ಒಂದಿಷ್ಟು ಝೆನ್ ಕಥೆಗಳು

ಮಧುರವಾದ ರಾಗ
ಗುರು ಶಿಬುಕೊ ಸಂಜೆ ಶಿಷ್ಯರೊಂದಿಗೆ ಹರಟೆ ಹೊಡೆಯುತ್ತಿದ್ದ. ದೂರದ ಕೆರೆಯ ದಡದಲ್ಲಿ ಹಕ್ಕಿಯೊಂದು ಸುಮ್ಮನೆ ಕುಳಿತುಕೊಂಡು ನೀರನ್ನು ನೋಡುತ್ತಿತ್ತು.
ಶಿಷ್ಯನೊಬ್ಬ ಕೇಳಿದ “ಆ ಹಕ್ಕಿ ನೋಡಿ, ಅರ್ಧ ಗಂಟೆಯಿಂದ ಹೇಗೆ ಸುಮ್ಮನೆ ಕುಳಿತಿದೆ!”
ಮತ್ತೊಬ್ಬನಿಗೆ ಅವನ ಮಾತು ಸರಿ ಕಾಣಲಿಲ್ಲ. “ಅದು ಸುಮ್ಮನೆ ಕುಳಿತಿಲ್ಲ. ಧ್ಯಾನ ಮಾಡುತ್ತಿದೆ!”
ಈಗ ಒಂದು ಪ್ರಶ್ನೆ ಮೂಡಿತು. ಶಿಬುಕೊ ಕೇಳಿದ “ಧ್ಯಾನ! ಅಂದರೆ ಏನರ್ಥ?”
“ನಮಗೆ ತಿಳಿದಿದೆ" ಎಂದರು ಎಲ್ಲರೂ. ತಿಳಿದಿಲ್ಲವೆಂದು ಹೇಳಲು ಕೀಳರಿಮೆ.
“ಕಣ್ಣು ಮುಚ್ಚಿ ಏಕಾಗ್ರತೆಯಿಂದ ಕುಳಿತುಕೊಳ್ಳುವುದು" ಎಂದನೊಬ್ಬ.
“ಸಮಾಧಿ ಸ್ಥಿತಿ" ಎಂದವನು ಮತ್ತೊಬ್ಬ.
“ಧ್ಯಾನವೆಂದರೆ ಆ ಅರ್ಥವೆಂದು ನೀವು ಎಲ್ಲಿ ಕಂಡುಕೊಂಡಿರಿ?” ಶಿಬುಕೊ ಕೇಳಿದ.
“ಅರ್ಥಕೋಶದಲ್ಲಿ ಹುಡುಕಾಡಿದೆವು!”
ಈಗ ಶಿಬುಕೊ ನಕ್ಕು ಹೇಳಿದ “ನಿಜವಾಗಿ ಧ್ಯಾನ ಅರ್ಥವನ್ನು ಅರ್ಥ ಕೋಶದಲ್ಲಿ ಹುಡುಕಾಡಬಾರದು. ಕೆರೆಯ ದಡದಲ್ಲಿ, ಬೆಟ್ಟದ ತಪ್ಪಲಿನಲ್ಲಿ, ಎಲೆ ತೊಟ್ಟಿಕ್ಕುವ ಹನಿಗಳಲ್ಲಿ, ಅರಳುವ ಹೂಗಳಲ್ಲಿ ಹುಡುಕಾಡಬೇಕು.”
“ಅಲ್ಲಿ ಹುಡುಕಾಡಿದರೆ ಧ್ಯಾನ ಅರ್ಥವಾಗುತ್ತದೆಯೇ?”
“ಅರ್ಥವಾಗುವುದಿಲ್ಲ, ಅರ್ಥವಾದರೆ ಅದು ಧ್ಯಾನವಲ್ಲ" ಶಿಬುಕೊ ಹೇಳಿದ.
“ಮಧುರವಾದ ರಾಗವನ್ನು ಗಾಳಿಯಲ್ಲಿ ಹರಡಿರುವ ಗಂಧವನ್ನು ಅರ್ಥಮಾಡಿಕೊಂಡೆ ಎಂದು ಹೇಳುವಷ್ಟೇ ಅಸಂಗತ ; ಧ್ಯಾನದ ಅರ್ಥವೂ”
***
ದುರ್ಬುದ್ಧಿಯ ಉಡುಗೊರೆ
ಭಗವಾನ್ ಬುದ್ಧನ ಕಾಲದಲ್ಲಿ ಗಯೆಯಲ್ಲಿ ದುರ್ಬುದ್ಧಿ ಎಂಬವನಿದ್ದ. ಜನರನ್ನು ಹಿಂಸಿಸುವುದು, ದೋಚುವುದು, ಬಡಪಾಯಿ ಮಹಿಳೆಯರು ಹಾಗೂ ಮಕ್ಕಳಲ್ಲಿ ಭೀತಿ ಮೂಡಿಸಿ, ಆನಂದಿಸುವುದೇ ಆತನ ಕೆಲಸ.
ಒಂದು ದಿನ, ಬುದ್ಧ ಧ್ಯಾನಸ್ಥನಾಗಿದ್ದಾಗ ದುರ್ಬುದ್ಧಿ ಅವನ ಬಳಿಗೆ ಬಂದ. ಬುದ್ಧ ಕಣ್ತೆರೆದು ಅವನನ್ನು ನೋಡಿ ಕುಶಲ ವಿಚಾರಿಸಿದ. ಆದರೆ, ದುರ್ಬುದ್ಧಿಯ ಬಾಯಿಯಿಂದ ಕೆಂಡದ ಸುರಿಮಳೆಯೇ ಆಯಿತು. “ಏ ಮೂರ್ಖ! ನೀನೊಬ್ಬ ನಯವಂಚಕ, ಢಾಂಬಿಕ, ಸನ್ಯಾಸಿಯ ವೇಷದಲ್ಲಿರುವ ದುಷ್ಟ. “
ಬುದ್ಧ ಸುಮ್ಮನಿದ್ದ. ದುರ್ಬುದ್ಧಿ ಮರಳಿ ಹೋದ. ಮರುದಿನ ಮತ್ತೆ ಬಂದು ಮತ್ತೆ ಬೈಗುಳದ ಮಳೆಗೆರೆದು ಮರಳಿದ. ಹೀಗೆಯೇ ದಿನಗಳುರುಳಿದವು. ಪ್ರತಿದಿನವೂ ದುರ್ಬುದ್ಧಿ ಬಂದು ಅವನೆದುರು ನಿಲ್ಲುವುದು, ನಿಂದಿಸುವುದು, ಬುದ್ಧ ಮೌನವಾಗಿ ಕುಳಿತಿರುವುದನ್ನು ಕಂಡು ಹಿಂದಿರುಗುವುದು ಸಾಗಿಯೇ ಇತ್ತು.
ಒಂದು ತಿಂಗಳು ಸರಿಯಿತು. ಎಂದಿನಂತೆ ದುರ್ಬುದ್ಧಿ ಅಂದೂ ತನ್ನ ಬೈಗುಳ ಆರಂಭಿಸಿದ. ನಂತರ ಹತಾಶೆಯಿಂದ ಕೇಳಿದ.
“ಏನಯ್ಯಾ? ಕಿವಿ ಕೇಳಿಸುತ್ತಿಲ್ಲವೇ ನಿನಗೆ? ನಾನು ಬಂದು ಬೈಯುತ್ತಲೇ ಇದ್ದೇನೆ. ನೀನು ಒಂದೂ ಆಡದೆ ಸುಮ್ಮನಿದ್ದಿಯಲ್ಲ?”
ಬುದ್ಧ ಮುಗುಳ್ನಕ್ಕು ಹೇಳಿದ “ ನಾನೇನೂ ಕಿವುಡನಲ್ಲ. ನಿನ್ನ ಬೈಗುಳ ಕೇಳಿಸುತ್ತಿದೆ. ಆದರೆ, ಅದು ನನಗೆ ಬೇಕಿಲ್ಲ. ಅದು ನೀನು ಕೊಡುತ್ತಿರುವ ಉಡುಗೊರೆ, ಆದರೂ ಕ್ಷಮಿಸು"
***
ನಿರರ್ಥಕ ಹಾಡುಗಳು
ಸಂಜೆಯ ಸಮಯ. ಎಲ್ಲರೂ ಒಂದೆಡೆ ಕಲಿತು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಾರಂಭಿಸಿದರು. ಮಳೆಗಾಲವಾದುದರಿಂದ ಮಳೆಯ ಬಗ್ಗೆ ಹಾಡುವವರೇ ಎಲ್ಲ.
ಒಬ್ಬ ಮೋಡದ ಮುಸುಕಿನ ಆಗಸವನ್ನು ಮಂಕು ಕವಿದ ತನ್ನ ಮನಸ್ಸಿಗೆ ಹೋಲಿಸಿ ಬರೆದ ಪದ್ಯವನ್ನು ಓದಿದಾಗ ಅದು ಎಲ್ಲರನ್ನೂ ಗಾಢವಾಗಿ ತಟ್ಟಿತು.
ಹೊಸಬನಂತೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಹನಿಗಳ ನಡುವಿನ ಅವಕಾಶದಲ್ಲಿ ತಾನು ಒಂದಿಷ್ಟೂ ಒದ್ದೆಯಾಗದೆ ತೂರಿಕೊಂಡು ಬಂದುದನ್ನು ಕಾವ್ಯಾತ್ಮಕವಾಗಿ ನಿರೂಪಿಸಿದವನು ಇನ್ನೊಬ್ಬ.
ಭಾವುಕನೊಬ್ಬ ಇಳೆ ಮತ್ತು ಬಾನಿನ ಪ್ರೀತಿಯ ದ್ಯೋತಕವಾಗಿ ಮಳೆಯನ್ನು ಕಂಡ. ಎಲ್ಲರೂ “ಮಳೆ"ಯ ಕುರಿತು ಹಾಡುತ್ತ ಇರುವಾಗಲೇ ಗುರುಗಳು ಬಂದರು.
“ನಿಮ್ಮ ಹಾಡುಗಳನ್ನು ನಿಲ್ಲಿಸಿ. ಒಮ್ಮೆ ಮೌನವಾಗಿ ಆಲಿಸುವಿರಂತೆ.” ಎಂದರು.
ಎಲ್ಲರೂ ಆಲಿಸತೊಡಗಿದರು. ಹೊರಗೆ ಆಗಷ್ಟೇ ಮಳೆ ಬಂದು ನಿಂತಿತ್ತು. ಹಲವು ದನಿಗಳ ನಡುವೆ ಮಳೆ ಬಂದು, ಹೋದದ್ಡೇ ಗೊತ್ತಾಗಿರಲಿಲ್ಲ. ಎಲೆಗಳ ಮೇಲೆ ಟಪಟಪ ಎಂದು ಬೀಳುತ್ತ ಒಂದೇ ಲಯದಲ್ಲಿ ಹನಿಗಳು ಸದ್ದುಮಾಡುತ್ತಿದ್ದವು. ಆ ಸದ್ದನ್ನು ಆಲಿಸುತ್ತ ಆಲಿಸುತ್ತ ಕವಿಗಳು ತಮ್ಮ ಹಾಡನ್ನು ಮೌನದ ಚೀಲದೊಳಗಿರಿಸಿ ಪರವಶರಾದರು.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ