ಒಂದಿಷ್ಟು ಹನಿಗಳು...
ಡ್ರಗ್ಸ್ ಮಹಾಮಾರಿ
ಈ ಡ್ರಗ್ಸೇ ಹೀಗೆ-
ಮುನುಷ್ಯರನ್ನು
ಅನಾಗರೀಕರನ್ನಾಗಿಸಿ
ಹಿಂಡಿ ಹಿಪ್ಪೇ
ಮಾಡಿ
ಎಸೆಯುವುದು...
ಇಂಡಿಯಾದಲಿ
ವಾಹನ
ವೀಲ್ಹರ್;
ಅಮೇರಿಕಾದಲ್ಲಿ
ಹೋಮ್ಲೆಸ್ ಜನರು-
ಇದರ ಕೊಡುಗೆಯೇ!
***
ಹೊಸಜನ್ಮ
ಈ ಜನ್ಮದಲಿ
ಜೀವನದಿ-
ಪ್ರತಿದಿನ ಇಹುದು
ಕಷ್ಟ-ಸುಖ
ಹುಟ್ಟು-ಸಾವು...
ಗೊತ್ತಿಲ್ಲ ನಿನಗೆ ಮರ್ಮ...
ಹೆದರಿ-ಬೆದರಿ
ಬಳಲಿ ಬೆಂಡಾಗಿ
ನಿರಾಶನಾಗುವಿಯೇಕೋ
ಮರುದಿನಕೆ ಕಾದಿಹುದು
ನಿನಗೆ ಮತ್ತೊಂದು
ಹೊಸ ಜನ್ಮ!
***
ಧೋಕಾ ದುನಿಯಾ
ಏನೀ
ಜಗದ ಮಾಯೇ-
ಎಲ್ಲೆಲ್ಲೂ
ಒಬ್ಬರನೊಬ್ಬರು
ದೋಚುವವರೇ
ಸಖಾ...
ಈ ಹಾಳು
ಮುಖಗಳಿಗಿಂತ-
ಖಳೆ, ಹೊಳೆಯಾಗಿ
ಅರಳುತಿದೆ
ಶ್ರಮಿಕ ರೈತನ
ಮುಖ!
***
ಭಾರತದ ಭವಿಷ್ಯ
ಓ ಭವ್ಯ
ಭಾರತದ
ನಾಗರೀಕರೇ-
ಕಂಡ ಕಂಡವರು
ಹೇಳುವ ಭವಿಷ್ಯಕೆ
ಕಿವಿಯನರಳಿಸದಿರಿ...
ನೀವೇ
ದಿವ್ಯ ಭಾರತದ
ಹೊನ್ನ
ಪರಂಪರೆಯ-
ಹೊಸ ಭವಿಷ್ಯವನು
ಸೃಷ್ಟಿಸಿಬಿಡಿ!
***
ಸೂರ್ಯೋದಯ
ಈ ಮನುಷ್ಯನಿಗೆ
ಕೊನೇ...ಯಲ್ಲಿ
ಅರಿವಾಗುವುದೇ
ದೇವರು;ಧರ್ಮ...
ವಸ್ತುಸ್ಥಿತಿಯ
ಜ್ಞಾನೋದಯ...
ಅದುವರೆವಿಗೂ
ಅವನು-
ಅರಿಷಡ್ವರ್ಗಗಳ
ಪರಮ ದಾಸಾನುದಾಸ;
ನಂತರವೇ ಬಾಳಿನ
ಸೂರ್ಯೋದಯ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ