು ಒಳಪಡುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲ ಕಾಲದ ಬಳಿಕ ಹೊರಬೀಳಲಿರುವ ಅಂತಿಮ ತೀರ್ಪಿನಲ್ಲೂ ಆರ್ಥಿಕ ಹಿಂದುಳಿದವರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ಎಲ್ಲರದಾಗಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ೨೦-೦೨-೨೦೨೫
ಚಿತ್ರ ಕೃಪೆ: ಇಂಟರ್ನೆಟ್ ತಾಣ