ಐತಿಹಾಸಿಕ ಪುರಾತತ್ವ ಅವಶೇಷಗಳಿರುವ ಕುಂಟಲಗುಡ್ಡೆಯ ಸಂರಕ್ಷಣೆ ಅಗತ್ಯ
ಉಡುಪಿ ಜಿಲ್ಲೆಯ ಮೂಡುಬೆಳ್ಳೆ - ದೆಂದೂರುಕಟ್ಟೆ ನಡುವೆ ಸಿಗುವ ಕುಂತಳನಗರದ ಹಿಂದಿನ ಹೆಸರು (ಸ್ಥಳನಾಮ) ಕುಂಟಲ ಗುಡ್ಡೆ. ಕುಂತಳನಗರ ಪೇಟೆ, ಕುಂಟಲ ಗುಡ್ಡೆಯ ಪಶ್ಚಿಮ ಭಾಗದ ಬುಡದಲ್ಲಿದೆಯಾದರೆ; ಅಂಗನವಾಡಿ, ಶಾಲೆ, ಒಂದಷ್ಟು ಮನೆಗಳು ಕುಂಟಲಗುಡ್ಡೆಗೆ ಹತ್ತುವ ದಾರಿಯಲ್ಲಿದೆ. ಇಲ್ಲಿಯೇ ಮುಂದೆ ಗುಡ್ಡದ ಒಂದು ತುದಿಯಲ್ಲಿ ಎತ್ತರದಲ್ಲಿ ಚರ್ಚ್ ಇದೆ. ಈ ಗುಡ್ಡೆಯು ಪೂರ್ವ ದಕ್ಕಿಗೆ (ಮಣಿಪುರ, ಕೊಡಂಗಲ, ಬೆಳ್ಳೆ) ಹರಡಿಕೊಂಡಿದೆ.
ಕುಂಟಲಗುಡ್ಡೆಯಲ್ಲಿ ಜನ ವಸತಿ ಇಲ್ಲ. ಜನ ಸಂಚಾರವೂ ಇಲ್ಲ. ಗುಡ್ಡೆಯ ಪೂರ್ವದ ಕೊನೆಯಲ್ಲಿ ಕಲ್ಲು ಕೋರೆ ಇದ್ದು, ಇದಕ್ಕಾಗಿ ಮಣ್ಣಿನ ರಸ್ತೆಯೊಂದು ಇದೆಯಷ್ಟೆ.
ಈ ರಸ್ತೆ ಇರುವುದರಿಂದ ಗುಡ್ಡಕ್ಕೆ ಕೆಲವರು ವಾಹನದಲ್ಲಿ ಬಂದು ಗುಡ್ಡದ ಅಲ್ಲಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಗುಡ್ಡ, ಮಣಿಪುರ ಮತ್ತು ಬೆಳ್ಳೆ ಗ್ರಾಮ ಪಂಚಾಯತ್ ಗೆ ಸೇರಿರುವುದರಿಂದ, ಈ ಎರಡೂ ಪಂಚಾಯತ್ ನ ಆಡಳಿತ ವ್ಯವಸ್ಥೆ, ಗುಡ್ಡದಲ್ಲಿ ಪ್ಲಾಸ್ಟಿಕ್ ಸುರಿಯುವುದರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಕುಂಟಲಗುಡ್ಡೆಯ ಮಧ್ಯ ಭಾಗದ ನಿರ್ಜನ ಸ್ಥಳಗಳಲ್ಲಿ ಕೆಲವೊಂದು ಪುರಾತತ್ವ ನೆಲೆಗಳು ಇತ್ತೀಚೆಗೆ ಇಲ್ಲಿ ಸುತ್ತಾಡಿದಾಗ ನನಗೆ ಕಂಡು ಬಂತು. ಇವುಗಳನ್ನು ಮತ್ತು ಈ ಗುಡ್ಡದಲ್ಲಿ ಪುರಾತತ್ವ ತಜ್ಞರು ವಿಸ್ತೃತವಾಗಿ ಸಂಶೋಧನೆ ನಡೆಸುವ ಕೆಲಸ ಆಗಬೇಕಾಗಿದೆ. ಹೀಗೆ ಮಾಡಿದಲ್ಲಿ ಇನ್ನಷ್ಟೂ ಪುರಾತತ್ವ ವಿಷಯಗಳು, ಅವಶೇಷಗಳು ಬೆಳಕಿಗೆ ಬರಲು ಸಾಧ್ಯ. ಇಲ್ಲಿರುವ ಪುರಾತತ್ವ ಸ್ಥಳ ಮತ್ತು ವಸ್ತುಗಳನ್ನು ಸಂರಕ್ಷಣೆ ಮಾಡುವ ಮತ್ತು ಇತರರಿಂದ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತು ಪುರಾತತ್ವ ಇಲಾಖೆ ಮಾಡಬೇಕಾಗಿದೆ.
ಕುಂಟಲಗುಡ್ಡೆಯ ಮಧ್ಯ ಭಾಗದಲ್ಲಿ ಒಂದು ಚಿತ್ರ ಶಿಲಾ ಶಾಸನ ಅಥವಾ ಶಾಸನ ಇಲ್ಲವೇ ವೀರಗಲ್ಲು ಇದೆ. ಇದರಲ್ಲಿ ಸೂರ್ಯ, ಚಂದ್ರ ಮತ್ತು ಶಿವ ಲಿಂಗ ಕಂಡುಬರುತ್ತದೆ. ಇವುಗಳ ಕೆಳಗಿನ ಭಾಗ ತುಂಡಾದಂತೆ ಕಾಣುತ್ತದೆ. ಶಾಸನದ ಕೆಳಗಿನ ಅರ್ಧ ಭಾಗ ತುಂಡಾಗಿ ಸ್ಥಳದಲ್ಲಿ ಲಭ್ಯವಿಲ್ಲದೆ ಇರುವುದರಿಂದ ಈ ಕಲ್ಲು ಶಿಲಾ ಶಾಸನವೋ, ವೀರಗಲ್ಲೋ, ಚಿತ್ರಶಿಲಾ ಶಾಸನವೋ ಎಂಬುದು ಸ್ಪಷ್ಟವಾಗುವುದಿಲ್ಲ.
ಇಲ್ಲಿಯೇ ಸಮೀಪ ಒಂದು ಪುರಾತನ ಕಾಲದ (ಜೈನರ ಕಾಲದ್ದು ?) ಅಪೂರ್ವವಾದ್ದೊಂದು ಗುಹೆ ಇದೆ. ಈ ಪುರಾತನ ಕಾಲದ ಗುಹೆಯನ್ನು ಮಣಿಪುರ ಜಗನ್ನಾಥ ಶೆಟ್ಟಿ ಎಂಬವರು ಕೆಲವು ದಶಕಗಳ ಹಿಂದೆ ಬಳಕೆ ಮಾಡುತ್ತಿದ್ದ ಕುರುಹುಗಳು ಸ್ಪಷ್ಟವಾಗುತ್ತದೆ. ಅವರು ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಮುಂದಾಗಿ ಬಳಿಕ ಅರ್ಧದಲ್ಲಿ ಕೈಬಿಟ್ಟಂತೆ ಇಲ್ಲಿನ ಒಂದೆರಡು ಪಾಳುಬಿದ್ದ ಗುಡಿ ಮತ್ತು ಪಂಚಾಂಗ ಇತ್ಯಾದಿಗಳಿಂದ ಅಂದಾಜಿಸಬಹುದಾಗಿದೆ.
ಇಲ್ಲಿರುವ ಒಂದು ಚಿಕ್ಕ ಪಾಳುಬಿದ್ದ ಗುಡಿಯೊಳಗೆ ಇಂದಿಗೂ ಒಂದು ಕಲ್ಲಿದ್ದು, ದೂರದಿಂದ ನೋಡುವಾಗ ನಾಗನ ಕಲ್ಲಿನಂತೆ ಭಾಸವಾಗುತ್ತದೆ. ಗುಡ್ಡದಲ್ಲೊಂದು ಅತೀ ಪುರಾತನ ನಶಿಸುತ್ತಿರುವ ಕೆರೆ ಇದೆ ಮತ್ತು ಈ ಕೆರೆಯ ಪಕ್ಕವೇ ಪುರಾತನ ಕಾಲದಲ್ಲಿ ಅಜೀವಿಕರೋ, ನಾಥ ಪಂಥದವರೋ, ಜೈನ ಮುನಿಗಳೋ ಯಾರೋ ತಪಸ್ವಿಗಳು ಧ್ಯಾನ ಮಾಡುತ್ತಿದ್ದ ಗುಹೆಯೊಂದು ಇದೆ.
ಈ ಗುಹೆಯ ಮಹತ್ವವನ್ನು ಅರಿತಿರುವ ಸ್ಥಳೀಯ ಧ್ಯಾನಾಸಕ್ತರು ಈ ಗುಹೆಯನ್ನು "ದಾದ್ರಿ ತಪೋ ಮಂಚ, ಮೋಕ್ಷ ಗಿರಿ" ಎಂದು ಗುರುತಿಸಿರುವುದು ಕಂಡುಬರುತ್ತದೆ. ಬ್ರಿಟೀಷ್ ಆಡಳಿತ ಕಾಲದ ಗಡಿ ಕಲ್ಲಿನಂತೆ ಕಾಣುವ ಕೆಲವು ಕಲ್ಲುಗಳೂ ಇಲ್ಲಿವೆ.
ಕುಂಟಲಗುಡ್ಡೆ ಒಂದು ಐತಿಹಾಸಿಕ ಮಹತ್ವದ ಸ್ಥಳ ಎಂಬುದು ಇಲ್ಲಿ ಕಂಡುಬಂದ ಪುರಾತತ್ವ ಅವಶೇಷಗಳಿಂದ ಖಚಿತವಾಗುತ್ತದೆ. ಇಂಥ ಗುಡ್ಡದಲ್ಲಿ ಕೆಲವೆಡೆ ಕಾಂಡೋಮ್ ಪ್ಯಾಕೆಟ್ ಗಳೂ, ಬಿಯರ್ ಬಾಟಲಿಗಳೂ ಬಿದ್ದುಕೊಂಡಿರುವುದು ಕಂಡುಬರುತ್ತಿದೆ. ಈ ಗುಡ್ಡವನ್ನು ಸಂರಕ್ಷಣೆ ಮಾಡದೆ, ಹೀಗೆಯೇ ಬಿಟ್ಟದ್ದೇ ಆದರೆ ಅನೈತಿಕ ವ್ಯವಹಾರಗಳ ತಾಣವಾಗಿಯೂ, ಡಂಪಿಂಗ್ ಯಾರ್ಡ್ ಆಗಿಯೂ ಬದಲಾಗುವ ಎಲ್ಲಾ ಸಾಧ್ಯತೆಗಳು ಖಂಡಿತವಾಗಿಯೂ ಇದೆ. ಆದುದರಿಂದ ಸ್ಥಳೀಯ ಆಡಳಿತ ಸಂಸ್ಥೆಗಳು ಈ ಗುಡ್ಡವನ್ನು ಇಲ್ಲಿರುವ ಐತಿಹಾಸಿಕ ಮಹತ್ವದ ಪುರಾತತ್ವ ಅವಶೇಷಗಳ ಸಹಿತ ಸಂರಕ್ಷಣೆ ಮಾಡುವ ಕಡೆಗೆ ಗಂಭೀರವಾಗಿ ಮತ್ತು ತುರ್ತಾಗಿ ಗಮನಹರಿಸಬೇಕಾಗಿದೆ.
ಚಿತ್ರ ವಿವರ: ೧. ಅರ್ಧ ತುಂಡಾಗಿ ಉಳಿದಿರುವ ಶಾಸನ ಶಿಲೆ
೨. ಪಾಳು ಬಿದ್ದ ಗುಡಿಯೊಳಗಿನ ಕಲ್ಲು
೩. ನಾಶದ ಅಂಚಿನಲ್ಲಿರುವ ಕೆರೆ
೪. ಪುರಾತನ ಗುಹೆ
೫. ಬ್ರಿಟೀಷರ ಆಡಳಿತ ಕಾಲದ ಕಲ್ಲು?
ಚಿತ್ರ-ಬರಹ: *ಶ್ರೀರಾಮ ದಿವಾಣ*