ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ
ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್, ಬಗ್ದಾದ್, ಕುವೈತ್, ದುಬೈ, ಮುತ್ತುಪ್ಪಾಡಿ, ಕಾನ್ಪುರ್, ದೆಹಲಿ, ನ್ಯೂಜರ್ಸಿ, ನ್ಯೂಯಾರ್ಕ್, ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾನ್ ಹೊಸೆ, ಕುಪರ್ಟಿನೋ ಮೊದಲಾದ ಸ್ಥಳಗಳ ಪರಿಚಯ ಮಾಡಿಕೊಡುತ್ತಾರೆ. ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಎನ್ ಎ ಎಂ ಇಸ್ಮಾಯಿಲ್ ಅವರು ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಮೂರು ಭೂಖಂಡಗಳೊಳಗಿನ ಆರು ದೇಶಗಳನ್ನೂ ಏಳನೇ ಶತಮಾನದಿಂದ ಆರಂಭಿಸಿ ಇಪ್ಪತ್ತೊಂದನೇ ಶತಮಾನದ ತನಕ ಕಾಲಮಾನವನ್ನೂ ವ್ಯಾಪಿಸಿಕೊಂಡಿರುವ ಈ ‘ಪ್ರವಾಸ ಕಥನ’ ಇನ್ನೂರು ಪುಟಗಳ ಒಳಗೆ ಅಡಕವಾಗಿರುವುದೇ ಒಂದು ಸೋಜಿಗ. ಈ ತನಕದ ಎಲ್ಲಾ ಕೃತಿಗಳಲ್ಲೂ ಬೋಳುವಾರು ಎಂಬ ಲೇಖಕನದ್ದು ಪರೋಕ್ಷ ಉಪಸ್ಥಿತಿ. ಆದರೆ ಈ ಕಥನದಲ್ಲಿ ಮಾತ್ರ ಅವರದ್ದು ಪ್ರತ್ಯಕ್ಷ ಪಾಲ್ಗೊಳ್ಳುವಿಕೆ. ಜೊತೆಗೆ ಅವರ ಕುಟುಂಬದ ಸದಸ್ಯರೆಲ್ಲರೂ ಈ ‘ಪ್ರವಾಸ’ಕ್ಕೆ ವಿಶಿಷ್ಟ ಕಾಣಿಕೆಗಳನ್ನು ನೀಡಿದ್ದಾರೆ.
‘ನಿಮ್ಮಲ್ಲಿ ಯಾರ ಮನೆಗಳಲ್ಲಾದರೂ ಕುರ್-ಆನ್ ಗ್ರಂಥದ ಪ್ರತಿಗಳಿದ್ದರೆ ಅವೆಲ್ಲವನ್ನೂ ನಾಳೆ ಮುಂಜಾನೆಯ ಸೂರ್ಯನನ್ನು ಕಾಣುವ ಮೊದಲೇ ಸುಟ್ಟುಬಿಡಿ !’ ಎಂಬ ಪ್ರಚೋದನಾತ್ಮಕ ಹೇಳಿಕೆಗೆ ಸ್ವತಃ ಬೋಳುವಾರರೇ ಬೆಚ್ಚಿ ಬೀಳುವುದರೊಂದಿಗೆ ಆರಂಭವಾಗುವ ಕೃತಿ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ನಡೆದ ಘಟನೆಗಳನ್ನು ವರ್ತಮಾನದೊಂದಿಗೆ ಜೋಡಿಸುತ್ತಾ ಸಾಗುತ್ತದೆ. ಹಾಗಾಗಿ ಈ ಕೃತಿ ವಿವಿಧ ಭೂಭಾಗಗಳಲ್ಲಿ ಪ್ರಯಾಣಿಸುತ್ತಿರುವಾಗಲೇ ಭಿನ್ನ ಕಾಲಗಳಲ್ಲಿಯೂ ಸಂಚರಿಸುವ ಅನುಭವವನ್ನು ಓದುಗರಿಗೆ ನೀಡುತ್ತದೆ.
ಭಾಷೆಯ ಸರಳತೆ ಮತ್ತು ನಿರೂಪಣೆಯ ಸ್ಪಷ್ಟತೆಯಲ್ಲಿ ಬೋಳುವಾರರ ಅನನ್ಯ ಶೈಲಿಯನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಏಕಕಾಲದಲ್ಲಿ ವಿವಿಧ ದೇಶ ಮತ್ತು ಕಾಲಗಳಲ್ಲಿ ಸಂಚರಿಸುವ ಈ ‘ಪ್ರವಾಸ ಕಥನ’ ಕ್ಕೆ ಓದಲೇ ಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವಿದೆ.”