ಐವರು ಸೈಮನ್ ಸೋದರರು
ಒಂದಾನೊಂದು ಕಾಲದಲ್ಲಿ ರಷ್ಯಾದಲ್ಲಿ ಸೈಮನ್ ಎಂಬ ಮುದುಕ ರೈತನಿದ್ದ. ಅವನಿಗೆ ಐವರು ಮಗಂದಿರು. ಅವನು ಅವರೆಲ್ಲರಿಗೂ ಸೈಮನ್ ಎಂದೇ ಹೆಸರಿಟ್ಟ!
ಅವರೆಲ್ಲರೂ ಯುವಕರಾದಾಗ ತಂದೆ ಸೈಮನ್ ಮತ್ತು ಅವನ ಪತ್ನಿ ತೀರಿಕೊಂಡರು. ಐವರು ಸೋದರರು ತಮ್ಮ ಸಣ್ಣ ಹೊಲದಲ್ಲಿ ಕಷ್ಟ ಪಟ್ಟು ದುಡಿಯುತ್ತಿದ್ದರು. ಅದರಿಂದಾಗಿ ಒಳ್ಳೆಯ ಇಳುವರಿ ಪಡೆಯುತ್ತಿದ್ದರು.
ಅದೊಂದು ದಿನ ರಷ್ಯಾದ ದೊರೆ ಝಾರ್ ತನ್ನ ಆಸ್ಥಾನಿಕರೊಂದಿಗೆ ಆ ಗ್ರಾಮಕ್ಕೆ ಬಂದ. ತಮ್ಮ ಹೊಲದಲ್ಲಿ ಉತ್ಸಾಹದಿಂದ ದುಡಿಯುತ್ತಿದ್ದ ಐವರು ಸೋದರರನ್ನು ಕಂಡು, ಅವರನ್ನು ಕರೆದ. ಮೊದಲನೆಯವನ ಬಳಿ ಝಾರ್ ಕೇಳಿದ, “ನಿನ್ನ ಹೆಸರೇನು?" ಆತ ಉತ್ತರಿಸಿದ, “ಸೈಮನ್ ಸೈಮನೋವಿಚ್. ಇವರೆಲ್ಲರೂ ನನ್ನ ತಮ್ಮಂದಿರು." ಝಾರ್ ಒಬ್ಬೊಬ್ಬರನ್ನೇ ಕರೆದು ಹೆಸರು ಕೇಳಿದ. ಎಲ್ಲರೂ ಅದೇ ಹೆಸರನ್ನು ಹೇಳಿದಾಗ ಆತನಿಗೆ ಅಚ್ಚರಿ. "ನನ್ನ ಅರಮನೆಗೆ ಬನ್ನಿ. ನನಗೆ ನಿಮ್ಮಂತೆ ಕೆಲಸ ಮಾಡುವ ಯುವಕರು ಬೇಕಾಗಿದ್ದಾರೆ" ಎಂದ ಝಾರ್.
ಅದೇ ದಿನ ಎಲ್ಲ ಸೋದರರೂ ತಮ್ಮ ಗ್ರಾಮದಿಂದ ದೊರೆಯ ಅರಮನೆಗೆ ಹೋದರು. "ನಿಮಗೆ ಬೇರೆಬೇರೆ ಕೆಲಸ ಕೊಡ ಬೇಕಾಗಿದೆ. ಬೇಸಾಯ ಒಳ್ಳೆಯದೇ, ಆದರೆ ನಿಮಗೆ ಬೇರೆ ಕೆಲಸಗಳೂ ಗೊತ್ತಿರಬೇಕು” ಎಂದ ಝಾರ್.
ಮೊದಲನೆಯ ಸೈಮನ್ ಹೇಳಿದ, "ನಾನು ಅರಮನೆಯ ಅರಣ್ಯದ ಮರಗಳನ್ನು ಕಡಿದು, ಅವುಗಳಿಂದ ಒಂದು ನೌಕೆ ನಿರ್ಮಿಸುತ್ತೇನೆ.” "ನಾನು ಆ ನೌಕೆಯನ್ನು ನೀರಿನಲ್ಲಿ ನಡೆಸುತ್ತೇನೆ” ಎಂದ ಎರಡನೆಯ ಸೈಮನ್. ಮೂರನೆಯ ಸೈಮನ್ ತಿಳಿಸಿದ, "ನಾನೊಂದು ಕೋವಿ ಮಾಡುತ್ತೇನೆ. ಅದರಿಂದ ಗುರಿಯಿಟ್ಟು ಯಾವುದೇ ಹಾರುತ್ತಿರುವ ಹಕ್ಕಿಯನ್ನು ಹೊಡೆದು ಉರುಳಿಸಬಹುದು.” ನಾಲ್ಕನೆಯ ಸೈಮನ್ ಹೇಳಿದ, "ನಾನು ದೇಶದಲ್ಲೇ ಅತ್ಯಂತ ವೇಗದ ಓಟಗಾರ. ಓಡಿ ಹೋಗಿ, ಆ ಹಕ್ಕಿ ನೆಲಕ್ಕೆ ಬೀಳುವ ಮುಂಚೆ ಅದನ್ನು ಹಿಡಿಯುತ್ತೇನೆ.”
ಕೊನೆಯ ಸೈಮನ್ ತಿಳಿಸಿದ, “ನನ್ನಲ್ಲಿ ಇಂತಹ ಕೌಶಲ್ಯಗಳಿಲ್ಲ. ಆದರೆ ಬೇರೊಂದು ಕೌಶಲ್ಯವಿದೆ. ನಾನೊಬ್ಬ ಕಳ್ಳ" ಎಂದ. “ನೀನೊಬ್ಬ ಕಳ್ಳನೇ? ನನ್ನ ರಾಜ್ಯದ ಎಲ್ಲ ಕಳ್ಳರನ್ನೂ ಸೆರೆಮನೆಗೆ ಹಾಕ್ತೇನೆ” ಎಂದು ರೇಗಿದ ಝಾರ್. "ನಾನು ಸಾಮಾನ್ಯ ಕಳ್ಳನಲ್ಲ” ಎಂದ ಕೊನೆಯ ಸೈಮನ್. “ಹಾಗಾದರೆ ಅದನ್ನು ಸಾಬೀತು ಮಾಡು. ದೂರದ ದೇಶದಲ್ಲಿರುವ ಸುಂದರಿ ರಾಜಕುಮಾರಿ ಹೆಲೆನಾಳನ್ನು ನಾನು ಮದುವೆ ಆಗಬೇಕೆಂದಿದ್ದೇನೆ. ನನ್ನ ವಧುವಾಗಲು ಅವಳನ್ನು ಕದ್ದು ತಂದರೆ ನೀನು ಅಸಾಮಾನ್ಯ ಕಳ್ಳ ಎಂದು ಒಪ್ಪಿಕೊಳ್ತೇನೆ” ಎಂದು ಘೋಷಿಸಿದ ಝಾರ್.
“ದೊರೆಯೇ, ನನ್ನ ಅಣ್ಣ ನೌಕೆ ಸಿದ್ಧಪಡಿಸಿದೊಡನೆ ನಾನು ಈ ಸಾಹಸಕ್ಕೆ ಹೊರಡುತ್ತೇನೆ. ನನ್ನ ಸೋದರರನ್ನೂ ಕರೆದೊಯ್ಯುತ್ತೇನೆ. ಅನುಮತಿ ಕೊಡಿ" ಎಂದು ವಿನಂತಿಸಿದ ಕೊನೆಯ ಸೈಮನ್. ಝಾರ್ ಸಮ್ಮತಿಸಿದ. ಕೆಲವೇ ವಾರಗಳಲ್ಲಿ ನೌಕೆ ನಿರ್ಮಿಸಿದ ಮೊದಲನೆಯ ಸೈಮನ್.
ಅನಂತರ ಎಲ್ಲ ಸೈಮನ್ ಸೋದರರೂ ತಮ್ಮ ಸಾಧನಗಳೊಂದಿಗೆ ರಾಜಕುಮಾರಿ ಹೆಲೆನಳ ದೇಶಕ್ಕೆ ನೌಕೆಯಲ್ಲಿ ಹೊರಟರು. ಝಾರನ ಅರಮನೆಯಲ್ಲಿ ಅಡ್ಡಾಡುತ್ತಿದ್ದ ಒಂದು ಕಪ್ಪು ಬೆಕ್ಕನ್ನು ತನ್ನೊಂದಿಗೆ ಒಯ್ದ ಕೊನೆಯ ಸೈಮನ್. ಹದಿನೈದು ದಿನಗಳ ಯಾನದ ನಂತರ ಅವರು ರಾಜಕುಮಾರಿ ಹೆಲೆನಳ ದೇಶದ ತೀರ ತಲಪಿದರು.
ಆಗ ಕೊನೆಯ ಸೈಮನ್ ಕಪ್ಪುಬೆಕ್ಕಿನೊಂದಿಗೆ ನೌಕೆಯಿಂದ ಇಳಿದು, ಅಲ್ಲಿ ಅಡ್ಡಾಡಲು ಹೊರಟ. ಅರಮನೆಯ ಕಿಟಕಿಯಿಂದ ಕಪ್ಪುಬೆಕ್ಕನ್ನು ಕಂಡ ಹೆಲೆನಾಳಿಗೆ ಅಚ್ಚರಿ. ಅಂತಹ ಪ್ರಾಣಿಯನ್ನು ಕಂಡಿರದಿದ್ದ ಹೆಲೆನಾ ಅದು ಒಂದು ನಾಯಿ ಆಗಿರಬೇಕು ಎಂದುಕೊಂಡಳು. ಅದ್ಯಾವ ಜಾತಿಯ ನಾಯಿ ಮತ್ತು ಅದನ್ನು ಮಾರುತ್ತಾನೆಯೇ ಎಂದು ತಿಳಿದು ಬರಲು ಅವಳು ಒಬ್ಬ ಸೇವಕನನ್ನು ಕಳಿಸಿದಳು.
ಕಪ್ಪುಬೆಕ್ಕನ್ನು ಮಾರಲು ಸಾಧ್ಯವೇ ಇಲ್ಲವೆಂದು ಸೇವಕನಿಗೆ ತಿಳಿಸಿದ ಕೊನೆಯ ಸೈಮನ್. ಆದರೆ ಬೆಕ್ಕನ್ನು ಎತ್ತಿಕೊಂಡು ನೇವರಿಸಲಿಕ್ಕಾಗಿ ಅದನ್ನು ರಾಜಕುಮಾರಿಯ ಬಳಿ ಒಯ್ಯಬಲ್ಲೆ ಎಂದೂ ಹೇಳಿದ. ರಾಜಕುಮಾರಿ ಹೆಲೆನಾಳಿಗೆ ಆ ಬೆಕ್ಕು ಎಷ್ಟು ಇಷ್ಟವಾಯಿತೆಂದರೆ, ಸೈಮನನನ್ನು ಅರಮನೆಯ ಒಳಗೆ ಕರೆಸಿದಳು. ಅವಳಿಗೆ ಬೆಕ್ಕನ್ನು ತೋರಿಸುತ್ತಾ ಸೈಮನ್ ಹೇಳಿದ, “ಇದು ಬೆಕ್ಕು, ನಾಯಿಯಲ್ಲ. ನಮ್ಮ ದೇಶದಲ್ಲಿ ಇದೊಂದು ಸಾಮಾನ್ಯ ಸಾಕುಪ್ರಾಣಿ.” ಬೆಕ್ಕನ್ನು ಅವನಿಂದ ತಗೊಂಡು, ಅದರ ಮೈ ನೇವರಿಸುತ್ತಾ, “ಇದು ಎಷ್ಟು ಚಂದವಿದೆ” ಎಂದಳು ರಾಜಕುಮಾರಿ ಹೆಲೆನ್.
"ಪ್ರತಿದಿನವೂ ಈ ಬೆಕ್ಕನ್ನು ಅರಮನೆಗೆ ತಗೊಂಡು ಬರ್ತೇನೆ. ನೀವು ಅದರೊಂದಿಗೆ ಆಟವಾಡಬಹುದು” ಎಂದ ಕೊನೆಯ ಸೈಮನ್. ಅಂತೆಯೇ ಏಳು ದಿನ ಅವನು ಬೆಕ್ಕನ್ನು ಅರಮನೆಗೆ ತಂದ. ರಾಜಕುಮಾರಿ ಕಪ್ಪುಬೆಕ್ಕನ್ನು ಪ್ರೀತಿಸತೊಡಗಿದಳು. ಏಳನೆಯ ದಿನ ರಾಜಕುಮಾರಿ ಅದರೊಂದಿಗೆ ಆಟವಾಡುತ್ತಿದ್ದಾಗ ಸೈಮನ್ ಹೇಳಿದ, "ನಾನೊಂದು ನೌಕೆಯಲ್ಲಿ ನಿಮ್ಮ ದೇಶಕ್ಕೆ ಬಂದಿದ್ದೇನೆ. ನೀವು ನೋಡಿರಬಹುದಾದ ಯಾವುದೇ ವಸ್ತುವಿಗಿಂತ ಅದ್ಭುತವಾದ ವಸ್ತುಗಳು ಆ ನೌಕೆಯಲ್ಲಿ ತುಂಬಿವೆ.”
ತನ್ನ ಸೇವಕರು ಮತ್ತು ಕಾವಲುಗಾರರೊಂದಿಗೆ ರಾಜಕುಮಾರಿ ಹೆಲೆನ್ ಸೈಮನ್ ಸೋದರರ ನೌಕೆ ನೋಡಲು ಬಂದಳು. ಆಗ “ಇದರಲ್ಲಿರುವ ಅದ್ಭುತ ವಸ್ತುಗಳನ್ನು ನೀವು ಮಾತ್ರ ನೋಡಬಹುದು” ಎಂದ ಕೊನೆಯ ಸೈಮನ್. ಆದ್ದರಿಂದ, ಉಳಿದವರೆಗೆಲ್ಲ ತೀರದಲ್ಲಿ ಕಾದಿರಲು ಹೇಳಿದ ರಾಜಕುಮಾರಿ, ಕೊನೆಯ ಸೈಮನನೊಂದಿಗೆ ನೌಕೆಯನ್ನೇರಿದಳು. ಅವರಿಬ್ಬರೂ ನೌಕೆಯ ಕೆಳ-ಅಂತಸ್ತಿಗೆ ಇಳಿದಾಗ, ತಾವು ಅಡಗಿದಲ್ಲಿಂದ ಉಳಿದ ನಾಲ್ವರು ಸೈಮನರು ಹೊರಬಂದು ನೌಕೆಯನ್ನು ಮುನ್ನಡೆಸಿದರು.
ರಾಜಕುಮಾರಿ ಹೆಲೆನಳಿಗೆ ನೌಕೆ ಚಲಿಸುತ್ತಿದೆ ಎಂದು ತಿಳಿದಾಗ ಆಕೆ “ನೀನು ನನಗೆ ಮೋಸ ಮಾಡಿದೆ" ಎಂದು ಚೀರಿದಳು. ತಕ್ಷಣವೇ ಆಕೆ ಒಂದು ಬಿಳಿ ಸಮುದ್ರಹಕ್ಕಿಯಾಗಿ ಬದಲಾಗಿ ಆಕಾಶಕ್ಕೆ ಹಾರಿದಳು. ಆಗ ಮೂರನೆಯ ಸೈಮನ್ ತನ್ನ ವಿಶೇಷ ಕೋವಿ ಗುರಿಯಿಟ್ಟು ಮ್ಯಾಜಿಕ್ ಬುಲೆಟನ್ನು ಹಕ್ಕಿಗೆ ಹೊಡೆದ. ಆ ಹಕ್ಕಿ ಹಡಗಿಗೆ ಬೀಳುತ್ತಿದ್ದಂತೆ ನಾಲ್ಕನೆಯ ಸೈಮನ್ ಮುನ್ನುಗ್ಗಿ ಅದನ್ನು ಹಿಡಿದ. ಕೂಡಲೇ ಆ ಹಕ್ಕಿ ರಾಜಕುಮಾರಿ ಹೆಲೆನ್ ಆಗಿ ಬದಲಾಯಿತು.
ಅಷ್ಟರಲ್ಲಿ ರಾಜಕುಮಾರಿಯ ಸೈನಿಕರು ಎರಡು ನೌಕೆಗಳಲ್ಲಿ ಸೈಮನ್ ಸೋದರರ ನೌಕೆಯನ್ನು ಬೆನ್ನಟ್ಟಿದರು. ಆ ನೌಕೆಗಳು ಹತ್ತಿರ ಬರುತ್ತಿದ್ದಂತೆ, ಎರಡನೆಯ ಸೈಮನ್ ತಮ್ಮ ನೌಕೆಯನ್ನು ನೀರಿನೊಳಗೆ ಮುಳುಗಿಸಿಬಿಟ್ಟ! ಅದು ಸಮುದ್ರದಲ್ಲಿ ಮುಳುಗಿತು ಎಂದು ಭಾವಿಸಿದ ರಾಜಕುಮಾರಿಯ ಸೈನಿಕರು ತಮ್ಮ ನೌಕೆಗಳನ್ನು ಹಿಂದಕ್ಕೆ ತಿರುಗಿಸಿ ಹೊರಟು ಹೋದರು.
ಅವತ್ತು ಕತ್ತಲಾದಾಗ ಎರಡನೆಯ ಸೈಮನ್ ನೌಕೆಯನ್ನು ಪುನಃ ನೀರಿನಿಂದ ಮೇಲಕ್ಕೆ ತಂದ. ಅನಂತರ ಅವರು ಝಾರನ ದೇಶಕ್ಕೆ ಯಾನ ಮಾಡಿದರು.
ಸುಂದರಾಂಗ ಝಾರನನ್ನು ಕಂಡೊಡನೆ ಮೋಹಿತಳಾದ ರಾಜಕುಮಾರಿ ಹೆಲೆನಾ ಅವನನ್ನು ಮದುವೆಯಾಗಲು ಒಪ್ಪಿದಳು. ಮರುದಿನವೇ ಅವರ ಮದುವೆ ವಿಜೃಂಭಣೆಯಿಂದ ನಡೆಯಿತು. ಐವರು ಸೈಮನ್ ಸೋದರರು ಮಾಡಿದ ಸಹಾಯಕ್ಕಾಗಿ ಅವರನ್ನು ಸಾಮಂತರನ್ನಾಗಿ ನೇಮಿಸಿದ ಝಾರ್. ಅವರೆಲ್ಲರೂ ಸಿರಿವಂತರಾಗಿ ಗೌರವದಿಂದ ಬಾಳಿದರು.