ಒಂದು ಒಳ್ಳೆಯ ನುಡಿ - ೨೪೧

ಒಂದು ಒಳ್ಳೆಯ ನುಡಿ - ೨೪೧

ಹೇ ದುರ್ಗಾದೇವಿ, ಪ್ರಕೃತಿ ಸ್ವರೂಪಿಣಿ, ಶೈಲಪುತ್ರಿ, ಜಗದ ಜೀವರಾಶಿಗಳನ್ನೆಲ್ಲ ಸಂಕಷ್ಟದಿಂದ ಪಾರುಮಾಡು. ನಿನ್ನ ಮಕ್ಕಳು ಅರಿತೋ, ಅರಿಯದೆಯೋ ಎಸಗಿದ ತಪ್ಪನ್ನು ಕ್ಷಮಿಸು. ಕಾಲಕಾಲಕ್ಕೆ ಮಳೆ ಸುರಿಸು. ನಿನ್ನ ಮಕ್ಕಳೆಲ್ಲ ಸನ್ನಡತೆಯಿಂದ ಒಳ್ಳೆಯ ಜೀವನ ಮಾಡುವಂತೆ ನೋಡಿಕೊ ತಾಯೇ. ತನುವಿನಲ್ಲಿ ಆದರ್ಶ ಗುಣಗಳನ್ನೇ ಬಿತ್ತಮ್ಮ. ಅರಿಷಡ್ವರ್ಗಗಳನ್ನು ದೂರಮಾಡು. ಪ್ರಕೃತಿ ಮಾತೆಯೇ ಎಲ್ಲರ ಹಸಿವು ನೀಗಿಸುವ ದಾರಿಯನ್ನು ತೋರಿಸು. ಉತ್ತಮ ಬದುಕನ್ನು ನೀಡಿ ಸದಾಕಾಲ ರಕ್ಷಿಸು ಹೇ ಜಗನ್ಮಾತೆ, ಅಂಬಾಭವಾನಿ, ಶಂಕರಿ, ಪಾರ್ವತಿ, ಪರಮೇಶ್ವರಿ, ಕಾತ್ಯಾಯಿನಿ, ಶಾಂಭವಿ, ಶ್ರೀರಾಜರಾಜೇಶ್ವರಿ, ಭೈರವಿ, ಭಗವತಿ, ತ್ರಿಲೋಚನೆ, ಪರಮೇಶಪ್ರಿಯಳೇ, ಕದಂಬವನವಾಸಿನಿಯೇ ನಮೋ ನಮ:

***

ಶಕ್ತಿ ದೇವತೆ ದುರ್ಗಾ ಮಾತೆಯ ೨ ನೇ ಅವತಾರ ಬ್ರಹ್ಮಚಾರಿಣೀ, ತಪಶ್ಚಾರಿಣೀ ದೇವಿ. ಕಠಿಣತೆ ಹಾಗೂ ಸೌಮ್ಯತೆ ಎರಡನ್ನೂ ಸಹಿಸುವ ಶಕ್ತಿ ದಯಪಾಲಿಸುವ ಮಾತೆ. ಬ್ರಹ್ಮಚಾರಿಣಿ ಎಂದರೆ ಸುಲಭದ ಮಾತಲ್ಲ, ಕಠಿಣ ತಪಸ್ಸಿನಂತೆ ಅದು. ತಪಸ್ಸಿನ ಹಿಂದೆ ಒಂದು ಯೋಚನೆಯಿರುತ್ತದೆ. ಯಾವುದನ್ನೋ ಸಾಧಿಸಲು ತಪಸ್ಸು ಮಾಡುವುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಹಾಗೆಯೇ ಶಕ್ತಿಸ್ವರೂಪಿಣಿ ತಾಯಿ ಇಲ್ಲಿ ಶಿವನನ್ನು ಒಲಿಸಿಕೊಳ್ಳಲು, ಲೋಕಕ್ಷೇಮಕ್ಕಾಗಿ ಮಹಾತಪಸ್ಸನ್ನು ಕೈಗೊಂಡಳಂತೆ. ಎದುರಾದ ಎಲ್ಲಾ ಅಡೆತಡೆಗಳನ್ನು ದಾಟಿ ಜಯ ಸಾಧಿಸಿದಳೆಂದು ಉಲ್ಲೇಖವಿದೆ. ಆಕೆ ಯುವತಿಯಾಗಿ, ಶ್ವೇತವಸ್ತ್ರಧಾರಿಣಿಯಾಗಿ ನಾರದರ ಉಪದೇಶದಂತೆ ತಪಸ್ಸು ಮಾಡಿದ ಕಾರಣ ತಪಶ್ಚಾರಿಣೀ ದೇವಿಯಾಗಿ, ಹೂವು ಎಲೆ ಮಾತ್ರ ಸೇವಿಸಿದ ಕಾರಣ ಅಪರ್ಣಾ ಎಂದೂ ಕರೆಯಲ್ಪಟ್ಟಳು. ದೇವಿಯ ಶಾಂತತೆ, ಅಪಾರ ಜ್ಞಾನ, ಅಖಂಡತೆ ಶಿವನನ್ನು ಒಲಿಯುವಂತೆ ಮಾಡಿತು. ನಮಗೂ ಸಹ ಬದುಕಿನ ಹಾದಿಯಲ್ಲಿ ಎದುರಾಗುವ ಕಾಠಿಣ್ಯವನ್ನು ಎದುರಿಸುವ ಶಕ್ತಿ ಮತ್ತು ಯುಕ್ತಿಯನ್ನು, ತಾಳ್ಮೆ, ಸಂಯಮವನ್ನು ಆ ಮಹಾಮಾತೆ ನೀಡಿ ಅನುಗ್ರಹಿಸಲಿ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ