ಒಂದಿಷ್ಟು ಹನಿಗಳು

ಒಂದಿಷ್ಟು ಹನಿಗಳು

ಕವನ

ಇನ್ನೊಂದು ಸ್ವರ್ಗ 

ಗಂಡನ

ಮಾತು

ಹೆಂಡತಿ;

ಹೆಂಡತಿಯ

ಮಾತನು

ಗಂಡ....

 

ಕೇಳುವಂತಿದ್ದರೆ-

ಈ ಜಗತ್ತಿನಲಿ

ಇನ್ನೊಂದು

ಸ್ವರ್ಗವೇ

ನಿರ್ಮಾಣ...

ಎಲವೋ ಭಂಡ!

***

ಜೀವನವೆಂಬ ಪುಸ್ತಕ 

      ಮುಂದಿನ

     ಪುಟಗಳಲಿ

   ಏನಿದೆ ಎಂದು

ಯಾರಿಗೂ ತಿಳಿಯದ

         ಪುಸ್ತಕ-

   ನಮ್ಮೀ ಜೀವನ...

 

          ಓದಿದ

  ಹಿಂದಿನ ಪುಟಗಳ

     ಪುನರಾವರ್ತಿಸಿ-

       ಬುದ್ಧಿಯನು 

         ಕಲಿಯದೆ

   ಆಗಲಿಲ್ಲ ಪಾವನ!

***

ಅಂತರಂಗದ ದೀಪಾವಳಿ 

ಪ್ರತಿ

ದೀಪಾವಳಿಯಲೂ

ಪ್ರಜ್ವಲಿಸಿ

ಬೆಳಗುತಿವೆ

ನಂದಾ

ದೀಪ...

 

ಅವು ನಮ್ಮೆಲ್ಲರ

ಅಂತರಂಗದ

ಹೃದಯದಲೂ

ಬೆಳಗಿದರೆ

ಕಳೆವುವು ನಮ್ಮಯ

ಪಾಪ!

***

ರಾಜಕೀಯ ನಾಯಕ 

ಬಡವರ ಬಂಧು-

ಮಣ್ಣಿನ ಮಗ-

ಕರುನಾಡ ಕಣ್ಮಣಿ-

ಕರ್ಮಯೋಗಿ-

ದೀನ ದಲಿತರ ದೇವ-

ಬಿರುದುಗಳುಳ್ಳ ಕಾಯಕ...

 

ಶ್ರಮವಿಲ್ಲದ-

ಬಂಡವಾಳ ರಹಿತ-

ಬರಿ ಬೊಗಳೇ ಮಾತು;

ಯೋಗ್ಯತೆಯನಾರೂ

ಪ್ರಶ್ನೆಯೇ ಮಾಡರು-

ಆಗಿಬಿಡಿ ರಾಜಕೀಯ ನಾಯಕ!

***

ಬಾಂಬ್ ಧಾಳಿ ಮತ್ತು ದೀಪಾವಳಿ 

ಅಲ್ಲಿ-

ಇಸ್ರೇಲ್-ಹಮಾಸ್;

ರಷ್ಯಾ-ಉಕ್ರೇನ್ಗಳಲಿ

ನಡೆಯುತಿಹುದೇ

ಮಾರಣಾಂತಿಕ

ಬಾಂಬ್ ಧಾಳಿ...

 

ನಡೆಯುತಿಹುದೇ

ಅಮಾಯಕರ

ನರಳಾಟ..ಪ್ರಾಣಹಾನಿ...

ಇವುಗಳ ಕಂಡು

ನಾ ಹೇಗೆ ಆಚರಿಸಲಿ

ಇಲ್ಲಿ ದೀಪಾವಳಿ?

***

ನರಕ-ನಾಕ 

ಮನಸೆಂಬ

ದುಷ್ಟ-

ಅರಿಷಡ್ವರ್ಗಗಳ

ಸಂಗಮಾಡಿ

ಪಾತಾಳಕಿಳಿದರೆ

ನರಕ...

 

ಪ್ರೀತಿ-ಪ್ರೇಮಗಳೆಂಬ

ರೆಕ್ಕೆಗಳೊಡನೆ

ಹಕ್ಕಿಯಾಗಿ

ಆಕಾಶಕೆ

ಹಾರಿದರೆ

ನಾಕ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್