ಐ-ಫೋನಿನಲ್ಲಿ ಸೌರಶಕ್ತಿ ಸೈ!
ಐ-ಫೋನಿನಲ್ಲಿ ಸೌರಶಕ್ತಿ ಸೈ!
ಐಫೋನ್‌ಗೆ ಸೌರಕೋಶಗಳಿರುವ ಹೊರಕವಚ ತೊಡಿಸುವ ಮೂಲಕ ಅದನ್ನು ಸೌರಶಕ್ತಿಯ ಮೂಲಕ ಚಾರ್ಜ್ ಮಾಡಲೀಗ ಸಾಧ್ಯ.ಎರಡು ಗಂಟೆ ಬಿಸಿಲಿಗಿಟ್ಟರೆ,ಒಂದು ಗಂಟೆ ಮಾತನಾಡಲು ಬೇಕಾಗುವ ಶಕ್ತಿಯನ್ನದು ಗಳಿಸಿಕೊಳ್ಳುತ್ತದೆ.ಒಂದು ಸಲ ಚಾರ್ಜ್ ಮಾಡಿದ ತ್ರೀಜಿ ಐಫೋನ್‌ನ್ನು,ಅರ್ಧ ಗಂಟೆ ಬಳಕೆ ಮಾಡಬಹುದು.ಬಿಸಿಲಿಲ್ಲದಾಗ,ಯುಎಸ್ಬಿ ಪೋರ್ಟ್ ಮೂಲಕ ಕಂಪ್ಯೂಟರಿಗೆ ಸಂಪರ್ಕಿಸಿ,ಐಫೋನನ್ನು ಚಾರ್ಜ್ ಮಾಡುವ ಅನುಕೂಲ ಇದೆ.ಸೌರಶಕ್ತಿಯನ್ನು ದುಡಿಸಿಕೊಳ್ಳುವ ಈ ಹೊರಕವಚಕ್ಕೆ ಎಂಭತ್ತು ಡಾಲರು ಕೊಡಬೇಕಾಗುತ್ತದೆ.
--------------------------------------------------
ಬಂದಿದೆ ಬರಹ 9.0
ಬರಹ ತಂತ್ರಾಂಶದ ಒಂಭತ್ತನೇ ಆವೃತ್ತಿ ಬಿಡುಗಡೆಯಾಗಿದೆ.ಇದರಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿನ ಕಡತವನ್ನು ಲ್ಯಾಟಿನ್ ಭಾಷೆಗೆ ಬದಲಿಸುವ ಸೌಕರ್ಯ ಲಭ್ಯವಿದೆ.ಅಸ್ಸಾಮೀ ಭಾಷೆಯನ್ನೂ ಇದರಲ್ಲಿ ಅಳವಡಿಸಲಾಗಿದೆ.ಶೇಷಾದ್ರಿ ವಾಸು ಅವರು ಅಭಿವೃದ್ಧಿ ಪಡಿಸಿರುವ ಬರಹ ತಂತ್ರಾಂಶವು ಭಾರತೀಯ ಭಾಷೆಗಳಲ್ಲಿ ಟೈಪಿಸಲು ಅನುಕೂಲ ಒದಗಿಸಿ,ಕನ್ನಡದ ಬಳಕೆಯನ್ನು ಹೆಚ್ಚಿಸುವಲ್ಲಿ ತನ್ನದೇ ಆದ ಕಾಣಿಕೆ ನೀಡಿದೆ.ಬರಹ ಯುನಿಕೋಡ್‌ನ ಮೂರನೇಯ ಆವೃತ್ತಿಯೂ ಈಗ ಲಭ್ಯವಿದ್ದು,ಇದರಲ್ಲಿ ಬರಹಪ್ಯಾಡ್ ಮತ್ತು ಬರಹ ಐಎಂಇ ತಂತ್ರಾಂಶಗಳು ಲಭ್ಯವಿದ್ದು,ಯುನಿಕೋಡ್‌ನಲ್ಲಿ ಟೈಪಿಸಲು ಸಹಕಾರಿ.ಡೌನ್‌ಲೋಡ್ ಮಾಡಲು www.baraha.com ಅಂತರ್ಜಾಲ ತಾಣಕ್ಕೆ ಭೇಟಿಕೊಡಿ.
-----------------------------------------
ಸಕ್ರಿಯ ಟ್ವಿಟರ್ ಬಳಕೆದಾರರು ಹೆಚ್ಚಿಲ್ಲ
ಐದರಲ್ಲಿ ಒಬ್ಬ ಟ್ವಿಟರ್ ಖಾತೆ ತೆರೆದವರು ಮಾತ್ರಾ ಸಕ್ರಿಯರಾಗಿರುತ್ತಾರೆ.ಹೆಚ್ಚಿನವರು ಆರಂಭಶೂರರು ಮಾತ್ರಾ-ಎನ್ನುವುದು ಬಾರಾಕುಡಾ ನೆಟ್ವರ್ಕ್ಸ್ ಎನ್ನುವ ಕಂಪೆನಿಯ ಅಧ್ಯಯನವು ದೃಡ ಪಡಿಸಿದೆ. ನವಂಬರ್ 2008ರಿಂದ ಎಪ್ರಿಲ್ 2009ರ ನಡುವೆ ಟ್ವಿಟರ್ ಖಾತೆಯನ್ನು ಹಲವು ಖ್ಯಾತನಾಮರು ತೆರೆದು,ಟ್ವಿಟರ್ ಭಾರೀ ಜನಪ್ರಿಯವಾಗಲು ಕಾರಣವಾದರು.ಈ ಅವಧಿಯನ್ನು ಟ್ವಿಟರಿನ ಸುವರ್ಣಯುಗ ಎಂದೇ ಕರೆಯಲಾಗುತ್ತಿದೆ.ಸುಮಾರು ಎರಡು ಕೋಟಿ ಖಾತೆಗಳ ಬಳಕೆಯ ಅಂಕೆ ಸಂಖ್ಯೆಯ ಆಧಾರದ ಮೇಲೆ,ಈ ಸುವರ್ಣಯುಗದಲ್ಲಿ ಅರ್ಧಕ್ಕರ್ಧ ಬಳಕೆದಾರರೂ ಖಾತೆ ತೆರೆದದ್ದು ಸ್ಪಷ್ಟವಾಗುತ್ತದೆ.ಕ್ರಿಮಿನಲ್ ಚಟುವಟಿಕೆಗಳಿಗಾಗಿ ಟ್ವಿಟರ್ ಖಾತೆಯನ್ನು ತೆರೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ.ಇಂತಹ ಖಾತೆಗಳನ್ನು ಪತ್ತೆ ಹಚ್ಚಿ,ಅವನ್ನು ಅಶಕ್ತಗೊಳಿಸುವ ಕೆಲಸವನ್ನು ಟ್ವಿಟರ್ ಮಾಡುತ್ತದೆ.
-----------------------------------------------------------
ವಿದ್ಯಾರ್ಥಿಗಳ ಬ್ಲಾಗುಗಳು
ಬ್ಲಾಗು ಬರೆಯುವಲ್ಲಿ ಯುವಜನತೆ ಅತ್ಯುತ್ಸಾಹ ತೋರುತ್ತಿದೆ.ಕಂಪ್ಯೂಟರ್ ಬಳಸುವವರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿರುವುದರಿಂದ ಇದು ನಿರೀಕ್ಷಿತವೇ ಹೌದು.ಅದರಲ್ಲೂ ವಿದ್ಯಾರ್ಥಿಗಳಂತೂ ಬ್ಲಾಗ್ ಬರವಣಿಗೆಯನ್ನು ಗಂಭೀರವಾಗಿಯೇ ಮಾಡುತ್ತಾರೆ.ಬ್ಲಾಗು ಬರೆದು,ದುಡ್ಡು ಮಾಡಲೂ ಸಾಧ್ಯ ಎನ್ನುವ ಕೆಲವು ಉದಾಹರಣೆಗಳು ಇಂತವರಿಗೆ ಹೆಚ್ಚಿನ ಉಮೇದು ನೀಡಲೂ ಬಹುದು.ರಾಕೇಶ್‌ರ "ಮನಕ್ಕಾಗಿ"http://manakkagi.blogspot.com,ನರೇಂದ್ರ ಪೈ ಅವರ http://frozenwell.wordpress.com,ಕಾರ್ತಿಕ್ ಕಸ್ತೂರಿಯವರhttp://dailyapps.net/,ಸುಶ್ರುತ್ ತೆಂಡೂಲ್ಕರ್ ಅವರ http://www.sushtend.blogspot.com,ಆದಿತ್ಯರ http://www.opensourcecollection.blogspot.com,ಕೆನೆತ್‌ರ http://aninosaintlife.wordpress.com,ಪ್ರಿಯಾಂಕಾ ಪ್ರಭು ಅವರ http://vpriyankaprabhu.blogspot.com ಬ್ಲಾಗುಗಳನ್ನು ಗಮನಿಸಬಹುದು.ಕನ್ನಡದಲ್ಲಿ ಬ್ಲಾಗ್ ಬರವಣಿಗೆ ಪ್ರಯತ್ನಿಸುವವರ ಸಂಖ್ಯೆ ಕಡಿಮೆ,ತಂತ್ರಜ್ಞಾನ ಸಂಬಂಧೀ ಬ್ಲಾಗುಗಳೇ ಅಧಿಕ ಎನ್ನುವುದನ್ನೂ ಗಮನಕ್ಕೆ ಬರದಿರದು.
-----------------------------------------------------------------------------
.XXX ತಾಣಗಳಿನ್ನೂ ದೂರ!
ವಯಸ್ಕ ಅಂತರ್ಜಾಲ ತಾಣಗಳಿಗೆ .XXXನಿಂದ ಅಂತ್ಯವಾಗುವ ಹೆಸರನ್ನು ನೀಡಬೇಕು ಎನ್ನುವ ಪ್ರಸ್ತಾವಕ್ಕೆ ಹಸಿರು ಸಂಕೇತ ನೀಡಲು ICANN ಎನ್ನುವ ಸಂಸ್ಥೆ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಿದ ಶುಭ ಸಮಾಚಾರ ಬಂದಿದೆ.ಇಂತಹ ನಿರ್ಧಾರ ಕೈಗೊಂಡರೆ,ದೂರಗಾಮಿ ಪರಿಣಾಮಗಳಿವೆ ಎಂದು ಎಂದು ಸಾವಿರಾರು ಜನರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು ಈ ನಿರ್ಧಾರವನ್ನು ಮುಂದೂಡಲು ಕಾರಣವಾಯಿತು.
-----------------------------------------
ನೋಬೆಲ್:ದಾಖಲೆ ಸಂಖ್ಯೆಯ ನಾಮಕರಣ
2010ರ ನೋಬೆಲ್ ಶಾಂತಿ ಪ್ರಶಸ್ತಿಗೆ ಈಗಾಗಲೇ 237ರಷ್ಟು ಹೆಸರುಗಳನ್ನು ಸೂಚಿಸಲಾಗಿದೆಯಂತೆ.ಕಳೆದವರ್ಷದ ಪ್ರಶಸ್ತಿಗಾಗಿ 205ರಷ್ಟು ಜನರನ್ನು ಸೂಚಿಸಲಾಗಿತ್ತು.ಅಂದಹಾಗೆ ನೋಬೆಲ್ ಪ್ರಶಸ್ತಿಯ ಅಂತರ್ಜಾಲ ತಾಣ http://nobelprize.org/nomination ಈ ವಿಳಾಸದಲ್ಲಿದೆ.ಪ್ರಶಸ್ತಿಯ ನಿರ್ಧಾರಕ್ಕಾಗಿ ಅಕ್ಟೋಬರ್ ವರೆಗೆ ಕಾಯಬೇಕಾದೀತು.
-------------------------------------------------
ಹಾರ್ಡ್ ಡಿಸ್ಕುಗಳು ಬದಲಾಗಲಿವೆ
ಒಂದು ಟೆರಾಬೈಟ್ ಸಾಮರ್ಥ್ಯವನ್ನು ಹೊಂದಿದ ಹಾರ್ಡ್ ಡಿಸ್ಕುಗಳ ಕಾಲವಿನ್ನೇನು ಬರಲಿದೆ.ಈ ಸಾಮರ್ಥ್ಯಕ್ಕೆ ಡಿಸ್ಕುಗಳನ್ನು ಅಣಿಗೊಳಿಸಲು,ಅವುಗಳ ಪ್ರತಿ ಸೆಕ್ಟರುಗಳಲ್ಲಿ ಹಿಡಿಸುವ ದತ್ತಾಂಶ ಸಾಮರ್ಥ್ಯವನ್ನು ಅರ್ಧ ಕಿಲೋಬೈಟಿನಿಂದ ನಾಲ್ಕು ಕಿಲೋಬೈಟಿಗೆ ಏರಿಸುವ ಚಿಂತನೆ ನಡೆದಿದೆ.ಹೀಗೆ ಮಾಡಿದರೆ,ಡಿಸ್ಕಿನಲ್ಲಿರುವ ಸೆಕ್ಟರುಗಳ ಸಂಖ್ಯೆ ಇಳಿದು,ಅವುಗಳ ನಡುವೆ ಬಿಡುವ ಖಾಲಿ ಜಾಗದಿಂದ ಆಗುವ ಸ್ಥಳಾವಕಾಶದ ನಷ್ಟವನ್ನು ತಡೆಯಬಹುದು.ಆದರೆ ಈ ರೀತಿಯ ಬದಲಾವಣೆ ಮಾಡಿದರೆ,ಹಳೆಯ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಹೊಂದಿದ ಕಂಪ್ಯೂಟರುಗಳಲ್ಲಿ ಹೊಸ ಡಿಸ್ಕುಗಳನ್ನು ಬಳಸುವಾಗ ಸಮಸ್ಯೆಯಾಗಬಹುದು.ಹೊಸ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆಗಳಾದ ವಿಂಡೋಸ್7,ಲೆಪಾರ್ಡ್,ಟೈಗರ್,ಲಿನಕ್ಸ್ ಮುಂತಾದವುಗಳು ಹೊಸ ಡಿಸ್ಕುಗಳ ನಾಲ್ಕುಕಿಲೋಬೈಟು ಸೆಕ್ಟರುಗಳನ್ನು ಗುರುತಿಸಲು ಅಣಿಗೊಂಡಿವೆ.
----------------------------------------------
ಮನೆಗೂ ಬರಲಿದೆ ಫೈಬರ್ ತಂತಿ!
ದೂರಸಂಪರ್ಕ ಜಾಲಗಳಲ್ಲಿ ಅಪ್ಟಿಕಲ್ ಫೈಬರ್ ಬಳಕೆ ಆಗಲು ತೊಡಗಿ ವರ್ಷಗಳೇ ಸಂದಿವೆ.ಆದರೆ ನಮ್ಮ ಮನೆಗಳಿಗೆ ಕೊನೆಯ ಸುತ್ತಿನ ಸಂಪರ್ಕವಿನ್ನೂ ತಾಮ್ರದ ತಂತಿಯದ್ದೇ ಆಗಿದೆ."ಕೊನೆಯ ಮೈಲು" ಅಡಚಣೆಯನ್ನೂ ನಿವಾರಿಸಿ,ಮನೆಗೆ ನೇರ ಫೈಬರ್ ಸಂಪರ್ಕದ ಉದ್ಘಾಟನೆ ಶನಿವಾರ ಜೈಪುರದಲ್ಲಿ ನಡೆಯಿತು.ಭಾರತದಲ್ಲಿ ಮೊದಲ ಬಾರಿಗೆ ಇಂತಹ ಸಂಪರ್ಕ ಸಾಧ್ಯವಾಗಿದ್ದು,ಭಾರತ್ ಸಂಚಾರ್ ನಿಗಮದವರ ಫೈಬರ್‌ಟುಹೋಂ ಯೋಜನೆಯಿಂದ ದೇಶದ ಇತರೆಡೆಯೂ ಇಂತಹ ಸಂಪರ್ಕ ನಿಜವಾಗುವ ಸಮಯ ಹತ್ತಿರ ಬಂದಿದೆ.ಇಂತಹ ಸಂಪರ್ಕ ಸಿಕ್ಕಿದಾಗ,ಇಂಟರ್ನೆಟ್ ಟಿವಿ,ಹೈಡೆಫಿನಿಶನ್ ಟಿವಿ,3D ಟಿವಿಯ ಕನಸು ನನಸಾಗಲಿದೆ.ಅಂತರ್ಜಾಲದಲ್ಲಿ ಪ್ರತಿ ಸೆಕೆಂಡಿಗೆ ಒಂದು ಗಿಗಾಬಿಟ್ ವೇಗ ಸಿಗಲಿದೆ.ಬಯಸಿದ ವಿಡಿಯೋ ವೀಕ್ಷಣೆ ಸೌಲಭ್ಯವನ್ನು ಕೊಡಬಹುದು.ಧ್ವನಿ ಮತ್ತು ವಿಡಿಯೋಫೋನ್ ಸಾಧ್ಯ.