ಒಂದು ಒಳ್ಳೆಯ ನುಡಿ - 100

ಒಂದು ಒಳ್ಳೆಯ ನುಡಿ - 100

ಕೆಲವು ಜನರಿಗೆ ತಾವು ತುಂಬಾ ಓದಿದವರೆಂಬ ಅಹಂ ಇರುವುದನ್ನು ಸಮಾಜದಲ್ಲಿ ಕಾಣುತ್ತೇವೆ. ಅವರ ಹತ್ತಿರ ಮಾತನಾಡಿ ಗೆಲ್ಲಲು ಕಷ್ಟವಿದೆ. ತಾವು ಓದಿದ್ದೇ ಸರಿ, ಬರೆದದ್ದೇ ಸರಿ ಎಂಬ ವಾದವಿದೆ. ಇತರರ ಮಾತನ್ನು ಕೇಳುವ ಸ್ವಭಾವವಿಲ್ಲದವರು. ನಾವು ಎಷ್ಟೇ ಓದಿ ಬರೆದರೂ ನಾವು ನಾವಾಗಿರಬೇಕಲ್ಲವೇ? ಗಣ್ಯರೆನಿಸಿಕೊಳ್ಳುವುದು ಈ ಸ್ವಭಾವದಿಂದ. ಒಪ್ಪಿಕೊಳ್ಳುವ ಮನೋಭಾವವಿದ್ದಾಗ ಓರ್ವ ಸಾಹಿತಿ, ಬರವಣಿಗೆ ಮಾಡುವವ ಆಕಾಶದೆತ್ತರಕ್ಕೆ ಬೆಳೆಯಲು ಅವಕಾಶವಿದೆ. ಎಷ್ಟೇ ಗ್ರಂಥಗಳನ್ನು ಬರೆದರೂ ಸಭ್ಯತೆ, ವಿನಯ, ವಿಧೇಯ ಗುಣವಿಲ್ಲದವನನ್ನು ಮನಸ್ಸಿನೊಳಗಿನಿಂದ ಯಾರೂ ಮರ್ಯಾದೆ ಕೊಡರು. ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಗುಣ ಎಲ್ಲರಿಗೂ ಇಷ್ಟ. ಓದಿದ, ಬರೆದ ಜ್ಞಾನವನ್ನು ಒಳ್ಳೆಯ ದಾರಿಯಲ್ಲಿ ಸಾಗಲು ಬಿಡೋಣ. ಕೆಟ್ಟದಕ್ಕೆ ಮಣೆ ಹಾಕದಿರೋಣ. ಹೀಗಿರುವುದಕ್ಕೆ ಬೆಂಬಲ ನೀಡಿದರೆ ಮುಂದಿನ ದಿನಗಳಲ್ಲಿ ತಾನು ಮಾತ್ರ ಸರಿ, ಇತರರೆಲ್ಲ ತಪ್ಪು ಎನ್ನುವ ಭಾವನೆ ಬರಲು ಸಾಧ್ಯವಿದೆ. ಅದು ಸಾಹಿತ್ಯದ, ಜ್ಞಾನದ ದುರುಪಯೋಗಕ್ಕೆ ಕಾರಣವಾಗಬಹುದು.

*ಸತ್ಯಂ ತಪೋಜ್ಞಾನಮಹಿಂಸತಾ ಚ* *

*ವಿದ್ಯತ್ ಪ್ರಣಾಮಂ ಚ ಸುಶೀಲತಾ* *ಚ /*

*ಏತಾನಿ ಯೋ ಧಾರಯತೇ ಸ* *ವಿದ್ವಾನ್ ನ*

*ಕೇವಲಂ ಯಃ ಪಠತೇ ಸ* *ವಿದ್ವಾನ್//*

ಸತ್ಯ, ತಪಸ್ಸು, ಜ್ಞಾನ, ಅಹಿಂಸೆ, ವಿದ್ವಾಂಸರನ್ನು ಗೌರವಿಸುವ ಗುಣ, ಒಳ್ಳೆಯ ನಡೆನುಡಿ ಇದೆಲ್ಲ ಯಾರಲ್ಲಿ ಮನೆಮಾಡಿದೆಯೋ ಅವರೇ ನಿಜವಾದ *ವಿದ್ವಾಂಸರು*. ದೊಡ್ಡ ದೊಡ್ಡ ಪುಸ್ತಕ, ವೇದ, ಪುರಾಣ ಶಾಸ್ತ್ರಗಳನ್ನು ಓದಿದ ಮಾತ್ರಕ್ಕೆ ವಿದ್ವಾಂಸರು ಎನಿಸಿಕೊಳ್ಳಲಾರರು.

ಬೇರೆಯವರ ತಿಳುವಳಿಕೆಗಳಿಗೆ ಸಹ ಮನ್ನಣೆ ಕೊಡುವುದು ಓರ್ವ ಬರವಣಿಗೆಯವನ ಕರ್ತವ್ಯ. ಯಾರೂ ಸಣ್ಣವರಲ್ಲ, ಯಾರೂ ದೊಡ್ಡವರಲ್ಲ. ಬರವಣಿಗೆ ಕ್ಷೇತ್ರದಲ್ಲಿ ಓದಿ, ಕಲಿತು, ನೋಡಿ, ಕೇಳಿ, ಪ್ರೋತ್ಸಾಹ, ಗುರುಮುಖೇನ ಈ ಎಲ್ಲಾ ರೀತಿಯಲ್ಲೂ ಬೆಳೆಯಲು ಅವಕಾಶವಿದೆ. ತಪ್ಪಾದರೆ ತಿದ್ದಿಕೊಂಡು ಮುಂದೆ ಹೋಗುವ ಔದಾರ್ಯವಿರಬೇಕು. ಇನ್ನೊಬ್ಬರನ್ನು ಬೆಳೆಸುವ ಗುಣವಿರಬೇಕು. ತನಗೆ ತಿಳಿದಿರುವುದನ್ನು ನಾಲ್ಕು ಜನ ಕಲಿತಾಗ ಕಲಿಸಿದವನಿಗಾಗುವ ಸಂತ‌ಸ ಅಷ್ಟಿಷ್ಟಲ್ಲ. ಎಲ್ಲವನ್ನೂ ಅರಿತು ವ್ಯವಹರಿಸೋಣ. ನಾವೇ ಗೊತ್ತಿದ್ದವರೆಂಬ ಅಹಂನಿಂದ ಹೊರಗೆ ಬಂದು ನೋಡುವ ಗುಣ ಮೈಗೂಡಿಸಿಕೊಳ್ಳೋಣ.

(ಶ್ಲೋಕ: ಸರಳ ಸುಭಾಷಿತ)

-ರತ್ನಾ. ಕೆ.ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ