ಒಂದು ಅಂಕ ಮುಗಿದು

ಒಂದು ಅಂಕ ಮುಗಿದು

ಪುಸ್ತಕದ ಲೇಖಕ/ಕವಿಯ ಹೆಸರು
ಸ್ಮಿತಾ ಮಾಕಳ್ಳಿ
ಪ್ರಕಾಶಕರು
ಬಿಸಿಲಕೋಲು ಪ್ರಕಾಶನ, ತಿಪಟೂರು, ತುಮಕೂರು -೫೭೨೨೦೧
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ : ೨೦೨೧

೨೦೧೮ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಯತ್ರಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಅವರ ಮುನ್ನುಡಿ ಹಾಗೂ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ ಬರಹಗಳಿವೆ. ಸುಮಾರು ೧೦೬ ಪುಟಗಳ ಈ ಚೊಚ್ಚಲ ಕವನ ಸಂಕಲನದ ಕವಿತೆಗಳು ಬಹಳ ಸೊಗಸಾಗಿವೆ. ಕೃತಿಗೆ ಮುನ್ನುಡಿ ಬರೆದ ಡಾ ಹೆಚ್ ಎಲ್ ಪುಷ್ಪ ಅವರ ಮಾತುಗಳನ್ನು ಆಯ್ದು ಇಲ್ಲಿ ನೀಡಲಾಗಿದೆ...

“ಸ್ಮಿತಾ ಮಾಕಳ್ಳಿಯವರ ಚೊಚ್ಚಲ ಕವನ ಸಂಕಲನದಲ್ಲಿ ಇಂತಹ ನಿರ್ಜನ ಬಯಲಿನಲ್ಲಿ ಹರಿವ ಜಲದ ಸಲಿಲವಾದ ಹೆಜ್ಜೆಯ ಗುರುತುಗಳಿವೆ. ಇಲ್ಲಿನ ಕವಿತೆಗಳಲ್ಲಿ ಕಾವ್ಯದ ಕಟ್ಟುಪಾಡುಗಳಲ್ಲಿ ಬಂಧಿಸಿಕೊಳ್ಳದ ಸ್ವಾತಂತ್ರ್ಯ ಮನೋಭಾವವೊಂದು ಮೇಲಿಂದ ಮೇಲೆ ಅಲೆದಾಡುತ್ತದೆ. ಈ ಮನೋಭಾವ ಹೊಸ ಅನುಭವಗಳಿಗೆ, ಹೊಸ ಸಂವೇದನೆಗಳಿಗೆ ಮೇಲಿಂದ ಮೇಲೆ ತೆರೆದುಕೊಳ್ಳುತ್ತದೆ.

“ಅಲೈಸ್ ಇನ್ ವಂಡರ್ ಲ್ಯಾಂಡ್'ನಲ್ಲಿ ಕನಸು, ಕನವರಿಕೆಗಳ ಮಧ್ಯೆ ಅಲೆದಾಡುವಂಥ ಹುಡುಗಿಯೊಬ್ಬಳು ಇಲ್ಲಿ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಾಳೆ. ತನ್ನನ್ನು ಕಂಡುಕೊಳ್ಳಲು ಯತ್ನಿಸುತ್ತಾಳೆ. ಅವಳ ನಿರಿನಿರಿ ನಿರಿಗೆಯ ಲಂಗದೊಳಗೆ ನಕ್ಷತ್ರ. ಚಂದಿರ, ಬಣ್ಣ-ಬಣ್ಣದ ಹೂಗಳು ಮಿನುಗುತ್ತವೆ. ಕೈಯ್ಯಲೊಂದು ಮಂತ್ರದಂಡವಿದ್ದು ಅದು ಹೊಸ ಹೊಸ ಲೋಕದ ಬಾಗಿಲನ್ನು ತೆರೆದು ತೋರಿಸುತ್ತದೆ. ಇದೆಲ್ಲದರ ಮಧ್ಯೆ ಸುಂದರವಾದ, ಕನಸು ಕಂಗಳ ಹುಡುಗಿಯೊಬ್ಬಳು 'ಸಿಂಡ್ರೆಲ್ಲಾ 'ಳಂತೆ ಕಷ್ಟದ ನಡುವೆಯೂ ಮಂದಹಾಸ ಚೆಲ್ಲುತ್ತಾ ಬೆಳಕಿನ ಕೋಲೆಂಬಂತೆ ನಡೆದಾಡುತ್ತಿದ್ದಾಳೆ.

ಸ್ಮಿತಾ ಕವಿತೆಗಳು ಅಲೈಸಳಂತೆ, ಸಿಂಡ್ರೆಲ್ಲಾಳಂತೆ, ಚಿಟ್ಟೆಗಳಂತೆ ಸಂಚರಿಸುತ್ತಾ ಲೋಕದ ಪ್ರತಿ ಅನುಭವವನ್ನು ಮುಟ್ಟುವ, ಮೂಸುವ, ಗಾಢವಾಗಿ ವಾಸನೆಯನ್ನು ಆಘ್ರಾಣಿಸುವ ತೆರದಲ್ಲಿ ಕಣ್ಣೆದುರು ನಿಲ್ಲುತ್ತವೆ. ನಿರ್ಧಿಷ್ಟವಾಗಿ ಸ್ಮಿತಾ ಕವಿತೆಗಳನ್ನು ಕುರಿತು ಹೀಗೇ ಎಂದು ಗುರುತಿಸಿ ಮಾತನಾಡುವುದಕ್ಕೆ ಸಾಧ್ಯವಾಗದಷ್ಟು ಇಲ್ಲಿನ ಕವಿತೆಗಳು ಬಿಡಿ ಬಿಡಿ ಚಿಟ್ಟೆಗಳಾಗಿ ಹಾರಿ ಸಂಚರಿಸುತ್ತವೆ. 'ರಕ್ಕೆ ಬದಲಿಸುವ ಚಂದಿರ' ಎಂಬ ಕವಿತೆಯಲ್ಲಿ ಈ ಪ್ರಶ್ನೆಯನ್ನು ಸ್ಮಿತಾ ಬಿಚ್ಚಿ ಚರ್ಚಿಸುತ್ತಾಳೆ, ಕಥೆಯಾಗಲೀ, ಕವಿತೆಯಾಗಲೀ ಅದಕ್ಕೆ ಒಂದು ನಿರ್ದಿಷ್ಟ ಕೇಂದ್ರವಿರಬೇಕು ಎಂಬುದು ಸಾಮಾನ್ಯ ನಂಬಿಕೆ. ಈ ಕ್ರಮವನ್ನು ಅತಿಕ್ರಮಿಸುವ, ಕೇಂದ್ರವನ್ನು ತಿಳಿಗೊಳಿಸಿ ನಡೆವ ಕ್ರಮವೊಂದು ಇಲ್ಲಿ ಗೋಚರವಾಗುತ್ತದೆ.
ಒಂದೂರೆಂಬ ರಾಜ್ಯದೊಳಗೆ
ರಾಜ ರಾಣಿಗಳಿರದೆ
ಮಂತ್ರಿ ಸೈನಿಕರ ಕಾಳಗಗಳಿರದೆ
ಕಥೆಯಾದೀತು ಹೇಗೆ?

ಎಂದು ಕಣ್ಣು ಬಿಟ್ಟು ಹಕ್ಕಿಗಳ ನೋಟಕ್ಕೆ
ಮುಗುಳ್ನಕ್ಕ (ರೆಕ್ಕೆ ಬಲಿಸುವ ಚಂದಿರ)

ಕವಿತೆಗೆ ಅಥವಾ ಕವಿತೆಗಳಿಗೆ ಒಂದು ಕೇಂದ್ರವಿರಬೇಕು ಎಂಬ ಸಿದ್ದಕಲ್ಪನೆಯನ್ನು ಮತ್ತೆ ಮತ್ತೆ ಪ್ರಶ್ನಿಸುವ, ಪಕ್ಕಕ್ಕಿಡುವ ಇಲ್ಲಿನ ಕವಿತೆಗಳು ಹೆಚ್ಚಾಗಿ ಕ್ರಮಿಸುವುದು ‘ಆನು ಒಲಿದಂತೆ ಹಾಡುವೆ' ಎಂಬ ಸ್ವಶೋಧಿತ-ಒಪ್ಪಿತ ಎಂಬ ಹಾದಿಯಲಿ ಕಾಳಿದಾಸನ ಮೇಘದೂತದಲ್ಲಿ ಚಿರಂಜೀವಿಯಾದ ಯಕ್ಷನೊಬ್ಬನು ತಾನು ಕೂಡಲಾರದ ಯಕ್ಷಿಯೊಬ್ಬಳನ್ನು ಕುರಿತು ಅನವರತ ಕನವರಿಸುತ್ತಿದ್ದಾನೆ. ಕೂಡುವಿಕೆ ಇದೆಯೇ ಎಂಬುದು ಇಲ್ಲಿ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಇಲ್ಲಿನ ಕಾವ್ಯದಲ್ಲಿ ತನ್ನ ಪ್ರಿಯತಮನಿಗಾಗಿ ಹಂಬಲಿಸುವ, ಧ್ಯಾನಿಸುವ ಕಡು ಮೋಹಿ ಯಕ್ಷಿಣಿಯಿದ್ದಾಳೆ. ಪ್ರಣಯ, ವಿರಹಗಳು ಉತ್ಕಟ ಭಾವಗಳಾದ್ದರಿಂದ ಕಾಡುವಿಕೆ ಮತ್ತು ಕೂಡುವಿಕೆ ಇಲ್ಲಿ ಮತ್ತೆ ಮತ್ತೆ ವರ್ಣಿಸಲ್ಪಡುತ್ತದೆ.

ಈ ಸರಿರಾತ್ರಿ ನಿನ್ನಿಂದ ದೂರದಲ್ಲಿ ನನ್ನ ಕೋಣೆಯೊಳಗೆ
ಕುಳಿತು ಈ ಎಲ್ಲವನ್ನೂ ಅಷ್ಟೇ ನಿಖರವಾಗಿ
ನಾನು ಅಂದಾಜಿಸುವಾಗ
ನನ್ನೊಳಗಿನ ನೀನು
ಬೆಚ್ಚಗೆ ಅಪ್ಪಿ ನನ್ನೊಲವಿನ ಕಥೆಯ ಆರಂಭದ
ಪುಳಕವ ಹಟ್ಟಿಸುತ್ತಿದ್ದೀ. (ಅಪೀಮು)

ಹೀಗೆ ಏನೇನೋ ಅನಿಸುವಂತೆ ಮಾಡುವ
ಅದರಲ್ಲೂ ಕುಡಿಯದೇ ನನ್ನ ಅಮಲೇರಿಸುವ
ನೀನು
ಮಾತ್ರವೇ
ನನ್ನ ನಿಜದ ಅಫೀಮು ಕಣೋ. (ಅಪೀಮು)

ಈ ಮೇಲಿನ ಕವಿತೆಗಳಲ್ಲದೆ, ಹೆಸರಿಲ್ಲದ ಹುಡುಗಿ, ಬುಟ್ಟಿ, ರಾತ್ರಿಗಳ ಮಾರಾಟಕ್ಕೆ ಇಡಿ, ಗಿಂಪಲ್ ಮತ್ತು ಪಿನಾಕಿಯೋ, ಚಾಪೆ, ಸಣ್ಣ ಜ್ವರ ಮತ್ತು ವ್ಯಾನ್‌ಗೋ, ಶಿಕಾರಿ, ಮಾಂತ್ರಿಕ ಯಶ ಮತ್ತು ಪಂದಿ- ಈ ಕವಿತೆಗಳು ಅವು ಒಳಗೊಂಡಿರುವ ವಸ್ತು ಮತ್ತು ಹೇಳುವ ಕ್ರಮದಿಂದಲೇ ಗಮನ ಸೆಳೆಯುತ್ತವೆ. 'ಹೆಸರಿಲ್ಲದ ಹುಡುಗಿ-ಕೆರೆಗೆ ಹಾರದಂತೆ ಬಲಿಯಾದ ಹೆಣ್ಣು ಮಗಳನ್ನು ಹೋಲುವ ಕಥೆಯನ್ನು, ಪೂರ್ವದಲ್ಲೇ ಸಂಕ್ಷಿಪ್ರವಾಗಿ ಹೇಳಿ ಮುಂದಿನ ಕಥೆಗೆ ಹೊರಳುತ್ತದೆ.

ಜನಪದ ಗೀತೆಯಲ್ಲಿ ಕರುಣೆ-ಶೋಕವನ್ನು ಉಕ್ಕಿಸಿದ ಈ ಕಥೆ ಮುಗಿಯುವಂತದಲ್ಲ. ಅದು ಆಯಾ ಕಾಲಕ್ಕೆ ತಕ್ಕಂತೆ ರೂಪವನ್ನು ಬದಲಿಸಿಕೊಳ್ಳುವಂತದ್ದು ಎನ್ನುವಂತೆ ಇನ್ನೊಬ್ಬ ಹೆಣ್ಣು ಮಗಳನ್ನು ಆ ಸ್ಥಾನದಲ್ಲಿ ಕೂರಿಸಿ ಕವಿತೆ ಮುಂದುವರೆಯುತ್ತದೆ. ಅಂದು ಬಲಿಯಾದ ಆ ಹೆಣ್ಣಿನ ಜಾಗಕ್ಕೆ ಸೊಸೆಯಾಗಿ ಬಂದ ಮುಗ್ಧ ಹುಡುಗಿಯ ಕಥೆಯೂ ಅದೇ ಆಗಿದೆ. ಅವಳು ಕೆರೆಗೆ ಹಾರವಾದರೆ ಇವಳು ಮನೆಯಲ್ಲಿ ಜೀವಂತವಾಗಿ ತೊಟ್ಟುತೊಟ್ಟಾಗಿ ಆಯುಷ್ಯ ಕಳೆಯುತ್ತಾ ರೂಪಕವಾಗಿ ನಿಲ್ಲುತ್ತಾಳೆ. "ಗಿಂಪಲ್ ಮತ್ತು ಪಿನೋಕಿಯೋ'ಬಾಷೆವಿಶ್ ಸಿಂಗರನ ಕಥೆಯ ಒಂದು ಪಾತ್ರ ಹಾಗೂ ಇಟಲಿಯ ಲೇಖಕ ಕಾರ್ಲೋ ಕೊಲ್ಲೋಡಿಯ ಮತ್ತೊಂದು ಪಾತ್ರ ಪರಸ್ಪರ ಕಾಲ, ದೇಶ, ಭಾಷೆಗಳನ್ನು ಮೀರಿ ಒಡನಾಡುವ ತಂತ್ರದಲ್ಲಿ ರೂಪಿತವಾದ ಪಾತ್ರ, ಇದೊಂದು ರೀತಿಯ ಹೊಸ ಪ್ರಯೋಗವಾಗಿದ್ದು ಅದು ನಡೆಯುತ್ತಿರುವುದು ನಮ್ಮ ಪರಿಸರದ ಅಜ್ಜ, ಅಜ್ಜಿ ಹಾಗೂ ಹೈದನೊಬ್ಬನ ಮುಂದೆ. ಇದೇ ರೀತಿಯ ಮತ್ತೊಂದು ಪ್ರಯೋಗ ವ್ಯಾನ್‌ಗೋನ 'ಪೊಟ್ಯಾಟೋ ಈಟರ್' ಕಲಾಕೃತಿಯ ಕುರಿತು ನಡೆಯುತ್ತದೆ. ಕಾಡುವ ಜ್ವರ ಹಾಗೂ ವ್ಯಾನ್‌ಗೋ ಕಲಾಕೃತಿಯ ಮಧ್ಯೆ ಏರ್ಪಡುವ ಸಂಬಂಧ ಕುತೂಹಲ ಹುಟ್ಟಿಸುವಂತದ್ದು. ಇಂತಹದೇ ಕವಿತೆ 'ಶಿಕಾರಿ, ಮಾಂತ್ರಿಕ ಯಶ ಹಾಗೂ ಪಂದಿ'ಯಾಗಿದ್ದು ಇಲ್ಲೂ ಕೂಡಾ ಶಿಕಾರಿ, ಯಶ ಹಾಗೂ ಪಂದಿಯ ನಡುವಣ ಸಂಬಂಧ ವಿಸ್ತರಿಸುವ ಕ್ರಮ ಗಮನಸೆಳೆಯುತ್ತದೆ. ಇಂತಹ ಕಾವ್ಯ ಸಂದರ್ಭದಲ್ಲಿ ಸ್ಮಿತಾ ಮಾಕಳ್ಳಿ ತನ್ನದೇ ಆದ ಆಪ್ತವಾದ ಭಾವಲೋಕವೊಂದನ್ನು ಅಭಿವ್ಯಕ್ತಿಸ ಹೊರಟಿರುವುದು ಗಮನಾರ್ಹವಾದ ಪ್ರಯತ್ನವಾಗಿದೆ.

ತನ್ನ ಆಪ್ತವಾದ ಭಾವಲೋಕವನ್ನು ನಿಧಾನವಾಗಿ ಆದರೆ ಸ್ಥಿರವಾಗಿ ಖಾತರಿಪಡಿಸಿಕೊಳ್ಳುತ್ತಾ ಅದನ್ನು ಬಿಡಬಿಡಿ ಚಿತ್ರಗಳ ಮೂಲಕ ಹಿಡಿದಿಡುವ ಜೀವನ ಪ್ರೀತಿಯ ಹುಡುಗಿಯೊಬ್ಬಳು ಇಲ್ಲಿನ ಕವಿತೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಾಳೆ, ಚಿತ್ರಗಳು ಪದಗಳ ಜೋಡಿಸುವಿಕೆಯಿಂದಾಗಿ ಮೈದುಂಬಿಕೊಂಡು ಇಲ್ಲಿ ಕವಿತೆಗಳಾಗಿವೆ. ಈಗಾಗಲೇ ತಮ್ಮ ಬಿಡಿ ಬಿಡಿ ಕವಿತೆಗಳ ಮೂಲಕ ಓದುಗರ ಗಮನ ಸೆಳೆದಿದ್ದ ಸ್ಮಿತಾ ಮಾಕಳ್ಳಿ ಕವನ ಸಂಕಲನ ಪ್ರಕಟಿಸುವ ಮೂಲಕ ಹೊಸ ತಲೆಮಾರಿನ ಕವಯಿತ್ರಿಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಈ ಮೂಲಕ ಶುಭಕೋರುತ್ತೇನೆ.”