"ಒಂದು ಇಂದಿನ ದಿನ"

"ಒಂದು ಇಂದಿನ ದಿನ"

ಬರಾಕ್ ಒಬಾಮ, ಎರಡನೆಯ ಬಾರಿ ಪ್ರಚಂಡ ಬಹುಮತದಿಂದ ಜಯಭೇರಿ ಗಳಿಸಿ ಅಮೇರಿಕಾದ ಅಧ್ಯಕ್ಷಾರಾಗಿ, ಪ್ರಮಾಣವಚನವನ್ನು ಸ್ವೀಕರಿಸುತ್ತಿರುವಾಗ 'ರಿಚರ್ಡ್ ಬ್ಲಾಂಕೊ'  ಓದಿದ ಕವಿತೆಯನ್ನು ಕನ್ನಡೀಕರಿಸಿ ಸಂಪದೀಯರಿಗೆ ಉಣಬಡಿಸುತ್ತಿದ್ದಾರೆ, ನಮ್ಮ ಅಮೆರಿಕನ್ನಡಿಗ, ಡಾ. ಮೈ. ಶ್ರೀ. ನಟರಾಜರು.
 
ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು.ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇ ಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ.ಈ ದಿನ ಬರಾಕ್ ಒಬಾಮ ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ರಿಚರ್ಡ್ ಬ್ಲಾಂಕೋ ಓದಿದ ಕವಿತೆಯ ಕನ್ನಡ ಅನುವಾದ.ಅನುವಾದಿಸಿ 'ಕೆಂಡ ಸಂಪಿಗೆ' ಯಲ್ಲಿ ಪ್ರಕಟಿಸಿದವರು, ಡಾ.ಮೈಶ್ರೀ.ನಟರಾಜ.
 
ಡಾ. ಮೈ. ಶ್ರೀ ನಟರಾಜರ ಅನುವಾದದ ಸವಿ ಸವಿಯೋಣ ಬನ್ನಿ. ಬರಾಕ್ ಒಬಾಮ ಒಬ್ಬ ಪ್ರವರ್ತಕನಂತೆ ಅಮೇರಿಕಾದ ಜನತೆಗೆ ಸಿಕ್ಕ ಒಬ್ಬ ಕಾಲಪುರುಷ ! ಸರಿಯಾದ ಸಮಯದಲ್ಲಿ ಸರಿಯಾಗಿ ದಿಟ್ಟವಾಗಿ ಯೋಚಿಸಿ ನಿರ್ಣಯ ತೆಗೆದುಕೊಂಡು ದೇಶವನ್ನು ಮುನ್ನಡೆಸುತ್ತಿರುವ ಈ ಶಾಮಲ ವರ್ಣದ ರಾಜಕೀಯ ಪಟು ಅಮೇರಿಕಾದ ಆಪತ್ಕಾದ ಆಪದ್ಬಾಂಧವ ! ಬರಿ ಬಣ್ಣ ದೇಶ, ಭಾಷೆಗಳ ಬದಿವಾರವಿಲ್ಲದೆ ಕೇವಲ ದೇಶಪ್ರೇಮ, ಮತ್ತು ದೇಶಕ್ಕಾಗಿ ದುಡಿಯುವ ಹಂಬಲವನ್ನು ಹೊಂ ದಿರುವ ದಿಟ್ಟ ವ್ಯಕ್ತಿ ಬಿಳಿ-ಕರಿಯರೆನ್ನದೆ ಎಲ್ಲರ ಮನವನ್ನು ಗೆದ್ದ ಸವ್ಯಸಾಚಿ. ಏಕ್ ಬೇಚಾರ ಥಕ್ ಜಾಯೇಗಾ,  ಮಿಲ್ ಕರ್  ಕರೇ ಕಮಾಲ್ ! ಎನ್ನುವ ಆಶೆಯನ್ನು ಹೊಂದಿದ ಈ ಆಶಾವಾದಿಗೆ ಅಮೇರಿಕಾದ ಜನತೆಯ ಜನಬಲವಿದೆ. ಅದೇ ಅವನಿಗೆ ಶ್ರೀ ರಕ್ಷೆಯಾಗಲಿ !
 
'ಹೊಸ ತಾರಾಮಂಡಲದ ಭರವಸೆ,
ನಾವು ಗುರುತಿಸಲೆಂದು ನಿರೀಕ್ಷೆ,
 
ನಾವು ಹೆಸರಿಡಲೆಂದು ಕಾಯುವ ಪರೀಕ್ಷೆ,
ನಾವೆಲ್ಲ ಒಟ್ಟಾಗಿ ಸಾಧಿಸಲೆಂಬ ಸಮೀಕ್ಷೆ!'    
 
 
"ಒಂದು ಇಂದಿನ ದಿನ"
 
ಉದಯಿಸಿದನಿಂದು, ಒಬ್ಬ ಸೂರ್ಯ,
ತೀರಗಳ ತನ್ನ ಕಿರಣಗಳಿಂದ ಬೆಳಗುತ್ತ,
ಧೂಮ್ರ-ಪರ್ವತಗಳನನಿಣಿಕಿ ನೋಡುತ್ತ,
ಮಹಾ ಸರೋವರಗಳಿಗೆ ನಮಿಸಿ ನಗುತ್ತ,
ಮಹಾ ಬಯಲುಗಳ ಸುತ್ತೆಲ್ಲ
ಸರಳ ಸತ್ಯವನೊಂದ ಹರಡುತ್ತ,
ರಾಕೀ ಪರ್ವತ ಶಿಖರಗಳತ್ತ ಜಿಗಿಯುತ್ತ,
ಬೆಳಕನು ಹೊತ್ತು, ಮನೆಮನೆಯ
ಛಾವಣಿಗಳ ಬೆಳಗಿ ಎಲ್ಲರನು ತಟ್ಟೆಬ್ಬಿಸುತ್ತ,
ಪ್ರತಿ ಚಾವಡಿಯಡಿ ಗವಾಕ್ಷಿಗಳಲ್ಲಿ
ಕೈಸನ್ನೆಮಾತ್ರದಿಂದ ಬಿತ್ತರಿಸಲ್ಪಟ್ಟ
ಮೌನಕಥಾನಕಗಳ ಕೇಳುತ್ತ ಹೊರಟ, ಆ ಭಾನು.
 
ನನ್ನ ಮುಖ, ನಿಮ್ಮ ಮುಖ, ಕೋಟಿ ಮುಖಗಳು
ಬೆಳಗಿನ ಮುಕುರದ ಬಿಂಬಗಳು,
ಪ್ರತಿಯೊಂದು ಆಕಳಿಸುತ್ತ ಜೀವತಳೆದು
ತಂತಮ್ಮ ದಿನಚರಿಯಲ್ಲಿ ಲೀನ.
ಮಗುವಿನ ಕೈಗೊಂದು ಹಲಗೆ ಬಳಪದ ಹಡಪ,
ಹಳದಿಯ ಶಾಲೆ ಬಸ್ಸು ಓಡುವಲ್ಲೆಲ್ಲ
ಹಸಿರು-ಹಳದಿ-ಕೆಂಪು ತೋರುದೀಪಗಳು,
ಹಣ್ಣಿನಂಗಡಿ, ಸೇಬು, ಕಿತ್ತಳೆ, ನಿಂಬೆ,
ಕಾಮನಬಿಲ್ಲಿನಂತೆ ಚಿತ್ತಾರ,
ಬೇಡುತ್ತಿವೆ ನಮ್ಮ ಹೊಗಳಿಕೆಯ ಮಂದಾರ.
ಬೆಳ್ಳಿ ಟ್ರಕ್ಕುಗಳು, ಎಣ್ಣೆಯನೊ, ಹಾಲನೋ,
ಇಟ್ಟಿಗೆ-ಕಾಗದ ಮತ್ತೇನೇನೋ ಹೊತ್ತು ನಡೆದಿವೆ
ಹೆದ್ದಾರಿಗಳ ಮೇಲೆ ನಮ್ಮ ವಾಹನಗಳ ಅಕ್ಕ ಪಕ್ಕ.
ನಾವು ಹೊರಟದ್ದು ಖಾಲಿ ಮೇಜಿನೆಡೆಗೋ,
ಲೆಕ್ಕ-ಪತ್ರಗಳ ಗೋಜಿನೆಡೆಗೋ,
ಜೀವ ಉಳಿಸಲೋ, ಗಣಿತ ಕಲಿಸಲೋ,
ಅಥವಾ, ಕಿರಾಣಿ ಅಂಗಡಿಯಲ್ಲಿ ಕಾಸನೆಣಿಸಿ
ಸಾಮಾನು ತೂಗಿಸಲೋ --
ನಮ್ಮಮ್ಮ ಇಪ್ಪತ್ತು ವರ್ಷ ಮಾಡಿದಂತೆ --
ಅವಳು ಮಾಡಿದ್ದರಿಂದಲೇ ತಾನೆ,
ನಾನು ಈ ಕವನ ಬರೆಯುವಂತಾದ್ದು?
 
ಜೀವತುಂಬಿದ ಮುಖ್ಯರು ನಾವೆಲ್ಲ
ಸಾಗುವುದೂ ಆ ಒಂದೇ ಬೆಳಕನು ಸೀಳಿ,
ಶಾಲೆಯಲಿ ಇಂದಿನ ಪಾಠವ ಬರೆದ
ಆ ಕಪ್ಪುಹಲಗೆಯ ಮೇಲೆ ಬಿದ್ದ ಬೆಳಕೂ ಅದೇ;
ಸಮೀಕರಣಗಳ ಬಿಡಿಸಲು, ಇತಿಹಾಸವನು ಪ್ರಶ್ನಿಸಲು,
ಪರಮಾಣುವನು ಊಹಿಸಿಕೊಳ್ಳಲು.
"ನನಗೊಂದು ಕನಸಿಹುದು" ಎಂಬಂಥ ಕನಸುಗಳ ಕಾಣುತ್ತ,
ಶಬ್ದಕೆಟುಕದ ದುಃಖವನು ಅನುಭವಿಸಲು.
ಆ ಇಪ್ಪತ್ತು ಮಕ್ಕಳು ಕುಳಿತಿರುತ್ತಿದ್ದ
ಖಾಲಿ ಬೆಂಚುಗಳ ವರ್ಣಿಸಲು ಎಲ್ಲಿದೆ ಶಬ್ದ?
ಅವರಿಲ್ಲ ಇಂದು, ಇನ್ನೆಂದು,
ಟೀಚರ್ ಕರೆದಾಗ ಅವರ ದನಿಯಿಲ್ಲ.
ಪ್ರಾರ್ಥನೆಯನು ಬಿಟ್ಟೇನೂ ಮಿಕ್ಕಿಲ್ಲ.
ಆದರೆ, ಆ ಒಂದು ಬೆಳಕು, --ಇಗರ್ಜಿಯಲ್ಲಿ --
ಬಣ್ಣ ಮೆತ್ತಿದ ಗಾಜಿನ ಕಿಟಕಿಗಳಲಿ
ರಂಗೇರಿ ಉಸಿರಾಡುತಿತ್ತು,
ವಸ್ತುಸಂಗ್ರಹಾಲಗಳಲಿ ಪ್ರತಿಮೆಗಳ
ಕಂಚಿನ ಮುಖದಲ್ಲಿ ಜೀವವನೆ ತರಿಸಿತ್ತು,
ಮೆಟ್ಟಲುಗಳಿಗೆ ಬಿಸಿಯ ತಟ್ಟಿಸಿ
ಉದ್ಯಾನಗಳ ಪೀಠಗಳಿಗೆ ಶಾಖ ಕೊಟ್ಟಿತ್ತು,
ತಾಯಂದಿರು ಜಾರುಬಂಡೆಯಲಿ ಆಡುವ ಮಕ್ಕಳ
ದಿವಸದ ಹೊಟ್ಟೆಯಲಿ ಜಾರಲು ಬಿಟ್ಟಾಗ.
 
ನೆಲದ ಮೇಲೆ, ನಮ್ಮ ನೆಲದ ಮೇಲೆ,
ನೇತಾಡುವ ಜೋಳ, ಅದ ಹೊತ್ತಿಹ ಕಾಂಡ,
ಅದನು ನೆಲಕೆ ಕಚ್ಚಿಸಿದ ಬೇರು,
ಬೆವರಲಿ ನೆನೆಸಿದ ಬೀಜವ ನೆಟ್ಟಿಹ
ಕೈಗಳ ಶ್ರಮವೆಲ್ಲ ತೆನೆತೆನೆಗಳಲ್ಲಿ.
ನಮ್ಮನು ಬೆಚ್ಚಗೆ ಇಟ್ಟಿಹ ಇದ್ದಿಲ ಗಣಿಯಲಿ
ಅಗೆಯುವ ಕಲಿಗಳ ಸಾಲು,
ಮರಳನು ಮೆಟ್ಟುತ ಗುಡ್ಡವ ಹತ್ತುತ
ಗಾಳಿಯ ಯಂತ್ರವ ನೆಟ್ಟಿಹ ಕಲಿಗಳ ಗೋಳು,
ಕೊಳವೆಯ ಹಾಸುತ, ತಂತಿಯ ಹೂಳುತ
ದುಡಿಯುವ ಮೈಗಳ ಪಾಡು,
ಗದ್ದೆಯ ಕೆಸರಲಿ ಈಜುತ ಸಾಗುತ
ಕಬ್ಬನು ಕುಯ್ಯುತ ಸವೆದಂತೆ, ನಮ್ಮಪ್ಪ --
ನನಗೂ ನನ್ನಣ್ಣನಿಗೂ ಪುಸ್ತಕ
ಚಪ್ಪಲಿ ಕೊಳ್ಳಲು ಸಾಧ್ಯವಾಗಲೆಂದು.
 
ಮರುಭೂಮಿಯ ಮರಳು, ಹೊಲಗಳ ಧೂಳು, ನಗರ,
ಬಯಲು ಎಲ್ಲವು ಮಿಂದಿದೆ ಒಂದೇ ವಾಯುವಿನಿಂದ,
ಅದೆ ನಮ್ಮಯ ಉಸಿರು, ಉಸಿರಾಡುವ ನಾವು.
ಕಾರಿನ ಹಾರನ್ ಸದ್ದಲು ಅಡಗಿದೆ ವಾಯು,
ರಸ್ತೆಯ ನಡುವೆ ಹಾಯುವ ಬಸ್ಸಿನಲಿ,
ಮೆಟ್ಟಿಲನೇರುವ ತಾಳದ ದನಿಯಲ್ಲಿ,
ಗಿಟಾರಿನ ಕಂಪನದಲ್ಲಿ, ಗಜಿಬಿಜಿ ಸದ್ದಿನ ರಸ್ತೆಯಲಿ,
ಒಣಗುವ ಬಟ್ಟೆಯ ಹಗ್ಗದ ಮೇಲಿನ
ಅನಿರೀಕ್ಷಿತ ಹಕ್ಕಿಯ ಸದ್ದಿನಲ್ಲಿ,
ಅಡಗಿದೆ ಅದೆ ವಾಯು.
 
ಮಕ್ಕಳ ಜೋಕಾಲಿಯ ಕೀಯ್-ಕೀಯ್,
ಚೂ-ಚೂ-ರೈಲಿನ ಕೂ-ಕೂ, ಕೇಳಿ:
ಉಪಾಹಾರಗೃಹಗಳ ಗುಜು-ಗುಜು, ಕೇಳಿ
ನಗುತ ಬಾಗಿಲ ತೆಗೆದು ಸ್ವಾಗತಿಸುತ,
ದಿನವಿಡೀ ಪರಸ್ಪರ ನಾವಾಡಿದ
"ಹೆಲೊ, ಶಲೋಂ, ಬೋನ್-ಜೋರ್ನೋ, ಹೌಡಿ, ನಮಸ್ತೆ,"
ಅಥವಾ,  ನಮ್ಮಮ್ಮ ಕಲಿಸಿದ ನುಡಿಯಲ್ಲಿ,
"ಬ್ಯೂನೋಸ್ ಡಿಯಾಸ್" ನಾನಾ ನಾಡಿನ ನುಡಿಗಳಲಿ,
ಆ ಒಂದೇ ಗಾಳಿಯಲ್ಲಿ ತೇಲಿಬಿಟ್ಟ
ಮಾತುಗಳು ಬಿಮ್ಮಿಲ್ಲದೇ ಓಡಿ,
ಥಟ್ಟನೆ ತುಟಿಯ ಮೀರಿ ಹಾರಿ
ನಮ್ಮ ಬಾಳಲಿ ಮಾಡಿದ ಮೋಡಿ.
 
ಒಂದೇ ಬಾನು
ಅಪಲೇಶಿಯನ್ ಮತ್ತು ಸಿಯರಾ ಶ್ರೇಣಿಗಳು
ತಮ್ಮ ಭವ್ಯತೆಯ ಕಂಡಾಗಿನಿಂದ,
ಮಿಸಿಸಿಪ್ಪಿ ಮತ್ತು ಕೊಲರೆಡೂ ಹರಿದು
ಕಡಲ ಸೇರಿದಂದಿನಿಂದ,
ನಮ್ಮ ಕೈಗಳ ಚಳಕಕೆ ನಮೋ ಎನ್ನಿ.
ಸೇತುವೆಗಳಿಗೆ ಉಕ್ಕನು ನೇಯ್ದು,
ಬಾಸ್ ಕೊಟ್ಟ ಮತ್ತೊಂದು ವರದಿಯ
ವೇಳೆಗೆ ಮುನ್ನ ಬರೆದು ಮುಗಿಸಿ,
ಮತ್ತೊಂದು ಗಾಯವ ಹೊಲಿದು,
ಮತ್ತೊಂದು ಸಮವಸ್ತ್ರವ ಜೋಡಿಸಿ,
ತೈಲಚಿತ್ರವೊಂದಕೆ ಮೊದಲ ಕುಂಚವನಾಡಿಸಿ,
ಸ್ವಾತಂತ್ರ್ಯ ಗೋಪುರಕೆ ಕೊನೆಯ ಮಹಡಿಯನೇರಿಸಿ,
ಬಡಿತಕೆ ಬಗ್ಗದೆ, ಹೊಡೆತಕೆ ತಗ್ಗದೆ, ಜಿಗಿದ ಆ ಬಾನು.
 
ಒಮ್ಮೊಮ್ಮೆ ದುಡಿದುಡಿದು ದಣಿದು,
ಮೇಲೆ ಮುಖಮಾಡಿ ನೋಡುವ ಆ ಒಂದೇ ಬಾನು,
ಕೆಲವೊಮ್ಮೆ, ಬಾಳಿನ ಹವಾಗುಣವನೂಹಿಸಿ,
ಕೆಲವೊಮ್ಮೆ, ಇತರರು ನಮ್ಮ ಪ್ರೀತಿಗೆ
ತಕ್ಕ ಪ್ರೀತಿಯ ತೋರಿದ್ದಕ್ಕೆ ಧನ್ಯರಾಗಿ,
ಕೊಡುವ ತಾಯಿಗೆ ಕೆಲವೊಮ್ಮೆ ಕೈಮುಗಿದು,
ಅಥವಾ, ಕೇಳಿದ್ದನ್ನು ಕೊಡಿಸದಿದ್ದ
ತಂದೆಯ ಕ್ಷಮಿಸುವಂದು ಕಂಡ ಆ ಬಾನು.
 
ಇಗೋ, ಮನೆಯತ್ತ ಹೊರಟೆವು, ನಾವು.
ಮಳೆಯಲಿ ನೆನೆಯುತ, ಹಿಮಭಾರಕೆ ಬಾಗುತ,
ಧೂಳಲಿ ಮೀಯುತ, ಅಂತೂ ಮನೆಯತ್ತ,
ಎಂದೆಂದೂ, ಆ ಒಂದೇ ಬಾನಿನ ಅಡಿಯಲ್ಲಿ,
ನಮ್ಮದೇ ಬಾನಿನ ಅಡಿಯಲ್ಲಿ.
ಅಲ್ಲಿ, ಎಂದೆಂದೂ ಒಂದೇ ಚಂದ್ರಮ,
ಪ್ರತಿ ಹಂಚಿನ ಮೇಲೂ ಯಾರಿಗೂ ಕೇಳಿಸದಂತೆ
ಡಂಗುರ ಬಾರಿಸದ ತಮಟೆ.
ಪ್ರತಿ ಕಿಟಕಿಯಲ್ಲೂ ಕಾಣುವ,
ಒಂದೇ ನಾಡಿನ, ನಮ್ಮೆಲ್ಲರ ನಾಡಿನ,
ನಮ್ಮೆಲ್ಲರ, ತಾರೆಗಳ ವಲ್ಲಭನವನು
ಭರವಸೆ --ಹೊಸ ತಾರಾಮಂಡಲದ ಭರವಸೆ,
ನಾವು ಗುರುತಿಸಲೆಂದು ನಿರೀಕ್ಷೆ,
ನಾವು ಹೆಸರಿಡಲೆಂದು ಕಾಯುವ ಪರೀಕ್ಷೆ,
ನಾವೆಲ್ಲ ಒಟ್ಟಾಗಿ ಸಾಧಿಸಲೆಂಬ ಸಮೀಕ್ಷೆ!    
 

Comments