ಒಂದು ಒಳ್ಳೆಯ ನುಡಿ (೩೦) - ಸುವಿಚಾರ

ಒಂದು ಒಳ್ಳೆಯ ನುಡಿ (೩೦) - ಸುವಿಚಾರ

ಯಾರ ಮನಸ್ಸು ನಿರ್ಮಲವಾಗಿ, ಪವಿತ್ರವಾಗಿ, ಶುದ್ಧವಾಗಿರುವುದೋ ಅಂತಹ ಮನುಷ್ಯನ ಆಲೋಚನೆಗಳು, ಕೆಲಸಗಳು, ನಿರ್ಮಲವಾಗಿ, ಉತ್ಕೃಷ್ಟವಾಗಿ, ಉಪಯುಕ್ತವಾಗಿ, ಸಾರ್ಥಕವಾಗಿರುತ್ತದೆ. ಧರ್ಮ ಬದ್ಧ ಜೀವನ ಅವನದಾಗಿರುತ್ತದೆ. ಆತ ಯಾವಾಗಲೂ ಸಂಕೋಚ ಪ್ರವೃತ್ತಿಯವನಾಗಿರುತ್ತಾನೆ. ಇದ್ದುದರಲ್ಲಿಯೇ ತೃಪ್ತಿ ಯನ್ನು ಕಾಣುತ್ತಾನೆ. ಬೇರೆಯವರ ಬಗ್ಗೆ ಅನುಕಂಪ ಉಳ್ಳವನಾಗಿರುತ್ತಾನೆ.

ಯಾವಾಗ ನಮ್ಮ ಮನಸ್ಸಿಗೆ ಚಪಲ, ವಾಂಛೆ, ಆಕಾಂಕ್ಷೆ, ಪ್ರವೇಶ ಆಯಿತೋ ಅವತ್ತಿನಿಂದ ನಾವು ಪಾಪಗಳನ್ನು ಮಲಿನತ್ವವನ್ನು ಬೆನ್ನಿಗೆ ಕಟ್ಟಿಕೊಳ್ಳುವುದು ಸತ್ಯ. ಇಂತಹವನು ಬಹುಬೇಗ ಪತನದ ಹಾದಿಯತ್ತ ಜಾರುತ್ತಾನೆ.

ಮುಂದೆ ಸರ್ವನಾಶ ಹೊಂದುವನು.

ನಿಷ್ಕಾಮ ಕರ್ಮದಿಂದ ಮನಸ್ಸು ನಿರಾಳವಾಗಿ,ಸಂತೃಪ್ತಿಯನ್ನು ಹೊಂದುವುದು.ನಾವು ಆದಷ್ಟೂ ಉತ್ತಮರಾಗಿ,ನಾಲ್ಕು ಜನರಿಗೆ ಬೇಕಾದವರಾಗಿ ಬಾಳಿ ಬದುಕೋಣ.

*

ನಾವು ನಮ್ಮ ಬಾಳಿನ ದಾರಿಯನ್ನು ಕ್ರಮಿಸುತ್ತಾ ಹೋದಂತೆ ಅನುಭವಗಳ ಸಾರವನ್ನು ಉಣ್ಣುತ್ತಾ ಹೋಗುತ್ತೇವೆ.ಇದನ್ನೇ ಜೀವನಾನುಭವ ಎನ್ನುವುದು. ದ್ವೇಷ ಎನ್ನುವುದು ಕ್ಷಣಮಾತ್ರದಲ್ಲಿ ನಮ್ಮ ದೇಹವನ್ನು ಆವರಿಸಿಬಿಡುತ್ತದೆ. ಆದರೆ ಪ್ರೀತಿ ಸ್ವಲ್ಪ ಆಲೋಚಿಸಿ ಮತ್ತೆ ಬರುವುದು.ಯಾವಾಗ ದ್ವೇಷವನ್ನು ಸ್ವೀಕರಿಸುತ್ತೇವೋ ಹಾಗೆ ಉತ್ತಮ ಅನಿಸಿದ ಒಳ್ಳೆಯ ತನವನ್ನು ಯಾಕೆ ಸ್ವೀಕರಿಸಬಾರದು? ಜೀವನದ ಕೊನೇಕ್ಷಣದವರೆಗೂ ಕಾಯುವ ಅಗತ್ಯವಿಲ್ಲ.

-ರತ್ನಾ ಕೆ.ಭಟ್, ತಲಂಜೇರಿ