ಒಂದು ಒಳ್ಳೆಯ ನುಡಿ - 108
ಪ್ರಕೃತಿಯನ್ನು ವಿಕೃತಿಗೊಳಿಸಿದ ಪಾಪವನ್ನು ಅನುಭವಿಸುತ್ತಿದ್ದೇವೆ. ಮರಗಳ, ಹಸಿರು ಸಸ್ಯಗಳ ಮಾರಣ ಹೋಮ ಮಾನವನ ಸ್ವಾರ್ಥಕ್ಕೆ ಆಯಿತು. ಅಭಿವೃದ್ಧಿಯ ನೆಪದಲ್ಲಿ ಕೋಟಿಗಟ್ಟಲೆ ಎಲ್ಲೆಂದರಲ್ಲಿ ಓಡಾಡಿತು.ಮಾತೆಯ ಒಡಲನ್ನು ಬಗೆಯಲಾಯಿತು. ಎಲ್ಲವೂ ಒಂದು ಹಂತದವರೆಗೆ. ಮತ್ತೆ ಎಲ್ಲೆ ಮೀರಲೇ ಬೇಕಲ್ಲವೇ? ಆದರೆ ಅದನ್ನು ಉಣ್ಣುವವರು ಪಾಪದವರು, ನಿರ್ಗತಿಕರು. ಪ್ರತಿನಿತ್ಯ ದುಡಿದರೆ ಹೊಟ್ಟೆಗೆ ಅನ್ನ. ಅಂಥವರ ಪರಿಸ್ಥಿತಿ ಹೇಗಾಗಬೇಡ? ಇನ್ನೂ ಬುದ್ಧಿ ಬರಲಿಲ್ಲ. ಕಾಂಕ್ರೀಟ್ ಮಯವಾಗುತ್ತಿದೆ.ಎಲ್ಲಾ ಅನುಭವಿಸಲೇಬೇಕು. ಒಂದು ಕಡೆಯಿಂದ ನೀಡಿದಂತೆ ಮಾಡುವುದು. ಇನ್ನೊಂದು ಕಡೆಯಿಂದ ಅಭಿವೃದ್ಧಿಯ ನೆಪದಲ್ಲಿ ಒಡೆದು ಹಾಕುವುದು. ಒಂದಷ್ಟು ಬಾಚಿಕೊಳ್ಳುವುದು. ಯಾವಾಗ ಸ್ವಾರ್ಥದ ಮನಸ್ಸು ಪರಿವರ್ತನೆ ಆಗುತ್ತದೋ ಆಗ ಈ ಹೊಟ್ಟೆಬಾಕತನ ಹೋಗಬಹುದು. ನಾನು, ನನ್ನದು ಇರುವಷ್ಟು ದಿನ ಇದೇ ಪರಿಸ್ಥಿತಿ. ಸ್ವಲ್ಪವಾದರೂ ಇತರರ ಸ್ಥಿತಿಗತಿಯ ಕುರಿತು ಆಲೋಚಿಸಿದರೆ ಈ ಮಟ್ಟಕ್ಕೆ ಬಂದು ನಿಲ್ಲುತ್ತಿರಲಿಲ್ಲ ಅನಿಸುತ್ತದೆ. ಹಸಿರು ಗಿಡಮರಗಳಲ್ಲಿ ನಮ್ಮ ಜೀವ ಅಡಗಿದೆ ಎಂದು ಗೊತ್ತಿದ್ದರೂ ನಾಶವಾಗುತ್ತಿದೆ ಅಭಿವೃದ್ಧಿ, ಯೋಜನೆಗಳ ನೆಪದಲ್ಲಿ, ನಾಶ ನಡೆಯುತ್ತಲೇ ಇದೆ. ಇದಕ್ಕೆಲ್ಲ ಕೊನೆ ಎಂದು? ಪ್ರಕೃತಿ ಮಾತೆಗೂ ಸಹಿಸಿ, ನೋಡಿ, ಸಾಕಾಗಿರಬಹುದು.
ಎಲ್ಲಾ ನಾವು ನಾವೇ ಮಾಡಿಕೊಂಡವುಗಳು. ಒಂದಷ್ಟು ಗಿಡಮರಗಳ ಬೆಳೆಸೋಣ. ನಮ್ಮ ನಮ್ಮ ಮನೆಯ ಮುಂದೆ ಸ್ಥಳವಿರುವಲ್ಲಿ ಹೂಗಿಡಗಳನ್ನು, ಸಣ್ಣ ಔಷಧೀಯ ಸಸ್ಯಗಳನ್ನು ನೆಡೋಣ. ಜಾಗವಿದ್ದರೆ ನೆರಳಿಗಾಗಿ, ತಂಪಿಗಾಗಿ, ಉಸಿರಿಗಾಗಿ ಮರಗಳ ನೆಟ್ಟು ಬೆಳೆಸೋಣ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಪ್ರಾಣಿಪಕ್ಷಿಗಳು ಎಷ್ಟೊಂದು ಹಸಿರು ಸಸ್ಯಗಳ ಹುಟ್ಟಿಗೆ ಕಾರಣವಾಗುವ ವಿಷಯ ನಮಗೆ ತಿಳಿದೇ ಇದೆ. ಅವುಗಳ ೧೦% ಸಹ ನಾವು ಪ್ರಯತ್ನಿಸುವುದಿಲ್ಲ. ಹೀಗಾದರೆ ನಮ್ಮ ಮುಂದಿನ ಪೀಳಿಗೆಗೆ ನಾವು ಏನು ಕೊಟ್ಟ ಹಾಗೆ ಆಗುತ್ತದೆ? ನಾವೀಗ ಪುಟ್ಟ ಮಕ್ಕಳ ಎದುರು ಇಂತಹ ಕೆಲಸಗಳನ್ನು ಕೈಗೊಂಡಾಗ ಮುಂದೆ ಅವರುಗಳು ಇದೇ ಕಾರ್ಯ ಮಾಡಬಹುದಲ್ಲವೇ? ಮುಂದೆ ಒಳ್ಳೆಯದಾಗಬಹುದೆಂಬ ನಿರೀಕ್ಷೆ ಇಟ್ಟುಕೊಂಡು ಬದುಕು ನಡೆಸುವ ಗಟ್ಟಿತನ ಇರಲಿ ನಮ್ಮಲ್ಲಿ. ಪರಿಸರವನ್ನು ಹಸಿರಾಗಿಸಲು ಕೈಜೋಡಿಸೋಣ, ನಮ್ಮಿಂದಾದ ಸಹಾಯ ಮಾಡೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ