ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಅಮ್ಮ...! 

ಆಕೆ-

ನನ್ನ ಪ್ರೀತಿಯ ಅಮ್ಮ...

ತೋರಿಸಿ

ಹೆದರಿಸಲಿಲ್ಲ

ಎಂದೂ

ಭಯದ ಗುಮ್ಮ....

 

ತುತ್ತು ತುತ್ತಿಗೊಂದು

ಎನ್ನ  ಕೆನ್ನೆಗಳಿಗೆ

ಲೊಚಲೊಚನೆ

ಮುತ್ತನಿತ್ತದ್ದ ನೋಡಿ-

ನಾಚಿಕೊಂಡನೇ

ಆ ಸೃಷ್ಟಿಕರ್ತ ಬ್ರಹ್ಮ!?

***

ಜೀವನದ ಸರಾಸರಿ 

ತೆಗಳಿದರು-

ಕೊರಗಲಿಲ್ಲ;

ಹೊಗಳಿದರು

ಹಿಗ್ಗಲಿಲ್ಲ;

ಬರೀ

ನಿಟ್ಟುಸಿರಬಿಟ್ಟೆ...

 

ನಾನು 

ಗಣಿತದ ಮೇಷ್ಟ್ರು-

ಎರಡನೂ ಸೇರಿಸಿ

ಸರಾಸರಿ ಮಾಡಿ

ಅರೆದು

ಕುಡಿದುಬಿಟ್ಟೆ!

***

ಕಣ್ಣೀರು ಮತ್ತು ಜ್ವಾಲಾಗ್ನಿ 

ಸುರಿವ

ಮಳೆಯೊಳಗೆನ್ನ

ನಿಲ್ಲಿಸಿಬಿಡು ದೇವಾ-

ಎನ್ನ ದುಃಖದ ಕಣ್ಣೀರು

ಯಾರಿಗೂ

ಕಾಣಿಸದಿರಲಿ....

 

ಜೊತೆಗೆ-

ನನ್ನೀ

ಉರಿವ

ಜ್ವಾಲಾಗ್ನಿಯ

ಕಣ್ಣುಗಳೂ

ತಣ್ಣಗಾಗಿ ಬಿಡಲಿ!

***

ಹೆಮ್ಮೆಯ ಕರ್ನಾಟಕ 

ನಾನ್ ಕನ್ನಡಿಗನ್

ಏನ್ ತಿಳಿದಿರುವೆ ನೀನ್?

ಕೆಣಕಿದರೆ ಕುದಿವೆಂ..

ಸ್ನೇಹ ಹಸ್ತಕೆ ಮಣಿವೆಂ

ಕನ್ನಡದಲಿ ಮಾತನಾಡಿದರೆ

ನಾಂ ಕುಣಿದು ಬಿಡುವೆಂ...

 

ಎನ್ನಜ್ಜಿ ಭಾರತಿ

ಎನ್ನಮ್ಮಂ ಕನ್ನಡತಿ

ನಮ್ಮದೇ ಈ ಕರುನಾಡು

ಸರ್ವರಂ ಸ್ವಾಗತಿಸುವ-

ಹೃದಯವಂತಿಕೆಯ

ಜನರಿರುವ ಕರ್ನಾಟಕಂ! 

***

ಯಾಗ-ಭೋಗ 

ಹಿಂದಿನ ಕಾಲದಲಿ

ಋಷಿ ಮುನಿಗಳು

ಲೋಕ ಕಲ್ಯಾಣಕ್ಕೆ;

ನ್ಯಾಯ ನೀತಿ ಉಳಿವಿಗೆ-

ಮಾಡುತ್ತಿದ್ದರು

ಯುಜ್ಞ-ಯಾಗ...

 

ಈಗಿನ ರಾಜಕಾರಣಿಗಳು

ಮಾಡುತಿರುವರು-

ಪಾಪ ಕಳೆಯಲು

ಟೆಂಪಲ್ ರನ್ ಹಾಗೂ

ಹಣಗಳಿಸಲು

ಭ್ರಷ್ಟಾಚಾರಗಳ ಭೋಗ!

***

ವಿಧಿ ವಿಲಾಸ 

ಅಮೇರಿಕಾದಲ್ಲಿ

ಹೆಲಿಕಾಪ್ಟರ್ ಗೆ

ವಿಮಾನ ಢಿಕ್ಕಿ

ಅರವತ್ತೇಳು

ಮಂದಿ ಸಾವು-

ಏನೀ ದುರಂತ....?

 

ವಿಶಾಲ ವಿಸ್ತಾರ

ಗಗನದಲ್ಲೇ

ಈ ಅವಗಢ!

ಇನ್ನು ರಸ್ತೆಯ ಮೇಲೆ 

ಆಗುವ ಅಪಘಾತ- 

ಹೇಳಲಿ ಏನಂತ?

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್