ಒಂದು ಅಂತರಾಳದ ಆಹ್ವಾನ ಪತ್ರಿಕೆ…!

ಒಂದು ಅಂತರಾಳದ ಆಹ್ವಾನ ಪತ್ರಿಕೆ…!

ನಿಮ್ಮನ್ನು ನಮ್ಮ ವಿಶೇಷ ಕಾರ್ಯಕ್ರಮಕ್ಕೆ ಹೃದಯ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ, ಮರೆತು ಹೋದ ಅಕ್ಷರಗಳು, ಬರಿದಾದ ಮಾತುಗಳು, ಖಾಲಿಯಾದ  ಮನಸುಗಳು, ಕಣ್ಮರೆಯಾದ ಕನಸುಗಳು, ಬರಡಾದ ಬದುಕುಗಳು, ನಾಪತ್ತೆಯಾದ ಸ್ನೇಹ ಪ್ರೀತಿ ವಿಶ್ವಾಸ, ಸಮಾಧಿಯಾದ ಸತ್ಯ ತ್ಯಾಗ ನಿಸ್ವಾರ್ಥಗಳ, ಮಲಿನವಾದ ಮಾನವೀಯ ಮೌಲ್ಯಗಳ 25 ನೇ ವರ್ಷದ ಬೆಳ್ಳಿ ಮಹೋತ್ಸವಕ್ಕೆ

ಮತ್ತು

ಬೆಳಗುತ್ತಿರುವ  ಕೋಪ ದ್ವೇಷ ಅಸೂಯೆಗಳ, ವಿಜೃಂಭಿಸುತ್ತಿರುವ ಮೋಸ ವಂಚನೆ ದರೋಡೆಗಳ, ಹೆಚ್ಚಾಗುತ್ತಿರುವ ಅತ್ಯಾಚಾರ ಕೊಲೆ ಶೋಷಣೆಗಳ, ಆಕ್ರಮಿಸುತ್ತಿರುವ ಆತಂಕ ಅಭದ್ರತೆ ದುರಾಸೆಗಳ, ಕುಣಿಯುತ್ತಿರುವ ಸಮೂಹ ಸಂಪರ್ಕ ಮಾಧ್ಯಮಗಳ, ಕುಪ್ಪಳಿಸಿತ್ತಿರುವ ಆತ್ಮವಂಚಕ ಮನಸ್ಸುಗಳ, ಬೆಳ್ಳಿ ಮಹೋತ್ಸವವನ್ನೂ ಒಟ್ಟಾಗಿ ಆಚರಿಸಲು ಗುರು ಹಿರಿಯರ ಸಮ್ಮುಖದಲ್ಲಿ  ನಿಶ್ಚಯಿಸಲಾಗಿದೆ.

ಈ ಸಂದರ್ಭದಲ್ಲಿ, ಇನ್ನೂ ಜೀವಂತವಿರುವ, ಸಮಾಜ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟು ಮೌಲ್ಯಗಳ ಉಳಿವಿಗಾಗಿ ದುಡಿದ ನಿಸ್ವಾರ್ಥ ಅಪ್ರಯೋಜಕ ಒಂದಷ್ಟು ಜನರನ್ನು, ಜೊತೆಗೆ, ಗಣಿ ಬಗೆದು ಲಂಚ ಹೊಡೆದು ತಲೆ ಹಿಡಿದು ಮೌಡ್ಯ ಮಾರಿ ಮಂಕುಬೂದಿ ಎರಚಿ ಹಣ  ಮಾಡಿ ಅಧಿಕಾರ ಹಿಡಿದು ಸಮಾಜ ರಾಜ್ಯ ದೇಶವನ್ನು ಆಳುತ್ತಿರುವ ಮಹಾತ್ಮರನ್ನು ಸನ್ಮಾನಿಸಲಾಗುತ್ತದೆ.

ಅದಕ್ಕಾಗಿ ಅದೇ ಸಮಯದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಒಂದು ಕಡೆ ಬೆತ್ತಲೆ ನೃತ್ಯವನ್ನು ಮತ್ತೊಂದು ಕಡೆ ದೇವರ ಭಜನೆಯನ್ನೂ, ದೇಶ ಭಕ್ತಿಯ ಹಾಡುಗಳನ್ನು ಹಾಡಲಾಗುತ್ತದೆ. ಒಳ ಪ್ರವೇಶಿಸುವ ಗೌರವಾನ್ವಿತ ಅತಿಥಿಗಳಿಗೆ ಮುಖ ಮುಚ್ಚಿಕೊಳ್ಳಲು ಸ್ವಲ್ಪ ದೂರದಲ್ಲಿ ಮುಖ ಮುಚ್ಚುವ ಗ್ಲೌಸುಗಳನ್ನು ಇಡಲಾಗಿದೆ. ನೀವು ಯಾರೆಂದು ತಿಳಿಯದಂತೆ ನಿಮ್ಮ ಮರ್ಯಾದೆ ಕಾಪಾಡಲಾಗುತ್ತದ ಈ ಕಾರ್ಯಕ್ರಮದ ನಂತರ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. 

ಸಸ್ಯಹಾರಿಗಳಿಗಾಗಿ ಹಸುವಿನಿಂದ ಬಲವಂತವಾಗಿ ಹಿಂಡಿದ ಹಾಲು, ಜೋಳ, ರಾಗಿ, ಗೋಧಿ ಗಿಡಗಳನ್ನು ಕುಡುಗೋಲಿನಿಂದ ಕತ್ತರಿಸಿ ತಂದು ಕುಟ್ಟಿ ಪುಡಿಪುಡಿಮಾಡಿದ ಹಿಟ್ಟಿನಿಂದ ತಯಾರಿಸಿದ ಮುದ್ದೆ ಚಪಾತಿ ರೊಟ್ಟಿ, ಭತ್ತದ ಗಿಡವನ್ನು ಕೊಯ್ದು ತುಳಿದು ಅಕ್ಕಿ ಮಾಡಿ ಬೇಯಿಸಿದ ಅನ್ನವನ್ನು, ಬಾಳೆ ಮಾವು ತೆಂಗು ಮುಂತಾದ ಗಿಡಗಳಿಂದ ಕಿತ್ತು ತಂದ ಹಣ್ಣುಗಳ ಆಹಾರ ಸಿದ್ದಪಡಿಸಲಾಗಿದೆ.

ಮಾಂಸಾಹಾರಿಗಳಿಗಾಗಿ ಕುರಿ, ಕೋಳಿ, ಹಸು, ಹಂದಿ, ಮೀನುಗಳ ಕಣ್ಣು, ಕಿವಿ, ಮೂಗು, ಬಾಯಿ, ಹೃದಯ, ಕಿಡ್ನಿ ಮುಂತಾದುವುಗಳನ್ನು ಕತ್ತರಿಸಿ ಪ್ರತ್ಯೇಕವಾಗಿ ಮಾಸಾಲೆ  ಹಾಕಿ ಮಾಡಲಾಗಿದೆ. ಎಣ್ಣೆಯಲ್ಲಿಯೂ ಕರಿಯಲಾಗಿದೆ. ನಿಮಗೆ ಸಸ್ಯಹಾರದ ಊಟಕ್ಕೂ ಪ್ರವೇಶವಿದೆ. ಮುಖವಾಡ ಹಾಕಿಕೊಂಡು ಏನು ಬೇಕಾದರೂ ತಿನ್ನಬಹುದು. ಯಾರಿಗೂ ತಿಳಿಯುವುದಿಲ್ಲ.

ಕಾರ್ಯಕ್ರಮದ ಕೊನೆಗೆ ಬಹುಸಂಖ್ಯಾತರಿಗಾಗಿ ಭಾರತೀಯ ಸಂಸ್ಕೃತಿ, ವೇದ ಉಪನಿಷತ್ತುಗಳು, ಇಲ್ಲಿನ ಆಚಾರ ವಿಚಾರ ಸಂಪ್ರದಾಯಗಳು ರೀತಿ ನೀತಿಗಳನ್ನೂ ಮತ್ತು ಅಲ್ಪಸಂಖ್ಯಾತರಿಗಾಗಿ ಖುರಾನ್ ಬೈಬಲ್ ಗ್ರಂಥಗಳನ್ನು ಅವರ ಧಾರ್ಮಿಕ ನಂಬಿಕೆಗಳನ್ನು ಪಠಿಸಲಾಗುತ್ತದೆ. ವಿಶೇಷವಾಗಿ ಇವುಗಳನ್ನೇ ಯಾರಿಗೂ ಅರ್ಥವಾಗದಂತೆ ದುರುಪಯೋಗಿಸಿಕೊಂಡು ಮುಗ್ಧ ಜನರನ್ನು ವಂಚಿಸಿ ಹಣ ಅಂತಸ್ತು ಅಧಿಕಾರ ಪಡೆದು ಹೇಗೆ ಸುಖವಾಗಿ ಜೀವಿಸಬಹುದು ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಲಾಗುತ್ತದೆ.

ತಾವು ದಯವಿಟ್ಡು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮತ್ತೊಮ್ಮೆ ಕಳಕಳಿಯ ಮನವಿ ಮಾಡಿಕೊಳ್ಳುತ್ತೇವೆ. ಸ್ಥಳ : ನೀವು ನಿಂತಿರುವ ನೆಲದಿಂದ ಕೆಳಗೆ ಕೇವಲ 5 ಅಡಿಗಳ ಆಳದಲ್ಲಿ ವಿಶಾಲವಾದ ಜಾಗದಲ್ಲಿ.                                                 

ಇಂತಿ,

ನಿಮ್ಮ ಅವಿಶ್ವಾಸಿಗಳು ಮತ್ತು ಆತ್ಮಸಾಕ್ಷಿಯ ಮನಸುಗಳು.

ನೀವು ಬರಲೇ ಬೇಕು. ಇಷ್ಟವಿಲ್ಲದಿದ್ದರೂ ವಿಧಿ ನಿಮ್ಮನ್ನು ಕರೆದುಕೊಂಡು ಬಂದೇ ಬರುತ್ತದೆ. ಆದ್ದರಿಂದ ಇರುವಷ್ಟು ದಿನ ಈ  ಹುಚ್ಚಾಟಗಳನ್ನು ಬಿಟ್ಟು ನಾಗರಿಕರಾಗಿ ನಗುನಗುತ್ತಾ ಬದುಕೋಣ. ಧನ್ಯವಾದಗಳು.

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ