ಒಂದಿಷ್ಟು ಹನಿಗಳು !
ನಡುಪಂತೀಯ
ಏಡಗೈ
ಬಲಗೈಗಳ ಮಧ್ಯೆ
ನನ್ನ ದೇಹವದು
ಇದ್ದು
ಪ್ರಾಮುಖ್ಯತೆಯನು
ಪಡೆವಂತೆ....
ನಾನು-
ಎಡಪಂತೀಯನೂ ಅಲ್ಲ;
ಬಲಪಂತೀಯನೂ ಅಲ್ಲ
ಎರಡೂ ಕೈ ಬೀಸಿ-
ದೇಹ ಸಮತೋಲನದಲಿಟ್ಟು
ನಡೆವ ನಡುಪಂತೀಯ!
***
ಓ..ಕನ್ನಡ ತಾಯ್..
ನಾನ್ ಈ ಕನ್ನಡ
ತಾಯಿಯ
ಪರಮ ಸೇವಕನ್;
ಆಕೆ ಕೊಟ್ಟ
ಭಿಕ್ಷೆಯ ತಿನ್ನುವ
ಭಿಕ್ಷುಕನ್....
ತಿರಿಯದೆ ತಿನ್ನುವ ಶಕ್ತಿ
ಕೊಟ್ಟದ್ದಕ್ಕಾಗಿ;
ತೊದಲದೇ ಕನ್ನಡವ
ನುಡಿಸಿದ್ದಕ್ಕೆ-
ತಾಯೇ ನಿನ್ನೀ ಪಾದಕಮಲಗಳಲಿ
ಇಡುವೆನ್ ಎನ್ನೀ ಶಿರವನ್!
***
ಗಣಗಳ ರಾಷ್ಟ್ರ ಭಾರತ
ಹಲವು ಭಾಷೆ ಧರ್ಮಗಳ
ಗಣರಾಜ್ಯ-
ಎಲ್ಲರೂ ಸುಖ-ಸಂತೋಷದಲಿ
ಕೂಡಿ ಬಾಳುತಲಿರುವ
ನಮ್ಮ ಚೆಲುವ
ಭಾರತ ನಾಡೂ...
ಇದರಲೋರ್ವ ತಾಯಿ;
ಖಳೆಯ ಚೆಲುವೆ;
ಎಲ್ಲರನಾಕರ್ಷಿಸುತಲಿ
ಕರೆಯುತಿಹಳು-
ಅವಳೇ ನಮ್ಮ ಕನ್ನಡತಿ
ಶ್ರೀಗಂಧದ ಬೀಡು!
***
ಅಮ್ಮ...!
ಆಕೆ-
ನನ್ನ ಪ್ರೀತಿಯ ಅಮ್ಮ...
ತೋರಿಸಿ
ಹೆದರಿಸಲಿಲ್ಲ
ಎಂದೂ
ಭಯದ ಗುಮ್ಮ....
ತುತ್ತು ತುತ್ತಿಗೊಂದು
ಎನ್ನ ಕೆನ್ನೆಗಳಿಗೆ
ಲೊಚಲೊಚನೆ
ಮುತ್ತನಿತ್ತದ್ದ ನೋಡಿ-
ನಾಚಿಕೊಂಡನೇ
ಆ ಸೃಷ್ಟಿಕರ್ತ ಬ್ರಹ್ಮ!?
***
ಜೀವನದ ಸರಾಸರಿ
ತೆಗಳಿದರು-
ಕೊರಗಲಿಲ್ಲ;
ಹೊಗಳಿದರು
ಹಿಗ್ಗಲಿಲ್ಲ;
ಬರೀ
ನಿಟ್ಟುಸಿರಬಿಟ್ಟೆ...
ನಾನು
ಗಣಿತದ ಮೇಷ್ಟ್ರು-
ಎರಡನೂ ಸೇರಿಸಿ
ಸರಾಸರಿ ಮಾಡಿ
ಅರೆದು
ಕುಡಿದುಬಿಟ್ಟೆ!
***
ಕಣ್ಣೀರು ಮತ್ತು ಜ್ವಾಲಾಗ್ನಿ
ಸುರಿವ
ಮಳೆಯೊಳಗೆನ್ನ
ನಿಲ್ಲಿಸಿಬಿಡು ದೇವಾ-
ಎನ್ನ ದುಃಖದ ಕಣ್ಣೀರು
ಯಾರಿಗೂ
ಕಾಣಿಸದಿರಲಿ....
ಜೊತೆಗೆ-
ನನ್ನೀ
ಉರಿವ
ಜ್ವಾಲಾಗ್ನಿಯ
ಕಣ್ಣುಗಳೂ
ತಣ್ಣಗಾಗಿ ಬಿಡಲಿ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
![](https://saaranga-aws.s3.ap-south-1.amazonaws.com/s3fs-public/%E0%B2%95%E0%B2%A3%E0%B3%8D%E0%B2%A3%E0%B3%80%E0%B2%B0%E0%B3%81.jpeg)