ಒಂದು ಒಳ್ಳೆಯ ನುಡಿ (೨೯) - ಸುವಿಚಾರ

ಒಂದು ಒಳ್ಳೆಯ ನುಡಿ (೨೯) - ಸುವಿಚಾರ

ಸತ್ಯ ಮತ್ತು ಸುಳ್ಳುಗಳ. ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯ ಹೇಳುವವ ಸತ್ತೇ ಹೋದ ಎಂಬ ಮಾತೂ ಇದೆ. ಸುಳ್ಳು ಹೇಳುವವ ನೂರ್ಕಾಲ ಬದುಕಿದ ಎನ್ನುತ್ತಾರೆ. ನಮ್ಮ ಕಣ್ಣಿಗೆ ಅವ ನೂರ್ಕಾಲ ಬದುಕಿದ ಹಾಗೆ ಗೋಚರಿಸಬಹುದು. ಆದರೆ ಅದೂ ಒಂದು ಬದುಕಾ? ಒಮ್ಮೆಗೆ ಆತ ಬಚಾವಾಗಬಹುದು. ಆದರೆ ಇಡೀ ಸಮಾಜ ಅವನನ್ನು ವ್ಯಂಗ್ಯವಾಗಿ ನೋಡುತ್ತದೆ. ಎಲ್ಲಿ ಹೋದರೂ ಅವನತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಹಾಗಿದ್ದ ಬಾಳು ಯಾಕೆ? ಸತ್ಯ ಹೇಳಿ ಒಮ್ಮೆ ಸೋತರೂ, ನಂತರದಲ್ಲಿ ಗೆಲ್ಲಬಹುದು. ಸತ್ಯಕ್ಕೆ ಜಯ ಇದ್ದೇ ಇದೆ. ಅನಿವಾರ್ಯವಾದರೆ ಮಾತ್ರ, ದೇವರಲ್ಲಿ ಕ್ಷಮೆ ಕೇಳಿ ಸುಳ್ಳನ್ನು ಹೇಳಬೇಕು ಹೊರತು ಸುಮ್ಮ ಸುಮ್ಮನೆ ಹೇಳಬಾರದು.

ತಪ್ಪು ಮಾಡಿದಾಗ ಬೇರೆಯವರು ಅದನ್ನು ಕಂಡು ಹಿಡಿಯುವಲ್ಲಿವರೆಗೆ ನಾವು ಕಾಯಬಾರದು. ಸಾಧ್ಯವಾದರೆ ಸರಿಪಡಿಸೋಣ. ತಪ್ಪು ಮಾಡಿಯೂ ಒಪ್ಪದ ಉದ್ಧಟತನವೇಕೆ? ಇದನ್ನೇ *ಅಹಂ*ಎನ್ನುವುದು. ಅಹಂ ತೋರಿಸ ಬೇಕಾದವರಲ್ಲಿ ತೋರಿಸುವ ಎಲ್ಲರಲ್ಲೂ ಬೇಡ. ಒಬ್ಬ ಎಸಗಿದ ತಪ್ಪಿನಲ್ಲಿ ಚಿಕ್ಕದು ದೊಡ್ಡದು ಎಂಬ ಪ್ರಶ್ನೆ ಇಲ್ಲ .*ಆನೆ ಕದ್ದರೂ ಕಳ್ಳ,ಅಡಿಕೆ ಕದ್ದರೂ ಕಳ್ಳನೇ*.ತಪ್ಪು ತಪ್ಪೇ. ತಪ್ಪಿಗೆ ನಾವೆಂದೂ ಪ್ರೋತ್ಸಾಹ ಕೊಡಲೇಬಾರದು.

ಸತ್ಯ ಸುಳ್ಳುಗಳಂತೆ, ಸರಿ ತಪ್ಪುಗಳು ಸಹ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ನಾವು ಏನೇ ಮಾಡೋಣ, ಇತರರಿಗೆ ನೋವು, ಬೇಸರ, ಜಿಗುಪ್ಸೆ ಉಂಟಾಗದ ಹಾಗೆ ವ್ಯವಹರಿಸೋಣ. ಉತ್ತಮ ರೀತಿಯ ನಡವಳಿಕೆಗೆ ಹಣ ಕೊಡುವುದು ಬೇಡ. ನಮ್ಮಲ್ಲೇ ಅದು ಅಡಕವಾಗಿದ್ದರೆ ಸಾಕಲ್ಲವೇ?

-ರತ್ನಾ ಕೆ.ಭಟ್ ತಲಂಜೇರಿ

(ಸಂಗ್ರಹ)