ಐದು ನಿಮಿಷ

ಐದು ನಿಮಿಷ

ಪುಸ್ತಕದ ಲೇಖಕ/ಕವಿಯ ಹೆಸರು
ನಿರಂಜನ
ಪ್ರಕಾಶಕರು
ಪುರೋಗಾಮಿ ಪ್ರಕಾಶನ, ಬಸವನಗುಡಿ, ಬೆಂಗಳೂರು
ಪುಸ್ತಕದ ಬೆಲೆ
ಒಂದು ರೂಪಾಯಿ

“ಚಿತ್ರಗುಪ್ತ" ಪತ್ರಿಕೆಯಲ್ಲಿ ನಿರಂಜನರು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ "ಐದು ನಿಮಿಷ”. ಎಪ್ಪತ್ತು ವರುಷಗಳ ಮುಂಚೆ (1953ರಲ್ಲಿ) ಪ್ರಕಟವಾದ ಈ ಪುಸ್ತಕದ ಬರಹಗಳನ್ನು ಓದುವುದೇ ಖುಷಿ.

ನಿರಂಜನರು ಕನ್ನಡದ ಪ್ರಸಿದ್ಧ ಕಾದಂಬರಿಕಾರರು ಹಾಗೂ ಸಣ್ಣ ಕತೆಗಳ ಬರಹಗಾರರು. ಜಗತ್ತಿನ 125 ದೇಶಗಳ ಆಯ್ದ ಸಣ್ಣಕತೆಗಳ ಮಾಲಿಕೆ (25 ಸಂಪುಟಗಳಲ್ಲಿ) “ವಿಶ್ವ ಕಥಾಕೋಶ" ಮತ್ತು ಕಿರಿಯರ ವಿಶ್ವಕೋಶ - "ಜ್ನಾನ ಗಂಗೋತ್ರಿ” -ಇವೆರಡು ಅಮೂಲ್ಯ ಪುಸ್ತಕಗಳನ್ನು ಸಂಪಾದಿಸಿ, ಕನ್ನಡದ ಸಾಹಿತ್ಯಭಂಡಾರವನ್ನು ಸಂಪನ್ನಗೊಳಿಸಿದವರು ಅವರು.

"ಚಿತ್ರಗುಪ್ತ"ದ ಸಂಪಾದಕರಾದ ಎಂ. ಶ್ಯಾಮಸುಂದರ ಭಾರದ್ವಾಜರು “ಮುನ್ನುಡಿ"ಯಲ್ಲಿ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ: “ಶ್ರೀ ನಿರಂಜನರು “ಮಿತಭಾಷಿ" (ಎಂಬ ಹೆಸರಿನಲ್ಲಿ) ಚಿತ್ರಗುಪ್ತದಲ್ಲಿ ಬರೆದಿರುವ ಈ ಲೇಖನಗಳಲ್ಲಿ ಒಂದು ವಿಶಿಷ್ಟ ಗುಣವಿದೆ. ಆ ಗುಣ, ಮಾನವತೆಯ ದೃಷ್ಟಿಯಿಂದ ಅನುದಿನದ ಪ್ರತಿಯೊಂದು “ಸಾಮಾನ್ಯ" ವಿಷಯವನ್ನೂ ಗ್ರಹಿಸಿ ನೋಡುವುದು. ದಿನ ಪತ್ರಿಕೆಗಳಲ್ಲಿ ಚೂರುಚೂರು ಸುದ್ದಿಯಾಗಿ ನೀರಸವಾಗಿ ಪ್ರಕಟವಾಗುವ ಅದೆಷ್ಟೊ ವಿಷಯಗಳನ್ನು ಆ ರೀತಿ ನೋಡಿ, ಅವುಗಳಿಗೊಂದು ಹೊಸ ರೂಪ ಕೊಟ್ಟು, ಒಂದೊಂದು ವೇಳೆ ಕಹಿಯಾಗಿ ಕಟುವಾಗಿ ಇನ್ನೊಂದೊಂದು ವೇಳೆ ಸಿಹಿಯಾಗಿ ಮಧುರವಾಗಿ ಓದುಗರಿಗೆ ವಿಶೇಷ ವಸ್ತುಗಳನ್ನು ನಿರಂಜನರು ಈ ಲೇಖನಗಳ ಮೂಲಕ ಒದಗಿಸಿದ್ದಾರೆ.

ಈ ಲೇಖನಗಳಲ್ಲಿ ಕೆಲವು ಸಾಮಾನ್ಯವಾಗಿ ತೋರಬಹುದು, ಕೆಲವು ವಿಶಿಷ್ಟವಾಗಿ ಅಮೂಲ್ಯವಾಗಿ ತೋರಬಹುದು. ಈ ಸಂದರ್ಭದಲ್ಲಿ ಬರೆದು ಬದುಕುವ ಬರಹಗಾರನೊಬ್ಬನ ಕಷ್ಟವನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ. ಅವನು “ಸ್ಫೂರ್ತಿ"ಗಾಗಿ ಕಾದು ಕುಳಿತುಕೊಂಡಿರಲು ಸಾಧ್ಯವಿಲ್ಲ. ಗೊತ್ತಾದ ವೇಳೆಗೆ ಲೇಖನಗಳನ್ನು ಬರೆದು ಮುಗಿಸಲೇಬೇಕು. ನಿರಂಜನರೂ ಹಾಗೆ ಬರೆದಿರಬಹುದಾದ ಕೆಲವು ಲೇಖನಗಳನ್ನು ನಾವು ಆರಿಸಿ ತೋರಿಸಬಹುದೇನೋ! ಆದರೆ ಈ ಲೇಖನಗಳಲ್ಲೂ ಕೂಡ ಅವರು ತಮ್ಮ ವಿಶಿಷ್ಟ ದೃಷ್ಟಿಕೋನವನ್ನು ಕಾಪಾಡಿಕೊಂಡಿರುವುದನ್ನು ಕಾಣಬಹುದು.”

ಇಲ್ಲಿನ ಬರಹಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ನಿರಂಜನರ ಸರಳ ಭಾಷೆ, ಮನಮುಟ್ಟುವ ಶೈಲಿ ನಮ್ಮ ಆಸಕ್ತಿಯನ್ನು ಹಿಡಿದಿಡುತ್ತದೆ. ಅಂಕಣಗಳಿಗಾಗಿ ಗಹನವಾದ ಸಂಗತಿಗಳನ್ನೂ ಸಾಮಾನ್ಯವಾದ ವಿಷಯಗಳನ್ನು ಆಯ್ದು ಮನೋಜ್ನವಾದ ಬರಹಗಳನ್ನು ಹೆಣೆದಿದ್ದಾರೆ ನಿರಂಜನರು.

“ಬರಗಾಲ ಮತ್ತು ಮಾನವತೆ” ಎಂಬ ಬರಹದಲ್ಲಿ, ಚಿತ್ರಗುಪ್ತ ಪತ್ರಿಕೆಯ ಓದುಗರಾದ ಬಾಗೇಪಲ್ಲಿ ತಾಲ್ಲೂಕಿನ ಪಿ.ಎನ್. ಪದ್ಮನಾಭರಾವ್ ಎಂಬವರಿಂದ ಬಂದಿರುವ ಪತ್ರದ ಸಾರಾಂಶ ನೀಡಿದ್ದಾರೆ: "ಬಾಗೇಪಲ್ಲಿ ತಾಲ್ಲೂಕಿನ ಜನತೆಯನ್ನು ಮಲಮಲ ಕುದಿಸುತ್ತಿರುವ ಕ್ಷಾಮ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಳ್ಳಲು ಹತ್ತು ದಿನ ಹಳ್ಳಿಹಳ್ಳಿಗೂ ಹೋಗಿ ನೋಡಲಾಗಿ ಹಸಿವಿನ ನಾರಾಯಣನ ವಿಶ್ವರೂಪ ದರ್ಶನದ ಭೀಕರತೆಯನ್ನು ಕಂಡೆನು … ಕ್ಷಾಮಪೀಡಿತರ ಸಾವುನೋವುಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಲು … 60 ಮೈಲಿಯಿರುವ ಬಾಗೇಪಲ್ಲಿಯಿಂದ 18 ಗಂಟೆಗಳಲ್ಲಿ ಬೆಂಗಳೂರಿಗೆ ನಡೆದು ಬಂದೆನು …" ಬೆಂಗಳೂರಲ್ಲಿ (ಪದ್ಮನಾಭರಾಯರು) ಪ್ರವಾಸದ ಮೇಲೆ ಬಂದಿದ್ದ ಕೇಂದ್ರದ ಉಪಸಚಿವ ಕೃಷ್ಣಪ್ಪನವರನ್ನು ಭೇಟಿ ಮಾಡಿದರು. ಮೈಸೂರಿನ ಮುಖ್ಯ ಮಂತ್ರಿಗಳನ್ನು ಕಂಡು 3,000 ಸಹಿ ಇರುವ ಅಹವಾಲನ್ನು ಒಪ್ಪಿಸಿದರು. ಇದುವರೆಗೆ ಭಾರಿ ಮೊಬಲಗನ್ನು ಕ್ಷಾಮಪೀಡಿತ ಪ್ರದೇಶಗಳಿಗಾಗಿ ವೆಚ್ಚ ಮಾಡಲಾಗಿದೆ ಎಂದು ಉತ್ತರ ಬಂತು. “ಕಾಲ್ನಡಿಗೆಯಿಂದ ಜನರ ಹಸಿವು ಹೋಗದು. ವಾಸ್ತವಿಕವಾಗಿ ಕ್ಷಾಮನಿಧಿಯನ್ನು ಕೂಡಿಸುವುದು ಒಳ್ಳೇದು” ಎಂದು ಸಲಹೆ ದೊರೆಯಿತು. ಅದರಿಂದ ಸ್ಫೂರ್ತಿಗೊಂಡ ಪದ್ಮನಾಭರಾಯರು ಈಗ "ನಿತ್ಯದ ಒಂದು ಹೊತ್ತಿನ ಪಡಿತರದಂತೆ ವಾರದ ಏಳು ಹೊತ್ತಿನ ನನ್ನ ಪಡಿತರ ಭತ್ಯವನ್ನು ಉಳಿಸಿ ಗಂಜಿ ಕೇಂದ್ರಗಳ ನಿಧಿಗೆ ಸಲ್ಲಿಸಲು” ನಿರ್ಧರಿಸಿದ್ದಾರೆ. ಈ ರೀತಿ ಕ್ಷಾಮದ ದಾರುಣತೆಯನ್ನೂ ಪದ್ಮನಾಭರಾಯರ ಮಾನವತೆಯನ್ನೂ ಕಟ್ಟಿ ಕೊಡುವ ನಿರಂಜನರು, “ಉಪವಾಸದಿಂದ ಸಾಯುವ ಜೀವಿಗೆ ಒಂದು ತುತ್ತು ಅನ್ನ ನೀಡದವನು ನರಾಧಮ. ಅದು ನಿಜ. ಆದರೆ ಬರಿಯ ದಾನದರ್ಮದಿಂದಲೇ ಸಮಸ್ಯೆ ಪರಿಹಾರವಾಗದು” ಎನ್ನುತ್ತಾರೆ.
ಅದೇ ಬರಹದಲ್ಲಿ ಕೋಲಾರದ ಓದುಗರೊಬ್ಬರು ಅಂಚೆಕಾರ್ಡಿನಲ್ಲಿ ಬರೆದ ಅಲ್ಲಿನ ಕ್ಷಾಮದ ಭೀಕರತೆಯನ್ನು ಯಥಾವತ್ತಾಗಿ ಹಂಚಿಕೊಂಡಿದ್ದಾರೆ: “… ಒಂದು ಕಡೆ ಕ್ಷಾಮ ಮತ್ತೊಂದು ಕಡೆ ಕಾಲರ. … ಗೆಡ್ಡೆಗೆಣಸುಗಳನ್ನು ತಿಂದು ಜನರು ಸತ್ತಿದ್ದಾರೆ, ಈಗಲೂ ಸಾಯುತ್ತಿದ್ದಾರೆ. ಇತ್ತ ಕಡೆ ಮಳೆ ಬೀಳಲಿಲ್ಲ. ಬೆಳೆ ಮೊದಲೇ ಇಲ್ಲ. ಚಿನ್ನದೂರಿನ ಗೆಳೆಯರಿಗೆ ಬಂದಿರುವ ಕಷ್ಟವನ್ನು ಇಷ್ಟೆಂದು ತಿಳಿಸಲು ಸಾಧ್ಯವಿಲ್ಲ …" ಅನಂತರ, ವಿಜಾಪುರ ಜಿಲ್ಲೆಯ ನಾಗಠಾಣದ ಗೆಳೆಯರೊಬ್ಬರು ಬರೆದ ಕಾಗದದಲ್ಲಿರುವ ಕ್ಷಾಮಕಾಲದ ಸಂಕಟವನ್ನು ದಾಖಲಿಸಿದ್ದಾರೆ: “ಇತ್ತ ಮಳೆಯಿಲ್ಲ. ಬಿತ್ತಿದ ಬೆಳೆ ಕಾಣದಾಗ ಹತ್ತಿದೆ. ಜನರ ತಾಪ ಹೇಳಲಸಾಧ್ಯ. … ನನ್ನಲ್ಲಿಗೆ ಅರ್ಧ ಆಣೆಯ ವರೆಗೂ ಕೈಗಡಕ್ಕೆ ಬರುತ್ತಾರೆ. ಕೈ ಮುಚ್ಚಿ ಕೊಟ್ಟು ಮುಖ ಮುಚ್ಚಿಕೊಳ್ಳುವೆ …" ಬಳ್ಳಾರಿಯಿಂದ ಆತ್ಮೀಯರು ಕಾಗದದಲ್ಲಿಯೂ ಇದೇ ರೀತಿಯಲ್ಲಿ ಕ್ಷಾಮದ ಪರಿಣಾಮ ಬರೆದದ್ದನ್ನು ಹಂಚಿಕೊಂಡಿದ್ದಾರೆ. ಈ ಬರಹವನ್ನು ನಿರಂಜನರು ಮುಕ್ತಾಯಗೊಳಿಸುವ ಪರಿ: "ಅಣೆಕಟ್ಟುಗಳು, ನೀರಾವರಿಗಳು, ವಿದ್ಯುತ್ ಯೋಜನೆಗಳು, ಎಂದೆಲ್ಲ ಬರಿಯ ಯೋಜನೆಗಳ ಕತೆ ನಾವು ಕೇಳಿದ್ದೇವೆ. … ಆದರೆ ಕಣ್ಣೆದುರು ಕಾಣುತ್ತಿರುವುದು ಮಣ್ಣಿನ ಮಕ್ಕಳ ಸಾವು." - ಇದು ನಿರಂಜನರ ಸಶಕ್ತ ಬರವಣಿಗೆಯ ಒಂದು ಸ್ಯಾಂಪಲ್.

"ನಮ್ಮ ನಾಟ್ಯ ಕಲಾವಿಲಾಸಿಗಳು” ಎಂಬ ಬರಹದಲ್ಲಿ ಬೆಂಗಳೂರಿನಲ್ಲಿ ಆಗಿನ ಕಾಲದಲ್ಲೇ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಹಲವು ನಾಟಕ ತಂಡಗಳ ಚಟುವಟಿಕೆಗಳ ವಿವರಗಳನ್ನು ಒದಗಿಸಿದ್ದಾರೆ ನಿರಂಜನರು. ಅಮೇರಿಕಾದ ಯುಎಸ್‌ಎ ದೇಶದ ಅಧ್ಯಕ್ಷೀಯ ಚುನಾವಣೆಯ ಆಗುಹೋಗುಗಳ ಒಳನೋಟಗಳನ್ನು ನೀಡಿದ್ದಾರೆ “ಅಧ್ಯಕ್ಷ ಚುನಾವಣೆಯ ಆಟ” ಬರಹದಲ್ಲಿ.

"ನನ್ನ ಸಹಿ ಮತ್ತು ಸಮರ್ಥನೆ” ಬರಹದಲ್ಲಿ, ಟೋಕಿಯೋದಿಂದ ಪ್ರಕಟವಾಗುವ "ಜಪಾನ್ ನ್ಯೂಸ್” ಪತ್ರಿಕೆ”ಯಲ್ಲಿ ಬಂದ ವರದಿಯೊಂದನ್ನು ಪ್ರಸ್ತಾಪಿಸಿದ್ದಾರೆ. ಅದು ಆಗ ಅಮೇರಿಕಾ ಪ್ರತಿ ವರುಷವೂ 2,27,000 ಡಾಲರು ಬೆಲೆಯ ರಕ್ತವನ್ನು ಜಪಾನಿನಿಂದ ಖರೀದಿಸುವ ವರದಿ. ಯಾಕೆ? ಎಂಬುದನ್ನೂ ನಿರಂಜನರು ತಿಳಿಸುತ್ತಾರೆ: “ವೈಜ್ನಾನಿಕ ಪರೀಕ್ಷೆಗಳಿಗಾಗಿ ಆ ರಕ್ತವನ್ನು ಉಪಯೋಗಿಸಲಾಗುವುದು. ಹಿರೋಷಿಮಾ ನಾಗಸಾಕಿಗಳ ಜೀವನ್ಮೃತ ಜನರು “ರಕ್ತದಾನಿ"ಗಳಾಗಿ ನಾಲ್ಕು ದುಡ್ಡು ಸಂಪಾದಿಸುವ ಭಾಗ್ಯವಂತರು!” ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ಶಾಂತಿ ಸಮ್ಮೇಳನಕ್ಕೆ ಹೋಗಿದ್ದಾಗ, ಯುವಕರೊಬ್ಬರು "ಯುದ್ಧ ವಿರೋಧಿ ಮನವಿ”ಗೆ ಸಹಿ ಹಾಕಲು ವಿನಂತಿಸಿದಾಗ ತಾನು ಸಹಿ ಹಾಕಿದ್ದನ್ನು ತಿಳಿಸಿ, ಈ ಬರಹ ಮುಗಿಸಿದ್ದಾರೆ. ಆ ಮನವಿಯ ಮುಖ್ಯಾಂಶಗಳನ್ನು ಬರಹದಲ್ಲಿ ಹಂಚಿಕೊಂಡಿದ್ದಾರೆ.

“ಹೋಟೆಲು ಮಾಣಿಗಳ  ಸಾಹಿತ್ಯ" ಬರಹದಲ್ಲಿ ಮೈಸೂರಿನ ಕೆಲವು ಹೋಟೆಲು ಮಾಣಿಗಳ ಸಾಹಿತ್ಯಾಸಕ್ತಿಯ ಮತ್ತು ಸಾಹಿತ್ಯಸೃಷ್ಟಿಯ ಬಗ್ಗೆ ಚಂದವಾಗಿ ಬರೆದಿದ್ದಾರೆ ನಿರಂಜನರು: ಹೆಲ್ತ್ ಕಿಚನ್ (ಯೂನಿವರ್ಸಿಟಿ ಕ್ಯಾಂಟೀನ್) ಮಾಣಿ ಬಿ.ಆರ್. ಶಂಕರ್; ಕಾಸ್ಮೊ ಪಾಲಿಟನ್ ಕ್ಲಬ್ಬಿನ ಸಂಜೀವ ಕಾಮತ್ (ಕಾವ್ಯನಾಮ ನಾರಾಯಣ); ರಣಜಿತ್ ಥಿಯೇಟರಿನ ಎದುರು ಬದಿಯ ಹೋಟೆಲಿನ ರಾಮಚಂದ್ರ. ನಿರಂಜನರಿಗೆ ಜನಸಾಮಾನ್ಯರ ಬಗೆಗಿನ ಆಸಕ್ತಿ ಹಾಗೂ ಕಾಳಜಿಗೆ ಇದು ನಿರರ್ಶನ.

“ಮೊದಲ ಮುದ್ರಣ - 1,50,000 ಪ್ರತಿಗಳು!" ಎಂಬುದಂತೂ ನಮ್ಮ ಕಣ್ಣು ತೆರೆಸುವ ಬರಹ. ಇದು ಕೃಷನ್ ಚಂದರ್ ಎಂಬ ಪ್ರಸಿದ್ಧ ಲೇಖಕರ ಪತ್ರದ ಬಗ್ಗೆ. ಅವರ ಒಂದು ಕಾದಂಬರಿ “ಪರಾಜಯ" (ಎಚ್.ಎಸ್. ಪಾರ್ವತಿ ಅವರು ಕನ್ನಡಕ್ಕೆ ಅನುವಾದಿಸಿದ ಆ ಕಾದಂಬರಿ “ಚಿತ್ರಗುಪ್ತ"ದಲ್ಲಿ ವಾರವಾರವೂ ಧಾರಾವಾಹಿಯಾಗಿ ಪ್ರಕಟವಾಗಿತ್ತು.) ಕೃಷನ್ ಚಂದರ್ ಅವರ ಒಂದು ಕಥಾಸಂಕಲನದ ಹೆಸರು "ಜ್ವಾಲಾ ಕುಸುಮ” (ದ ಫ್ಲೇಮ್ ಆಂಡ್ ದ ಫ್ಲವರ್). ಅದರ ಬಗ್ಗೆ ನಿರಂಜನರಿಗೆ ಅವರು ಬರೆದ ಪತ್ರದಲ್ಲಿದ್ದ ಸಂಗತಿ: "ನನ್ನ ಜ್ವಾಲಾ ಕುಸುಮ ಕಥಾ ಸಂಕಲನದ ರಷ್ಯನ್ ಆವೃತ್ತಿಯೊಂದು ಮಾಸ್ಕೋದಲ್ಲಿ ಪ್ರಕಟವಾಗಿದೆ. ಮೊದಲ ಆವೃತ್ತಿಯ ಒಂದು ಲಕ್ಷದ ಐವತ್ತು ಸಾವಿರ ಪ್ರತಿಗಳನ್ನು ಮುದ್ರಿಸಿದ್ದಾರೆ! ಏನಂತೀರಿ ಇದಕ್ಕೆ? … ಸಾಹಿತ್ಯ ನಮ್ಮ ದೇಶದಲ್ಲಿ ಯಾವ ದಿನ ಈ ಮಟ್ಟಕ್ಕೆ ಬಂದೀತೋ ನನಗೆ ತಿಳಿಯದು …"

ಈ ಮಾತು, ಕನ್ನಡದ ಪುಸ್ತಕಗಳ ಬಗ್ಗೆ, ಈಗಲೂ (70 ವರುಷಗಳ) ನಂತರವೂ ನಮ್ಮನ್ನು ಚುಚ್ಚುತ್ತದೆ ಅಲ್ಲವೇ? ಈ ಪುಸ್ತಕದ 37 ಬರಹಗಳಲ್ಲಿ ನಮ್ಮನ್ನು ಚುಚ್ಚುವ, ಬಡಿದೆಬ್ಬಿಸುವ, ಚಿಂತನೆಗೆ ಹಚ್ಚುವ ಇಂತಹ ಹಲವು ಮಾತುಗಳಿವೆ.