ಒಂದು ಒಳ್ಳೆಯ ನುಡಿ - 117
ನಾವು ಜನ್ಮವೆತ್ತಿ ಬಂದ ಮೇಲೆ ಏನಾದರೂ ಮಾಡಲೇಬೇಕು. ಬದುಕಬೇಕು, ಅದಕ್ಕೊಂದು ದಾರಿ ಬೇಕು. ಹಿರಿಯರು ಮುಂದಿನ ದಾರಿ ತೋರಿಸಿಕೊಡುವ ಕೆಲಸ ಮಾಡಿಯಾರು ಮತ್ತೆಲ್ಲ ನಮ್ಮ ಕೈಯಲ್ಲೇ ಇದೆಯಲ್ಲ. ಕಪ್ಪು-ಬಿಳಿ, ಸತ್ಯ-ಅಸತ್ಯ, ಪಾಪ-ಪುಣ್ಯ, ಒಳ್ಳೆಯ-ಕೆಟ್ಟ ನಾವು ಗುರುತಿಸುತ್ತೇವೆ. ಇವೆಲ್ಲವೂ ನಮ್ಮೊಂದಿಗೆ ಇರುವುದೇ ಆಗಿದೆ. ಇದನ್ನು ಬೇರೆ ಬೇರೆ ಮಾಡಲು ಸಾಧ್ಯವಿಲ್ಲ. ಒಂದಕ್ಕೊಂದು ಪೂರಕಗಳೇ ಆಗಿವೆ.
ಜೀವಿತದ ಹಾದಿಯಲ್ಲಿ ಕಷ್ಟ- ಸುಖ ಎರಡನ್ನೂ ದಾಟಿಕೊಂಡು ಹೋಗಿ ನೆಮ್ಮದಿಯನ್ನು ಕಾಣುವವನೇ ನಿತ್ಯಸುಖಿ. ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಪ್ರಜ್ಞನಾತ. ಯಾರು ಏನೆಂದರೂ ತಲೆ ಕೆಡಿಸಿಕೊಳ್ಳದೆ, ತನ್ನದೇ ಆದ ಸ್ವಂತ ವಿವೇಚನೆಯಿಂದ ವ್ಯವಹರಿಸುವವನೇ ನಿಜವಾದ ಜಾಣ. ಮನೆ ಎಂದ ಮೇಲೆ ಮನುಷ್ಯರು ಇರಲೇಬೇಕು. ಎಲ್ಲರೊಂದಿಗೆ ಹೊಂದಾಣಿಕೆ ಬೇಕು. ಒಬ್ಬರು ಉತ್ತರ ಇನ್ನೊಬ್ಬರು ದಕ್ಷಿಣವಾದರೆ ಅದನ್ನು ಮನೆ ಹೇಳಲಾಗದು. ಒಂದಕ್ಕೊಂದು ಪೂರಕ ಪೋಷಕ. ಕಷ್ಟ, ಬೇನೆ, ಬೇಸರಿಕೆ ಬಂದಾಗಲೇ ನಮಗೆ ಬದುಕಿನ ಅರಿವಾಗುವುದು. ರಾತ್ರಿ ಹಗಲಿನ ಹಾಗೆ. ಇರುಳು ಬಂದು ಹೋಗದೆ ಹಗಲಾಗದು. ಇದು ಪ್ರಕೃತಿ ನಿಯಮ ಧರ್ಮ ಸಹ. ಅದೇ ರೀತಿ ಬದುಕಿನಲಿ ಸಹ. ಸುಖವೇ ಇದ್ದವಗೆ ಕಷ್ಟದ ಅರಿವಾಗದು. ಆಗ ನೋಡಿ ಒಂದೊಂದೇ ರೋಗಗಳು ಅಥವಾ ಇನ್ನಾವುದೋ ತಲೆನೋವುಗಳು ಹುಟ್ಟಿಕೊಳ್ಳುತ್ತವೆ. ನಾವೇನಾದರೂ ನಾಲ್ಕು ಜನರಿಗೆ ಒಳ್ಳೆಯದು ಮಾಡಿದ್ದರೆ, ಆ ಫಲ ನಮ್ಮನ್ನು ಹಿಂಬಾಲಿಸಬಹುದು.
ಇಂದು ಕಷ್ಟವಾದರೆ ನಾಳೆಯಾದರೂ ಸುಖವಾಗಿರಬಹುದು ಸಾಮಾನ್ಯವಾಗಿ ಹೇಳುವ ಮಾತು. ಇಂದು ಸಂತೋಷದಲ್ಲಿರಲು ಮನಸ್ಸು ಮಾಡಬೇಕು, ಆಮೇಲೆ ನಾಳೆಯ ಯೋಚನೆ. ಇದ್ದುದರಲ್ಲಿ ಸಂತಸ ಕಾಣಬೇಕು, ನಾಳೆ ಸಿಗಬಹುದೆಂದು ಇಂದಿನ ಕ್ಷಣಗಳನ್ನು ಹಾಳುಮಾಡಿಕೊಂಡರೆ ಆಯುಷ್ಯದಲ್ಲಿ ಒಂದು ದಿನ ಕಳೆದು ಹೋಗುವುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಯಾವಾಗ ದು:ಖವನ್ನು ನಿಯಂತ್ರಿಸಲು ಮರೆಯಲು ಆಗುವುದಿಲ್ಲವೋ, ನಾವೇ ಅದರ ಪೋಷಣೆ ಮಾಡಿದಂತಾಗುತ್ತದೆ ಕರೆಯದೆ ಬರುವ ಅತಿಥಿಯಂತೆ.
ಯಾರಾದರು ಏನಾದರೂ ರಂಗು ರಂಗಾಗಿ ಹೇಳಿದರೆ ನಮ್ಮ ವಿವೇಚನೆ ಅಲ್ಲಿ ಕೆಲಸಮಾಡಬೇಕು. ಹೇಳಿದ್ದನ್ನು ಕೇಳಿಸಿಕೊಂಡು ಅಗತ್ಯ ಇದ್ದುದನ್ನು ಸ್ವೀಕರಿಸೋಣ. ಉಳಿದದ್ದು ಬರಿಯ ಜಳ್ಳುಪೊಳ್ಳುಗಳೆಂದು ತಲೆಯಿಂದ ಹೊರಗೆ ಹಾಕೋಣ. ‘ಅಪೇಕ್ಷೆ ಎನ್ನುವುದೇ ಬೀಜ, ದು:ಖವೇ ಅದರ ಫಲ’. ಅಪೇಕ್ಷೆಗೆ ಇತಿಮಿತಿ, ಲಕ್ಷ್ಮಣರೇಖೆ ನಾವೇ ಎಳೆದುಕೊಂಡರೆ ಬದುಕು ಹೊನ್ನು. ಇನ್ನು ಬೇಕು ಎಂಬುದೇ ಬಡತನ. ಸಾಕು ಇಷ್ಟು ನಮ್ಮ ಭಾಗ್ಯದಲ್ಲಿರುವುದೇ ಸಿರಿವಂತಿಕೆ. ಹಾಗಾದರೆ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರಬೇಕು ಈ ಬೇಕು-ಬೇಡಗಳ ಮಧ್ಯೆ. ಈ ಜೀವನಕ್ಕೊಂದು ಅರ್ಥ ಬರುವುದು ನಮ್ಮ ವಿಚಾರಶೀಲತೆ, ಯೋಚನೆಗಳು, ಕೈಗೊಳ್ಳುವ ಕಾರ್ಯಗಳು ಮತ್ತು ದೃಢ ನಿರ್ಧಾರಗಳಿಂದ. ಅದರಲ್ಲಿ ಸಫಲರಾಗೋಣ. ಹೇಗೆ ನೀರಿನ ಮೇಲೆ ದೋಣಿ ಸಾಗುವುದೋ ಹಾಗೆ. ದೋಣಿಯೊಳಗೆ ನೀರಿದ್ದರೆ ಮುಳುಗಬಹುದು, ಅದು ನೀರಿನ ಮೇಲೆಯೇ ತೇಲಬೇಕು, ಹಾಗಿದ್ದರೆ ಮಾತ್ರ ಆ ದೋಣಿಗೊಂದು ಬೆಲೆ. ಅಂತೆಯೇ ನಾವು ಸಹ ಇರಲು ಪ್ರಯತ್ನಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ