ಐ ಅಮ್ ಆಲ್ವೇಸ್ ಹ್ಯಾಟ್ಸ್ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.
ಐ ಅಮ್ ಆಲ್ವೇಸ್ ಹ್ಯಾಟ್ಸ್ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.
ಪಿ.ಬಿ.ಎಸ್. "ನೊ ಮೋರ್" ಎಂದು ನಿನ್ನೆ ಮೆಸೇಜ್ ಬಂದಿತು. ದಿನ ನಿತ್ಯ ನಲ್ಲಿ ಕೇಳುವ ಕನ್ನಡ ಹಳೆಯ ಹಾಡುಗಳು ಇಂದು ಆ ಶರೀರ ಇಲ್ಲವಾದಾಗ ಅನಿಸುದ್ದು ಶರೀರ ನಶ್ವರ, ಇವರ ಶಾರೀರ ನಮ್ಮ ಜೀವನದ ನೆನಪುಗಳಲಿ ಶಾಶ್ವತ.
೨೦೧೦ ರಲ್ಲಿ ಸಿಂಗಪುರ ಹಾಗೂ ಹೃದಯವಾಹಿನಿ ಪತ್ರಿಕೆ ಮಂಗಳೂರು ನೇತೃತ್ವದಲಿ ನಡೆದ ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದ ಸಂದರ್ಭದಲ್ಲಿ ಡಾ.ಪಿ. ಬಿ.ಶ್ರೀನಿವಾಸ ಅವರೊಂದಿಗೆ ಸಿಂಗಪುರದ ಸುದ್ಧಿವಾಹಿನಿ ತಂಡದವರು ನಡೆಸಿದ ಚಿಕ್ಕ ಸಂದರ್ಶನದಲ್ಲಿ
ಸರ್, ಪಿ.ಬಿ.ಎಸ್. ಎಂದಾಕ್ಷಣ ಶ್ರೀಚರಣ, ಟೋಪಿ ಟ್ರೇಡ್ಮಾರ್ಕ್? ಎಂದೆ ಅದಕ್ಕೆ
ಪಿ.ಬಿ.ಎಸ್. ನಗುತ್ತಾ ಆ ಟೋಪಿ ನನಗೆ ಒಂದು ಸಮಾರಂಭದಲ್ಲಿ ನೀಡಿದ್ದು(ನೆನಪಿಲ್ಲ). ಅದನ್ನು ನೀಡುವಾಗ ಈ ಟೊಪ್ಪಿಯಲ್ಲಿ ಇರುವುದು ನಿಮ್ಮ ಗಾನಮಾಧುರ್ಯಕ್ಕೆ ಮಣಿದ ರಸಿಕರ ಪ್ರೀತಿ, ಮೆಚ್ಚುಗೆ, ಪ್ರಶಂಸೆ, ಆದರಗೌರವಾಭಿಮಾನಗಳು ಎಂದರು. ಅದಕ್ಕಾಗಿ ಅದನ್ನು ನಾನು ಶಿರಸಾವಹಿಸಿ ಧರಿಸುತ್ತಿದ್ದೇನೆ. ಐ ಅಮ್ ಆಲ್ವೇಸ್ ಹ್ಯಾಟ್ಸ್ಆಫ್ ಎಂದರು.
ಬ್ಯಾಗ್ ತುಂಬಾ ಪೆನ್ನುಗಳು, ಇಷ್ಟೋಂದು ಪೆನ್ನುಗಳು ಎಂದಾಗ ಒಂದೊಂದು ಪೆನ್ನು ಒಂದೊಂದು ಹಾಡಿನ ಸಂಕೇತ ಎಂದರು. ೮೦ರ ಇಳಿವಯಸ್ಸಿನಲ್ಲೂ ಕುಳಿತಲ್ಲೇ ಕೂತು ಹಾಡು ಬರೆದು ಬೆರಗು ಮೂಡಿಸಿದ್ದರು. ಕೆಲಹೊತ್ತು ಅವರೊಡನೆ ಕಳೆದದ್ದು ನಮ್ಮಗಳ ಪಾಲಿಗೆ ಮರೆಯಲಾಗದ ಅದೊಂದು ಅಮೃತ ಘಳಿಗೆಯಾಗಿತ್ತು. ಭಾಗ್ಯವಂತರು ನಾವೆ ಭಾಗ್ಯವಂತರು.
ಪಿ.ಬಿ.ಎಸ್. ಅವರು ಅನಂತ ಸಾಗರ, ಅವರ ಸುಮಧುರ ಧ್ವನಿಯಿಂದ ಮೂಡಿ ಬಂದಿರುವ ಸಾವಿರಾರು ಹಾಡುಗಳು ನಮ್ಮನ್ನು ಹಿಡಿದಿಟ್ಟು, ಗಂಟಲ್ಲುಬ್ಬಿ ಬರುತ್ತದ್ದೆ. ಕನ್ನಡ ಚಿತ್ರರಂಗಕ್ಕೆ ಶರೀರ ರಾಜ್ಕುಮಾರ್, ಶಾರೀರ ಪಿ.ಬಿ.ಶ್ರೀನಿವಾಸ್ - ಹಾಲು-ಜೇನು ಒಂದಾದ ಹಾಗೆ. ಒಂದು ಇನ್ನೊಂದನ್ನು ಬಿಟ್ಟು ಕಲ್ಪಿಸಲಾಗದು. ರಾಜ್ಗೆ ಹೇಳಿ ಮಾಡಿಸಿದಂತಿತ್ತು ಪಿ.ಬಿ.ಎಸ್ ಕಂಠಸಿರಿ. ರಾಜ್ ನಟನೆ, ಪಿ.ಬಿ.ಶ್ರೀನಿವಾಸ್ ಕಂಠದಲಿ ಬಂದ ಅಂದಿನ ಮೃದು-ಮಧುರ ಹಾಡುಗಳನ್ನು ಇಂದೂ MP3 ಯಲ್ಲಿ ದಿನಾ ಕೇಳಿ, ಮೆಲುಕು ಹಾಕಿಕೊಂಡು ಆರಾಧಿಸುವವರು ನನ್ನಂಥವರು.
ನಾವೆಲ್ಲಾ ರೇಡಿಯೋ ಜಮಾನದವರು. ನಾವು ಬೆಳೆಯುವ ಕಾಲದಲ್ಲಿ ರೇಡಿಯೋ, ದಿನಪತ್ರಿಕೆಗಳನ್ನು ಬಿಟ್ಟರೆ ಇನ್ಯಾವ ಮಾಧ್ಯಮಗಳೂ ಇರಲಿಲ್ಲ. ಹಳ್ಳಿ-ಹಳ್ಳಿಗಳಲ್ಲಿ ಸಿರಿವಂತ, ಬಡವ ಬಲ್ಲಿದ ಎಂಬ ಭೇದವಿಲ್ಲದೆ ಶ್ರೀಸಾಮಾನ್ಯನಿಗೆ ಮುಟ್ಟುತ್ತಿದ್ದುದು ಸಿನಿಮಾ ಮಾಧ್ಯಮ ಹಾಗೂ ರೇಡಿಯೋ. ರೇಡಿಯೋ ಇದ್ದಲ್ಲಿ ಅವನ ಮನೆಯಲಿ ಸುದ್ದಿ, ಸಿನಿಮಾ ಹಾಡುಗಳು ಕೇಳಲು ಸಂತೆ ಸೇರುತ್ತಿದ್ದ ಕಾಲವದು. ದಿನ ಬೆಳಿಗ್ಗೆ ರೇಡಿಯೋ ಉಲಿಯುತ್ತಿದ್ದ ಸುಪ್ರಭಾತದೊಂದಿಗೆ ರತ್ರಿ ಮುಕ್ತಾಯ ಹಾಡಿ ಶುಭರಾತ್ರಿ ಹೇಳುವವರೆಗೆ ಎಲ್ಲಾ ಕಾರ್ಯಕ್ರಮಗಳೂ ಚಾಚೂ ತಪ್ಪದೆ ಕೇಳುತ್ತಿದ್ದಳು ನನ್ನಮ್ಮ.
ಸಿನಿಮಾದಲಿ ರಾಜ್ ಸರಳ, ಸಜ್ಜನಿಕೆ, ದೇಶಪ್ರೇಮ, ಒಲವು, ಗೌರವ ಮೈಗೂಡಿಸಿಕೊಂಡ ಆದರ್ಶಪ್ರಾಯನಾದರೆ ಹಾಡುಗಳ ಮೂಲಕ ನೀತಿ, ಪ್ರೀತಿ, ಪ್ರೇಮ, ಮಮತೆಗಳನ್ನು ಬಿತ್ತರಿಸುತ್ತಿದ್ದ ಅಶರೀರವಾಣಿ ಪಿ.ಬಿ.ಎಸ್. ಕಂಠ. ಆ ಜಮಾನಾದ ಪ್ರಶಾಂತ ಗಾಯನ, ನೆಚ್ಚಿನ ಹೀರೋ ರಾಜ್ಕುಮಾರ್ ಕಲ್ಪನೆ, ಮನದಲಿ ಏಳುತ್ತಿದ್ದವು ನವಿರಾದ ಪ್ರೀತಿಯ ಭಾವನೆಗಳು, ಕಾಣದಿದ್ದ ಇನಿಯನ ಕಲ್ಪನೆಗಳು. ಈ ಕಾರಣಗಳಿಗಾಗಿಯೋ ಏನೋ ಕನ್ನಡದಲಿ ನನ್ನ ಮೆಚ್ಚಿನ ಗಾಯಕನ ಪಟ್ಟಿಯಲಿ ಪಿ.ಬಿ.ಎಸ್., ಹಿಂದಿಯಲ್ಲಿ ರಫಿ ಎಂದೆಂದೂ ಮೊದಲಿಗರು. ಇದು ನನ್ನೊಬ್ಬಳ ಅನಿಸಿಕೆ ಮಾತ್ರ ಅಲ್ಲ, ನಲವತ್ತು-ಐವತ್ತರ ಅಂಚಿನ ಎಲ್ಲರ ಅನಿಸಿಕೆಯೂ ಇರಬಹುದು.
ಇಂದು ಪಿ.ಬಿ.ಎಸ್. ನಮ್ಮೊಂದಿಗೆ ಇಲ್ಲ ಎಂಬುದು ಅರಗಿಸಿಕೊಳ್ಳುವುದು ಕಷ್ಟ. ಆದರೆ ಈ ಶತಮಾನ ಕಂಡ ಅದ್ಭುತ, ಪರಿಪೂರ್ಣ ಗಾಯಕ. ಬಾಗಿಲನು ತೆರೆದು, ಒಲವೆ ಜೀವನ ಸಾಕ್ಷಾತ್ಕಾರ, ಅಪಾರ ಕೀರ್ತಿ ಮೆರೆವ ಭವ್ಯ ನಾಡಿದು, ಇಳಿದು ಬಾ ತಾಯಿ, ಬಾರೆ, ಬಾರೆ, ಆಕಾಶವೆ ಬೀಳಲಿ ಮೇಲೆ ಹೀಗಿ ಬರೆಯುತ್ತಾ ಹೋದಲ್ಲಿ "ಪಿ.ಬಿ.ಎಸ್. ಅವರು ಹಾಡಿದ ನಮ್ಮ ಮೆಚ್ಚಿನ ಚಿತ್ರಗೀತೆಗಳ ಪಟ್ಟಿ ಬೆಳೆದೀತು.
ವೇದಾಂತಿ ಹೇಳಿದನು, ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಎಂದೆಂದೂ ನಿನ್ನನು ಮರೆತು, ಆಕಾಶವೆ ಬೀಳಲಿ, ಆಗದು ಎಂದು ಕೈ ಕಟ್ಟಿ ಕುಳಿತರೆ, ಜನ್ಮ ಜನ್ಮದಾ ಅನುಬಂಧ ಎಂದು ಹಾಡುತ್ತಾ ನಮ್ಮೆಲ್ಲ ಕನ್ನಡಿಗರ ಬದುಕಿನ ಪುಟಗಳಲ್ಲಿ ಶಾಶ್ವತವಾಗಿ ತಮ್ಮ ಶಾರೀರವನು ಕೊಟ್ಟು ಹೋದ ಆ ಹಿರಿಯ ಚೇತನಕ್ಕೆ "ಆಲ್ವೇಸ್ ಹ್ಯಾಟ್ಸ್ಆಫ್" ...ಪದುಮನಾಭನ ಪಾದದೊಲುಮೆ ಎನಗಾಯಿತು ಎಂದು ಅಗಲಿದ ಆ ಗಾನಗಾರುಡಿಗನಿಗೆ ನಮ್ಮ ನಿಮ್ಮೆಲ್ಲರ ಅಂತಿಮ ನಮನ.
Comments
ಐ ಅಮ್ ಆಲ್ವೇಸ್ ಹ್ಯಾಟ್ಸ್ಆಫ್
In reply to ಐ ಅಮ್ ಆಲ್ವೇಸ್ ಹ್ಯಾಟ್ಸ್ಆಫ್ by lpitnal@gmail.com
ನಮಸ್ಕಾರ,
ಇಂದಿನ ಸಂಪದದಲ್ಲಿ ಪೀ ಬಿ ಶ್ರೀ
In reply to ಇಂದಿನ ಸಂಪದದಲ್ಲಿ ಪೀ ಬಿ ಶ್ರೀ by venkatb83
ಕಲೆ - ಕಲೆಗಾರ ,ಸಾಹಿತಿ
In reply to ಇಂದಿನ ಸಂಪದದಲ್ಲಿ ಪೀ ಬಿ ಶ್ರೀ by venkatb83
ನಮಸ್ಕಾರ,
In reply to ನಮಸ್ಕಾರ, by ramvani
<<ಪಿ.ಬಿ.ಎಸ್.ಅವರು ಅನಂತ ಸಾಗರ,
ವಾಣಿಯವರೆ,
ಹೀಗೊಂದು ನಮನ ನಮ್ಮ ಪಿ.ಬಿ.ಎಸ್’ಗೆ
ಆಂಧ್ರದ ಕಾಕಿನಾಡದಲ್ಲಿ ೧೯೩೦
ನಮಸ್ಕಾರ ಎಲ್ಲರಿಗೂ