ಐದು ಮೊಲದ ಮರಿಗಳ ಹುಟ್ಟುಹಬ್ಬ

ಐದು ಮೊಲದ ಮರಿಗಳ ಹುಟ್ಟುಹಬ್ಬ

“ನಾಳೆ ನನ್ನ ಮೊದಲ ಹುಟ್ಟುಹಬ್ಬ” ಎಂದು ಖುಷಿಯಿಂದ ಕುಣಿಯಿತು ಪುಟ್ಟ ಮೊಲದ ಮರಿ. ಮೀಸೆಮೊಲ, ದೊಡ್ಡಕಿವಿ ಮೊಲ, ಸಣ್ಣಕಿವಿ ಮೊಲ ಮತ್ತು ಮೋಂಟುಬಾಲ ಮೊಲ ಅದರ ನಾಲ್ಕು ಸೋದರ ಮರಿಗಳು. ‘ಓ, ನಾಳೆ ನನ್ನದೂ ಮೊದಲ ಹುಟ್ಟುಹಬ್ಬ” ಎನ್ನುತ್ತ ಅವೂ ಕುಣಿದಾಡಿದವು.

“ಅಪ್ಪ-ಅಮ್ಮ ನಾಳೆ ನಮಗೇನೋ ವಿಶೇಷವಾದದ್ದು ಕೊಡ್ತಾರೆ, ಅಲ್ವಾ?” ಕೇಳಿತು ಪುಟ್ಟ ಮೊಲದ ಮರಿ. "ಹೌದು, ಕೊಟ್ಟೇ ಕೊಡ್ತಾರೆ” ಎಂದು ನಾಲ್ಕು ಮೊಲದ ಮರಿಗಳು ಮತ್ತೆ ಕುಣಿದಾಡಿದವು.

ಇದನ್ನೆಲ್ಲ ಮರಿಗಳ ಕೋಣೆಯ ಬಾಗಿಲ ಪಕ್ಕದಲ್ಲಿದ್ದ ಅಮ್ಮಮೊಲ ಕೇಳುತ್ತಿತ್ತು. “ಹೌದಲ್ಲ, ಮುದ್ದುಮರಿಗಳ ಮೊದಲ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷ ಮಾಡಲೇ ಬೇಕಲ್ಲ" ಎಂದು ಅಮ್ಮಮೊಲ ಯೋಚಿಸಿತು. ಸ್ವಲ್ಪ ಹೊತ್ತಿನಲ್ಲಿ ಅಪ್ಪಮೊಲ ಬಂದಾಗ ಅಮ್ಮಮೊಲ ಹೇಳಿತು, "ನಾಳೆ ನಮ್ಮ ಮುದ್ದುಮರಿಗಳ ಮೊದಲ ಹುಟ್ಟುಹಬ್ಬ. ಹಾಗಾಗಿ ವಿಶೇಷ ತಿನಿಸು ಮಾಡಬೇಕಾಗಿದೆ. ಕ್ಯಾರೆಟ್ ಹಲ್ವ ಮಾಡಬೇಕೆಂದಿದ್ದೇನೆ. ನಿಮ್ಮ ತರಕಾರಿ ತೋಟದಿಂದ ಕೆಲವು ತಾಜಾ ಕ್ಯಾರೆಟ್ ತಂದು ಕೊಡ್ತೀರಾ?”

"ಅದಕ್ಕೇನಂತೆ? ಈಗಲೇ ತರುತ್ತೇನೆ” ಎಂದು ಅಪ್ಪಮೊಲ ಮನೆಯಿಂದ ಹೊರಟಿತು. ಅಪ್ಪಮೊಲ ಸಿಹಿಯಾದ ರುಚಿಯಾದ ಕ್ಯಾರೆಟುಗಳನ್ನು ಪ್ರತಿ ವರುಷವೂ ಬೆಳೆಯುತ್ತಿತ್ತು. ಇವತ್ತು ತನ್ನ ಕ್ಯಾರೆಟ್ ಹೊಲಕ್ಕೆ ಹೋದಾಗ ಅದಕ್ಕೆ ಆಘಾತವಾಯಿತು. ಯಾಕೆಂದರೆ ಅದರ ಹೊಲದಿಂದ ಎಲ್ಲ ಕ್ಯಾರೆಟುಗಳನ್ನೂ ಯಾರೋ ಅಗೆದು ತೆಗೆದು ಕದ್ದು ಒಯ್ದಿದ್ದರು!

ಮನೆಗೆ ಮರಳಿದ ಅಪ್ಪಮೊಲ ಹೇಳಿತು, "ನನ್ನ ತರಕಾರಿ ಹೊಲದಿಂದ ಎಲ್ಲ ಕ್ಯಾರೆಟ್ ಯಾರೋ ಕದ್ದಿದ್ದಾರೆ. ಅದು ಯಾರೆಂದು ನಾನು ಪತ್ತೆ ಮಾಡ್ತೇನೆ.”

ಆಗಲೇ ಕತ್ತಲಾಗುತ್ತಿತ್ತು. ಆದರೂ ಅಪ್ಪಮೊಲ ಕ್ಯಾರೆಟ್ ಕಳ್ಳನ ಪತ್ತೆಗೆ ಹೊರಟಿತು. ಮೊದಲು ಅದು ಕಂದುಮೊಲದ ಮನೆಗೆ ಹೋಗಿ ಬಾಗಿಲು ಬಡಿಯಿತು. "ನನ್ನ ತರಕಾರಿ ಹೊಲದಿಂದ ಎಲ್ಲ ಕ್ಯಾರೆಟ್ ಯಾರೋ ಕದ್ದಿದ್ದಾರೆ. ಅದು ಯಾರೆಂದು ನಿನಗೆ ಗೊತ್ತೇ?” ಎಂದು ಕೇಳಿತು. “ಗೊತ್ತಿದೆ, ಗೊತ್ತಿದೆ. ಆದರೆ ನಾನು ಕದ್ದಿಲ್ಲ” ಎಂದಿತು ಕಂದುಮೊಲ. ಅಪ್ಪಮೊಲ ಎಷ್ಟು ಒತ್ತಾಯಿಸಿದರೂ ಕ್ಯಾರೆಟ್ ಕದ್ದದ್ದು ಯಾರೆಂದು ಕಂದುಮೊಲ ಹೇಳಲಿಲ್ಲ.

ನಂತರ ಅಪ್ಪಮೊಲ ಗುಳ್ಳೆನರಿಯ ಮನೆಗೆ ಹೋಗಿ ಬಾಗಿಲು ಬಡಿಯಿತು. "ನನ್ನ ತರಕಾರಿ ಹೊಲದಿಂದ ಎಲ್ಲ ಕ್ಯಾರೆಟ್ ಯಾರೋ ಕದ್ದಿದ್ದಾರೆ. ಅದು ಯಾರೆಂದು ನಿನಗೆ ಗೊತ್ತೇ?” ಎಂದು ಪ್ರಶ್ನಿಸಿತು. “ಗೊತ್ತಿದೆ, ಗೊತ್ತಿದೆ. ಆದರೆ ನಾನು ಕದ್ದಿಲ್ಲ” ಎಂದಿತು ಗುಳ್ಳೆನರಿ. ಅಪ್ಪಮೊಲ ಎಷ್ಟು ವಿನಂತಿಸಿದರೂ ಕ್ಯಾರೆಟ್ ಕದ್ದದ್ದು ಯಾರೆಂದು ಗುಳ್ಳೆನರಿ ತಿಳಿಸಲಿಲ್ಲ.

ಅಲ್ಲಿಂದ ಅಪ್ಪಮೊಲ ಅಳಿಲಿನ ಮನೆಗೆ ಹೋಗಿ ಬಾಗಿಲು ಬಡಿಯಿತು. ಅಲ್ಲಿಯೂ ಅಪ್ಪಮೊಲ ಅದೇ ಪ್ರಶ್ನೆ ಕೇಳಿತು. ಅಳಿಲು ಕೂಡ “ಗೊತ್ತಿದೆ, ಗೊತ್ತಿದೆ. ಆದರೆ ನಾನು ಕದ್ದಿಲ್ಲ” ಎಂದು ಉತ್ತರಿಸಿತೇ ವಿನಃ ಅದು ಯಾರೆಂದು ಹೇಳಲಿಲ್ಲ. ಅಪ್ಪಮೊಲಕ್ಕೆ ಭಾರೀ ಸಿಟ್ಟು ಬಂತು. “ಏನಿದು? ಕ್ಯಾರೆಟ್ ಕದ್ದದ್ದು ಯಾರೆಂದು ಯಾರೂ ಹೇಳುತ್ತಿಲ್ಲ” ಎಂದು ಅದು ತನ್ನ ಕಾಲನ್ನು ನೆಲಕ್ಕೆ ಬಡಿಯಿತು. ಆಗ ಅಳಿಲು ಹೇಳಿತು, “ಸ್ವಲ್ಪ ತಾಳಿಕೋ. ನಿನ್ನ ಕ್ಯಾರೆಟ್ ಕದ್ದದ್ದು ಯಾರೆಂದು ಬೇಗನೆ ಗೊತ್ತಾಗುತ್ತದೆ.”

ಮನೆಗೆ ಮರಳಿದ ಅಪ್ಪಮೊಲ "ನನ್ನ ಹೊಲದಿಂದ ಕ್ಯಾರೆಟ್ ಕದ್ದದ್ದು ಯಾರೆಂದು ಎಲ್ಲರಿಗೂ ಗೊತ್ತಿದೆ; ಆದರೆ ಯಾರೂ ಬಾಯಿ ಬಿಡುತ್ತಿಲ್ಲ” ಎಂದು ಅಮ್ಮಮೊಲಕ್ಕೆ ತಿಳಿಸಿತು. “ಎಲ್ಲರಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ. ನಾಳೆ ನಮ್ಮ ಮಕ್ಕಳ ಮೊದಲ ಹುಟ್ಟುಹಬ್ಬಕ್ಕೆ ವಿಶೇಷ ತಿನಿಸು ಮಾಡಲು ಆಗುತ್ತಿಲ್ಲ ಎಂಬುದಷ್ಟೇ ನನಗೆ ಗೊತ್ತು” ಎಂದಿತು ಅಮ್ಮಮೊಲ. ಇಬ್ಬರಿಗೂ ಗೊಂದಲವಾಗಿತ್ತು. ಏನೇ ಆಗಲಿ, ಮರುದಿನ ಬೆಳಗ್ಗೆ ಕ್ಯಾರೆಟ್ ಕದ್ದವರನ್ನು ಪತ್ತೆ ಮಾಡಲೇಬೇಕೆಂದು ಅವರು ನಿರ್ಧರಿಸಿದರು.

ಮರುದಿನ ಬೆಳಗ್ಗೆ ಅಪ್ಪಮೊಲ ಮತ್ತು ಅಮ್ಮಮೊಲ ಉಪಾಹಾರ ತಿನ್ನುತ್ತಿದ್ದಾಗ ಪುಟ್ಟಮೊಲ ಅಲ್ಲಿಗೆ ಬಂದು, “ಹ್ಯಾಪಿ ಬರ್ತ್-ಡೇ” ಎಂದು ಗೆಲವಿನಿಂದ ಕೂಗಿತು. ಅದರ ಬೆನ್ನಿಗೇ ಇತರ ನಾಲ್ಕು ಮರಿಮೊಲಗಳೂ ಬಂದು, “ಹ್ಯಾಪಿ ಬರ್ತ್-ಡೇ” ಎಂದು ಒಟ್ಟಾಗಿ ಕೂಗಿದವು.

“ಅಪ್ಪಾ, ನಾನು ಪ್ರತಿಯೊಬ್ಬರಿಗೂ ಒಂದು ಪುಟ್ಟ ಉಡುಗೊರೆ ಕೊಡಲಿದ್ದೇನೆ” ಎನ್ನುತ್ತಾ ಪುಟ್ಟ ಮೊಲದ ಮರಿ ಒಂದು ಬಾಕ್ಸನ್ನು ಹೊರತೆಗೆಯಿತು. ಅದರಿಂದ ಚಂದದ ರಿಬ್ಬನ್ ಕಟ್ಟಿದ್ದ ಕ್ಯಾರೆಟುಗಳನ್ನು ತೆಗೆದು, ತನ್ನ ಸೋದರಸೋದರಿಯರಿಗೆ ಪ್ರತಿಯೊಬ್ಬರಿಗೂ ಕೊಟ್ಟಿತು.

ಅಷ್ಟರಲ್ಲಿ ಮೀಸೆ ಮೊಲದಮರಿಯೂ “ಓ, ನನ್ನದೂ ಇದೇ ಐಡಿಯಾ” ಎನ್ನುತ್ತಾ, ಒಂದು ಬಾಕ್ಸನ್ನು ಹೊರತೆಗೆದು, ಅದರಿಂದ ಚಂದದ ರಿಬ್ಬನ್ ಕಟ್ಟಿದ್ದ ಕ್ಯಾರೆಟುಗಳನ್ನು ತೆಗೆದು ಅವರೆಲ್ಲರಿಗೂ ಕೊಟ್ಟಿತು. ದೊಡ್ಡಕಿವಿ ಮೊಲದಮರಿ, ಸಣ್ಣಕಿವಿ ಮೊಲದಮರಿ ಮತ್ತು ಮೋಂಟುಬಾಲದ ಮೊಲದಮರಿಯೂ ಹಾಗೆಯೇ ಮಾಡಿದವು.

ಇಷ್ಟೆಲ್ಲ ಆದಾಗ, ಅಡುಗೆಕೋಣೆಯ ಮೇಜಿನ ಮೇಲೆ ತಾಜಾ ಕ್ಯಾರೆಟುಗಳ ರಾಶಿಯೇ ಇತ್ತು. ಅಪ್ಪಮೊಲ ಅಚ್ಚರಿಯಿಂದ ಕಣ್ಣುಕಣ್ಣು ಬಿಡುತ್ತಾ, "ನನ್ನ ಕ್ಯಾರೆಟುಗಳು ಏನಾದವು ಅಂತ ಈಗ ಗೊತ್ತಾಯಿತು. ನಾನು ಅವು ಕದ್ದು ಹೋದವಂತ ಯೋಚಿಸಿದ್ದೆ” ಎಂದಿತು. ನಿನ್ನೆ ತಾನು ಅಕ್ಕಪಕ್ಕದವರ ಮನೆಗಳಿಗೆ ಹೋಗಿ ಕ್ಯಾರೆಟ್ ಕದ್ದವರು ಯಾರೆಂದು ವಿಚಾರಿಸಿದ ಕತೆ ಹೇಳಿತು. ಎಲ್ಲ ಮೊಲದ ಮರಿಗಳೂ ನಕ್ಕುನಕ್ಕು ಸುಸ್ತಾದವು.

ಈಗ ಅಮ್ಮಮೊಲ ಅಡುಗೆಕೋಟನ್ನು ಹಾಕಿಕೊಳ್ಳುತ್ತಾ, “ಈ ಕ್ಯಾರೆಟುಗಳು ಇಲ್ಲಿರಲಿ. ನೀವೆಲ್ಲರೂ ಇಲ್ಲಿಂದ ಆಚೆ ಹೋಗಿ ಆಟವಾಡಿಕೊಳ್ಳಿ. ನಿಮಗೆಲ್ಲ ಹುಟ್ಟುಹಬ್ಬದ ವಿಶೇಷ ಮಾಡಲಿಕ್ಕಿದೆ" ಎಂದು ತನ್ನ ಕೆಲಸದಲ್ಲಿ ತೊಡಗಿತು.

ಅಂತೂ ಕ್ಯಾರೆಟುಗಳ ಗುಟ್ಟು ರಟ್ಟಾಗಿತ್ತು. ಮೊಲದ ಮರಿಗಳು ಒಬ್ಬೊಬ್ಬರಾಗಿ ಬಂದು ತರಕಾರಿ ಹೊಲದಿಂದ ಕೆಲವು ಕ್ಯಾರೆಟುಗಳನ್ನು ಅಗೆದು ತೆಗೆಯೋದನ್ನು ಮರದ ಮೇಲಿದ್ದ ಅಳಿಲು ನೋಡಿತ್ತು. ಮರುದಿನ ಮೊಲದಮರಿಗಳ ಹುಟ್ಟುಹಬ್ಬವೆಂದು ಅಳಿಲಿಗೆ ಗೊತ್ತಿತ್ತು. ಅವುಗಳ ತುಂಟತನ ಅದಕ್ಕೆ ಅರ್ಥವಾಗಿತ್ತು. ಆದ್ದರಿಂದ ಅದು ಅಲ್ಲಿ ವಾಸವಿದ್ದ ಪ್ರಾಣಿಗಳಿಗೆಲ್ಲರಿಗೂ ಗುಟ್ಟುರಟ್ಟು ಮಾಡಬಾರದೆಂದು ಹೇಳಿತ್ತು.

ಅಪ್ಪಮೊಲಕ್ಕೆ ನಿನ್ನೆ ತಾನು ಅಕ್ಕಪಕ್ಕದವರನ್ನೆಲ್ಲ ಕ್ಯಾರೆಟ್ ಕದ್ದವರು ಯಾರೆಂದು ಗದರಿಸಿ ಕೇಳಿದ್ದಕ್ಕಾಗಿ ಪಶ್ಚಾತ್ತಾಪವಾಗಿತ್ತು. ನಿಜವಾಗಿ ಅವರೆಲ್ಲರೂ ತನ್ನ ಮಕ್ಕಳ ಹುಟ್ಟುಹಬ್ಬದ ಖುಷಿಗಾಗಿ ಗುಟ್ಟೊಂದನ್ನು ರಟ್ಟು ಮಾಡಲಿಲ್ಲ ಎಂಬುದು ಅರ್ಥವಾಗಿತ್ತು. ಅವರೆಲ್ಲರ ಬಳಿ ಹೋಗಿ ಕ್ಷಮೆ ಕೋರಿದ ಅಪ್ಪಮೊಲ, ಅವರನ್ನೆಲ್ಲ ತನ್ನ ಮಕ್ಕಳ ಹುಟ್ಟುಹಬ್ಬದ ವಿಶೇಷ ಪಾರ್ಟಿಗಾಗಿ ಆಹ್ವಾನಿಸಿತು.

ಅವತ್ತು ಸಂಜೆ ಕಂದುಮೊಲ, ಗುಳ್ಳೆನರಿ, ಅಳಿಲು ಮತ್ತು ಅಕ್ಕಪಕ್ಕದ ಮನೆಯವರೆಲ್ಲ ಮರಿಮೊಲಗಳ ಮನೆಯಲ್ಲಿ ಒಟ್ಟು ಸೇರಿದಾಗ ಮರಿಮೊಲಗಳಿಗೆ ಅಚ್ಚರಿಯೋ ಅಚ್ಚರಿ. ಅದುವೇ ಅವುಗಳ ಹುಟ್ಟುಹಬ್ಬದ ವಿಶೇಷ! ಆಗ ಅಮ್ಮಮೊಲ ಅಡುಗೆಕೋಣೆಯಿಂದ ದೊಡ್ಡ ತಟ್ಟೆಯಲ್ಲಿ ದೊಡ್ಡ ಕ್ಯಾರೆಟ್ ಕೇಕನ್ನು ತಂದಿಟ್ಟಳು - ಐದು ಮರಿಮೊಲಗಳ ಹುಟ್ಟುಹಬ್ಬದ ಸಂಭ್ರಮಕ್ಕಾಗಿ.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ