ಒಂದು ಒಳ್ಳೆಯ ನುಡಿ (೩೨) -ಸುವಿಚಾರ
*ಮನುಷ್ಯತ್ವಂ ಹಿ ದುರ್ಲಭಮ್* ಜೀವಿಗಳಲ್ಲಿ ಈ ಮಾನವ ಜನ್ಮ ಎಂಬುದು ದೊಡ್ಡದು. ಅತ್ಯಂತ ಪುಣ್ಯ ಕೆಲಸಗಳಿಂದ ಮನುಷ್ಯ ಜನ್ಮ ಸಿಗುವುದಂತೆ. ಸಿಕ್ಕಿದ ಮೇಲೆ ನಾವು ಹೇಗಿರಬೇಕು? ನಾವೇ ಆಲೋಚಿಸಬೇಕಲ್ಲವೇ? ಧರ್ಮಾಚರಣೆ ಇರಲೇಬೇಕು. ಮನುಷ್ಯತ್ಯ ನಡೆನುಡಿಯಲಿರಲೇ ಬೇಕು. ಆದರೆ ನಾವು ಹಾಗಿದ್ದೇವೆ ಎಂದು ನೂರಕ್ಕೆ ನೂರು ಹೇಳಲು ಸಾಧ್ಯವೇ?
ಧರ್ಮವನ್ನು ಆಚರಿಸುವವನು, ಸತ್ಯವಂತನಾಗಿರುವವನು, ದೇವರಲ್ಲಿ ಭಯಭಕ್ತಿ ಇರುವವನು, ಇತರರನ್ನು ತನ್ನಂತೆಯೇ ಎಂದು ತಿಳಿಯುವವನು, ನೈತಿಕತೆಯ ಅರ್ಥವನ್ನು ಅರಿತು ಬಾಳುವವನು, ಗುರುಹಿರಿಯರನ್ನು ಗೌರವಿಸುವವನು ಸರ್ವಕಾಲಕ್ಕೂ ಮಾನ್ಯನು.
ಯಾರು ಎಷ್ಟೇ ಕಿರುಕುಳ ಕೊಟ್ಟರೂ ತನ್ನ ಪಾಡಿಗೆ ತಾನಿದ್ದರೂ, ಕಾಲು ಕೆದರಿ ಬರುವ ಒಂದು ವರ್ಗ ಸಮಾಜದಲ್ಲಿದೆ. ಒಬ್ಬರು ಅವರಷ್ಟಕ್ಕೇ ಇದ್ದರೂ ಅವರು ಸಹಿಸುವುದಿಲ್ಲ. ಅವರಿಗೆ ಅದೇ ಒಂದು ಉದ್ಯೋಗ. ಸ್ಥಿತಪ್ರಜ್ಞನಾದವ *ತಾವರೆ ಎಲೆಯ ಮೇಲೆ ಬಿದ್ದ ಹನಿಗಳಂತೆ* ಇರುವನು. ಈ ಮನೋಭಾವದವರಿಂದ, ಸುಮ್ಮನೆ ಮೇಲೆ ಬಿದ್ದು ಬರುವವರಿಂದ ದೂರವಿರುವುದೇ ಲೇಸು.
*ಸುಗಂಧ* ದ್ರವ್ಯದಂತೆ ನಾವು ಪಸರಿಸಲು ರೂಢಿಸಿಕೊಳ್ಳೋಣ. ಗಂಧ ಚಂದನಾದಿಗಳು ತಾವು ಕೃಶವಾಗಿ, ಇತರರಿಗೆ ಶುದ್ಧತೆಯನ್ನು, ಸೌಗಂಧವನ್ನು, ಆರೋಗ್ಯವನ್ನು ನೀಡುವುದು. ಅದರಂತೆ ನಾವು ಬಾಳಲು ಪ್ರಯತ್ನಿಸೋಣ.ಇಲ್ಲಿ ಕೃಶವಾಗಿ ಅಂದರೆ ಅರೆದಂತೆ ಕಡಿಮೆಯಾಗುವುದು ಎಂಬ ಭಾವನೆ. ನಾಲ್ಕು ಜನರಿಗೆ ಉಪಕಾರವಾಗಲಿ ಎಂದರ್ಥ. ಸಚ್ಛಾರಿತ್ರದ ಬದುಕು ನಮ್ಮದಾಗಲಿ. ಮನುಷ್ಯ ಮನುಷ್ಯನಾಗಿ ಬಾಳಲು ಪ್ರಯತ್ನಿಸೋಣ. ಸದಾಚಾರಗಳು ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಬಿಂಬಗಳು.ಇದಕ್ಕೆ ಜಾತಿ, ಮತ, ಧರ್ಮ, ಬಡವ, ಬಲ್ಲಿದ ಎಂಬ ಭೇದಗಳಿಲ್ಲ. ಕೇವಲ ಮನುಷ್ಯ ಜಾತಿ ಮಾತ್ರ. ಸದಾಚಾರ ಎಂಬುದು ಮಾನವನ ಪಾಪಕರ್ಮಗಳನ್ನು ನಾಶಮಾಡುತ್ತದೆ. ಪ್ರಾಣಿದಯೆ ಸದಾ ಇರಲಿ.
-ರತ್ನಾ ಕೆ ಭಟ್, ತಲಂಜೇರಿ
(ಸಂಗ್ರಹ)