ಒಂದು ಒಳ್ಳೆಯ ನುಡಿ - 109

ಒಂದು ಒಳ್ಳೆಯ ನುಡಿ - 109

ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯನ್ನು ಹೊಂದಲು ಪ್ರಯತ್ನಿಸಬಹುದು. ಅದು ನಮ್ಮ ಕೈಯಲ್ಲಿದೆ. ನಾವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಆದರೆ ಆಯ್ಕೆಯ ದಾರಿ ಸರಿಯಿರಬೇಕು. ಉತ್ತಮ ಗುಣನಡತೆ, ವಿದ್ಯಾಭ್ಯಾಸದ ಜೊತೆಗೆ ಹಿರಿಯರಿಂದ ಬಂದ ಆಚಾರ-ವಿಚಾರಗಳು, ಸಮಾಜದಿಂದ ಕಲಿಯುವ ಅನುಭವಗಳ ಸಾರ, ಸ್ವತಃ ನಮ್ಮಆಲೋಚನೆಗಳು ಎಲ್ಲವನ್ನೂ ಒಗ್ಗೂಡಿಸಿ ಬಗ್ಗೆ ಚಿಂತಿಸಿ ಕಾರ್ಯ ರೂಪಕ್ಕೆ ತರುವ ಸಾಮರ್ಥ್ಯ, ಬುದ್ಧಿವಂತಿಕೆ ನಮ್ಮಲ್ಲಿದೆ. ಎಲ್ಲಾ ಬಳಸಿಕೊಂಡು ಒಳ್ಳೆಯ ಮನುಷ್ಯರಾಗೋಣ. ಮಾನವತೆಯ ಸಂದೇಶವನ್ನು ನಮ್ಮೊಂದಿಗೆ ಇತರರಿಗೂ ಸಾರೋಣ.

ಸ್ವಾರ್ಥದ ಜೀವನ ಬೇಡ. ನಿಸ್ವಾರ್ಥದ ಮನೋಭಾವವಿರಲಿ. ಸ್ವಾರ್ಥ ಎಲ್ಲಿದೆಯೋ ಅಲ್ಲಿ ಬೇರೆ ಯಾವುದಕ್ಕೂ ಅವಕಾಶವಿರುವುದಿಲ್ಲ. ಎಲ್ಲಿ ಸ್ವಾರ್ಥ ಪ್ರವೇಶವಾಯಿತೋ ಅಲ್ಲಿ ನೀತಿ, ಪ್ರಾಮಾಣಿಕತೆ, ವಿನಯ, ಸೌಹಾರ್ದ, ಸತ್ಯಪರತೆ, ನ್ಯಾಯನಿಷ್ಠೆ, ಸತ್ಯ ಇತ್ಯಾದಿ ಮೌಲ್ಯಗಳು ಮೂಲೆಗುಂಪಾಗುವ ಸಾಧ್ಯತೆಯಿದೆ. ನ್ಯಾಯಮಾರ್ಗದ ಜೀವನ ನಡೆಸುವ ವ್ಯಕ್ತಿಗೆ ಇದರಿಂದ ಉಸಿರುಗಟ್ಟಿದಂತಾಗುತ್ತದೆ. ನಮ್ಮ ಆಯ್ಕೆ ನಮಗೆ ಬಿಟ್ಟ ವಿಚಾರ ನ್ಯಾಯ-ಅನ್ಯಾಯಗಳ ತುಲನೆ ಮಾಡಿ ಆಯ್ಕೆ ಮಾಡಿಕೊಳ್ಳೋಣ.

-ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ