ಐಫೆಲ್ ಟವರ್ ಎಂಬ ವಾಸ್ತುಲೋಕದ ಅಚ್ಚರಿ

ಐಫೆಲ್ ಟವರ್ ಎಂಬ ವಾಸ್ತುಲೋಕದ ಅಚ್ಚರಿ

ಆಧುನಿಕ ಜಗತ್ತಿನ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿದೆ. ನಮ್ಮ ಆಧುನಿಕ ಜಗತ್ತಿನಲ್ಲಿ ಅಮೇರಿಕಾದ ‘ಸ್ವಾತಂತ್ರ್ಯ ದೇವಿಯ ಪ್ರತಿಮೆ' (Statue of Liberty), ಭಾರತ ದೇಶದಲ್ಲಿ ಆಗ್ರಾ ನಗರದಲ್ಲಿರುವ ತಾಜ್ ಮಹಲ್ ಹಾಗೂ ಪುರಾತನ ಅದ್ಭುತಗಳಲ್ಲಿ ಈಗ ಉಳಿದಿರುವ ಈಜಿಪ್ಟ್ ದೇಶದ ಕೈರೋದಲ್ಲಿರುವ ಪಿರಮಿಡ್ ಗಳು ನಮ್ಮಲ್ಲಿ ಯಾವಾಗಲೂ ಕುತೂಹಲವನ್ನು ಕೆರಳಿಸುತ್ತಾ ಬಂದಿವೆ 

ಫ್ರಾನ್ಸ್ ದೇಶವು ಅತ್ಯಂತ ಸುಂದರವಾದ ಪ್ರವಾಸೀ ತಾಣಗಳಲ್ಲಿ ಒಂದು. ಅದರಲ್ಲೂ ಪ್ಯಾರಿಸ್ ನಗರವು ಜಗತ್ತಿನ ಅತ್ಯಂತ ಆಕರ್ಷಕ ನಗರಗಳಲ್ಲಿ ಒಂದು. ಜೀವಮಾನದಲ್ಲಿ ಒಮ್ಮೆಯಾದರೂ ಈ ನಗರಕ್ಕೆ ಭೇಟಿ ನೀಡಬೇಕೆಂಬುದು ಹಲವಾರು ಜನರ ಕನಸು. ಇದೇ ಪ್ಯಾರಿಸ್ ನಗರದಲ್ಲಿ ಕಳೆದ ಸುಮಾರು ೧೩೦ ವರ್ಷಗಳಿಂದ ಬಿಸಿಲು, ಗಾಳಿ, ಮಳೆಗೆ ಬಾಗದೇ ತಲೆ ಎತ್ತಿ ನಿಂತಿದೆ ಐಫೆಲ್ ಟವರ್. ಇದನ್ನು ನಿರ್ಮಿಸಿದವನು ಅಲೆಕ್ಸಾಂಡರ್ ಗುಸ್ತಾವ್ ಐಫೆಲ್ ಎಂಬ ಮೆಕ್ಯಾನಿಕಲ್ ಇಂಜಿನಿಯರ್. ಈಗ ನಾವು ಅಲ್ಲಲ್ಲಿ ಮೊಬೈಲ್ ಟವರ್ ಗಳನ್ನು ನೋಡುತ್ತೇವೆ. ಆದರೆ ಕಳೆದ ಶತಮಾನದಲ್ಲಿ ಮೊಬೈಲ್ ಟವರ್ ನಂಥಹ ರಚನೆಯ ಯೋಚನೆ ಯಾರಲ್ಲೂ ಇರಲಿಲ್ಲ. ಐಫೆಲ್ ೧೫೦ ವರ್ಷಗಳ ಹಿಂದೆಯೇ ತನ್ನ ನಿಸ್ತಂತು ಯಂತ್ರಗಳಿಗಾಗಿ ಸಣ್ಣ ಸಣ್ಣ ಗೋಪುರ (ಟವರ್)ಗಳನ್ನು ನಿರ್ಮಿಸಿದ್ದ. ಗುಸ್ತಾವ್ ಐಫೆಲ್ ಗೆ ಈ ರೀತಿಯ ಯೋಚನೆ ಬಂದುದ್ದಾರೂ ಹೇಗೆ?

ಫ್ರಾನ್ಸ್ ದೇಶದಲ್ಲಿ ಮಹಾಕ್ರಾಂತಿಯಾಗಿ ೯೯ ವರ್ಷಗಳೇ ಕಳೆದಿದ್ದವು. ಅದರ ನೂರನೇ ವರ್ಷದ ಸವಿನೆನಪಿಗಾಗಿ ಏನಾದರೂ ಮಹತ್ತರವಾದದನ್ನು ಸಾಧಿಸಬೇಕೆಂದು ಸರಕಾರ ಯೋಚನೆ ಮಾಡುತ್ತಿತ್ತು. ಫ್ರಾನ್ಸ್ ದೇಶದ ಆರ್ಥಿಕ ಸ್ಥಿತಿಯೂ ಆ ಸಮಯದಲ್ಲಿ ಸಧೃಢ ಸ್ಥಿತಿಯಲ್ಲಿ ಇತ್ತು. ತಮ್ಮ ದೇಶದಲ್ಲಿ ಏನಾದರೂ ಮಹಾನ್ ಕಾರ್ಯ ಕೈಗೊಂಡು ಪ್ರಪಂಚದ ಉಳಿದ ದೇಶಗಳ ಗಮನ ಸೆಳೆಯುವುದು ಫ್ರಾನ್ಸ್ ಸರಕಾರದ ಕನಸಾಗಿತ್ತು. ಅದಕ್ಕೋಸ್ಕರವೇ ಅವರು ಏನು ಮಾಡಬಹುದು? ಎಂದು ಜನಾಭಿಪ್ರಾಯವನ್ನು ಸಂಗ್ರಹ ಮಾಡಲು ಪ್ರಾರಂಭಿಸಿದರು. ತಮ್ಮ ದೇಶವಲ್ಲದೇ ವಿದೇಶಗಳಿಂದಲೂ ಈ ವಿಷಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಫ್ರಾನ್ಸ್ ನ ಜನತೆ ತಮ್ಮದೇ ದೇಶದ ಇಂಜಿನಿಯರ್ ಗುಸ್ತಾವ್ ಐಫೆಲ್ ಅವರನ್ನು ಈ ಕಾರ್ಯಕ್ಕಾಗಿ ಆರಿಸಿತು. 

ಐಫೆಲ್ ಗೆ ಆಗ ೫೭ ವರ್ಷ. ಆದರೆ ಅವರು ತಮ್ಮ ಅದ್ಭುತ ಯೋಚನಾ ಶಕ್ತಿಯಿಂದ ಕಬ್ಬಿಣದ ಒಂದು ಆಕರ್ಷಕ ಗೋಪುರವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡರು. ಯಾವುದೇ ಕೆಲಸ ಮಾಡಲು ಹೋದಾಗ ವಿರೋಧವೆಂಬ ವಿಘ್ನಗಳು ಬಂದೇ ಬರುತ್ತವೆ. ಐಫೆಲ್ ಟವರ್ ಸಹ ಇದಕ್ಕೆ ಹೊರತಾಗಿರಲಿಲ್ಲ. ಕೆಲವು ಮಂದಿ ಇದನ್ನು ವಿರೋಧಿಸಿದರು. ಆದರೆ ಇದನ್ನು ಬೆಂಬಲಿಸುವ ಹಲವಾರು ಮಂದಿ ಇದ್ದುದರಿಂದ ಇದರ ನಿರ್ಮಾಣ ಕಾರ್ಯ ಸುಸೂತ್ರವಾಗಿ ಸಾಗತೊಡಗಿತು. ಪರಿಸರವಾದಿಗಳು, ಸಾಹಿತಿಗಳು, ಶಿಲ್ಪಿಗಳು ಎಲ್ಲರೂ ಬೆಂಬಲ ಸೂಚಿಸಿದರು. ನಗರದ ಸೌಂದರ್ಯ ಇದರಿಂದ ಹೆಚ್ಚಲಿದೆ ಎಂಬುದು ಅವರೆಲ್ಲರ ಬಲವಾದ ನಂಬಿಕೆಯಾಗಿತ್ತು. 

೨೮ ಜನವರಿ ೧೮೮೭ರಲ್ಲಿ ಐಫೆಲ್ ಟವರ್ ನಿರ್ಮಾಣ ಕಾರ್ಯವು ಆರಂಭವಾಯಿತು. ಗುಸ್ತಾವ್ ಐಫೆಲ್ ಈ ಕಾರ್ಯವನ್ನು ಕೈಗೆತ್ತಿಕೊಳ್ಳುವುದಕ್ಕೆ ಮೊದಲು ಹಲವಾರು ರೈಲು ಸೇತುವೆಗಳನ್ನು ನಿರ್ಮಿಸಿದ್ದರು. ಅನೇಕ ಕಬ್ಬಿಣದ ಪ್ರತಿಮೆಗಳನ್ನು ತಯಾರು ಮಾಡಿದ್ದರು. ಅವರು ಬರೆದ ‘Resistance of Air’ ಪುಸ್ತಕವು ಆ ಕಾಲದಲ್ಲಿ ಪ್ರಸಿದ್ಧಿಯಾಗಿತ್ತು. ಗಾಳಿಯ ಒತ್ತಡವನ್ನು ತಾಳಿಕೊಂಡು ಉದ್ದವಾದ ಕಟ್ಟಡ ಅಥವಾ ಗೋಪುರವನ್ನು ಹೇಗೆ ವರ್ಷಾನುಗಟ್ಟಲೆ ನಿಲ್ಲಿಸಬಹುದು ಎಂದು ಅವನು ಆ ಪುಸ್ತಕದಲ್ಲಿ ಬರೆದಿದ್ದ. ಅದೇ ವಿಷಯದ ಸ್ಪೂರ್ತಿಯಲ್ಲಿ ಐಫೆಲ್ ತಮ್ಮ ಗೋಪುರದ ಕೆಲಸವನ್ನು ಮುಂದುವರೆಸುತ್ತಾರೆ. ಕಬ್ಬಿಣದ ಗೋಪುರದ ಅಡಿಪಾಯವು ಅಗಲವಾಗಿದ್ದು ನಂತರ ನಿರ್ಮಾಣ ಕಾರ್ಯವು ಮೇಲಕ್ಕೆ ಹೋದಂತೆ ಸಣ್ಣದಾಗುತ್ತಾ ಹೋಗುತ್ತದೆ. ಐಫೆಲ್ ಗಾಳಿಯ ಒತ್ತಡ ತಾಳಿ ಕೊಳ್ಳುವಂತೆ ಅವುಗಳ ಕೋನವನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಈಗಲೂ ಯಾವುದೇ ಬದಿಯಿಂದ ಗಾಳಿ ಅಥವಾ ಬಿರುಗಾಳಿ ಬೀಸಿದರೂ ಅವುಗಳ ಒತ್ತಡವು ಏಕಪ್ರಕಾರವಾಗಿ ಇಡೀ ಗೋಪುರಕ್ಕೆ ಹಂಚಿಕೊಂಡು ಹೋಗುತ್ತದೆ. ಇದರಿಂದ ಎಲ್ಲೂ ಗೋಪುರಕ್ಕೆ ಧಕ್ಕೆಯಾಗುವುದಿಲ್ಲ. ಕಳೆದ ನೂರು ವರ್ಷಗಳಲ್ಲಿ ಗೋಪುರವು ಕೇವಲ ೪ ಅಂಗುಲ ಮಾತ್ರ ಕುಸಿದಿದೆಯಂತೆ. ಇದರಿಂದಲೇ ಐಫೆಲ್ ಅವರ ಕಾರ್ಯಕ್ಷಮತೆ ಮತ್ತು ಬುದ್ಧಿಮತ್ತೆಯ ಅರಿವಾಗುತ್ತದೆ. ಕಬ್ಬಿಣದಿಂದ ನಿರ್ಮಾಣ ಮಾಡಿರುವುದರಿಂದ ಬೇಗನೇ ಹಾಳಾಗುವ ಭಯವಿಲ್ಲ. ಫ್ರಾನ್ಸ್ ನಲ್ಲಿ ೧೯೬೦ರ ನಂತರದ ಎಲ್ಲಾ ಗೋಪುರಗಳನ್ನು, ಗಗನಚುಂಬಿ ಕಟ್ತಡಗಳನ್ನು ಇದೇ ತತ್ವದ ಆಧಾರದಲ್ಲಿ ಕಟ್ಟಲಾಗುತ್ತಿದೆ.

ಐಫೆಲ್ ಟವರ್ ಎತ್ತರ ಸುಮಾರು ೩೨೪ ಮೀಟರ್. ಇದಕ್ಕೆ ಬಳಸಿದ ಕಬ್ಬಿಣ ಎಷ್ಟು ಗೊತ್ತಾ? ಸುಮಾರು ೭೦೦೦ ಟನ್. ಕಬ್ಬಿಣದ ಜೊತೆ ಕೆಲವು ಮಿಶ್ರ ಲೋಹಗಳನ್ನು ಬಳಕೆ ಮಾಡಿದ್ದಾರೆ. ನಾಲ್ಕು ಅಂತಸ್ತುಗಳನ್ನು ಮಾಡಿದ್ದಾರೆ. ಮೇಲ್ಗಡೆಯ ಅಂತಸ್ತಿಗೆ ಹೋಗಲು ಅದಕ್ಕೆ ಲಿಫ್ಟ್ ವ್ಯವಸ್ಥೆ ಇದೆ. ಮೇಲಕ್ಕೆ ಹತ್ತಲು ೩೦೪ ಮೆಟ್ಟಲುಗಳೂ ಇವೆ. ೧೮೮೯ರ ಮಾರ್ಚ್ ೧೫ರಂದು ಈ ಗೋಪುರದ ನಿರ್ಮಾಣ ಪೂರ್ತಿಯಾಗಿ ಅದೇ ತಿಂಗಳ ೩೧ರಂದು ಉದ್ಘಾಟನೆಯಾಗುತ್ತದೆ.  ಮೂರನೇ ಮಹಡಿಯವರೆಗೆ ಪ್ರವಾಸಿಗರಿಗೆ ಪ್ರವೇಶವಿದೆ. ಕೆಲವೊಮ್ಮೆ ಪ್ರವಾಸಿಗರು ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿದ್ದೂ ಇದೆ. ಆ ಕಾರಣದಿಂದ ಹಲವಾರು ಬಾರಿ ಐಫೆಲ್ ಟವರ್ ಪ್ರವೇಶವನ್ನು ನಿಷೇಧ ಮಾಡಿದ್ದೂ ಇದೆ. ಮೂರನೇ ಅಂತಸ್ತು ಏರಿದರೆ ನಿಮಗೆ ಇಡೀ ಪ್ಯಾರಿಸ್ ನಗರವನ್ನು ನೋಡಬಹುದು. ಈ ಗೋಪುರಕ್ಕೆ ವಿದ್ಯುತ್ ದೀಪದ ಶಾಶ್ವತ ಅಲಂಕಾರವಿದೆ. ಆ ಕಾರಣದಿಂದ ರಾತ್ರಿ ದೀಪಗಳನ್ನು ಬೆಳಗಿಸಿದಾಗ ಆ ನೋಟ ಬಹಳ ಮನಮೋಹಕವಾಗಿರುತ್ತದೆ. ಈ ಕಾರಣದಿಂದಲೇ ಪ್ಯಾರಿಸ್ ನಗರವನ್ನು ‘ದೀಪಗಳ ನಗರ' ( ಸಿಟಿ ಆಫ್ ಲೈಟ್ಸ್) ಎಂದೂ ಕರೆಯುತ್ತಾರೆ. ಐಫೆಲ್ ಟವರ್ ವೀಕ್ಷಣೆಗೆ ಪ್ರವೇಶ ಧನವಿದೆ. 

ಈ ಐಫೆಲ್ ಟವರ್ ನ್ನು ಉಳಿಸಿಕೊಳ್ಳಲು ಅಂದಿನ ದಿನಗಳಲ್ಲಿ ಫ್ರೆಂಚರು ಹಲವಾರು ಕಸರತ್ತುಗಳನ್ನು ಮಾಡಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ತನ್ನ ಸೈನಿಕರಿಗೆ ಈ ಗೋಪುರವನ್ನು ನಾಶ ಮಾಡಲು ಆಜ್ಞೆ ನೀಡಿದ್ದನು. ಆದರೆ ಫ್ರೆಂಚ್ ಸೈನಿಕರು ಇದರ ಲಿಫ್ಟ್ ನ ಕಬ್ಬಿಣದ ಹಗ್ಗವನ್ನು ತುಂಡರಿಸಿಹಾಕಿದುದರ ಪರಿಣಾಮವಾಗಿ ಜರ್ಮನ್ ಸೈನಿಕರಿಗೆ ಇದನ್ನು ಹತ್ತಲು ಆಗಲಿಲ್ಲ. ಕಬ್ಬಿಣವನ್ನು ಉಪಯೋಗಿಸಿದ್ದುದರಿಂದ ಅವರಿಗೆ ಅದನ್ನು ನಾಶ ಮಾಡುವುದು ಅಷ್ಟು ಸುಲಭವೂ ಆಗಿರಲಿಲ್ಲ. ಆದರೂ ಜರ್ಮನಿಯವರು ಫ್ರಾನ್ಸ್ ಅನ್ನು ೧೯೪೦ರಲ್ಲಿ ಗೆದ್ದುಕೊಂಡ ಬಳಿಕ ಐಫೆಲ್ ಟವರ್ ಮೇಲ್ಗಡೆ ತಮ್ಮ ಧ್ವಜವನ್ನು ಹಾರಿಸಿದ್ದಕ್ಕೇ ಸಮಾಧಾನ ಪಟ್ಟುಕೊಳ್ಳಬೇಕಾಯಿತು. 

ಬ್ರಿಟೀಷ್ ಹಾಗೂ ಫ್ರೆಂಚರ ನಡುವೆ ಮಿತ್ರತ್ವ ಇಲ್ಲದಿದ್ದರೂ ಇಂಗ್ಲೆಂಡ್ ನ ರಾಜಕುಮಾರ ಎಂಟನೇ ಎಡ್ವರ್ಡ್ ಐಫೆಲ್ ಟವರ್ ನ ಉದ್ಘಾಟನೆ ಮಾಡಿದ್ದನಂತೆ. ಐಫೆಲ್ ಟವರ್ ಮೇಲಿನಿಂದ ಕೆಲವರು ಪ್ಯಾರಾಚೂಟ್ ಮೂಲಕ ಜಿಗಿಯಲು ಪ್ರಯತ್ನಿಸಿದ್ದರು. ಕೆಲವು ಪರ್ವತಾರೋಹಿಗಳು ಇದನ್ನು ಹಗ್ಗದ ಸಹಾಯದಿಂದ ಏರಲು ಪ್ರಯತ್ನಿಸಿದ್ದರು. ಹೀಗೆ ಐಫೆಲ್ ಟವರ್ ಬಗ್ಗೆ ಹತ್ತು ಹಲವಾರು ಸಿಹಿ-ಕಹಿ ಘಟನೆಗಳು ನಡೆದಿವೆ. ಏನೇ ಆದರೂ ಐಫೆಲ್ ಟವರ್ ಜಗ್ಗದೇ ಬಲವಾಗಿ ನಿಂತಿದೆ. ಪ್ಯಾರಿಸ್ ನ ಯಾವುದೇ ಭಾಗದಿಂದ ನೀವು ಐಫೆಲ್ ಟವರ್ ನೋಡಬಹುದು. ಗೋಪುರದ ಕೆಳಗಡೆ ಇದನ್ನು ಕಟ್ಟಿದ ಇಂಜಿನಿಯರ್ ಗುಸ್ತಾವ್ ಐಫೆಲ್ ಪ್ರತಿಮೆಯನ್ನು ಗಮನಿಸಬಹುದು. ಜಗತ್ತಿನ ಎಲ್ಲಾ ಪ್ರವಾಸಿಗರ ಕಣ್ಮಣಿಯಾಗಿರುವ ಐಫೆಲ್ ಟವರ್ ನ ಸೊಬಗು ನೋಡಲು ಬಹು ಚಂದ. ಅವಕಾಶ ಸಿಕ್ಕಿದರೆ ನೀವೊಮ್ಮೆ ಫ್ರಾನ್ಸ್ ದೇಶಕ್ಕೆ ಹೋಗಿ ಬನ್ನಿ.

ಮಾಹಿತಿ ಸಂಗ್ರಹ : ಹಳೆಯ ಕಸ್ತೂರಿ ಮಾಸಿಕದಿಂದ

ಚಿತ್ರ ಕೃಪೆ: ಅಂತರ್ಜಾಲ ತಾಣ  (೧. ಐಫೆಲ್ ಟವರ್ ೨. ಗುಸ್ತಾವ್ ಐಫೆಲ್)