ಒಂದು ಒಳ್ಳೆಯ ನುಡಿ - 107
ಸಾಮಾನ್ಯವಾಗಿ ಮಹಾಭಾರತ, ರಾಮಾಯಣ ಗ್ರಂಥಗಳನ್ನು ಓದದವರು ಬಹಳ ಕಡಿಮೆ ಎನ್ನಬಹುದು. ಒಂದಿಲ್ಲೊಂದು ಸಂದರ್ಭದಲ್ಲಿ ಕಥೆಗಳನ್ನು, ಉಪಕಥೆಗಳನ್ನು ಶಾಲೆಯಲ್ಲಿ ಶಿಕ್ಷಕರಿಂದ, ಮನೆಯಲ್ಲಿ ಹಿರಿಯರಿಂದ, ಯಕ್ಷಗಾನ, ನೃತ್ಯ ನಾಟಕಗಳ ಪ್ರದರ್ಶನಗಳಿಂದ, ಕಥೆಪುಸ್ತಕಗಳಿಂದ ಕೇಳಿ ಓದಿ ತಿಳಿದವರು ನಾವುಗಳು.
ಮಹಾಭಾರತದಲ್ಲಿ ಓದುತ್ತಾ ಹೋದಾಗ ಒಂದೆಡೆ ಆಚಾರ್ಯ ಭೀಷ್ಮರು ಯುಧಿಷ್ಠಿರನ ಹತ್ತಿರ ಮನೆಯ ಹಿರಿಮಗ, ತಮ್ಮಂದಿರಿಗೆ ದೊಡ್ಡಣ್ಣ ಆತನ ಬಗ್ಗೆ ಹೇಳುವ ಕೆಲವು ವಿಚಾರಗಳು ಗಮನಸೆಳೆಯಿತು. ಗುರು-ಶಿಷ್ಯರ ಸಂಬಂಧ ನಮಗೆಲ್ಲ ತಿಳಿದೇ ಇದೆ. ಶಿಷ್ಯರ ಮೇಲೆ ಗುರುವಿಗೆ ಪ್ರೀತಿ ಮತ್ತು ಗೌರವ ಇದ್ದೇ ಇದೆ. ಅದೇ ರೀತಿ ಶಿಷ್ಯರಿಗೂ ಗುರುವಿನ ಅಪಾರ ವಿಶ್ವಾಸ, ಗೌರವ, ಭಕ್ತಿ, ಪ್ರೀತಿ ಇರುತ್ತದೆ. ಹಾಗೆಯೇ ಮನೆಯ ಹಿರಿಯಣ್ಣ ಸಹ ಪ್ರಜ್ಞಾವಂತ, ನೀತಿವಂತ, ಯೋಚಿಸಿ ಮಾತನಾಡುವವ, ವಿಚಾರವಂತನಾಗಿರಬೇಕು. ಒಂದು ವೇಳೆ ತಮ್ಮಂದಿರು ತಪ್ಪೆಸಗಿದರೆ ಅಣ್ಣನಾದವ ತಿದ್ದಿ ಬುದ್ಧಿಹೇಳಬೇಕು. ಹಾಗೆ ಬುದ್ಧಿ ಹೇಳುವಾಗ ತುಂಬಾ ಆಲೋಚನೆ ಮಾಡಬೇಕು. ತಕ್ಷಣ ಕೋಪದಿಂದ ಹಾರಾಡಬಾರದು. ನಿಧಾನವಾಗಿ ಆಲೋಚಿಸಿ ಮಾತನಾಡಬೇಕು. ಇಲ್ಲದಿದ್ದರೆ ಸಣ್ಣವರಾದ ಅವರು ಸ್ವಂತ ಸಹೋದರನ ಬಗ್ಗೆಯೇ ಅಪಪ್ರಚಾರ ಮಾಡಬಹುದು, ಶಾಶ್ವತವಾಗಿ ವಿರೋಧ ಕಟ್ಟಿಕೊಳ್ಳಬಹುದು. ಒಂದು ವೇಳೆ ನೀತಿಗೆಟ್ಟವರಾದರೂ ಅಣ್ಣನಾದವ ನೀತಿಗೆಟ್ಟವರಂತೆ ವರ್ತಿಸಬಾರದು.
ತಂದೆಯವರ ಸೊತ್ತು, ಆಸ್ತಿ ಬದುಕುಗಳನ್ನು ಎಲ್ಲಾ ಮಕ್ಕಳು ಸಮವಾಗಿ ಹಂಚಿಕೊಂಡು ತೃಪ್ತಿಯಲ್ಲಿರಬೇಕು. ಇರುವಷ್ಟು ದಿನ ಹೆತ್ತವರನ್ನು ಪ್ರೀತಿ ಗೌರವದಿಂದ ನೋಡಿಕೊಳ್ಳುವುದು ಮಕ್ಕಳೆಲ್ಲರ ಕರ್ತವ್ಯ, ಜವಾಬ್ದಾರಿ.
ತಮ್ಮಂದಿರಿಗೂ ಜವಾಬ್ದಾರಿಗಳಿವೆ.ತಮ್ಮ ತಂದೆಯವರ ಕಾಲವಾದ ನಂತರ ಹಿರಿಯಣ್ಣ ತಂದೆಗೆ ಸಮಾನ ಎಂಬುದನ್ನು ಅರಿತು ವ್ಯವಹರಿಸಿದರೆ ಅವರಿಗೇ ಒಳಿತು. ತಮ್ಮ ಜೀವನಕ್ಕೆ ದಾರಿಮಾಡಿಕೊಡುವ ಅಣ್ಣ, ಅಪ್ಪ ಇವರನ್ನೆಲ್ಲ ಯಾವತ್ತೂ ಬೇಸರ ಪಡಿಸದ ಹಾಗೆ ನೋಡಿಕೊಳ್ಳುವುದು ತಮ್ಮಂದಿರ ಕರ್ತವ್ಯ.
ಹಿರಿಯಕ್ಕ, ಹಿರಿಯಣ್ಣನ ಪತ್ನಿ, ಸಾಕುತಾಯಿ (ಇದ್ದರೆ) ಮಾತೃ ಸಮಾನವಾಗಿ ಕಾಣಬೇಕು. ‘ಭ್ರಾತೃ ಎಂದರೆ ಪೋಷಿಸುವವ, ರಕ್ಷಿಸುವವ. ’ಜನ್ಮದಾತ, ಗುರು ಮತ್ತು ಹಿರಿಯಣ್ಣ ಈ ಮೂವರೂ ನಮಗೆ ತಂದೆಯ ಸಮಾನರು’, ಕಾಲ ಸರಿದಂತೆ ಪ್ರತಿ ದಂಪತಿಗಳಿಗೂ ಒಂದೋ ಎರಡೋ ಮಕ್ಕಳಾದಾಗ ಈ ಯಾವ ಪ್ರಶ್ನೆಗಳೂ ಇಲ್ಲ. ಕಾಲಕ್ಕೆ ಸರಿಯಾಗಿ ಕೋಲ ಕಟ್ಟಬೇಕು ಅಲ್ಲವೇ? ಒಳ್ಳೆಯದನ್ನು ನಮ್ಮ ಮಕ್ಕಳಿಗೂ ಹೇಳಿಕೊಡುವುದು ನಮ್ಮ ಆದ್ಯ ಕರ್ತವ್ಯ. ಎಲ್ಲವನ್ನೂ ಅರಿತು ಬೆರೆತು ಬಾಳೋಣ.
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
(ಆಕರ ಗ್ರಂಥ: ಮಹಾಭಾರತ ಚಿಂತನಂ)
ಚಿತ್ರ ಕೃಪೆ: ಇಂಟರ್ನೆಟ್ ತಾಣ