ಒಂದು ಅರ್ಥಪೂರ್ಣ ಚರ್ಚೆ…!

ಒಂದು ಅರ್ಥಪೂರ್ಣ ಚರ್ಚೆ…!

ಒಂದು ವಿಷಯದ ಬಗ್ಗೆ ಅರ್ಥಪೂರ್ಣವಾಗಿ ಮತ್ತು ಸತ್ಯದ ಹುಡುಕಾಟದ ಚರ್ಚೆ ಮಾಡಬೇಕಾದರೆ ಯಾವ ಅಂಶಗಳು ಸಾಮಾನ್ಯವಾಗಿ ಮುಖ್ಯವಾಗುತ್ತದೆ. ಪತ್ರಿಕೆ ಟಿವಿ ರೇಡಿಯೋ social media ಗಳಲ್ಲಿ ನಾವು ಅನಿಸಿಕೆ - ಅಭಿಪ್ರಾಯ ಮತ್ತು ವಾದಗಳನ್ನು ಮಂಡಿಸಬಹುದೇ ಹೊರತು ನಿಜವಾದ ಮತ್ತು ವಾಸ್ತವಿಕ ಸತ್ಯ ಹೊರಬರುವ ಚರ್ಚಾ ವೇದಿಕೆಗಳೆಂದು ಅವುಗಳನ್ನು ಪರಿಗಣಿಸುವುದು ಕಷ್ಟ ಸಾಧ್ಯ ಮತ್ತು ಅಷ್ಟೊಂದು ಸರಿಯಾದ ನಿಲುವಲ್ಲವೆನಿಸುತ್ತದೆ.

ಏಕೆಂದರೆ, ನನ್ನ ದೃಷ್ಟಿಯಲ್ಲಿ ಚರ್ಚೆ ಎಂದರೆ ಅದು ಈ ಕೆಲವು ಮೂಲಭೂತ ಅಂಶಗಳನ್ನು ಒಳಗೊಂಡಿರಬೇಕು.

1) ನೇರ ಅಥವಾ ಮುಖಾಮುಖಿ ಮಾತುಕತೆ...

ಚರ್ಚೆ ಮಾಡುವ ವ್ಯಕ್ತಿಗಳು ಒಂದು ನಿರ್ದಿಷ್ಟ ಜಾಗದಲ್ಲಿ ಕುಳಿತು ತಮ್ಮ ಅಭಿಪ್ರಾಯವನ್ನು ಆಧಾರಗಳ - ಉದಾಹರಣೆಗಳ ಮೂಲಕ ಪ್ರಸ್ತುತಪಡಿಸಿದರೆ ಅದು ಹೆಚ್ಚು Convincing ಆಗಿ ಇರುತ್ತದೆ. ಅಕ್ಷರಗಳಿಗಿಂತ ನೇರ ಮಾತು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಮತ್ತು ಅಲ್ಲಿಯೇ ಉಧ್ಭವವಾಗುವ ಎಲ್ಲಾ ಪ್ರಶ್ನೆಗಳಿಗೂ ತಮ್ಮ ಮಿತಿಯಲ್ಲಿ ಉತ್ತರ ಕಂಡುಕೊಳ್ಳಬಹುದು. ನಮ್ಮ ನೈಜ ಭಾವನೆಗಳು ಅಲ್ಲಿ ಬಿಂಬಿತವಾಗುತ್ತದೆ. ಮಾಧ್ಯಮಗಳಲ್ಲೂ ಇದು ಅಸಾಧ್ಯವಲ್ಲ ಆದರೆ ತುಂಬಾ ಕಷ್ಟ ಮತ್ತು ಪರಿಣಾಮಕಾರಿಯಾಗಿರುವುದಿಲ್ಲ.

2) ಸಮಯ..

ಇಂದಿನ ವೇಗದ ಬದುಕಿನ ಶೈಲಿಯಲ್ಲಿ ಸಮಯ ಬಹುಮಖ್ಯ ಪಾತ್ರ ವಹಿಸುತ್ತದೆ. ಚರ್ಚೆಯ ವಿಷಯ ಆಳವಾದುದು ಮತ್ತು ವಿಶಾಲವಾದುದೂ ಆದರೆ ಅತಿಹೆಚ್ಚು ಸಮಯ ನಿರೀಕ್ಷಿಸುತ್ತದೆ. ಪ್ರಶ್ನೆಗಳು ಉತ್ತರಗಳು ಸಾಕ್ಷ್ಯಗಳು ಸಮಯದ ಮಿತಿಯಲ್ಲದೆ ದೀರ್ಘಕಾಲ ಮಾತುಕತೆ ನಡೆಸಬೇಕಾಗಿತ್ತದೆ. ಆತುರದ ವಾತಾವರಣದಲ್ಲಿ ಕೇವಲ ಪಾಂಡಿತ್ಯ ಪ್ರದರ್ಶನದ ಉಡಾಫೆ ಮಾತುಗಳು ವಾದಗಳಾಗುತ್ತವೆಯೇ ಹೊರತು ಅರ್ಥಪೂರ್ಣ ಚರ್ಚೆಗಳಾಗುವುದೇ ಇಲ್ಲ. Fast food ಮಾದರಿಯಂತೆ ಏನೋ ಆ ಸಮಯಕ್ಕೆ ಒಂದಷ್ಟು ಹೊಟ್ಟೆ ತುಂಬಬಹುದಷ್ಟೆ. ಆರೋಗ್ಯದಾಯಕ ಪೌಷ್ಟಿಕಾಂಶ ದೊರೆಯುವ ಸಾಧ್ಯತೆ ತೀರಾ ಕಡಿಮೆ.

3) ಚರ್ಚಿಸುವ ವ್ಯಕ್ತಿಗಳ ಹಿನ್ನೆಲೆ

ಹೌದು, ಇದು ಬಹಳ ಮುಖ್ಯ. ವ್ಯಕ್ತಿಯ ವಯಸ್ಸು, ಆವರ ವಿದ್ಯಾರ್ಹತೆ , ಆವರ ಉದ್ಯೋಗ, ಅವರ ಜೀವನಶೈಲಿ, ಉಪಯೋಗಿಸುವ ಭಾಷೆ, ಚರ್ಚಿಸುವ ವಿಷಯದ ಬಗೆಗಿನ ಅವರ ಆಸಕ್ತಿ, ವಿನಯ ಮತ್ತು ಸೌಜನ್ಯತೆ ಎಲ್ಲವೂ ತುಂಬಾ ಮುಖ್ಯವಾಗುತ್ತದೆ. ಇದೆಲ್ಲಾ ಅತ್ಯುತ್ತಮ ಮಟ್ಟದಲ್ಲಿ ಇರಲೇಬೇಕು ಎಂದು ಹೇಳುತ್ತಿಲ್ಲ. ಆದರೆ ಈ ಬಗ್ಗೆ ಮಾಹಿತಿ ಇದ್ದರೆ ನಾವು ಯಾವ ಹಂತದಲ್ಲಿ ನಿಂತು ಆವರಿಗೆ ಯಾವ ರೀತಿಯಲ್ಲಿ ನಮ್ಮ ವಿಷಯ ಅರ್ಥಮಾಡಿಸಬಹುದು ಎಂದು ಅಂದಾಜಿಸಬಹುದು. 

ಉದಾಹರಣೆಗೆ ಅವರ ವಯಸ್ಸು 1 ರಿಂದ 100 ರ ಒಳಗೆ ಎಷ್ಟೇ ಇರಬಹುದು. ಅದು ಚರ್ಚೆಯ ವಿಷಯ ಮತ್ತು ರೀತಿಗೆ ಬಹುಮಖ್ಯವಾಗುತ್ತದೆ. ವಯಸ್ಸು ಮುಖ್ಯವಲ್ಲ ವಿಷಯ ಮತ್ತು ಅದರ ಬಗ್ಗೆ ನಮಗಿರುವ ಜ್ಞಾನ ಮುಖ್ಯ ಎಂದು ಕೆಲವರು ವಾದಿಸಬಹುದು. ಆದರೆ ಸಾಮಾನ್ಯವಾಗಿ ( ಕೆಲವು ಅಪರೂಪದ ಅಸಾಧಾರಣ ಪ್ರತಿಭೆ ಹೊರತುಪಡಿಸಿ ) ವಯಸ್ಸಿನ ಜೊತೆಗೆ ಆಗುವ ಅನುಭವ ಚರ್ಚೆಗಳಿಗೆ ಬಹಳ ಮುಖ್ಯವಾಗುತ್ತದೆ.

4) ಸತ್ಯಕ್ಕಿಂತ ಮಿಗಿಲಾದ ಪ್ರಜ್ಞೆ

ಎಲ್ಲಕ್ಕಿಂತ ಮುಖ್ಯವಾಗಿ ಚರ್ಚೆಯ ಅಂತಿಮ ಆಶಯ ಸತ್ಯದ ಹುಡುಕಾಟವಾದರು ಅದರಲ್ಲಿ  ಪ್ರೀತಿ ವಿಶ್ವಾಸ ಸಂಯಮ ಸೌಹಾರ್ದತೆ ಮುನ್ನಲೆಗೆ ಬರಬೇಕು. ಇಲ್ಲದಿದ್ದರೆ ಚರ್ಚೆಯ ದಿಕ್ಕು ನಮ್ಮನ್ನೇ ನುಂಗುತ್ತದೆ. ಸತ್ಯ ಅತ್ಯಂತ ಕಠೋರ ಮತ್ತು ಬೆತ್ತಲೆ.

ಅದರ ಹುಡುಕಾಟದಲ್ಲಿ ನಾವು ಸಮಷ್ಟಿ ಪ್ರಜ್ಞೆಯನ್ನು ಪ್ರದರ್ಶಿಸದೆ ಕೇವಲ ಸತ್ಯವೇ ಅಂತಿಮ ಎಂದಾದರೆ ಆ ಚರ್ಚೆಗಳು ಗೊಂದಲದಲ್ಲಿ ಅಥವಾ ಮನಸ್ತಾಪಗಳಲ್ಲಿ ಕೊನೆಗೊಳ್ಳುವ ಸಾಧ್ಯತೆಯೇ ಹೆಚ್ಚು. ವ್ಯಕ್ತಿಯಲ್ಲಿರುವ ಅಹಂ ಇದಕ್ಕೆ ಬಹುಮಖ್ಯ ಕಾರಣ. 

5) ಚರ್ಚೆ ಮತ್ತು ವಕೀಲಿಕೆಯ ನಡುವಿನ ಸಾಮ್ಯತೆ ಮತ್ತು ಭಿನ್ನತೆ

ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸತ್ಯದ ಹುಡುಕಾಟ ಸಾಧ್ಯ. ವಕೀಲಿಕೆ ತನ್ನ ನಿಲುವನ್ನು ಯಾವುದೇ ರೀತಿಯ ಸುಳ್ಳು, ಕಾನೂನಿನ ಒಳ ಮರ್ಮ, ದಾಖಲೆಗಳು, ನೈತಿಕ ಪ್ರಜ್ಞೆಯ ಸ್ವಾರ್ಥದ ವ್ಯಾಖ್ಯಾನ, ಸಂದರ್ಭ ಅಥವಾ ಘಟನೆಗಳ ತಮ್ಮ ಅನುಕೂಲಕರ ಲಾಭ ಮುಂತಾದ ಎಲ್ಲವನ್ನೂ ಒಳಗೊಂಡಿರುತ್ತದೆ ಮತ್ತು ತಮ್ಮ ಚರ್ಚೆಗೆ ಅಥವಾ ವಿಷಯ ಸಮರ್ಥನೆಗೆ ಮಾತ್ರ ಪೂರಕವಾಗಿರುತ್ತದೆ. ಅಲ್ಲದೆ ವಿರೋಧಿಗಳ ದೌರ್ಬಲ್ಯ ಸಹ ಅವರ ಚರ್ಚೆಯ ಬಂಡವಾಳವಾಗಿರುತ್ತದೆ. 

ಆದರೆ ಚರ್ಚೆಯಲ್ಲಿ ಇದಕ್ಕೆ ತದ್ವಿರುದ್ಧ ವಾತಾವರಣ ಇರಬೇಕು. ಸತ್ಯ ಮತ್ತು ವಾಸ್ತವದ ಹುಡುಕಾಟ ಮಾತ್ರ ಇಲ್ಲಿ ಮುಖ್ಯವಾಗಬೇಕು. ಅದರಲ್ಲಿ ಸೋಲು ಗೆಲುವು ಇರುವುದಿಲ್ಲ. ಸ್ವಂತ ಹಿತಾಸಕ್ತಿ ಅಥವಾ ಸಮರ್ಥನೆ ಮುಖ್ಯವಲ್ಲ.

6) ಅಂತಿಮವಾಗಿ, ಚರ್ಚೆಗಳು ಮನಸ್ಸು ಬುದ್ದಿ ಜ್ಞಾನ ವಿನಯಗಳ ಸಮ್ಮಿಲನದಿಂದ ಉಂಟಾದ ಹೃದಯಗಳ ಬೆಸುಗೆಯಾಗುವಂತಿರಬೇಕು. ಕನಿಷ್ಠ ಚರ್ಚೆಯ ಕೊನೆ ನಮ್ಮಲ್ಲಿ ಒಂದಷ್ಟು ತಿಳುವಳಿಕೆ ಮೂಡಿಸುವುದರ ಜೊತೆಗೆ ನಮ್ಮ ಸಂಬಂಧಗಳು ಇನ್ನಷ್ಟು ಗಾಢವಾಗಿ ಒಬ್ಬರೊನ್ನಬ್ಬರು ಗೌರವಿಸುವಂತಿರಬೇಕು. ಇಲ್ಲದಿದ್ದರೆ ಎಂದಿನಂತೆ ನಾವು ಈಗ ಎಲ್ಲಾ ಕಡೆ ನೋಡುತ್ತಿರುವ ಅಸಹನೆ - ವಾಕ್ಚಾತುರ್ಯ ಪ್ರದರ್ಶನ - ವಿರೋಧಿಗಳ ಅವಹೇಳನ - ಅಸೂಯೆ - ಆತ್ಮವಂಚಕ ಮನೋಭಾವ ಮತ್ತಷ್ಟು ವಿಜೃಂಭಿಸಿ ಚರ್ಚೆಗಳು ಅರ್ಥ ಕಳೆದುಕೊಳ್ಳುತ್ತವೆ.

ಆದ್ದರಿಂದ, ನಾವು ನೇರವಾಗಿ ಭೇಟಿಯಾಗಿ ತೃಪ್ತಿಯಾಗುವಷ್ಟು ಮಾತುಕತೆಯಾಡುವವರೆಗೂ, ಸಂವಹನ ನಡೆಸುವವರೆಗೂ, ನಮ್ಮ ಸಂಪೂರ್ಣ ವ್ಯಕ್ತಿತ್ವಗಳ ಪರಿಚಯವಾಗುವುದಿಲ್ಲ. ಅಲ್ಲಿಯವರೆಗೂ ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ನಮ್ಮ ಅರಿವಿನ ಮಟ್ಟ ಹೆಚ್ಚಿಸಿಕೊಳ್ಳುತ್ತಾ ವಿಶಾಲ ಮನೋಭಾವ ಬೆಳೆಸಿಕೊಳ್ಳುತ್ತಾ ಪ್ರಬುದ್ದತೆಯತ್ತ ಸಾಗೋಣ. ಯಾವುದೇ ಪೂರ್ವಾಗ್ರಹ ಬೇಡ...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ