ಒಂದು ಒಳ್ಳೆಯ ನುಡಿ - 113

‘ಸೋಮಾರಿತನ’ ನಮ್ಮ ದೇಹದ ಅತಿ ದೊಡ್ಡ ಶತ್ರು. ಯಾವುದೇ ಕೆಲಸವನ್ನಾದರೂ ಶ್ರದ್ಧೆ ಮತ್ತು ಭಕ್ತಿ, ಏಕಾಗ್ರತೆಯಿಂದ ಮಾಡಿದವನು ಅನ್ನ ತಿಂದಾನು, ತಿಂದ ಅನ್ನ ಶರೀರ ಸ್ವೀಕರಿಸಬಹುದು. ಕಳ್ಳಾಟಿಕೆಯಿಂದ ತಿಂದದ್ದು ಕ್ಷಣಿಕ ತೃಪ್ತಿ, ಸಂತೋಷ ಸಿಗಬಹುದು. ಅಡಿಕೆ ಕದ್ದರೂ ಕಳ್ಳ ಆನೆ ಕದ್ದರೂ ಕಳ್ಳನೇ ಅಲ್ಲವೇ? ಕದ್ದು ಸಂಪಾದಿಸಿದ ಗಳಿಕೆ ಒಂದಿಲ್ಲೊಂದು ದಿನ ಕೊರಳಿಗೆ ಕುಣಿಕೆ ಖಂಡಿತ. ಆತನಿಗೆ ಮನಸ್ಸಿಗೆ ನೆಮ್ಮದಿ, ಶಾಂತಿ ಜೀವಮಾನವಿಡೀ ಇಲ್ಲ. ಉಪ್ಪರಿಗೆ ಮನೆ ಸಹ ತೃಪ್ತಿ ನೀಡದು. ಇನ್ನೊಬ್ಬರ ಸೊತ್ತು ಲಪಟಾಯಿಸುವುದು ಮಾತ್ರ ಕಳ್ಳತನವಲ್ಲ. ಓರ್ವ ಕೆಲಸಕ್ಕೆ ಸೇರಿ ಅಲ್ಲಿ ಬೆಳಗಿನಿಂದ ಸಂಜೆಯವರೆಗೆ ಹಾಳುಹರಟೆಯಲ್ಲಿ ಸಮಯ ಕಳೆದರೆ, ತನ್ನ ಎಲ್ಲಾ ಜವಾಬ್ದಾರಿಗಳನ್ನು ಬೇರೆಯವರಿಗೆ ನೀಡಿ ಆರಾಮವಾಗಿ ಕುಳಿತರೆ, ಆತ ದೊಡ್ಡ ಕಳ್ಳ. ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸದೆ ಹೀಗೆ ಕೊಳ್ಳೆ ಹೊಡೆದರೆ ಒಂದು ರೀತಿಯ ಕಳ್ಳತನವೇ ಇದು. ಯಾವುದೇ ದುರ್ನಡತೆ ಇಲ್ಲದವ ಸಂತೆಯಲ್ಲಿ ಮಲಗಿದರೂ ನಿದ್ದೆ ಮಾಡಬಹುದಂತೆ. ಈ ಸೋಮಾರಿಗಳಿಗೆ, ಕಳ್ಳರಿಗೆ ನಿದ್ದೆ ಎಲ್ಲಿಂದ? ಯಾವಾಗಲೂ ತಳಮಳ. ಎಲ್ಲಿ ಗುಟ್ಟು ರಟ್ಟಾಗುತ್ತದೋ ಎಂಬುದಾಗಿ. ಚಿಂತೆ ಹೋಗಿ ಚಿತೆಯ ದಾರಿ ತೋರಿಸಬಹುದು. ಹಾಗಾಗಿ ಆತ್ಮಸಾಕ್ಷಿಗೆ ನಾವು ದ್ರೋಹ ಮಾಡಬಾರದು. ಚೆನ್ನಾಗಿ ದುಡಿದು ಉಣ್ಣೋಣ. ತಪ್ಪು ಮಾಡಿದಾಗ ಒಪ್ಪಿಕೊಳ್ಳುವ ಮನೋಭಾವವಿರಬೇಕು. ವಾದ ಸಲ್ಲದು. ವಾದ-ವಿವಾದಗಳಿಂದ ಮತ್ತೊಂದು ತಪ್ಪು ಆಗಬಹುದು. ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಹೋಗೋಣ. ಸೋಮಾರಿತನವೆಂಬ ಹಿತಶತ್ರುವನ್ನು ಹತ್ತಿರ ಬರಲು ಸಹ ಆಸ್ಪದ ನೀಡದಂತೆ ನಮ್ಮ ವ್ಯವಹಾರವಿರಲಿ. ಗಡಿಯಾರದ ಮುಳ್ಳು ಮುಂದಕ್ಕೆ ಹೋಗುತ್ತಾ ಇರುತ್ತದೆ. ಹೋದಂತೆ ನಮ್ಮ ಪ್ರಾಯ ಹೆಚ್ಚಾಗಿ ಆಯುಷ್ಯ ಕಡಿಮೆ ಆಗ್ತದೆ ಎಂಬ ಪ್ರಜ್ಞೆ ಇರಬೇಕು. ಇರುವ ದಿನಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡೋಣ.
-ರತ್ನಾಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ