ಒಂದು ಒಳ್ಳೆಯ ನುಡಿ - 110
ಎಲ್ಲಿ ಇತರ ಯಾವುದನ್ನೂ ಕಾಣಲಾಗುವುದಿಲ್ಲವೋ, ಕೇಳಲಾಗುವುದಿಲ್ಲವೋ, ತಿಳಿಯಲಾಗುವುದಿಲ್ಲವೋ ಅದು ಅನಂತವಾದುದು ಎಂದು ಉಪನಿಷತ್ತು ತಿಳಿಸುತ್ತದೆ. ಹೌದಲ್ವಾ? ನಮಗೆ ಆಕಾಶ, ಸಮುದ್ರ ಇದನ್ನೆಲ್ಲಾ ಅಳೆಯಲು ಸಾಧ್ಯವಿಲ್ಲ. ತಾರೆಗಳನ್ನು ಎಣಿಸಲು ಆಗದು. ಇವೆಲ್ಲವೂ ಅನಂತವಾದವುಗಳು. ಆಕಾಶ ಸರ್ವವ್ಯಾಪಿಯಾದುದು. ಉತ್ಪತ್ತಿ ಎಂಬುದಿಲ್ಲ. ಹಾಗೆಯೇ ಬ್ರಹ್ಮವು ಸ್ಪಷ್ಟತೆಯಿಲ್ಲದ ನಿತ್ಯವಾದ ಸತ್ಯ.
‘ಅನಂತತ್ವ’ ಹೀಗೆ ವ್ಯಾಖ್ಯಾನಿಸಬಹುದು ಕಾಲಗಳಲ್ಲಿ ಕಂಡು ಬರುವ, ಬೇರೆ ಯಾವುದರಲ್ಲಿಯೂ ಗೋಚರವಾಗದ್ದು. ಆಗಸದಿಂದ ಸುತ್ತುವರಿಯಲ್ಪಟ್ಟಿದೆ. ತನಗಿಂತ ಬೇರೆಯಾಗಿಯೇ ಕಂಡುಬರುತ್ತದೆ. ಒಂದು ಪರಿಧಿಯಾಗಿರುತ್ತದೆ. ಈ ರೀತಿಯಲ್ಲಿ ಆಕಾಶವನ್ನು ನಾವು ಅನಂತ ಎಂದು ಬಿಂಬಿಸಬಹುದು. ಕಾಲ, ದೇಶ ಮತ್ತು ವಸ್ತುವಿನಿಂದ ಅವಿಚ್ಛನ್ನವಾದ ಇಂಥವುಗಳನ್ನು ‘ಬ್ರಹ್ಮವು ಅನಂತ’ ಎಂದು ಉಪನಿಷತ್ತು ತಿಳಿಸುತ್ತದೆ.
ಸತ್ಯ, ಜ್ಞಾನ ಇವುಗಳೂ ಅನಂತಂ ಎಂಬ ಪದದಲ್ಲಿ ಸೇರಿ ಬ್ರಹ್ಮವನ್ನು ನಿರೂಪಿಸುತ್ತದೆ. ಕೆಲಸ ಮಾಡುವವ, ಅದನ್ನು ನಿರೂಪಿಸುವವ, ಕೆಲಸದ ಸಾಧನ, ತಾನೇ ಸ್ವತಃ ಪಾಲ್ಗೊಳ್ಳುತ್ತಾನೆಯೇ ಎಂಬ ನಾಲ್ಕು ವಿಷಯಗಳು ಕೆಲಸದಲ್ಲಿ ಇದೆ.
‘ಜ್ಞಾನ’ ಎಂದರೆ ತಿಳಿಯುವುದು, ಅರಿಯುವುದು. ಜ್ಞಾನ ಎಂಬುದು ಬ್ರಹ್ಮದೊಳಗೆ ಸೇರಿಕೊಂಡು ‘ಬ್ರಹ್ಮಜ್ಞಾನ’ ಎನಿಸಿದೆ. ಇಲ್ಲಿ ಶುದ್ಧವಾದ ಜ್ಞಾನ ಬ್ರಹ್ಮಜ್ಞಾನ ಮಾತ್ರವೆಂದು ನಾವು ತಿಳಿಯಬಹುದು. ಅಸತ್ಯದಿಂದ, ಅಜ್ಞಾನದಿಂದ ಎಷ್ಟೋ ಸಲ ನಾವು ಸೋಲುತ್ತೇವೆ.
ಒಮ್ಮೆ ಎಂಟು ಜನ ದೋಣಿಯಲ್ಲಿ ನದಿ ದಾಟುತ್ತಿರುವಾಗ, ಒಬ್ಬನು ಎಣಿಕೆ ಮಾಡತೊಡಗಿದ, ಎಷ್ಟು ಎಣಿಸಿದರೂ ಏಳೇ ಜನ. ತನ್ನನ್ನು ಎಣಿಸದೆ, ಬೇರೆಯವರು ಹೇಳಿದರೂ ಕೇಳದೆ ಉಡಾಫೆ ಮಾಡುತ್ತಿದ್ದ. ಹಾಗಾದರೆ ದೋಣಿ ಹತ್ತುವಾಗ ಎಂಟು ಜನ, ಈಗ್ಯಾಕೆ ಏಳು ಜನ ಎಂದು ದುಃಖಿತನಾಗಿ, ಬಹುಶಃ ನೀರಲ್ಲಿ ಮುಳುಗಿರಬೇಕೆಂದು ಗ್ರಹಿಸಿದ. ಇಲ್ಲಿ ಅವನಲ್ಲಿ ಅಜ್ಞಾನ ಮನೆ ಮಾಡಿತ್ತು, ಬೇರೆಯವರ ಮಾತು ಕೇಳಲಾರೆ ಎಂಬ ಮನೋಭಾವ ಸಹ ಕಂಡುಬರುತ್ತದೆ.
‘ಕಷಾಯೇ ಕರ್ಮಭಿಃ ಪಕ್ವೇ ತತೋ ಜ್ಞಾನಂ ಪ್ರವರ್ತತೇ’ ಎಂಬಂತೆ ಕರ್ಮಗಳಿಂದ ಮನಸ್ಸಿನ ಕಶ್ಮಲಗಳನ್ನು,ಕೊಳೆಯನ್ನು ನಿವಾರಿಸಿದರೆ, ಜ್ಞಾನ ಫಲಿಸುತ್ತದೆ. ಪರಿಶುದ್ಧನಾದ ವ್ಯಕ್ತಿ ಮಾತ್ರ ದೇಹದ ಅಶುದ್ಧತೆಯನ್ನು ಹೇಳಿಯಾನು. ಉಳಿದವರಿಗೆ ಸಾಧ್ಯವಿಲ್ಲ. ಶ್ರವಣ, ಮನನ, ನಿರ್ಧಾರ ಮುಖ್ಯ. ಬೇರೆಯವರ ಮಾತನ್ನು ಆಲಿಸಿ, ಅರ್ಥೈಸಿ, ಒಂದು ತೀರ್ಮಾನಕ್ಕೆ ಬರುವಷ್ಟು ತಾಳ್ಮೆ ಇಲ್ಲ.
ಬ್ರಹ್ಮ ಜ್ಞಾನ ಹೊಂದಲು ಅಶಕ್ತರಾದರೂ ಸತ್ಯ, ನ್ಯಾಯ, ವಿವೇಚನೆ, ಹೊಂದಾಣಿಕೆ, ಪರಿಸ್ಥಿತಿಗೆ ಅನುಗುಣವಾಗಿ ನಮ್ಮ ವರ್ತನೆಗಳನ್ನು ಬದಲಾಯಿಸಿ ವ್ಯವಹರಿಸಬಹುದಲ್ಲವೇ? ಹೊಂದಾಣಿಕೆ ಮಾಡಿಕೊಳ್ಳೋಣ.
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
(ಆಕರ ಪುಸ್ತಕ: ಉಪದೇಶ ಸುಧಾ)
ಚಿತ್ರ ಕೃಪೆ: ಇಂಟರ್ನೆಟ್ ತಾಣ