ಒಂದು ಒಳ್ಳೆಯ ನುಡಿ - 114
ಕಷ್ಟಗಳು ಒಂದರ ಹಿಂದೆ ಒಂದರಂತೆ ಬಂತೆಂದು ಕುಗ್ಗಬಾರದು. ಅದು ನಮ್ಮನ್ನು ನಾಶಪಡಿಸಲು, ಕುಗ್ಗಿಸಲು ಬರುವುದಲ್ಲ. ನಮ್ಮನ್ನು ಪರೀಕ್ಷೆಗೆ ಒಡ್ಡಲೂ ಇರಬಹುದು. ನಾವು ಗಟ್ಟಿಗರಾಗಲು ಇಂತಹ ಹಲವಾರು ಎಡರು ತೊಡರುಗಳನ್ನು ದಾಟಬೇಕಾಗುತ್ತದೆ. ಇನ್ನೂ ಹೆಚ್ಚು ತಲೆಯೆತ್ತಿ ನಿಲ್ಲುವಂತೆ ಮಾಡಲು, ನಮ್ಮ ಬೆಳವಣಿಗೆಗೆ ನಾಂದಿ ಇದು. ಏನನ್ನಾದರು ಸಾಧಿಸು ಎಂಬ ಎಚ್ಚರಿಕೆ ನೀಡಲು. ನಮಗೆ ಬಾಳಿನ ಹಾದಿಯಲ್ಲಿ ಸುಖವೇ ಸಿಗಬೇಕೆಂದರೆ ಹೇಗೆ? ಜೀವನ ಎನ್ನುವುದು ‘ನೆರಳು ಬೆಳಕಿನಾಟ’. ಒಂದನ್ನು ಬಿಟ್ಟು ಮತ್ತೊಂದಿಲ್ಲ. ಕತ್ತಲೇ ಇದ್ದರೆ ಹೇಗೆ? ಅದು ಸರಿದಾಗ ಬೆಳಕು ಬರಲೇ ಬೇಕು. ಬರಬೇಡ ಎಂದರೆ ಬಾರದೆ ಇರಲು ಸಾಧ್ಯವಿಲ್ಲ.ಹಾಗೆಯೇ ಕಷ್ಟ ಸುಖಗಳು ಸಹ ಬದುಕಿನ ಅವಿಭಾಜ್ಯ ಅಂಗಗಳು.
ನಾವು ಇತ್ತೀಚೆಗೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಓದುವ, ನೋಡುವ ವಿಷಯಗಳು, ದೃಶ್ಯಗಳು ಹೃದಯ ವಿದ್ರಾವಕ. ಯಾಕೆ ಹೀಗೆ? ಸಾಂತ್ವನದ ಕೊರತೆಯೇ, ತನ್ನವರೆಂಬ ಭಾವ ಸತ್ತು ಹೋಯಿತೇ, ನನಗಾರು ಇಲ್ಲವೆಂಬ ಮನೋಭಾವವೇ, ನಾನು ಅಥವಾ ನಾವು ಹೊರೆಯಾದೆವೆಂಬ ಆಲೋಚನೆಯೇ, ಎದೆ ಗಟ್ಟಿ ಸಾಲದಾಯಿತೇ? ವೃದ್ಧರಾದವರ ಬಗ್ಗೆ ಅಸಡ್ಡೆ ಅಸಹ್ಯವೇ, ಪುಟ್ಟ ಬಾಯಿ ಬಾರದ ಕಂದಮ್ಮಗಳನ್ನು ಸಹ ತಮ್ಮೊಂದಿಗೆ ಉಸಿರು ನಿಲ್ಲಿಸುವಷ್ಟೂ ನೋವೇ, ಮನಸ್ಸು ಕಲ್ಲಾಯಿತೇ? ಒಂದೂ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಕೊರತೆಯೇ? ನೈತಿಕ ಮೌಲ್ಯಗಳ ಕುಸಿತ, ಹೊಂದಾಣಿಕೆಯ ಕೊರತೆ ಇರಬಹುದೇ? ಸ್ವಾತಂತ್ರ್ಯ ಹೆಚ್ಚಾಯಿತೇ? ಒಂಟಿ ಜೀವನವೇ? ಏನೇ ಬರಲಿ ಇರುವುದೊಂದು ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು.ಮೊದಲು ಏನಾಗಿದೆ? ನಂತರ ಏನಾಗ್ತದೆ? ನಮಗೆ ಬೇಡ. ವರ್ತಮಾನವನ್ನು ಆಹ್ಲಾದಿಸೋಣ. ಮೊನ್ನೆಯವರೆಗೂ ಕಷ್ಟವೇ ಇರಲಿಲ್ಲ, ನಿನ್ನೆಯಿಂದ ಕಷ್ಟ ಆವರಿಸಿದೆ ಎಂದಾದರೆ, ಹಿಂದಿನ ಬದುಕಿನ ಸವಿನೆನಪುಗಳಿಲ್ಲವೇ? ಅದನ್ನು ಮೆಲುಕುಹಾಕಬಹುದಲ್ಲ? ಪ್ರವಾಹದ ನೀರು ಹರಿಯುವಾಗ ಕಸಕಡ್ಡಿಗಳನ್ನೆಲ್ಲ ಜೊತೆಗೆ ಒಯ್ಯಲು ನೋಡ್ತದೆ. ಆದರೆ ಅದೆಲ್ಲ ಆಚೀಚೆ ದಡಗಳಲ್ಲಿ ಸಂಗ್ರಹವಾಗುವುದು ಸಾಮಾನ್ಯ. ನಾವು ಸಹ ನೋವು ಕಷ್ಟಗಳ ಮೂಟೆಯನ್ನು ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ಮುಂದೆ ಹೋಗಲು ಕಲಿಯಬೇಕು. ಉತ್ತಮ ಶಿಕ್ಷಣ, ನೈತಿಕ ಮೌಲ್ಯಗಳನ್ನು ಮಕ್ಕಳ ಮಸ್ತಕದಲ್ಲಿ ತುಂಬಬೇಕು. ನೆರೆಹೊರೆ, ಸಮಾಜ, ಶಿಕ್ಷಕರು, ಹೆತ್ತವರು, ಮನೆಯ ಸದಸ್ಯರು ಈ ನಿಟ್ಟಿನಲ್ಲಿ ಸಹಕರಿಸಿದರೆ ಮಾತ್ರ ಇದೆಲ್ಲ ಸಾಧ್ಯ. ಬದುಕಿನ ಹಾದಿಯಲ್ಲಿ ಬರುವ ಹಗಲು ರಾತ್ರಿಗಳನ್ನು ಎದುರಿಸಿ ಮುನ್ನಡೆಯೋಣ.
ಓರ್ವ ಮಹನೀಯರಿಗೆ ತುಂಬಾ ಅಸೌಖ್ಯವಾಯಿತು. ಆಸ್ಪತ್ರೆಗೆ ಹೋಗಲು, ನೋಡಲು ಯಾರೂ ಇಲ್ಲ. ಪತ್ನಿಯೇ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ಮಾಡುವ ಸನ್ನಿವೇಶ ಆಯಿತು. ಅಂತೂ ಈಗ ಅಪಾಯದಿಂದ ಹೊರಬಂದಿದ್ದಾರೆ. ಇರುವ ಎರಡು ಮಕ್ಕಳೂ ವಿದೇಶದಲ್ಲಿ. ಈ ಮಹನೀಯರಿಗೆ ಹಣದ ಕೊರತೆಯಿಲ್ಲ, ಆದರೆ ಜನದ ಕೊರತೆಯಿದೆ. ಸರಿಯಾಗಿರುವಾಗ ಯಾರೂ ಬೇಡ. ಒಬ್ಬರ ಹತ್ತಿರವೂ ಪ್ರೀತಿ, ಆತ್ಮೀಯತೆಯಿಲ್ಲ. ಆರೋಗ್ಯವಿದ್ದಾಗ ಹಣ ಮಾಡುವುದೊಂದೇ ಗುರಿ. ಈಗ ಯಾರೂ ಇಲ್ಲ ಎಂದು ಹೇಳಿದರೆ ಆಗುತ್ತದೆಯೇ? ಸ್ವಲ್ಪವಾದರೂ ದಾನಧರ್ಮ ಇರುತ್ತಿದ್ದರೆ ಹೀಗಾಗುತ್ತಿತ್ತೇ? ನಾವು ಮಾಡಿದ್ದೇ ನಮಗೆ ಸಿಗುವುದು. ಎಲ್ಲರೊಂದಿಗೆ ಉತ್ತಮ ಬಾಂಧವ್ಯವಿರಲಿ. ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುಂದೆ ಹೋಗಲು ಕಲಿಯೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ