ಒಂದು ಒಳ್ಳೆಯ ನುಡಿ - 105
‘ಗುರಿ ಬೇಕು ನಡೆಯಲ್ಲಿ
ನಿಜ ಬೇಕು ನುಡಿಯಲ್ಲಿ
ಛಲ ಬೇಕು ಸಾಧನೆಯಲ್ಲಿ’
ಇವು ಮೂರು ನಮ್ಮ ಬದುಕಿನ ಹಾದಿಯ ಹೆಜ್ಜೆಗಳು. ಈ ವಾಕ್ಯಗಳಲ್ಲಿ ಲೋಕಾನುಭವವೇ ಅಡಗಿದ ಹಾಗಿದೆ.
‘ಗುರಿಯಿಲ್ಲದ ಜೀವನ ನಾವಿಕನಿಲ್ಲದ ದೋಣಿಯಂತೆ’. ಬದುಕಿನಲ್ಲಿ ನಿರ್ದಿಷ್ಟ ಯೋಜನೆ, ಯೋಚನೆ ಇದ್ದಾಗ ಬದುಕಿನ ಹಾದಿ ಸುಗಮ. ಪ್ರತಿದಿನದ ಸ್ಪಷ್ಟತೆ ಜೀವನದ ಪ್ರತಿ ಹಂತದಲ್ಲಿರಲೇ ಬೇಕು. ಓರ್ವ ಅಧ್ಯಾಪಕ ಎನಿಸಿದವಗೆ ಸ್ಪಷ್ಟತೆ ಇಲ್ಲದಿದ್ದರೆ, ಆತನ ಬೋಧನೆ, ಕೈಗೊಳ್ಳುವ ಚಟುವಟಿಕೆಗಳು ಏನಾಗಬಹುದು ಯೋಚಿಸಿ. ಏನಾದರೂ ಕಲಿಕೆ, ಬದಲಾವಣೆಗಳು ಬೇಕಾದರೆ ಅವನಲ್ಲಿ ನಿರ್ಧಾರ ಅಚಲವಾಗಿರಬೇಕು, ಕಲಿಸಬೇಕಾದ ವಸ್ತು, ವಿಷಯ ಜ್ಞಾನದ ಅರಿವಿರಬೇಕು. ಇಲ್ಲದಿದ್ದರೆ ಪುಸ್ತಕದ ಬದನೆಕಾಯಿ, ಬಾಯಿಪಾಠ ಆಗಬಹುದು. ಇದೇ ರೀತಿ ಜೀವನ ಸಹ. ಒಂದು ಗುರಿ ಇನ್ನೊಂದು ಸಾಗಬೇಕಾದ ಹಾದಿ ಎರಡರ ಸ್ಪಷ್ಟತೆ ಇರಬೇಕು.
ಹಾಗಾದರೆ ನುಡಿಯಲ್ಲಿ ಬೇಡವೇ? ಸುಳ್ಳು ಹೇಳಿ ವಂಚಿಸುವುದು, ರಂಜಿಸುವುದು, ಯಾರನ್ನೋ ಮೆಚ್ಚಿಸಿ ತಾನು ಒಳ್ಳೆಯವ ಎನಿಸುವುದು ಸರಿಯಲ್ಲ. ಇಂಥವರ ಬದುಕು ಅಡಿಗಟ್ಟಿ ಇಲ್ಲದ ಮರದ ಬೇರಿನಂತೆ, ಪಾಯವಿಲ್ಲದ ಕಟ್ಟಡದಂತೆ. ಯಾವ ಕ್ಷಣದಲ್ಲಾದರೂ ಬೀಳಬಹುದು. ಮಾತನಾಡುವಾಗ ಚೆನ್ನಾಗಿ ಯೋಚಿಸಿಯೇ ಮಾತನಾಡೋಣ, ಮತ್ತೆ ಸಿಕ್ಕಿಬಿದ್ದು ನಗೆಪಾಟಲಿಗೆ ತುತ್ತಾಗುವುದು ಬೇಡ.
ನುಡಿಗಳನ್ನು ಆಡುವಾಗ ಯೋಚಿಸಿ, ಸತ್ಯಾಸತ್ಯತೆ ಅರಿಯುವುದು ಬಹುಮುಖ್ಯ. ಒಬ್ಬ ಹೇಳಿದ ಎಂದು ಅವಸರ ಬೇಡ. ಮನಸಾಕ್ಷಿಗೆ ವಿರುದ್ಧವಾಗಿ ಯಾವತ್ತೂ ಹೋಗಬಾರದು, ಅದು ನಮಗೆ ನಾವೇ ಮಾಡಿಕೊಳ್ಳುವ ದ್ರೋಹವಾದೀತು.
ಕೆಲಸದಲ್ಲಿ ಸಾಧನೆ, ಹಠ, ಛಲವಿರಬೇಕು. 'ಕುಳಿತು ತಿಂಬವಗೆ ಕುಡಿಕೆ ಹೊನ್ನು ಸಾಲದು' .ಕಷ್ಟ ಪಟ್ಟು ದುಡಿಯೋಣ,ಹೊಟ್ಟೆ ತುಂಬಾ ಉಣ್ಣೋಣ ಅಲ್ಲವೇ?ಮಾನಸಿಕ ಸಿದ್ಧತೆ,ಹೇಗೆ ಹೋದರೆ ಯಾವರೀತಿ ಸಂಪಾದಿಸಬಹುದು?ಯಾವ ಕೆಲಸ ಒಳ್ಳೆಯ ದು ಇದೆಲ್ಲಾ ಯೋಜನೆ ಹಾಕಿಯೇ ಮುಂದುವರಿಯಬೇಕು.ಪ್ರಯತ್ನ ದಿಂದ ಯಶಸ್ಸು ಇದೆ.ಕಠಿಣ ಶ್ರಮ ಇದ್ದವಗೆ ಆರೋಗ್ಯ ವೂ ಚೆನ್ನಾಗಿರುತ್ತದೆ.ನಮ್ಮ ಕೈಯಿ,ಬಾಯಿ,ಮನಸ್ಸು ಈ ಮೂರರಲ್ಲಿ ಬದುಕಿನ ಎಲ್ಲಾ ದಾರಿಗಳು,ಜೀವನ ಮೌಲ್ಯಗಳು ಅಡಗಿವೆ,ಅರಿತು ನಡೆಯೋಣ.
-ರತ್ನಾ. ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ