ಒಂದಿಷ್ಟು ಹನಿಗಳು...
ನಾಗರೀಕ-ಅನಾಗರೀಕ
ನಾಗರೀಕ
ಮನುಷ್ಯನೊಬ್ಬನೇ
ಆಯುಧ ಹಿಡಿದು
ಹೋರಾಡುವುದು
ಏಕೆಂದರೆ ಇವನು
ಬುದ್ಧಿವಂತ....
ಅನಾಗರೀಕ
ಪ್ರಾಣಿಗಳು
ಎಂದೂ
ಆಯುಧಗಳನು
ಬಳಸದೇ ಹೋರಾಡಿವೆ
ಇವು ದಡ್ಡರು!
***
ಕೈಗೊಂಬೆಗಳು...!
ಸಿನಿಮಾ
ನಾಟಕಗಳೆಂದೂ
ಜೀವನವಾಗಲಾರವು...
ಅವೇನಿದ್ದರೂ
ಈ ಜೀವನದ
ಪ್ರತಿಬಿಂಬಗಳಷ್ಟೇ...
ನಮ್ಮ ನಮ್ಮ
ವಿಧಿಯಾಟದ
ಕೈಗೊಂಬೆಗಳು ನಾವು;
ಅವನಾಡಿಸಿದಷ್ಟು
ಆಟವನಾಡುವುದು
ನಮ್ಮ ಬದ್ಧತೆಯಷ್ಟೇ!
***
ಅನುಕರಣೆ...
ಕೇವಲ
ಆಡಂಬರದ
ಸೆಲೆಬ್ರಿಟಿಗಳ
ಅನುಕರಿಸಿ
ಮಾಡದಿರಿ
ಶೃಂಗಾರ...
ಸತ್ಯಶೋಧಕರ
ಕರ್ತವ್ಯ ನಿಷ್ಠರ
ಆದರ್ಶ ಜನರ...
ನಂಬಿ ಬದುಕಿರೋ
ನಿಮ್ಮ ಬಾಳು
ಬಂಗಾರ!
***
ಶ್ವಾನ ಪ್ರೀತಿ
ನನ್ನ-ನಿನ್ನ
ಪ್ರೀತಿಯಲ್ಲೇನಿದೆ....?
ಇದು ಬರೀ
ವ್ಯಾಮೋಹದ
ಪ್ರತಿಫಲ ನಿರೀಕ್ಷಣೆಯ
ಬಲವಂತ ನೀತಿ.....
ನೋಡು ಬಾ
ಇಲ್ಲಿಹುದು-
ನಿರ್ಲಜ್ಯ
ನಿಷ್ಕಲ್ಮಷ
ಅನುನಯದ
ಶ್ವಾನ ಪ್ರೀತಿ!
***
ಫುಟ್ ಬಾಲ್....
ಆ ಕಡೆಯಿಂದ
ಎ-ಟೀಮಿನ ಹೊಡೆತ;
ಈ ಕಡೆಯಿಂದ
ಬಿ-ಟೀಮಿನದು-
ನಿನ್ನದೆಂತಹ ಶೋಚನೀಯ
ಸ್ಥಿತಿ ಫುಟ್ ಬಾಲ್ ಚೆಂಡೇ....
ಮಧ್ಯದಲಿ ಉದ್ರಿಕ್ತ
ಪ್ರೇಕ್ಷಕರ ಕೂಗಾಟ-
ಅಂಪೈರ್ ನ ಸೀಟಿಯೊಂದೇ
ನಿನಗೆ ತರಬಹುದು
ವಿಶ್ರಾಂತಿಯೆಂಬ
ನೆಮ್ಮದಿಯ ಉಂಡೇ!
***
ನನಗೊಂದು ಅವನಿಗೊಂದು...
ನಾನು
ಏನು ಬೇಕಾದರೂ
ಮಾಡಬಹುದು
ಎಂಬ
ಉದಾರ ನೀತಿಯ
ಹೂರಣ...
ಬೇರೆಯವರು
ಇಂತಿಷ್ಟೇ
ಮಾಡಬೇಕೆಂಬ
ನಿಯಮ-
ಗೊಂದಲ ಘರ್ಷಣೆಗಳಿಗೆ
ಕಾರಣ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ