ಒಂದನೇ ದಿನದ ನವರಾತ್ರಿ ಆರಾಧನೆ - ಶೈಲಪುತ್ರಿ

ಒಂದನೇ ದಿನದ ನವರಾತ್ರಿ ಆರಾಧನೆ - ಶೈಲಪುತ್ರಿ

ಶ್ರೀ ದುರ್ಗೆಯ ಅವತಾರ : ಶಕ್ತಿ ಆರಾಧನೆಯ ಕಾಲವೀಗ. *ಯಾ ದೇವೀ ಸರ್ವಭೂತೇಷು* *ಮಾತೃರೂಪೇಣ ಸಂಸ್ಥಿತಾ*|

*ನಮಸ್ತಸ್ಯೈ ನಮಸ್ತಸ್ಯೈ* *ನಮಸ್ತಸ್ಯೈ ನಮೋ ನಮಃ||*

ಮಾತೃಸ್ವರೂಪಿಣಿಯಾದ ದೇವಿಗೆ, ಸಕಲ ಜೀವರಾಶಿಗಳ ಪೊರೆಯುವ ಮಹಾತಾಯಿಗೆ ನಮಸ್ಕಾರಗಳು. ನಾವೆಷ್ಟು ಪುಣ್ಯ ಮಾಡಿದ್ದೇವೆಂದರೆ ನಮಗೆ ಜನ್ಮನೀಡಿದ ತಾಯಿಯಂತೆ, ನಮ್ಮನ್ನು ಹೊರುವ ಭೂಮಿತಾಯಿ, ನಮ್ಮ ನಾಡು ಕನ್ನಡಮ್ಮ, ದೇಶ ಭಾರತಮಾತೆ, ಭುವನದಾತೆ ಎಷ್ಟು ತಾಯಂದಿರ ಮಮತೆಯ, ವಾತ್ಸಲ್ಯದ ನೆರಳಲ್ಲಿ ನಾವಿದ್ದೇವೆ. ಹಾಗೆಯೇ ಜ್ಞಾನದಾತೆ ಸರಸ್ವತಿ ಮಾತೆ, ವಿದ್ಯಾಮಾತೆ ಶಾರದೆ, ಸಂಪತ್ತಿನ ಮಾತೆ ಲಕ್ಷ್ಮೀ ದೇವಿ, ಶಕ್ತಿ ಮಾತೆ ಪಾರ್ವತಿ, ದುರ್ಗೆ ನಾವೆಲ್ಲ ಆರಾಧಿಸುತ್ತಿರುವ ಮಾತೆಯರ ಕೃಪಾಕಟಾಕ್ಷ ಸದಾ ನಮ್ಮ ಮೇಲಿದೆ.

ನಮ್ಮ ಸನಾತನ ಧರ್ಮ, ಸಂಸ್ಕೃತಿ, ಆಚಾರಗಳು, ಧಾರ್ಮಿಕ ನೆಲೆಗಟ್ಟಿನ ಮೇಲೆಯೇ ನಿಂತಿದೆ. ನಂಬಿಕೆ ಎಂಬ ಅಸ್ತ್ರವೇ ನಮ್ಮ ಆಯುಧ. ಈ ನವರಾತ್ರಿ ಕಾಲದಲ್ಲಿ ‘ದುರ್ಗಾಮಾತೆ’ ಯನ್ನು ಒಂದೊಂದು ರೂಪದಲ್ಲಿ ಪೂಜಿಸುತ್ತೇವೆ. ದುರ್ಗಾದೇವಿಯ ಮೊದಲ ರೂಪವೇ ‘ಶೈಲಪುತ್ರಿ. ಪರ್ವತರಾಜ ಹಿಮವಂತನ ಮಗಳಾಗಿ, ವೃಷಭಾರೂಢಳಾಗಿ, ತಲೆಯಲ್ಲಿ ಅರ್ಧಚಂದ್ರನನ್ನು ಧರಿಸಿದವಳಾಗಿ, ತ್ರಿಶೂಲವೇ ಆಯುಧವಾಗಿ ಹೊಂದಿರುವ ರೂಪ.

ಸದಾ ಯಶಸ್ಸನ್ನು, ನಮ್ಮ ಕ್ಷೇಮವನ್ನು, ಆಸೆಗಳನ್ನು ಪೂರೈಸುವ ಶೈಲಪುತ್ರಿಗೆ ನಮಸ್ಕಾರ ಸಲ್ಲಿಸಿ ಪ್ರಾರ್ಥಿಸುತ್ತೇವೆ. ದಕ್ಷಯಜ್ಞದಲ್ಲಿ ಯೋಗಾಗ್ನಿಯಲ್ಲಿ ಉರಿದುಕೊಂಡ ಸತಿದೇವಿ, ಹಿಮವಂತನ ಮಗಳಾಗಿ ಶೈಲಪುತ್ರಿ, ಹೈಮಾವತೀ, ಪಾರ್ವತೀ ದೇವಿಯಾಗಿ ಅವತರಿಸಿ ಜಗತ್ತಿನ ಮಕ್ಕಳನ್ನು ರಕ್ಷಿಸಿದಳು ಎಂಬ ವಿಚಾರ ವನ್ನು ಬ್ರಹ್ಮ ಪುರಾಣದಲ್ಲಿ ಓದುತ್ತೇವೆ.

ಶ್ರೀ ದುರ್ಗಾ ದ್ವಾದಶ ನಾಮಾವಳಿ:

*೧-ಓಂ ಗಾಯತ್ರ್ಯೈ ನಮ:*

*೨-ಓಂ ಜಗನ್ಮಾತ್ರ್ಯೈ ನಮ:*

*೩-ಓಂ ಮಹಾಮಾಯಾಯ್ಯೈ ನಮ:*

*೪-ಓಂ ಮಾಹೇಶ್ವರ್ಯೈ ನಮ:*

*೫-ಓಂ ಗಿರಿಜಾಯ್ಯೈ ನಮ:*

*೬-ಓಂ ಸರ್ವೇಶ್ವರ್ಯೈ ನಮ:*

*೭-ಓಂ ಶಾಂಭವ್ಯೈ ನಮ:*

*೮-ಓಂ ಕಾಮಾಕ್ಷ್ಯೈ ನಮ:*

*೯-ಓಂ ಸಿಂಹವಾಹಿನ್ಯೈ ನಮ:*

*೧೦-ಓಂ ಶಾಂತಾಯ್ಯೈ ನಮ:*

*೧೧-ಓಂ ವಜ್ರ ಹಸ್ತಾಯ್ಯೈ ನಮ:*

*೧೨-ಓಂ ದುರ್ಗಾಯ್ಯೈ ನಮ:*

ಜಗದ ಜೀವರಿಗೆ ಬಂದ ಕಷ್ಟಗಳ ನೀಗಿಸು ತಾಯೆ. ಎಲ್ಲರಿಗೂ ಸದ್ಬುದ್ಧಿಯನ್ನು ಕರುಣಿಸು. ತಮ್ಮ ತಮ್ಮ ವೃತ್ತಿಧರ್ಮಗಳನ್ನು ಪ್ರೀತಿಸಿ, ನಿಷ್ಠೆಯಲಿ ದುಡಿಯುವಂತಾಗಲಿ. ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ. ಶೈಲಪುತ್ರೀ ಮಾತೆಗೆ ನಮೋ ನಮಃ

(ಆಧಾರ: ಪುರಾಣ ಮಾಲಿಕಾ, ನಿತ್ಯ ಶ್ಲೋಕ.)

ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ.

ಚಿತ್ರ ಕೃಪೆ: ಇಂಟರ್ನೆಟ್ ತಾಣ