ಒಂದು ಒಳ್ಳೆಯ ನುಡಿ - 115

ಒಂದು ಒಳ್ಳೆಯ ನುಡಿ - 115

ನಮ್ಮ ಮಕ್ಕಳು ಅಂದರೆ ನಮಗೆ ವಾತ್ಸಲ್ಯ, ಪ್ರೀತಿ, ಮಮಕಾರ, ಕಾಳಜಿ ಎಲ್ಲವೂ ಇದೆ, ಇರಬೇಕು ಸಹ. ಆದರೆ ಎಲ್ಲದಕ್ಕೂ  ಇತಿಮಿತಿ, ಒಂದು ಚೌಕಟ್ಟು, ಬೇಲಿ, ಪರಿಧಿ ನಾವು ಹಾಕಿಕೊಳ್ಳಲೇ ಬೇಕು. ಒಂದು ವೇಳೆ ಹಾಕಿಕೊಳ್ಳದಿದ್ದರೆ ಏನಾಗಬಹುದೆಂದು ನಾವೆಲ್ಲರೂ ಕಂಡವರೇ.

ತಾಯಿ ತಂದೆಯರ ಜವಾಬ್ದಾರಿ ಸಾಮಾನ್ಯವಲ್ಲ, ಬಹಳ ಗುರುತರವಾದದ್ದು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಎಲ್ಲವನ್ನೂ ಪರಿಚಯಿಸುವುದು ಹಿತಕರ. ಮನೆಯೇ ಮೊದಲ ಪಾಠಶಾಲೆಯಲ್ಲವೇ? ನಮ್ಮ ಮಕ್ಕಳು ನಾವು ಪ್ರೀತಿಸಲೇ ಬೇಕು ಜೊತೆಗೆ ದಂಡಿಸುವುದ ಮರೆತರೆ ಹೇಗೆ? ದುಡಿಮೆ ಅನಿವಾರ್ಯ, ಹಾಗೆಂದು ಮಕ್ಕಳನ್ನು ಇಡೀ ದಿನ ಕಡೆಗಣಿಸಿ, ನಾಳೆಯ ದಿನ ಅವರ ಮೇಲೆ ಗೂಬೆ ಕೂರಿಸಿದರೆ ಹೇಗೆ? ಯಾಂತ್ರಿಕ ಬದುಕು ಮಗುವಿನ ಆಟಪಾಠ, ಬೆರೆಯುವಿಕೆ, ಸ್ನೇಹಪ್ರೀತಿ, ಒಡನಾಟ ಎಲ್ಲವನ್ನೂ ಇಲ್ಲವಾಗಿಸಿದೆ. ಏನೋ ಮಗು ಹೇಳಿದ್ದನ್ನು ತಂದು ಕೊಟ್ಟರೆ ಮುಗಿಯಿತು ಎಂಬ ಧೋರಣೆ. ನೈಜವಾದ ಮಗುವಿನ ಆಸೆ ಕೇಳುವವರೇ ಇಲ್ಲ, ಪುರುಸೊತ್ತೂ ಇಲ್ಲ. ಎಲ್ಲಾ ಗೊತ್ತಾಗುವಾಗ ಮಕ್ಕಳು ಪ್ರಾಯಕ್ಕೆ ಬಂದಿರುತ್ತಾರೆ. ಮತ್ತೆ ಹೇಳಿದಂತೆ ಕೇಳಲು ಅವರು ತಯಾರಿಲ್ಲ. ಎಲ್ಲಿ ಪರಸ್ಪರ ಅರಿವಿನ ಕೊರತೆ ಇರ್ತದೋ ಅದೇ ದ್ವೇಷವಾಗಿ ಹೊರಹೊಮ್ಮುತ್ತದೆ. ಸುತ್ತಲಿನ ಪರಿಸರವಾದರೂ ಪೂರಕವಾಗಿದೆಯೇ ಎಂದರೆ ಅದೂ ಇಲ್ಲ. ಮಗುವಿಗೆ ಕಷ್ಟ-ಸುಖ, ನೋವು-ನಲಿವು, ಸೋಲು-ಗೆಲುವು ಸಿರಿತನ-ಬಡತನ ಇವುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಎಷ್ಟು ಹೆತ್ತವರು ಮಾಡ್ತಾ ಇದ್ದಾರೆ ಎಂದರೆ ಕೇವಲ ಬೆರಳೆಣಿಕೆ ಮಾತ್ರ. ಮನೆಯ ಹಿರಿಯರು ಏನಾದರೂ ಬುದ್ಧಿವಾದ,ಅನುಭವಗಳನ್ನು ಹೇಳಿದರೆ ಸಹಿಸದ ಹೆತ್ತವರನ್ನೇ ಕಾಣುತ್ತೇವೆ. ಹಿರಿಯರು ಬೇಡ ಎನ್ನುವ ಈ ಕಾಲಘಟ್ಟ, ತಮಗೆ ಪುರುಸೊತ್ತಿಲ್ಲ, ಮಗು ಆಡಿದ್ದೇ ಆಟ ಮತ್ತೆ ಏನನ್ನು, ಎಷ್ಟು ಬಯಸಬಹುದು?. ಪ್ರಾಮಾಣಿಕತನದ ಕೊರತೆ ತಾಂಡವವಾಡುತ್ತಿದೆ. ಪಾಠ ಕಲಿಸುವ ಗುರುಗಳನ್ನು ಎದುರೇ ಅವಹೇಳನ, ನಿಂದನೆ ಮಾಡುವುದು ಕಾಣುತ್ತಿದೆ. ಗುರುಹಿರಿಯರಲ್ಲಿ ಭಕ್ತಿ, ವಿಶ್ವಾಸದ ಕೊರತೆ. ಈ ಎಲ್ಲವನ್ನೂ ತಿಳಿ ಹೇಳುವುದು ಹೆತ್ತವರ ಕರ್ತವ್ಯ.

ದುಡಿತ ಬದುಕಿಗಾಗಿ, ಕೂಡಿಡು ಮುಂದಿನ ಕಷ್ಟಕ್ಕಾಗಿ, ತನ್ನಂತೆಯೇ ಇತರರು, ಅವರ ಕಷ್ಟಕ್ಕೆ ಮರುಗು, ಸ್ವಲ್ಪ ದಾನಧರ್ಮ ಮಾಡು, ತಮ್ಮ ದುಡಿಮೆಯ ಹಿಂದೆ ಇದ್ದ ಕಷ್ಟದ ಅರಿವನ್ನು ಮಕ್ಕಳು ಬೆಳೆದಂತೆಲ್ಲ ಮೂಡಿಸುವುದು ಹಿರಿಯರ ಕೆಲಸವಾಗಬೇಕು. ಸ್ವಾತಂತ್ರ್ಯ ನೀಡೋಣ, ತಮ್ಮ ಅನಿಸಿಕೆ ಹೇಳಲಿ, ಆದರೆ ಯಾರಲ್ಲಿ,ಹೇಗೆ? ಎಷ್ಟು,ಯಾವಾಗ ಮಾತನಾಡಬೇಕು ಎಂಬುದನ್ನು ಕಲಿಸೋಣ. ಮಗುವಿನ ಜ್ಞಾನತೃಷೆಗೆ ನೀರು ಹೊಯ್ಯುವ ಕೆಲಸವಾಗಬೇಕು. ಮಗುವಿನ ಶಾಲಾ ಜೀವನ ಎಂದರೆ ವಸಂತ ಕಾಲದಂತೆ. ಚಿಗುರಿ ನಾಲ್ದೆಸೆ ಹಬ್ಬಿ ಹೆಮ್ಮರವಾಗಿ ಬೆಳೆಯಲು ಬೇಕಾದ ಎಲ್ಲವನ್ನೂ ನೀಡುವುದು ಸರಿಯಾದ ದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಮನೆಯ ನಂದಾ ದೀಪಗಳಾದ ಮಕ್ಕಳನ್ನು ಉತ್ತಮ ಗುಣ ಸಂಪನ್ನರಾಗಿ ರೂಪಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ : ಕುಂಪಲ ಪರಿಸರದ ಮಕ್ಕಳು