ಒಂದಿಷ್ಟು ಮಿನಿಗವಿತೆಗಳು...
ಘಮ ಸೋಪು...
ಓ ಸುಮಭರಿತ
ಘಮ ಸೋಪೇ...
ಆರಂಭದಲಿ
ಅದೆಷ್ಟು ಸುವಾಸನೆ!
ಉಪಯೋಗಿಸಿದಷ್ಟೂ
ಸವೆದು ಬಿಡುವೆ ;
ಅದಕೆ ತ್ಯಾಗದ
ಲೇಪನ ಬೇರೆ...
ಕೊನೆಯಲ್ಲಿ
ಒಮ್ಮೊಮ್ಮೆ
ತುಂಡಾಗಿ ಬಿಡುವೆ ;
ಇಲ್ಲವೇ ಸವೆದು
ಮಾಯವಾಗಿ
ಸುಮಧುರ
ಸುವಾಸನೆಯ
ನೆನಪುಗಳನು
ಉಳಿಸಿ ಬಿಡುವೆ!
***
ಆದರ್ಶ ಮತ್ತು ಆಡಂಬರ
ಆದರ್ಶ
ಹಾಗೂ
ಆಡಂಬರಗಳು
ಎಂದೂ
ಒಂದೆಡೆ
ಸೇರಿ
ಬೆರೆತ
ಉದಾಹರಣೆ
ಇತಿಹಾಸದಲ್ಲಿಲ್ಲ
ಗೆಳೆಯಾ....
ಆದರ್ಶ
ರಸ್ತೆಯುದ್ಧಕೂ
ಬರಿಗಾಲಲಿ
ನಡೆದರೆ;
ಆಡಂಬರ
ವಿಮಾನದಲಿ
ಆಕಾಶಕ್ಕೆ
ಹಾರಲು
ಯತ್ನಿಸಿಬಿಡುವುದು
ತಿಳಿಯಾ!
***
ತಪ್ಪಿದ ಲಯ...
ಹಳಿತಪ್ಪಿದ
ರೈಲು
ಬಂಡಿಗೆ
ಅಪಘಾತವೇ
ಗತಿ...
ತಾಳ ತಪ್ಪಿದ
ನಾಲಿಗೆ
ಕಳೆದು
ಕೊಳ್ಳುವುದು
ಮತಿ!
***
ಗುರು...!
ತಮ್ಮಯ
ಕರಗಳಿಂದ
ಪುಷ್ಪಗಳ
ಪ್ರೋಕ್ಷಿಸಿ
ಸಂತೋಷದಿಂ
ಉದ್ಘೋಷಿಸಿದ
ಮನಗಳೇ
ಇಂದು
ಕರಾಳ ಕೈಗಳ
ಚೂರಿಗಳಿಂದ
ನಿಮ್ಮ
ಕರಕರನೆ
ಇರಿದು
ರಕ್ತದ
ಮಡುವಿನಲೇ
ಮುಳುಗಿಸಿದರಲಾ!
ಓ...ಸಾರ್ವಜನಿಕ
ಗುರು
ಸ್ಥಾನವನು
ಅಲಂಕರಿಸಿದವರೇ
ನಿಮ್ಮದೆಂತಹ
ವೈಪರೀತ್ಯ
ಪರಿಸ್ಥಿತಿಯೇ?
***
ಮುಖವಾಡ!
ನಿಸರ್ಗ ನೀಡಿದ
ನಿಮ್ಮದೇ
ಮುಖಗಳಿರಲು
ಮುಖವಾಡಗಳನೇಕೆ
ಧರಿಸುವಿರಿ...?
ಇವು ನಿಮ್ಮ
ಉಸಿರ
ಕಟ್ಟಿಸುವವಲ್ಲದೆ
ನಿಮಗೆ
ಬೇರೆಯ
ರೂಪವನೇ ನೀಡಿ
ಇಲ್ಲದ
ಅವಾಂತರಗಳನು
ಸೃಷ್ಟಿಸಿ
ಬಿಡುವುವು;
ಸಹಜತೆಯಲಿ
ಅರಳಿ
ಬದುಕನು
ಸ್ವಾಗತಿಸಿ
ಸ್ವಚ್ಛಂದ
ಲೋಕದಲಿ
ವಿಹರಿಸಿಬಿಡಿ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
