ಐದನೇ ಗೋಡೆ ಮತ್ತು ಇತರ ಕಥೆಗಳು
ತೆಲುಗು ಭಾಷೆಯ ಖ್ಯಾತ ಕತೆಗಾರ್ತಿ ಹಾಗೂ ಪತ್ರಕರ್ತೆ ಕಲ್ಪನಾ ರೆಂಟಾಲಾ ಅವರ ಕಥಾ ಸಂಕಲನವನ್ನು ರಂಗನಾಥ ರಾಮಚಂದ್ರರಾವು ಅವರು ‘ಐದನೇ ಗೋಡೆ ಮತ್ತು ಇತರ ಕಥೆಗಳು' ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಡಾ ಎಚ್ ಎಲ್ ಪುಷ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...
“ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿರುವ ‘ಐದನೇ ಗೋಡೆ’ ಹಲವು ಕಾರಣಕ್ಕೆ ಬಹುಮುಖ್ಯವಾದ ಅನುವಾದಿತ ಕಥಾಸಂಕಲನವಾಗಿದೆ. ಇದನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು ಹೈದರಾಬಾದಿನಲ್ಲಿ ವಾಸಿಸುತ್ತಿರುವ ರಂಗನಾಥ ರಾಮಚಂದ್ರರಾವು. ರಂಗನಾಥ್ ಕನ್ನಡದ ಓದುಗರಿಗೆ ಈಗಾಗಲೇ ಪರಿಚಿತವಾಗಿರುವ ಸಮರ್ಥ ಅನುವಾದಕರು. ಸಹಜವಾಗಿಯೇ ಅನುವಾದಕ್ಕಾಗಿ ತೆಲುಗಿನ ಉತ್ತಮ ಕಥಾಸಂಕಲನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನುವಾದವೆನ್ನುವುದು ಸೃಜನಾತ್ಮಕವಾಗಿ ನಡೆಯಬೇಕೆನ್ನುವುದು ಎಲ್ಲರ ನಿರೀಕ್ಷೆ. ಈ ಹಿಂದೆ ಅನುವಾದವನ್ನು ಕಲೆಯೆಂದೇ ಕರೆಯಲಾಗುತ್ತಿತ್ತು. ಮೂಲ ಭಾಷೆಯನ್ನು ಬಲ್ಲವರು ಮೂಲದೊಂದಿಗೆ ಅನುವಾದಿತ ಕೃತಿಯನ್ನಿಟ್ಟು ಅದರ ಓರೆಕೋರೆಗಳ ಬಗ್ಗೆ ಚರ್ಚಿಸಿದ ಹಲವಾರು ಸಂದರ್ಭಗಳನ್ನು ನಾವು ಕಂಡಿದ್ದೆವು. ಈಗ ಅನುವಾದವೆನ್ನುವುದು ಹೆಚ್ಚು ಪ್ರಮಾಣದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಎಲ್ಲರೂ ಎಲ್ಲವನ್ನು ಗಮನಿಸಲು ಸಾಧ್ಯವಾಗದಷ್ಟು ಅನುವಾದವಾಗುತ್ತಿರುವುದರಿಂದ ಕೆಲವು ಬಾರಿ ಮೂಲ ಲೇಖಕರ ಕವಿತೆ, ಕಥೆ, ಕಾದಂಬರಿ, ನಾಟಕಗಳ ಎಳೆಗಳನ್ನು ಕದಿಯುವವರ ಕೃತಿಚೌರ್ಯ ಪರಂಪರೆಯೂ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ಪುಸ್ತಕ ಮುದ್ರಣ ಮತ್ತು ಪ್ರಕಾಶನ ಉದ್ಯಮವಾಗಿರುವುದು ಇದಕ್ಕೆ ಕಾರಣವಾಗಿದ್ದರೂ ಇರಬಹುದು.
ಒಂದು ಕೃತಿ ತನ್ನ ಮೂಲ ಭಾಷೆಯಿಂದ ಮತ್ತೊಂದು ಭಾಷೆಗೆ ಹೋಗುವ ಸಂದರ್ಭದಲ್ಲಿ ಅದಕ್ಕೆ ಅದರದೇ ಹಲವು ವಿಶಿಷ್ಟತೆಗಳಿರಬೇಕಾಗುತ್ತದೆ. ಅನುವಾದಿಸಲ್ಪಡುವ ಆ ಕೃತಿ ತನ್ನ ಭಾಷೆಯ ಸಂಸ್ಕೃತಿ ಹಾಗೂ ವೈಶಿಷ್ಟ್ಯವನ್ನು ಪರಿಚಯಿಸುವಂತಿರಬೇಕು. ಅನುವಾದಿಸುವ ಅನುವಾದಕ ತಾನು ಈ ಕೃತಿಯನ್ನು ಯಾಕೆ ಆರಿಸಿಕೊಂಡೆ ಹಾಗೂ ಅದರ ವಿಶಿಷ್ಟತೆಯೇನು ಎಂಬುದನ್ನು ವಿವರಿಸಿಕೊಳ್ಳಬೇಕಾಗುತ್ತದೆ.
ಕಲ್ಪನಾ ರೆಂಟಾಲ ತೆಲುಗಿನ ಪತ್ರಕರ್ತ ಹಾಗೂ ಲೇಖಕರಾದ ರೆಂಟಾಲ ಗೋಪಾಲಕೃಷ್ಣ ಅವರ ಮಗಳು. ಕಲ್ಪನಾ ಅವರು ಕೂಡ ಪತ್ರಕರ್ತೆ ಹಾಗೂ ಲೇಖಕಿಯಾಗಿದ್ದು ಅಮೇರಿಕಾ ದೇಶದಲ್ಲಿ ನೆಲೆಸಿದ್ದಾರೆ. ತೆಲುಗಿನ ಸಮಕಾಲೀನ ಬರಹಗಾರರಲ್ಲಿ ಒಬ್ಬರಾಗಿದ್ದು ಕಥೆ, ಕವಿತೆ, ಕಾದಂಬರಿ ಹಾಗೂ ಅನುವಾದ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ‘ಅಯಿದೋ ಗೋಡ’ ಎಂಬ ಕಥಾ ಸಂಕಲನವನ್ನು, ‘ತನ್ಹಾಯಿ’ ಎಂಬ ಕಾದಂಬರಿಯನ್ನು, ‘ನೇನು ಕನಿಪಿಂಚೇ ಪದಂ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ‘ಅಯಿದೋ ಗೋಡ’ ಹಲವು ಮುದ್ರಣಗಳನ್ನು ಕಂಡ, ಪ್ರಶಸ್ತಿಗಳನ್ನು ಪಡೆದ ತೆಲುಗು ಕೃತಿಯಾಗಿದೆ. ಈ ಸಂಕಲನದ ಹದಿನೈದು ಕಥೆಗಳು ವೇಗವಾಗಿ ಬದಲಾಗುತ್ತಿರುವ ಆಧುನಿಕ ಸಮಕಾಲೀನ ಮಹಿಳೆಯರ ಜಗತ್ತನ್ನು ಚಿತ್ರಿಸಿದ ಕಾರಣಕ್ಕೆ ನಿರಂತರವಾಗಿ ಚರ್ಚೆಗೆ ಒಳಗಾಗಿವೆ.
ಒಟ್ಟು ಹದಿನೈದು ಕಥೆಗಳನ್ನು ಒಳಗೊಂಡಿರುವ ಈ ಸಂಕಲನ ಆಧುನಿಕವಾಗಿ ಜೀವಿಸ ಬಯಸುವ ಸ್ತ್ರೀ ಜಗತ್ತಿನ ಸಂಕಟದ ಕಥನಗಳನ್ನು ಬಿಚ್ಚಿಡುತ್ತದೆ. ಈ ಹಿಂದೆಯೂ ಕನ್ನಡದ ಪರಿಸರದಲ್ಲಾಗಲೀ, ತೆಲುಗಿನ ಪರಿಸರದಲ್ಲಾಗಲೀ ಸಹಜವಾಗಿ ಇರುವ ವಿವಾಹ, ವಿವಾಹದೊಳಗಿನ ಅತಿಕ್ರಮಣಗಳು, ಸಾಮಾಜಿಕ ಸಮಸ್ಯೆಗಳು, ಲಿಂಗಾಧಾರಿತ ಶೋಷಣೆಗಳು - ಈ ಮುಂತಾದ ಸಮಸ್ಯೆಗಳನ್ನು ಸಾಹಿತ್ಯದ ಅಭಿವ್ಯಕ್ತಿಯ ಮೂಲಕ ಚಿತ್ರಿಸುತ್ತಾ ಬರಲಾಗಿದೆ. ಬದಲಾಗುತ್ತಿರುವ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಜೊತೆಗೆ ಸಾಹಿತ್ಯದ ಅಭಿವ್ಯಕ್ತಿಯೂ ಬದಲಾಗುತ್ತದೆ. ಆರ್ಥಿಕ ವ್ಯವಸ್ಥೆಯ ಒಂದು ಭಾಗವಾದ ಉದ್ಯೋಗವೇ ಕಾರಣವಾಗಿ ಹುಟ್ಟಿದ ಊರುಗಳನ್ನು ಬಿಟ್ಟು ಬೇರೆ ರಾಜ್ಯ, ದೇಶಗಳಲ್ಲಿ ವಾಸಿಸುವ ಸಂದರ್ಭ ಬಂದಾಗ ನಿಧಾನವಾಗಿ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಈ ನಗರ ಕೇಂದ್ರಿತ ಸಂಘರ್ಷಗಳು ಈಗಾಗಲೇ ಕಥೆ, ಕಾದಂಬರಿ ಪ್ರಕಾರಗಳಲ್ಲಿ ಬಂದಿವೆ. ತೆಲುಗು ಮತ್ತು ಕನ್ನಡದ ಎರಡೂ ಭಾಷೆಗಳಲ್ಲಿ ಈಗಾಗಲೇ ನಡೆದಿರುವ ‘ಸ್ತ್ರೀವಾದಿ’ ಕೇಂದ್ರಿತ ಕೃತಿಗಳ ಚರ್ಚೆಯನ್ನು ಸಹ ನಾವು ಗಮನಿಸಿದ್ದೇವೆ. 80ರ ದಶಕದ ಸಂದರ್ಭದಲ್ಲಿ ಕನ್ನಡದ ಸಂದರ್ಭದಲ್ಲಿ ದಲಿತ, ಬಂಡಾಯ, ಪ್ರಗತಿಶೀಲ, ನವ್ಯ, ಹಾಗೂ ಸ್ತ್ರೀವಾದಿ ಚಳುವಳಿಗಳು ಬದುಕಿಗೂ, ಸಾಹಿತ್ಯಕ್ಕೂ ನೀಡಿದ ಪ್ರೇರಣೆಗಳನ್ನು ಕಂಡಿದ್ದೇವೆ. ತೆಲುಗಿನಲ್ಲಿಯೂ ಸಹ ದಿಗಂಬರ ಸಾಹಿತ್ಯ, ಅರಸಂ, ವಿರಸಂ ಚಳುವಳಿಗಳನ್ನು ಬಂದು ಹೋಗಿವೆ.
ಕಲ್ಪನಾ ರೆಂಟಾಲ ಅವರ ಕಥನಗಳು ಭಾರತವನ್ನು ಒಳಗೊಂಡಂತೆ ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಕೌಟುಂಬಿಕ ದೌರ್ಜನ್ಯಗಳು, ಹೆಣ್ಣುಗಂಡಿನ ಒಡನಾಟದಲ್ಲಿನ ಲೈಂಗಿಕ ಸಂಬಂಧಗಳು, ಸಾಹಚರ್ಯಕ್ಕಾಗಿ ಹಂಬಲಿಸುವ ಹೆಣ್ಣುಗಳು, ಲೆಸ್ಬಿಯನ್ ಹಾಗೂ ಗೇ ಸಾಹಚರ್ಯಗಳು, ಇಳಿವಯಸ್ಸಿನಲ್ಲಿ ವಯೋಸಹಜವಾಗಿ ಆಗುವ ಹೆಣ್ಣುದೇಹದ ಬದಲಾವಣೆಗಳು ಉಂಟುಮಾಡುವ ಕಿರಿಕಿರಿಗಳು, ಅತ್ಯಾಚಾರವನ್ನು ಇಂದು ಎದುರಿಸಬೇಕಾದ ಕ್ರಮ - ಹೀಗೆ ಜಾಗತಿಕವಾಗಿ ಮಹಿಳೆಯರೆಲ್ಲರೂ ಎದುರಿಸುತ್ತಿರುವ ಸಂಕಷ್ಟಗಳು ಇಲ್ಲಿನ ಕಥೆಗಳಲ್ಲಿ ವ್ಯಕ್ತಗೊಂಡಿವೆ.
‘ಸ್ತ್ರೀ ವಿಮೋಚನೆ’ಯೆಂದರೆ ಯಾವುದು ಎಂಬುದು ಕೊನೆಗೂ ಉಳಿಯುವ ಪ್ರಶ್ನೆ. ಹೆಣ್ಣೆಂದು ಕೀಳಾಗಿ ಕಾಣುವ ಸಮಾಜದಿಂದ, ತನ್ನ ಸಹವರ್ತಿಯಾದ ಪುರುಷ ದೌರ್ಜನ್ಯದಿಂದ, ಹೆಣ್ಣಿನ ದೇಹವನ್ನೇ ಪ್ರಧಾನವಾಗಿ ಇಟ್ಟು ನೋಡುವ ಆಲೋಚನಾ ಕ್ರಮದಿಂದ ಬಿಡುಗಡೆ ಪಡೆಯಬೇಕೆನ್ನುವುದು ಅಂತಿಮವಾಗಿ ಎಲ್ಲಾ ಸ್ತ್ರೀವಾದಿಗಳ ಅಂತಿಮ ಗುರಿ. ಈ ಎಲ್ಲಾ ಚಿಂತನೆಗಳಿಗೆ ಅಭಿವ್ಯಕ್ತಿ ರೂಪ ಎಂಬಂತೆ ಇಲ್ಲಿನ ಕಥೆಗಳು ಕಂಡುಬರುತ್ತವೆ.
ಅಮೇರಿಕಾವನ್ನು ಕೇಂದ್ರವಾಗಿರಿಸಿ ಬಿಟ್ಟು ಬಂದ ಭಾರತ, ನೆಲೆಯೂರಿರುವ ಅಮೇರಿಕಾ ಎಂಬ ದ್ವಂದ್ವಗಳಲ್ಲಿ ಬದುಕುವ ಚಿತ್ರಣಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಸ್ತ್ರೀವಾದವೆಂಬ ಸಿದ್ಧಾಂತ ರೂಪದ ಕಥೆಗಳು ಇವಾಗದೆ ಸಮಸ್ಯೆಗಳ ಮೂಲವನ್ನು ವಿಶ್ಲೇಷಿಸುವ ಶೈಲಿಯ ಕಥನಗಳು ಇವಾಗಿವೆ. ಕೇವಲ ಒಂದು ಸಂದರ್ಭವನ್ನು ಮಾತ್ರ ಕಥೆಯಾಗಿಸದೆ ಪಾತ್ರಗಳ ಇಡೀ ಬದುಕನ್ನು ಈ ಕಥೆಗಳು ಹಿಡಿದಿಡುತ್ತವೆ. ಪಾತ್ರಗಳು ಕಾಲ ದೇಶಗಳಿಂದ ದೂರಾಗಿ ವರ್ತಮಾನದಲ್ಲಿ ಜೀವಿಸುತ್ತಿದ್ದು ಅರೋಗ್ಯಕರವಾದ ವಾತಾವರಣನ್ನು ನಿರ್ಮಿಸಿಕೊಳ್ಳಲು ಹೋರಾಟ ನಡೆಸುತ್ತವೆ. ಆಕರ್ಷಕ ಹಾಗೂ ಆಧುನಿಕವಾದ ಜೀವನ ಶೈಲಿ ಎಲ್ಲರಿಗೂ ಬೇಕು. ಅದರ ಸೌಲಭ್ಯಗಳೂ ಬೇಕು. ಆದರೆ ಅದರೊಂದಿಗೆ ಬರುವ ಹೊಸ ರೀತಿಯ ಸಮಸ್ಯೆಗಳಿಗೆ ಎದುರಾಗದೆ, ದಿಟ್ಟವಾದ ತೀರ್ಮಾನ ತೆಗೆದುಕೊಳ್ಳದೆ ವಿಧಿಯಿಲ್ಲ ಎಂಬುವ ಹೋರಾಟದ ಕಥನಗಳು ಇವಾಗಿವೆ.
ಈ ಹೋರಾಟದಲ್ಲಿ ಕೆಲವು ಪಾತ್ರಗಳು ಸೋಲುತ್ತವೆ ಮತ್ತು ಕೆಲವು ಗೆಲ್ಲುತ್ತವೆ. ಹೀಗಾಗಿ ಇಲ್ಲಿನ ಮುಖ್ಯ ಪಾತ್ರಗಳೆಲ್ಲವೂ ನಿಧಾನವಾಗಿ ತಮ್ಮ ನೆಲದ ಸಾಂಪ್ರದಾಯಿಕ ಚಿಂತನೆಗಳಿಂದ ಪ್ರಗತಿಪರವಾದ ನಿರ್ಧಾರಗಳತ್ತ ಹೊರಳುತ್ತವೆ. ತಮ್ಮ ತಮ್ಮ ಬದುಕಿನ ಭಾರಗಳನ್ನು ತಾವೇ ದಿಟ್ಟವಾಗಿ ಹೊರುತ್ತವೆ. ಸಂಘರ್ಷಗಳು ಎದುರಾದಾಗ ತಮ್ಮ ತಮ್ಮ ಪಾತ್ರಗಳ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳುತ್ತವೆ. ಪ್ರತಿ ಪಾತ್ರವೂ ನಾನು ಯಾರು, ನಾನು ಬದುಕುತ್ತಿರುವ ಸ್ಥಿತಿಯೇನು, ನನಗೆ ಬೇಕಾಗಿರುವ ಸ್ಥಿತಿ ಯಾವುದು ಎಂಬ ವಿಶ್ಲೇಷಣೆಗೆ ತೊಡಗುತ್ತದೆ. ಸಮಾಜದೊಂದಿಗೆ ಜೀವಿಸುತ್ತಲೇ ಸಮಾಜಕ್ಕೆ ಎದುರಾಗುವ, ತನ್ನ ಹೋರಾಟಕ್ಕೆ ಸಮಾಜದ ಅಂಗೀಕಾರ ನಿರೀಕ್ಷಿಸುವ ಎರಡು ಬಾಯಿಯ ಖಡ್ಗದ ಹಲವಾರು ಕಾಡುವ ಕಥನಗಳು ಇಲ್ಲಿವೆ. ತಮ್ಮ ಬದುಕನ್ನೇ ಪ್ರಯೋಗಶಾಲೆಯಾಗಿಸಿ ಹೋರಾಟಕ್ಕಿಳಿಯುವ ಅನಿವಾರ್ಯತೆಯಲ್ಲಿ ಇಲ್ಲಿನ ಪಾತ್ರಗಳು ಜೀವಿಸುತ್ತವೆ.
‘ಕಪ್ಲೆಟ್’ ಎಂಬ ಕಥೆ ಈ ಸಂಕಲನದಲ್ಲಿ ವಿಶಿಷ್ಟವಾಗಿದೆ. ಲೆಸ್ಬಿಯನ್ ಮತ್ತು ಗೇ ಜೀವನ ವಿಧಾನಗಳು ಈಗಾಗಲೇ ಒಪ್ಪಿತವಾದರೂ ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಲೇ ಇರುತ್ತವೆ. ದೇಹ ಮತ್ತು ಮನಸ್ಸುಗಳ ನಡುವಣ ಬಿರುಕು ಈಗಾಗಲೇ ಒಪ್ಪಿತವಾದ ವ್ಯವಸ್ಥೆಯೊಳಗೆ ಸಹಜವಾಗಿ ಬದುಕಲು ಬಿಡುವುದಿಲ್ಲ. ಗಂಡು ಮನಸ್ಸಿನ ಹೆಣ್ಣು ಮತ್ತೊಂದು ಹೆಣ್ಣಿನೊಂದಿಗೆ ಸಾಹಚರ್ಯ ನಡೆಸುವುದರಲ್ಲಿನ ಸೋಲು ಗೆಲುವುಗಳನ್ನು ಈ ಕಥೆ ಚಿತ್ರಿಸುತ್ತದೆ. ಹೆಣ್ಣು-ಹೆಣ್ಣಿನ ನಡುವಿನ ದೈಹಿಕ ಆಕರ್ಷಣೆ, ದೇಹದ ನವಿರು ಭಾಷೆಯನ್ನು ಇಲ್ಲಿ ಚಿತ್ರಿಸುವ ಪ್ರಯತ್ನ ಮಾಡಲಾಗಿದೆ. ಗಂಡು ಮನಸ್ಸಿನ ಹೆಣ್ಣು ತನ್ನ ಸಂಗಾತಿಯ ದೇಹದ ಚೆಲುವನ್ನು ಗ್ರಹಿಸುವುದನ್ನು ರಸಿಕತೆಯೆನ್ನಬೇಕೇ, ಲೈಂಗಿಕ ಆಕರ್ಷಣೆಯೆನ್ನಬೇಕೇ ಎಂದು ಗುರುತಿಸುವಲ್ಲಿ ಗೊಂದಲಗಳಿವೆ. ಸಾಧಾರಣವಾಗಿ ಪುರುಷ ಹೆಣ್ಣನ್ನು ಚಿತ್ರಿಸುವ ಹಾಗೆ ಹೆಣ್ಣು ತನ್ನ ‘ಹೆಣ್ಣಿನ ಹೆಣ್ತನವನ್ನು’ ಚಿತ್ರಿಸಲಾರಳು. ಹಾಗೆಯೇ ಗಂಡಿನ ‘ಗಂಡಸ್ತನವನ್ನು’ ಸಹ ವಿವರಿಸಲಾರಳು. ಭಾರತೀಯ ಸಂಸ್ಕೃತಿಯ ಭಾಷಿಕ ಸಂಕೋಚಗಳು, ತಮ್ಮ ಸಂಬಂಧವನ್ನು ಹೊರಗೆ ಹೇಳಿಕೊಳ್ಳಲಾರದ ಭಾರತೀಯ ಹುಡುಗಿಯ ಹಿಂಜರಿಕೆ, ಅದನ್ನು ಘೋಷಿಸಿಕೊಂಡು ದಿಟ್ಟವಾಗಿ ಬದುಕಬೇಕೆನ್ನುವ ಅಮೇರಿಕನ್ ಹುಡುಗಿಯ ಮನಸ್ಥಿತಿಯನ್ನು ಸಹಜವಾಗಿ ಚಿತ್ರಿಸಲಾಗಿದೆ. ಬದಲಾಗುತ್ತಿರುವ ಹೊಸ ಸಮಾಜದ ವಿನ್ಯಾಸಗಳನ್ನು ಈ ಕಥೆ ಹೇಳಲು ಹೊರಟಿರುವುದರಿಂದ ಎಲ್ಲ ಬರಹಗಾರರಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಸಹ ಈ ಕಥೆ ‘ಕಪ್ಲೆಟ್’ ಪ್ರಶ್ನಿಸುತ್ತದೆ.
‘ಇಟ್ಸ್ ನಾಟ್ ಓಕೆ’ ಎಂಬುದು ದೇಶ, ಸಮಯ, ಸನ್ನಿವೇಶ, ಪರಿಸರ ಯಾವುದಾದರೂ ಹೆಣ್ಣಿನ ಮೇಲೆ ನಡೆಯುವ ಗಂಡಿನ ದೌರ್ಜನ್ಯ ಒಂದೇ ರೀತಿಯದು ಎಂಬುದನ್ನು ಚಿತ್ರಿಸುವ ಕಥೆ. ದುಡಿಯುವ ಗಂಡು, ಓದುವ ಮಗನ ಕರ್ತವ್ಯ ನಿರ್ವಹಿಸುವ ಹೆಣ್ಣು ಪರಸ್ಪರ ಗೌರವಯುತವಾದ ಸಂಬಂಧವಿಲ್ಲದಿದ್ದರೆ, ಆರ್ಥಿಕವಾದ ಅಸಮಾನತೆಯ ಪ್ರಶ್ನೆ ಬರುತ್ತದೆ. ಕುಟುಂಬದೊಳಗಿನ ದೌರ್ಜನ್ಯವನ್ನು ಸುಮ್ಮನೆ ಸಹಿಸುವುದೇ, ಎದುರಿಸಿ ನಿಲ್ಲುವುದೇ ಎಂಬ ಪ್ರಶ್ನೆಯನ್ನು ತಾಳ್ಮೆಯಿಂದ ನೋಡಲಾಗಿದೆ. ಇಲ್ಲಿನ ಹೆಂಡತಿ ಗಂಡನ ದೌರ್ಜನ್ಯವನ್ನು ಪೋಲೀಸರ ಗಮನಕ್ಕೆ ತರುವುದಲ್ಲದೆ ವೈವಾಹಿಕ ಸಂಬಂಧದಿಂದ ಹೊರಗೆ ಹೋಗುವ ಪ್ರಯತ್ನ ಮಾಡುವುದು ಬಿಡುಗಡೆಯ ಮೊದಲ ಹಂತವಾಗಿ ತೋರುತ್ತದೆ. ಇಬ್ಬರ ಮಧ್ಯೆ ನಡೆಯುವ ಹೊಡೆದಾಟಗಳು, ಪೊಲೀಸರಿಗೆ ಕರೆ ಮಾಡುವುದು - ಇವೆಲ್ಲವೂ ಸಹಜವೆನ್ನುವಂತೆ ನಡೆಯುತ್ತವೆ. ಇಂತಹ ದೌರ್ಜನ್ಯವನ್ನು ಇಲ್ಲಿನ ನಾಯಕಿ ಪ್ರಶ್ನಿಸಿ, ದೂರು ಕೊಡುವುದರ ಮೂಲಕ ಹೊಸ ತಲೆಮಾರಿನ ದಿಟ್ಟ ಹೆಣ್ಣುಮಗಳೊಬ್ಬಳನ್ನು ಚಿತ್ರಿಸುತ್ತಾರೆ.
ಇಂತಹ ಹಲವಾರು ಕಥನಗಳ ಮೂಲಕ ಹೆಣ್ಣಿಗೆ ಇರಬಹುದಾದ ‘ಐದನೇಯ ಗೋಡೆಗಳು’ ಹುಡುಕಾಟಗಳನ್ನು ಲೇಖಕಿ ಇಲ್ಲಿ ನಡೆಸುತ್ತಾರೆ. ಲೆಸ್ಬಿಯನ್, ಗೇ ಸಮಾಜದ ಚಿತ್ರಣದ ಮೂಲಕ ಸಮಾಜದಲ್ಲಿ ಕಾಲಿಟ್ಟಿರುವ ಕೌಟುಂಬಿಕ ಜೀವನದ ಹೊಸ ವಿನ್ಯಾಸಗಳನ್ನು ಸಹ ಪರೀಕ್ಷಿಸಲು ಲೇಖಕಿ ಇಲ್ಲಿನ ಕಥೆಗಳ ಮೂಲಕ ಮಾಡುತ್ತಾರೆ. ಅಮ್ಮನಿಗೊಂದು ಪತ್ರ, ಟಿಂಕೂ ಇನ್ ಟೆಕ್ಸಾಸ್, ಹೋಮ್ ರನ್- ಈ ಕಥೆಗಳು ಸಹ ಈ ಸಂಕಲನದಲ್ಲಿ ಓದಬಹುದಾದ ಹೊಸಕಾಲದ ಬದುಕುಗಳನ್ನು ಕುರಿತಾದ ಕಥೆಗಳಾಗಿವೆ.”