ಐಪಿಟಿವಿ:ಅಂತರ್ಜಾಲ ಮೂಲಕ ದೂರದರ್ಶನ

ಐಪಿಟಿವಿ:ಅಂತರ್ಜಾಲ ಮೂಲಕ ದೂರದರ್ಶನ

ಬರಹ

    ಅಂತರ್ಜಾಲ ಸಂಪರ್ಕ ಮುಖಾಂತರ ಧ್ವನಿಕರೆಗೆ ಅನುಮತಿ ನೀಡಿದ ಬೆನ್ನಿಗೇ,ಕೇಂದ್ರ ಸರಕಾರವು ಅಂತರ್ಜಾಲ ಮೂಲಕ ದೂರದರ್ಶನ ಪ್ರಸಾರಕ್ಕೂ ಅನುಮತಿಸಿದೆ.ಇದರಿಂದ ಇದುವರೆಗೆ ಕೇಬಲ್ ಮತ್ತು ಉಪಗ್ರಹ ಮೂಲಕ ಒದಗಿಸಬಹುದಾಗಿದ್ದ ಟಿವಿ ಸೇವೆಗೆ ಅಂತರ್ಜಾಲವನ್ನೂ ತೆರೆದಂತಾಗಿದೆ.ಸಾರ್ವಜನಿಕ ವಲಯದ ಬಿಎಸೆನ್‌ಎಲ್ ಮತ್ತು ಎಂಟಿಎನ್‌ಎಲ್ ಇಂತಹ ಸೇವೆ ಒದಗಿಸಲು ಸಿದ್ಧವಾಗಿದ್ದರೆ,ಖಾಸಗಿ ವಲಯದ ರಿಲಾಯನ್ಸ್ ಕಮ್ಯುನಿಕೇಶನ್ಸ್ ಮತ್ತು ಭಾರ್ತಿ ಏರ್‌ಟೆಲ್ ಸೇವೆ ಒದಗಿಸಲು ತಯಾರಿ ಮಾಡಿಕೊಳ್ಳುತ್ತಿದ್ದುವು.
ಏನಿದು ಐಪಿಟಿವಿ?
    ಬ್ರಾಡ್‌ಬ್ಯಾಂಡ್ ಮೂಲಕ ಅಂತರ್ಜಾಲ ಸೇವೆ ಲಭ್ಯವಿದೆಯಷ್ಟೇ? ಈ ಮಾಧ್ಯಮದ ಮುಖಾಂತರ ಟಿವಿ ಪ್ರಸಾರದ ವಿಡಿಯೋ ಮತ್ತು ಆಡಿಯೋವನ್ನು ಪ್ರಸಾರ ಮಾಡಲು ಸಾಧ್ಯ.ವಿಡಿಯೋ ಮತ್ತು ಆಡಿಯೋವನ್ನು ಮೊದಲಾಗಿ ಡಿಜಿಟಲ್ ಸಂಕೇತಗಳಾಗಿ ಪರಿವರ್ತಿಸಿ,ಸಂಕೇತಗಳನ್ನು ಪ್ಯಾಕೆಟ್ ಸ್ವಿಚಿಂಗ್ ವಿಧಾನದಿಂದ ಗ್ರಾಹಕನಿಗೆ ತಲುಪಿಸಲಾಗುತ್ತದೆ. ಇಂತಹ ಸೇವೆಯನ್ನು ಬಳಸಲು ಗ್ರಾಹಕ ಅಂತರ್ಜಾಲ ಸಂಪರ್ಕವನ್ನು ಹೊಂದಿರಬೇಕಾಗುತ್ತದೆ.ವಿಡಿಯೋ ಮತ್ತು ಧ್ವನಿ ಸಂಕೇತಗಳು ಬಹುಮಾಧ್ಯಮ ಸಂಕೇತಗಳಾಗಿದ್ದು,ಅಧಿಕ ಬ್ಯಾಂಡ್‌ವಿಡ್ತ್ ಬೇಡುವುದರಿಂದ,ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸಂಪರ್ಕ ಬೇಕೇ ಬೇಕು. ಈ ಅಂತರ್ಜಾಲ ಸಂಪರ್ಕ ನಿಸ್ತಂತುವಾದರೂ ಪರವಾಗಿಲ್ಲ.ಕೇಬಲ್ ಮೂಲಕ ಅಥವ ಡಿಎಸ್‌ಎಲ್ ಹೀಗೆ ಯಾವ ತೆರನ ಶರವೇಗದ ಸಂಪರ್ಕವಾದರೂ ನಡೆದೀತು.ಲ್ಯಾಪ್‌ಟಾಪ್ ಅಥವ ಕಂಪ್ಯೂಟರ್‌ನಲ್ಲಿ ಟಿವಿ ಪ್ರಸಾರವನ್ನು ನೋಡಲು ಸಾಧ್ಯ. ಟಿವಿಯಲ್ಲಿ ನೋಡಬೇಕೆಂದರೆ,ಸಂಕೇತಗಳನ್ನು ಸಾದೃಶ ಸಂಕೇತಗಳಾಗಿಸ ಬೇಕಲ್ಲ? ಹಾಗಾಗಿ ಸೆಟ್ ಟಾಪ್ ಬಾಕ್ಸ್ ಎನ್ನುವ ಸಾಧನ ಬೇಕು.
ಟಿವಿ ಸೇವೆಯಲ್ಲಿ ಹೊಸ ಮಜಲು
    ಐಪಿಟಿವಿ ಮೂಲಕ ಸಾಮಾನ್ಯ ಟಿವಿ ಚಾನೆಲುಗಳ ಪ್ರಸಾರವನ್ನು ಗ್ರಾಹಕನಿಗೆ ಕಳುಹಿಸಬಹುದು. ಅದರೆ ಸೇವಾದಾತೃಗಳು ತಮ್ಮ ದೃಷ್ಟಿಯನ್ನು ಅದಕ್ಕೇ ಸೀಮಿತಗೊಳಿಸಿಕೊಳ್ಳಲಾರರು. ಅವರುದ್ದೇಶಿಸಿರುವುದು ಕೇಳಿದ ವಿಡಿಯೋವನ್ನು ಒದಗಿಸುವಂತಹ ವಿಡಿಯೋ ಆನ್ ಡಿಮಾಂಡ್ ಸೇವೆಗೆ. ಇದರಲ್ಲಿ ಸೇವಾದಾತೃವಿನ ಬಳಿ ಲಭ್ಯವಿರುವ, ಧಾರಾವಾಹಿ,ಹಾಡು,ಚಲನಚಿತ್ರ ಹೀಗೆ ಯಾವುದೇ ಕಾರ್ಯಕ್ರಮವನ್ನು ಗ್ರಾಹಕನಿಗೆ ಒದಗಿಸಬಹುದು.ಧಾರಾವಾಹಿ ಅಥವ ಚಿತ್ರವನ್ನು ವೀಕ್ಷಿಸುವಾತ,ಪ್ರಸಾರವಾಗುತ್ತಿದಂತೆ ನೋಡಬೇಕಾದ ಅನಿವಾರ್ಯತೆ ಇಲ್ಲ.ಡಿವಿಡಿ ಪ್ಲೇಯರ್‌ನಿಂದ ಪ್ರದರ್ಶನ ವೀಕ್ಷಿಸುವಾಗ ಯಾವ ತೆರನಾಗಿ ಫಾಸ್ಟ್ ಫಾರ್ವರ್ಡ್ ಮಾಡಿ ನೋದಬಹುದೋ,ಹಾಗೆಯೂ ಮಾಡಬಹುದು. ಬೇಕೆಂದಾಗ ನಿಲ್ಲಿಸಿ,ನಂತರ ಮುಂದುವರಿಸಬಹುದು.
    ಗ್ರಾಹಕನಿಗೆ ಪ್ರತಿಸ್ಪಂದನಕ್ಕೆ ಅವಕಾಶವೂ ಸಿಗಬಹುದು.ದೃಶ್ಯವನ್ನು ತನಗೆ ಬೇಕಾದ ಕೋನದಿಂದ ವೀಕ್ಷಿಸುವ ಅನುಭವ ಲಭ್ಯವಾಗಿಸಬಹುದು.ಸುಖಾಂತ್ಯ ಅಥವ ದುಖಾಂತ್ಯದ ಆಯ್ಕೆಯನ್ನೂ ನೀಡಬಹುದು.
    ಅಧಿಕ ಬ್ಯಾಂಡ್‌ವಿಡ್ತ್ ಬಯಸುವ ಈ ಸೇವೆಯನ್ನು ನೀಡುವಾಗ,ಸಂಕೇತಗಳನ್ನು ನೇರವಾಗಿ ಕಳುಹಿಸದೆ, ಅವನ್ನು ಸಂಕುಚಿತಗೊಳಿಸಿ ಕಳುಹಿಸುವ ತಂತ್ರಜ್ಞಾನವನ್ನು ಬಳಸುತ್ತಾರೆ.mpeg ಅಂತಹ ಒಂದು ವಿಧಾನ. ಹೀಗೆ ಮಾಡಿದರೂ ಅಂತರ್ಜಾಲ ಸಂಪರ್ಕದ ಬಳಕೆ ಹೆಚ್ಚಾದಾಗ,ಸಂಕೇತಗಳು ಸರಿಯಾಗಿ ಗ್ರಾಹಕನಿಗೆ ಮುಟ್ಟದೆ,ಪ್ರಸಾರದಲ್ಲಿ ಅಡೆತಡೆ ಆಗುವ ಸಾಧ್ಯತೆ ಇದೆ.
    ಒಂದೆಡೆ ಡಿಟಿಎಚ್ ಸೇವೆ ನೀಡುವ ಕಂಪೆನಿಗಳು ಹೆಚ್ಚುತ್ತಿವೆ.ಕೇಬಲ್ ಜಾಲದ ಮೂಲಕ ಅಂತರ್ಜಾಲ ಲಭ್ಯವಾಗುತ್ತಲಿದೆ.ಅಂತರ್ಜಾಲ ಮೂಲಕ ಧ್ವನಿಕರೆಯ ಅವಕಾಶ,ಸಾಮಾನ್ಯ ದೂರವಾಣಿ ಮತ್ತು ಮೊಬೈಲ್ ಕರೆ ದರಗಳನ್ನು ಇಳಿಸಲಿದೆ.ಇಂತಹ ಹೊತ್ತಿನಲ್ಲಿ,ಈ ಐಪಿಟಿವಿ ಸೇವೆ ಮತ್ತೊಂದು ಸಂಪರ್ಕ ಕ್ರಾಂತಿಯತ್ತ ಭಾರತವನ್ನು ತೆರೆಯಲಿದೆ.
*ಅಶೋಕ್‌ಕುಮಾರ್ ಎ