ಒಂಟಿ ನಾನಲ್ಲ

ಒಂಟಿ ನಾನಲ್ಲ

ಪುಸ್ತಕದ ಲೇಖಕ/ಕವಿಯ ಹೆಸರು
ವಿಜಯಲಕ್ಷ್ಮಿ ನಾಗೇಶ್
ಪ್ರಕಾಶಕರು
ಪಂಚಮಿ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೩

ವಿಜಯಲಕ್ಷ್ಮೀ ನಾಗೇಶ್ ಅವರ ‘ಒಂಟಿ ನಾನಲ್ಲ' ಎನ್ನುವ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ವೆಂಕಟೇಶ್ ಮಾನು ಇವರು. ಅವರ ಪ್ರಕಾರ ಈ ಕವನಗಳು ಸಂಯಮದೊಡಲಲ್ಲಿ ಬದುಕಿನ ನೋವುಗಳನ್ನು ಮೌನವಾಗಿ ಅನುಭವಿಸಿದ ಪಳೆಯುಳಿಕೆಗಳಂತಿವೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ವಿಜಯಲಕ್ಷ್ಮೀ ನುಗ್ಗೇಹಳ್ಳಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ಹೀಗಿದೆ...

“ಖಾಸಗಿ ವೃತ್ತಿಯಲ್ಲಿ ಶುಶ್ರೂಶಕಿಯಾಗಿದ್ದು ಜನರ ಸ್ವಾಸ್ಥ್ಯ ನೋಡಿಕೊಳ್ಳುವ ವಿಜಯಲಕ್ಷ್ಮೀ ನಾಗೇಶ್ ಅವರು ತಮ್ಮ ಮನಸ್ಸಿನ ಸ್ವಾಸ್ಥ್ಯಕ್ಕೆ ಸಾಹಿತ್ಯದ ಸಾಂಗತ್ಯವನ್ನು ಬೆಳೆಸಿಕೊಂಡು ಅದರ ಸಂಪ್ರೀತಿಯಲ್ಲಿ ತಲ್ಲೀನವಾಗಿ ತಮ್ಮ ಮೊದಲ ಸಂಕಲನದಲ್ಲೇ ಗಮನ ಸೆಳೆಯುವ ಭರವಸೆಯ ಲೇಖಕಿ ಎಂದು ನಾನು ಆರಂಭದಲ್ಲೇ ತಿಳಿಸಬಲ್ಲೆ. ಬದುಕು ಒಂದು ರೀತಿಯಲ್ಲಿ ಮಾಗಿದ ಅನುಭವದಲ್ಲಿ ಅವರ ಹೆಚ್ಚಿನ ಕವಿತೆಗಳು ರೂಪಿತಗೊಂಡಿವೆ, ಅವು ಹೆಣ್ಣಿನ ಹೋರಾಟದ ತುಮುಲಗಳ ಅಭಿವ್ಯಕ್ತಿಯನ್ನು ತಿಳಿಸುತ್ತವೆ. ಇಲ್ಲಿ ಬದುಕಿದ್ದು ಬರಹವಾಗಿದೆ. ಬರಹವು ಬದುಕಿನ ಕನ್ನಡಿಯಾಗಿದೆ. ಅನುಭವವು ಬರಹಕ್ಕೆ ಶಕ್ತಿಯಾಗಿದೆ. ಇದಕ್ಕೆ ಅವರ ಮೊದಲ ಕವಿತೆಯೇ ಒಂದು ಪೀಠಿಕೆಯಾಗಿದೆ.

ದಿನಗಳೇ ಕಳೆದವು
ಬರಹದ ಅಂಗಳಕ್ಕಿಳಿದು
ಲೇಖನಿಯ ಹಿಡಿಯಲು
ಕಾತರಿಸಿಹವು ಕರಗಳು
ಮಸ್ತಕದಲ್ಲಿ ತೋಚಿದ್ದನ್ನು
ಪುಸ್ತಕದಲ್ಲಿ ಗೀಚಿಬಿಡಲು!

ಈ ಸಾಲುಗಳ ಮೂಲಕ ಕವಿತೆ ರಚಿಸಲು ಆರಂಭಿಸಿ ಸಾಹಿತ್ಯ ಲೋಕದಲ್ಲಿ ಮಿನುಗಲು ಸನ್ನದ್ಧರಾಗಿರುವ ವಿಜಯ ನಾಗೇಶ್ ಇವರ ಕವಿತೆಗಳನ್ನು ಸಮಗ್ರ ನೋಟದಲ್ಲಿ ಕಣ್ಣಾಡಿಸಿದೆ. ಅರೆರೆ... ಎಷ್ಟು ಚೆಂದವಾಗಿ ಕವಿತೆಗಳನ್ನು ರಚಿಸಿದ್ದಾರೆ ಎನ್ನುವ ಭಾವ ನನ್ನಲ್ಲಿ ಉಂಟಾಯಿತು. ಅವರ ಮೊದಲ ಕೃತಿಯಲ್ಲಿಯೇ ಪಕ್ವತೆಯಿದೆ, ಭಾಷೆಯ ಬಳಕೆ, ಹಿಡಿತ, ಪದಗಳ ತುಣುಕು, ಅನುಭವದ ಮೆಲುಕು ಸರ್ವವೂ ಮಿಳಿತಗೊಂಡಿವೆ ಎಂದೆನಿಸಿತು. ಅವರ ಕವಿತೆಗಳನ್ನು ಓದಲು ಆರಂಭಿಸಿದ ಮೇಲೆ ಬದುಕಿನ ನಿರಂತರ ಪಯಣದಲ್ಲಿ ಕಂಡುಂಡು ಅನುಭವಿಸಿದ ಯಾತನೆಗಳು, ಅನುಭವಗಳೆಲ್ಲ ಪದಗಳ ರೂಪ ತಾಳಿ ಪದ್ಯಗಳಾಗಿವೆ ಎಂಬ ಭಾವನೆ ನನ್ನಲ್ಲಿ ಮೂಡಿತು.

ಜೀವನದಲ್ಲಿ ಹಣ, ಬಂಧು-ಬಳಗ, ಎಲ್ಲವೂ ಹುಸಿ. ಇವೆಲ್ಲ ಜಂಜಾಟಗಳ ನಡುವೆ `ಒಂಟಿ ತಾನು’ ಎಂದು ಆರಂಭಗೊಂಡ ಕವಿತೆಗಳು ನಟಿಸುವ ಬಾಂಧವ್ಯಗಳ ನಡುವೆ ನಿಲ್ಲದ ಸಮಯದ ಹಾದಿಯಲಿ ಬದುಕಿನ ಪಯಣ ಸಾಗುತಿದೆ. ಸಂತಸದ ಕ್ಷಣಗಳ ನಿರೀಕ್ಷೆ ಮತ್ತು÷ ಸಮಾಧಾನವನ್ನು ಅರಸುವ ನಿಟ್ಟಿನಲ್ಲಿ ಇವರ ಸಾಹಿತ್ಯ ಕೃಷಿಯೂ ಸಾಗುತ್ತಾ ಹೋಗುತ್ತದೆ. ಕೊನೆಗೆ ಕವಯತ್ರಿಯ ಆಂತರ್ಯ `ಒಂಟಿ ನಾನಲ್ಲ’ ಎಂಬ ಅಂತಿಮ ಸತ್ಯದ ಕಡೆಗೆ ವಾಲುತ್ತದೆ.

ನನ್ನದೆನ್ನುವುದು ಏನಿದೆ ಇಲ್ಲಿ? ಎಲ್ಲವೂ ಖಾಲಿ ಖಾಲಿ ಎನ್ನುವ ಶೂನ್ಯ ಮನಸ್ಕತೆ, ಹತಾಶೆಗೊಂಡು ಅಂಕದ ಪರದೆ ಜಾರುವುದೆಂತೋ ಎಂದು ಹಪಾಹಪಿಯ ಚಿತ್ರಣವಿದೆ.

“ಹತ್ತಿರದವರು ಸುತ್ತೇಳು ಬಳಗದವರು
ಮಾತಿನಲ್ಲೇ ಮಹಲುಗಳ ಕಟ್ಟಿದವರು
ತುಪ್ಪದಂಥ ಮಾತನಾಡಿ ತೆಪ್ಪಗಾದವರು”

ಇವರ ಕವಿತೆಯಲ್ಲಿ ಆತ್ಮೀಯ ಬಳಗದಿಂದಾದ ಅನುಭವ ಬದುಕಿನ ನಡು ನೀರಿನಲ್ಲಿ ಕೈ ಬಿಟ್ಟು ಹೋದವರ ಬಗ್ಗೆ ನಿರಾಶೆಗೊಂಡರೂ ಆಶಾವಾದದಿಂದ ಭರವಸೆಯ ಹಾದಿಯಲ್ಲಿ ಸಾಗಿಸಲು ಯತ್ನಿಸುವ ಪರಿಯನ್ನು ಕಾಣಬಹುದು.

`ಭ್ರಮೆಯ ಲೋಕ’ ಎನ್ನುವ ಶೀರ್ಷಿಕೆಯ ಕವಿತೆಯಲ್ಲಿ ತನಗೆ ತಾನೇ ಸಮಾಧಾನಿಸಿಕೊಂಡು ತಾತ್ವಿಕ ನೆಲೆಗಟ್ಟಿನಲ್ಲಿ ಭ್ರಮೆಯ ಮೀರಿ ವಾಸ್ತವದ ಬದುಕನ್ನು ತಾಳ್ಮೆ ಛಲದಿಂದ ಚೆಂದ ಮಾಡಿಕೊಳ್ಳುವ ಬಯಕೆಯೊಂದಿಗೆ ಜೀವಂತಿಸಿದಂತಿದೆ ಅವರ ಕವಿತೆಗಳು ಹಾಗೂ ಬದುಕಿನ ಅನುಭವಗಳು.

ಇವರ ಕವಿತೆಗಳಲ್ಲಿ ವ್ಯಾಮೋಹ ಮೀರಿ ಭ್ರಮೆಯ ತೂರಿ ತಾತ್ವಿಕವಾಗಿ ಸತ್ವಯುತವಾಗಿ ಬದುಕುವ ಹಂಬಲದ ಅಭಿವ್ಯಕ್ತಿಗಳಿವೆ. ಮೊದಲ ಕೃತಿಯಾದ್ದರಿಂದ ಅವರು ಓದಿಕೊಂಡಿರುವ ತಾತ್ವಿಕ ಸಾಲುಗಳು, ಸಾಹಿತ್ಯ ಸೃಜನೆಗೆ ಪೂರಕವಾಗಿ ಬಳಕೆಯಾದರೂ ಸ್ವಂತದ ಅನುಭವೀ ಸಾಲುಗಳೇ ಇಲ್ಲಿ ಹೆಚ್ಚು ದಾಖಲುಗೊಂಡಿರುವುದನ್ನು ಕಾಣಬಹುದು.

“ನಿನ್ನ ಆತ್ಮಬಲವೊಂದೇ
ನಿನ್ನ ಜೊತೆಗುಳಿವುದು ಎಂದೆಂದೂ”

ಇವರ ಕವಿತೆಗಳ ಅವಲೋಕನದಲ್ಲಿ ಗ್ರಹಿಕೆಗೆ ಸಿಕ್ಕಿದ್ದೇನೆಂದರೆ ನೋವಿನಲ್ಲಿ ಬೆಂದು ಹೈರಾಣಾಗಿ ಋಜು ಮಾರ್ಗದಲ್ಲಿ ಸಾಗಲು ಸಾಹಿತ್ಯದ ಸಾಂಗತ್ಯವೇ ಸರಿಯೆಂದು ಅದರ ಜೊತೆಯಲ್ಲಿ ಇವರು ಸಾಗಿದಂತಿದೆ. ಅವರ ಕವನ ಸಂಕಲನದ `ಒಂಟಿ ನಾನಲ್ಲ’ ಶೀರ್ಷಿಕೆಯು ಅವರ ಸಾಹಿತ್ಯದ ಸಾಂಗತ್ಯವಿರುವ ಬಣ್ಣನೆಯಂತೆ `ಒಂಟಿ ನಾನಲ್ಲ’ ಎಂಬುದನ್ನು ಗಟ್ಟಿಯಾಗಿ ಧ್ವನಿಸಿದೆ.

ಯಾವುದೇ ಕವಿ ಪ್ರಕೃತಿ ಪ್ರಿಯ. ಅದೇ ಆತನ ಕಲ್ಪನಾ ಜಗತ್ತು. ಅಲ್ಲಿ ಕಂಡುಂಡ ಅನುಭವಗಳನ್ನೇ ಆತ ಕವಿತೆಯಲ್ಲಿ ಅಭಿವ್ಯಕ್ತಿಸುತ್ತಾನೆ. ಹಾಗಾಗಿ ವಿಜಯಲಕ್ಷ್ಮೀ ಅವರಿಗೆ ಪ್ರಕೃತಿಯ ಸೊಬಗಾದ ಮಳೆ, ಮುಗಿಲು, ನೇಸರ, ಹಗಲು, ರಾತ್ರಿ, ಸಂಜೆ, ಮುಂಜಾವು, ಮುಸ್ಸಂಜೆ, ಚಂದಿರ, ಮರ, ಪ್ರಕೃತಿಯ ಚಿತ್ರಣವನ್ನು ಕುತೂಹಲದಿಂದ ನೋಡಿ, ತಮ್ಮ ತುಮುಲವನ್ನು ನೀಗಿಸಿಕೊಂಡು ಅದರಲ್ಲೇ ಆನಂದವನ್ನು ಕಂಡುಕೊಳ್ಳುವ ಸದಾಶೆ ಅವರ ಕವಿತೆಗಳಲ್ಲಿ ಕಾಣಸಿಗುತ್ತದೆ.

ಮುನಿದವರನ್ನೊಮ್ಮೆ
ಮನಸಾರೆ ನೀ ಕ್ಷಮಿಸು
ಮುನಿಸ ತೊರೆಯದಿರೇ
ಮನ ಖಾರ ಖಾರ ಮೆಣಸು!

(ಮುನಿಸು)

ಇವರ ಬಹುತೇಕ ಕವಿತೆಗಳು ಸ್ವಗತದ ರೀತಿಯಲ್ಲಿ ರಚಿತಗೊಂಡಿದ್ದು, ತಮಗೆ ತಾವೇ ಸಾಂತ್ವನವನ್ನು ಹೇಳಿಕೊಳ್ಳುವ ರೀತಿಯಲ್ಲಿವೆ. ಅಂತೆಯೇ ಬದುಕಿನ ಭರವಸೆಯಲ್ಲಿ ತಮಗೆ ತಾವೇ ಮಿತ್ರನಾಗಿ, ಹಿತೈಷಿಯಾಗಿ ಬರಹದ ಜೊತೆ ಸಾಂಗತ್ಯವನ್ನು ಹೊಂದಿ ಸಾಹಿತ್ಯ ರಚನೆಯಲ್ಲಿ ತಮ್ಮ ಏಕಾಂತ ಸಂಭ್ರಮವನ್ನು ಕಂಡು ಕೊಂಡಿದ್ದಾರೆ. ಎಂಬುದನ್ನು ತೋರಿಸುತ್ತದೆ.

`ಹುಸಿ ಪ್ರೀತಿ’ ಕವಿತೆಯಲ್ಲಿ ಹುಸಿ ಪ್ರೀತಿಗೆ ಕನಲಿದೆ ನೊಂದಿದೆ. ಭಗ್ನ ಪ್ರೇಮದಿಂದ ಕಂಗೆಟ್ಟು ಮೌನದ ಜೊತೆ ಒಡನಾಡಿ ಒಂದು ನಿರ್ಮಲ ಪ್ರೀತಿಗೆ ಹಪಾಹಪಿಸಿರುವ ಹಂಬಲದ ಭಾವವು ಕವಿತೆಗಳಲ್ಲಿ ಬಿಂಬಿತವಾಗಿವೆ.

ಹೆಚ್ಚೇನೂ ಹೇಳಲಾಗದ ಮನದ ನೋವುಗಳಿಗೆ
ಬೇಕಿಹುದುದಿಂದು ಬೆಚ್ಚನೆಯ ಸಾಂತ್ವನವೊಂದು!

(ಬೆಚ್ಚನೆಯ ಸಾಂತ್ವನ)

ಒಟ್ಟಾರೆಯಾಗಿ ಇವರ ಕವಿತೆಗಳನ್ನು ಓದಿ ಗಮನಿಸುವುದಾದರೆ, ಸುದೀರ್ಘ ಬದುಕಿನಲ್ಲಿ ಜೀವನದ ನಿರಂತರ ಪಯಣದಲ್ಲಿ ಕಲ್ಲೆದೆ ಮಾಡಿಕೊಂಡರೂ ಮನುಷ್ಯ ಸಹಜವಾದ ಸಾಂತ್ವನದ ಬೆಚ್ಚನೆಯ ಸಾಂಗತ್ಯದ ಶುಭ ನಿರೀಕ್ಷೆಯೊಂದು ಎದೆಯೊಳಗೆ ಹುದುಗಿದುವುದು ವೇದ್ಯವಾಗಿದೆ. ನೀಳ ಕವಿತೆಗಳಿಂದ ಆರಂಭವಾದ ಇವರ ಕವಿತೆಗಳು ಆ ನಂತರ ಜೀವನದಲ್ಲಿ ಮಾಗಿದಂತೆ “ಕಿರಿದರೋಳ್ ಪಿರಿದರ್ಥ” ತುಂಬುವಂತೆ ಚಿಕ್ಕ ಚಿಕ್ಕ ಕವಿತೆಗಳಲ್ಲಿ ಅನುಭವ ಜನ್ಯ ಮಾತುಗಳನ್ನ ಪುಟಾಣಿ ಕವಿತೆಗಳಲ್ಲಿ ಕಟ್ಟಿ ಅದರಲ್ಲೇ ಸಾಂಗತ್ಯ ಹೊಂದಿ ತನ್ಮಯಳಾದಂತೆ ಕಾಣುತ್ತದೆ. ಆರೈಕೆ ಮಾಡುವ ಶುಶ್ರೂಶಕ ಕೈ, ಲೇಖನಿ ಹಿಡಿದು ಕಾವ್ಯ ಸಾಹಿತ್ಯ ಸೃಜನೆಯ ಕೈಂಕರ್ಯ ಮಾಡುತ್ತಿರುವ ಕವಯತ್ರಿಯವರು ತಮ್ಮ ಅನುಭವವನ್ನೇ ಪದಗಳಲ್ಲಿ ಕಟ್ಟಿ ಪದ್ಯವಾಗಿಸಿದ್ದಾರೆ. ಮತ್ತಷ್ಟು ಮಗದಷ್ಟು ಓದಿಕೊಂಡು ಈ ಸಾಹಿತ್ಯ ಕ್ಷೇತ್ರದಲ್ಲಿ ಚೆಂದದ ನಕ್ಷತ್ರವಾಗಿ ಮಿನುಗಲು ಬೇಕಾದ ಎಲ್ಲ ಲಕ್ಷಣವನ್ನು ಹೊಂದಿರುವುದರಿಂದ ಭವಿಷ್ಯದಲ್ಲಿ ಮತ್ತಷ್ಟು ಸತ್ವಯುತವಾದ ಸಾಹಿತ್ಯ ಅವರಿಂದ ನಿರ್ಮಾಣವಾಗಲಿ ಎಂಬ ಹಾರೈಕೆ ನನ್ನದು.”