ಒಂದು ಒಳ್ಳೆಯ ನುಡಿ - 102
‘ನಾನು’ ಎನ್ನುವುದು ಸಣ್ಣತನ ಅಲ್ಲ ಹುಂಬತನವೇ? ಸ್ವಲ್ಪ ಯೋಚಿಸೋಣ. ಎಲ್ಲಿ ‘ಅಹಂ’ ಪ್ರವೇಶ ಆಯಿತೋ ಅಲ್ಲಿ 'ನಾನು' ಹಾಜರಾಗುವುದು ಸಹಜ. ಅಹಂಕಾರ ಎನ್ನುವುದು ಶಿರದ ಮೇಲೆ, ಮನಸ್ಸಿನಲ್ಲಿ ಕುಳಿತರೆ ವ್ಯಕ್ತಿಯ ಸರ್ವನಾಶ ಆರಂಭವಾಯಿತೆಂದು ಲೆಕ್ಕ. ಒಮ್ಮೆಗೆ ಆತ ಜಯಿಸಬಹುದು. ಆದರೆ ಪದೇಪದೇ ಆದಾಗ ಒಂದು ದಿನ ಮಣ್ಣಲ್ಲಿ ಮಖಾಡೆ ಬಿದ್ದಾನು. ‘ನಾನು; ಎಂಬಲ್ಲಿ ‘ನಾವು’ ಬರಲಿ. ಅದರಲ್ಲಿರುವ ನೆಮ್ಮದಿ ಬೇರೆಲ್ಲೂ ಸಿಗದು.
ತನ್ನನ್ನು ತಾನು ಮರೆತು ಒಂದು ಕೆಲಸದಲ್ಲಿ ತಲ್ಲೀನನಾಗುವವ, ಏಕಾಗ್ರತೆ ಇರುವವ, ಸಹೃದಯಿ ಮನಸ್ಸು ಇರುವವ, ಹೇಳಿದ, ಕೇಳಿದ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವವ ನಿಜವಾದ ಮಾನವೀಯ ಮೌಲ್ಯ ಹೊಂದಿದವನು. ಎಲ್ಲಿ ಹಂಚಿ ಉಣ್ಣುವ ಸ್ವಭಾವವಿದೆಯೋ ಅಲ್ಲಿ ಅಹಂ ಆಗಲಿ, ನಾನು ಆಗಲಿ ಪ್ರವೇಶ ಆಗದು. ಭಗವದ್ಗೀತೆಯಲ್ಲಿ ಒಂದೆಡೆ ಶ್ರೀ ಕೃಷ್ಣನ ನುಡಿಯು ಇದುವೇ ‘ಸ್ವಂತ ಲಾಭದ ಆಸೆ ಯಾರಿಗೆ’ ‘ಕಾಡುವುದಿಲ್ಲವೋ, ಏಕಾಗ್ರತೆ ಯಾರಲ್ಲಿದೆಯೋ ಇಂಥವರ ಕೆಲಸ ಕಾರ್ಯಗಳಲ್ಲಿ ಜಗದಕಲ್ಯಾಣ ಅಡಗಿದೆ’. ಅನಿಷ್ಟ ಸಂಭವಿಸಲು ಸಾಧ್ಯವಿಲ್ಲ.
ಅಹಂಕಾರ ಎಂಬ ಉಕ್ಕಿನ ಗೋಡೆಗಳು ಎಲ್ಲಿ ಕಟ್ಟಲ್ಪಟ್ಟಿದೆಯೋ ಅಲ್ಲಿ ನಾನು ಬಂದೇ ಬರುತ್ತದೆ. 'ನಾನು' ಎಂಬ 'ಕ್ಷುದ್ರ 'ಭೂತವನ್ನು ಒದ್ದು ಓಡಿಸೋಣ. ದಿವ್ಯ ಜೀವನ ಸಾಕ್ಷಾತ್ಕಾರವಾಗಬೇಕಾದರೆ, ನೆಮ್ಮದಿ ಬೇಕಾದರೆ ನಾನು ಬೇಡವೇ ಬೇಡ. ತಾವು ಭಗವಂತನು ಆಟ ಆಡಿಸಿದ ಹಾಗೆ ಆಡಲಿರುವ ಒಂದು ನಿಮಿತ್ತ ಮಾತ್ರದಿ ಬಂದವನೆಂದು ತಿಳಿದವನೇ ಪರಮಜ್ಞಾನಿ. ಬರಿಯ ಓದಿನಿಂದಲೇ ಜ್ಞಾನ ಸಿಗುವುದಲ್ಲ.
ನಿನ್ನೆಯ ದಿನ ವಾಟ್ಸಾಪ್ ಬಳಗದಲ್ಲಿ ಬಂದ, ನೋಡಿದ ಒಂದು ದೃಶ್ಯ ನಿಜವಾಗಿ ಕಣ್ಣು ತುಂಬಿತು, ಸಂತಸವೂ ಆಯಿತು.’ಮಾನ್ಯ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ’. ‘ಪ್ರಶಸ್ತಿ’ ಅವರ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ಸನ್ಮಾನ ಗಳು ಅರಸಿಕೊಂಡು ಬಂತು. ಎಲ್ಲರೂ ಮೆಚ್ಚುವಂಥ ನಡೆನುಡಿ, ವಿನಯ, ನಿಗರ್ವಿ, ಸರಳತೆ ಇಷ್ಟು ಸಾಕಲ್ಲವೇ? ಇಲ್ಲಿ 'ನಾನು' ಎಂಬುದು ಬಂದಿದ್ದರೆ ಇಷ್ಟೆಲ್ಲ ಸಾಧ್ಯವಾಗುತ್ತಿರಲಿಲ್ಲ.
'ಸ್ವ' ಎನ್ನುವುದನ್ನು ಬಿಟ್ಟು ಮುಂದೆ ಹೋಗೋಣ. ತನ್ನ ಕುಟುಂಬ, ತನ್ನವರಿಗಾಗಿ ದುಡಿದು ಗಳಿಸಿದ್ದರಲ್ಲಿ ಒಂದಂಶ ನೀಡೋಣ. ಎಲ್ಲವನ್ನೂ ದಾನ ಮಾಡೆಂದು ಯಾರೂ ಹೇಳರು. ಕುಟುಂಬ ಪೋಷಣೆ ಮುಖ್ಯ. ಏನೂ ನೀಡಲಾರೆ ಎಂಬ ತತ್ವ ಬೇಡ ಅಷ್ಟೆ. ಯಾರು 'ಸ್ವ' ಎಂಬುದನ್ನು ಗೆಲ್ಲುತ್ತಾರೋ ಅವರು ಪ್ರಪಂಚವನ್ನೇ ಗೆಲ್ಲಬಲ್ಲರು ಸ್ವಾಮಿ ವಿವೇಕಾನಂದರ ನುಡಿ. ಇದು ಸತ್ಯವಾದ ಮಾತು. 'ನಾನು' ಎಂಬಲ್ಲಿಗೆ 'ನಾವು' ತರೋಣ, ನೆಮ್ಮದಿಯ ಬದುಕು ನಮ್ಮ ದಾಗಿಸೋಣ.
-ರತ್ನಾ ಕೆ.ಭಟ್ ತಲಂಜೇರಿ
(ಅನುಭವಸಾರ)
ಚಿತ್ರ ಕೃಪೆ: ಇಂಟರ್ನೆಟ್ ತಾಣ