ಒಂದು ಒಳ್ಳೆಯ ನುಡಿ - 103

ಒಂದು ಒಳ್ಳೆಯ ನುಡಿ - 103

ನಾಳೆ ಎಂಬುದರ ಬಗ್ಗೆ ಯೋಚಿಸುತ್ತ, ಇಂದು ಎಂಬುದನ್ನು ಸರಿಯಾಗಿ ಅನುಭವಿಸಲು ಕಷ್ಟ ಪಡ್ತೇವೆ. ನಾಳೆಯದ್ದೇ ಚಿಂತೆ ತಲೆಯಲ್ಲಿ ಹೊಕ್ಕು, ಅದು ಸದಾ ಗುಂಗಿ ಹುಳದಂತೆ ಕೊರೆಯುತ್ತದೆ. ನಿನ್ನೆ ಕಳೆದಾಯಿತು. ನಾಳೆ ಬರಬೇಕಷ್ಟೆ. ಮಧ್ಯದ ‘ಇಂದು ಈ ಕ್ಷಣ’ ನಮ್ಮದು. ಅದನ್ನು ಇರುವ ಹಾಗೆ ಸಂತಸದಿ ಅನುಭವಿಸುವ ಗುಟ್ಟು ನಮ್ಮ ಕೈಯಲ್ಲೇ ಇದೆ. ಕೆಲವು ಜನರು ನಾಳೆಯ ದಿನದ ಬಗ್ಗೆ ಚಿಂತಿಸಿ, ಇಂದಿನ  ಸಂತೋಷವನ್ನು ಹಾಳುಮಾಡಿಕೊಂಡು, ಅದೂ ಇಲ್ಲ ಇದೂ ಇಲ್ಲ ಎಂದು ಹೇಳುವುದಿದೆ. ಇಂದಿನ ಕಳೆದು ಹೋದ ದಿನ ಮತ್ತೆಂದೂ ಜೀವನದಿ ಬಾರದು. ಆ ಸತ್ಯ ಗೊತ್ತಿದ್ದೂ ನಮ್ಮ ಬದುಕಿನ ಹಾದಿಗೆ ನಾವೇ ಕಲ್ಲು ಹಾಕಿಕೊಳ್ಳಬಾರದಲ್ಲವೇ? ನಾಳೆಯ ಬಗ್ಗೆ ನಿರೀಕ್ಷೆ ಸಹಜ. ಹಾಗೆಂದು ಇಂದು ಅಲವತ್ತುಕೊಳ್ಳುವುದು ಸರಿಯಲ್ಲ. ಕಲಿಯುವ ವಿದ್ಯಾರ್ಥಿಗೆ ನಾಳೆಯ ಯೋಚನೆ ಬೇಕಾಗುತ್ತದೆ. ಅವನ ಸ್ಪಷ್ಟ ಗುರಿಯು ಅದುವೇ.ಅವನದು ಕಲಿಕಾ ಕಾಲ. ಹಾಗೆಂದು ಇಂದಿನ ಕಲಿಕೆಯ ಚಟುವಟಿಕೆ ಶ್ರದ್ಧೆಯಲ್ಲಿ ಮುಗಿಸುವುದು ಅವನ ಜವಾಬ್ದಾರಿ. ತಾರ್ಕಿಕವಾಗಿ ನೋಡಿದರೆ ಏನಾದರೂ ಭೇದವಿದೆಯೇ? ಇಲ್ಲ. ನಿನ್ನೆ-ಇಂದು-ನಾಳೆ ಇದೆಲ್ಲ ಕಾಲಮಾನ ಅಷ್ಟೆ. ಸ್ಥಿತಪ್ರಜ್ಞನಿಗೆ, ಸಮಚಿತ್ತನಿಗೆ ಇದೆಲ್ಲ ಲೆಕ್ಕಕ್ಕೆ ಇಲ್ಲ. ಅವನಿಗೆ ಎಲ್ಲವೂ ಸಮಾನ. ಜೀವನದ ಗತಿ ಸಹ ಅವನಿಗೆ ಈ ಕಾಲದ ಹಾಗೆ. ದುಃಖಕ್ಕೆ ಕುಗ್ಗಲಾರ, ಸುಖಕ್ಕೆ ಹಿಗ್ಗಲಾರ. ‘ಕಾಲಾಯ ತಸ್ಮೈ ನಮಃ’ , ಕಾಲ ಬಂದ ಹಾಗೆ ಕೋಲ ಕಟ್ಟು ಮಾತೇ ಇದೆಯಲ್ಲ? ಬದುಕು ಹೇಗೆಲ್ಲ ನಮ್ಮನ್ನು ಕೊಂಡೊಯ್ಯುತ್ತದೋ ಹಾಗೆಲ್ಲ ಸುಲಲಿತವಾಗಿ ದಾರಿ ಹುಡುಕುತ್ತ ಸಾಗೋಣ. ನಿನ್ನೆ ನಾಳೆಗಳ ಬಗ್ಗೆ ಯೋಚಿಸದೆ, ಇಂದು ಎನ್ನುವುದನ್ನು ನೆಮ್ಮದಿಯಲ್ಲಿ ಕಳೆಯೋಣ.

-ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ