ಒಂದು ಒಳ್ಳೆಯ ನುಡಿ (೩೧) - ಸುವಿಚಾರಗಳು

ಒಂದು ಒಳ್ಳೆಯ ನುಡಿ (೩೧) - ಸುವಿಚಾರಗಳು

ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಅದು ಅತೀತವಾದುದು. ನಾಶರಹಿತವಾದುದು ಮತ್ತು ಶಾಶ್ವತವಾದುದು. ಹೇಗೆ ಮನುಷ್ಯನು ಹಳೆಯ ಬಟ್ಟೆಯನ್ನು ಬೇಡವೆಂದು ನಿರಾಕರಿಸಿ, ಹೊಸವಸ್ತ್ರಗಳನ್ನು ಧರಿಸುವನೋ ಹಾಗೆ ಈ ಆತ್ಮ ಎಂಬುದು. ಆತ್ಮ ಎನ್ನುವುದು ನಿತ್ಯ, ಸತ್ಯ, ಅಚಲ, ಅಖಂಡ, ಶಾಶ್ವತ, ಅವಿನಾಶಿಯಾದುದು. ಬುದ್ಧಿ ಮನಸುಗಳಿಗೆ ನಿಲುಕದ್ದು. ರೋಗ, ಹಸಿವು, ಬಾಯಾರಿಕೆ, ಮುದಿತನ ಯಾವುದಕ್ಕೂ ಬಾಗದ್ದು, ತುತ್ತಾಗದೆ ಇರುವುದು ಆತ್ಮ.

ಸಾವು ಎಂಬುದು ದೇಹಕ್ಕೆ ಹೊರತು ಆತ್ಮಕ್ಕಲ್ಲ. ಅರಿಷಡ್ವರ್ಗಗಳ ದಾಸನಾಗುವುದು ನಮ್ಮ ಮನಸ್ಸು ಹೊರತು ಆತ್ಮವಲ್ಲ. ಅಂತರಾತ್ಮ ಹೇಳಿದ ಹಾಗೆ ಮಾಡಿದೆ ಹೇಳುವುದು ಕೇಳಿದ್ದೇವೆ. ಇಲ್ಲಿ ಅಂತರಾತ್ಮ ಎನ್ನುವುದು ಒಳಮನಸ್ಸು. ಆತ್ಮ ಎನ್ನುವುದು ಯಾವುದರ ಮೇಲೂ ಆಧರಿಸಿಲ್ಲ. ನಾವು ಹೇಳ್ತೇವೆ ನೀರಿಗೆ ಬಣ್ಣವಿಲ್ಲ, ವಾಸನೆಯಿಲ್ಲ, ರುಚಿಯಿಲ್ಲ, ಹಾಗೆಯೇ ಆತ್ಮ ಸಹ, ಯಾವುದೂ ಇಲ್ಲದ್ದಾಗಿದೆ.

***

ಧರ್ಮಃ ಕ್ಷರತಿ ಕೀರ್ತನಾತ್ ಪಾಪಂ ಪ್ರಕಾಶನೀಯಂ, ಧರ್ಮಸ್ತು ಗೋಪನೀಯಃ/

ನಾವು ಯಾವತ್ತೂ ನಮ್ಮಿಂದ ಏನಾದರೂ ತಪ್ಪು ನಡೆದಿದೆ ಎಂದು ಗೊತ್ತಾದರೆ, ಸುಮ್ಮನೆ ಕುಳಿತುಕೊಳ್ಳಬಾರದು. ಮಾಡಿದ ತಪ್ಪಿಗೆ ಕ್ಷಮೆ ಕೇಳುವುದರಿಂದ ನಾವು ಸಣ್ಣವರಾಗಲಾರೆವು. ನಾವು ಏನೋ ಒಂದು ಒಳ್ಳೆಯ ಕೆಲಸ ಮಾಡಿದೆವು ಎಂದಾದರೆ, ಅದು ನ್ಯಾಯಯುತವಾಗಿ ಧರ್ಮ ಕಾರ್ಯ ಆಗಿದ್ದಲ್ಲಿ, ಅದನ್ನು ಎಲ್ಲರ ಹತ್ತಿರವೂ ಹೇಳಿಕೊಂಡು ಬರಬಾರದು. ಇದರಿಂದ ಪುಣ್ಯ ಸಂಪಾದನೆ ಕಡಿಮೆ ಆಗುತ್ತದೆ.

ನಾವು ಮಾಡಿದ ಪಾಪಕರ್ಮಗಳು ನಮ್ಮ ಬೆನ್ನಹಿಂದೆಯೇ ಬರುವುದು ನಿಶ್ಚಿತ. ಪಾಪದ ದುಷ್ಪರಿಣಾಮವನ್ನು ಅನುಭವಿಸಲೇ ಬೇಕು. ಅನ್ಯರ ಆಶ್ರಯ ಪಡೆಯದೆ ಸ್ವಧರ್ಮಾಚರಣೆಯನ್ನು ಮಾಡಬೇಕು.

ನಾವು ಏನೇ ಮಾಡಿದರೂ ಮೇಲೊಬ್ಬ ಅದನ್ನು ಗಮನಿಸುತ್ತಾನೆಂಬ ಪ್ರಜ್ಞೆ ಇದ್ದರೆ ಸಾಕು. ನಮ್ಮಲ್ಲಿ ಹಿರಿಯರು ಇದ್ದರೆ ಮಾಡಿದ ತಪ್ಪನ್ನು ಅವರ ಹತ್ತಿರ ಹೇಳಿ ಪಶ್ಚಾತ್ತಾಪ ಪಡುವುದು ಒಳ್ಳೆಯದು. ಸದಾಚಾರವೇ ನಮ್ಮ ಜೀವನದ ಮೂಲಮಂತ್ರವಾಗಬೇಕು.

(ಆಧಾರ:ಮಹಾಭಾರತ ಚಿಂತನ)

-ರತ್ನಾ ಕೆ.ಭಟ್, ತಲಂಜೇರಿ.

ಚಿತ್ರ: ಇಂಟರ್ನೆಟ್ ತಾಣ