ಒಂದು ಒಳ್ಳೆಯ ನುಡಿ - 101
‘ಪ್ರತಿ ನಿತ್ಯವೂ ಕೆಲಸ ಮಾಡು ಉಣ್ಣು’ ಎಂಬುದನ್ನು ನಾವು ಜೀವನದಲ್ಲಿ ನಮ್ಮ ಕೈಕಾಲುಗಳು ಗಟ್ಟಿ ಇರುವಷ್ಟು ದಿವಸ ಅಳವಡಿಸಿಕೊಂಡರೆ ಎಷ್ಟು ಒಳ್ಳೆಯದಲ್ಲವೇ? ಯಾರೋ ಬೆವರಿಳಿಸಿ ದುಡಿದು ಸಂಪಾದಿಸಿದ್ದರಲ್ಲಿ ನಾವು ತಿಂದುಂಡು ಮೆರೆಯುವುದು ಎಷ್ಟು ಸರಿ? ಆದರೂ ಅಂಥವರನ್ನು ಕಾಣುತ್ತೇವೆ.
ಭಿಕ್ಷೆ ಎತ್ತುವುದು ಅಪರಾಧವೇ ಆದರೂ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಅದೊಂದು ದಂಧೆಯಾಗಿಯೇ ಹೋಗಿದೆ. ಭಿಕ್ಷೆ, ಊಟ ಕೊಡೋಣ. ಆದರೆ ಯೋಚಿಸಿ ಕೊಡಬೇಕು. ದುಡಿಯಲು ಶಕ್ತರಾದವರಿಗಲ್ಲ. ಏಳಲು ಆಗದ, ಅಸಹಾಯಕ ಸ್ಥಿತಿಯಲ್ಲಿ, ಯಾರೂ ಇಲ್ಲದ ವೃದ್ಧರಿಗೆ ಪುಟ್ಟ ಮಕ್ಕಳಿಗೆ ಒಂದು ತುತ್ತು ಗಂಜಿ ಕೊಡುವುದು ಪುಣ್ಯದ ಕೆಲಸ. ಅದು ಬಿಟ್ಟು ಕೆಲಸಮಾಡಲು ಶಕ್ತನಾದವನಿಗೆ ಕೊಡಲೇಬಾರದು. ಅವರಿಗೆ ಕೆಲಸದ, ಸಂಪಾದನೆಯ ದಾರಿಯನ್ನು ತೋರಿಸಿಕೊಡಬಹುದು. ಎಲ್ಲರೂ ‘ಬಿಳಿ ಕಾಲರ್’ ಕೆಲಸವೇ ಆಗಬೇಕೆಂದು ಬಯಸಬಾರದು. ಮರ್ಯಾದೆಯಿಂದ ಮಾಡುವ ಯಾವ ದುಡಿಮೆ ಸಂಪಾದನೆಯೂ ಆಗಬಹುದು. ಇನ್ನೊಬ್ಬರ ಸಂಪತ್ತಿನ ಮೇಲೆ ದೃಷ್ಟಿ ಸಹ ಹಾಕುವುದು ತರವಲ್ಲ. ಭಗವಂತನ ಮೇಲೆ ಭಾರ ಹಾಕಿದರೆ ಹಸಿವು ನೀಗದು. ಪ್ರಾಮಾಣಿಕ ಪ್ರಯತ್ನ ಬೇಕು. ದೈವದೇವರುಗಳ ಮೇಲೆ , ನೀನೇ ಕೊಡು ಎಂದು ಕುಳಿತರೆ ಹೇಗೆ? ನಾವು ದುಡಿದರೆ ಮಾತ್ರ ಸಂಪಾದನೆ ಅಲ್ವೇ? ಒಂದು ಕುಡ್ತೆ ಎಳ್ಳು ಕೈಯಲ್ಲಿ ಹಿಡಿದು ಎಣ್ಣೆ ತೆಗೆಯುತ್ತೇನೆ ಎಂದರೆ ಎಲ್ಲಿಂದ ಎಣ್ಣೆ ಬರುತ್ತದೆ? ಒಂದಾ ಅದನ್ನು ಗಾಣಕ್ಕೆ ಕೊಡಬೇಕು, ಇಲ್ಲವೇ ಯಂತ್ರ ಕ್ಕೆ ಹಾಕಬೇಕು. ಹಾಗೆ ದುಡಿದರೆ ಮಾತ್ರ ಗಳಿಕೆ ಸಿಗಬಹುದು. ಸುಮ್ಮನೆ ಕೈಕಟ್ಟಿ ಕುಳಿತರೆ ಯಾರೂ ಕೊಡಲಾರರು. ದುಡಿಮೆ ಯಾವತ್ತೂ ಮನುಷ್ಯನನ್ನು ವಂಚಿಸಲಾರದು. ಆದರೆ ಮನುಷ್ಯ ದುಡಿಮೆಗೆ ವಂಚಿಸಬಲ್ಲ. ನಾವು ದುಡಿದು ನಾವು ಉಂಡು, ಗಳಿಸಿದ್ದರಲ್ಲಿ ಸಾಧ್ಯವಾದರೆ ಕಿಂಚಿತ್ ದಾನಧರ್ಮ ಮಾಡೋಣ. ಕೆಲಸ ಮಾಡೋಣ-ಗಳಿಸೋಣ-ಉಣ್ಣೋಣ.
-ರತ್ನಾ ಕೆ.ಭಟ್ ತಲಂಜೇರಿ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ