ಒಂದು ಒಳ್ಳೆಯ ನುಡಿ - 118
ಜೀವನದಲ್ಲಿ ಕಷ್ಟ -ಸುಖ ಸಾಮಾನ್ಯ. ಸುಖವೇ ಬೇಕೆಂದರೆ ಹೇಗೆ? ಕಷ್ಟ ಪಟ್ಟು ಆಮೇಲೆ ಸುಖ ಬರಬೇಕು. ಆ ಸುಖದಲ್ಲಿ ನೆಮ್ಮದಿ, ಆತ್ಮತೃಪ್ತಿ, ಸಂತೋಷ ಎಲ್ಲವೂ ಇದೆ. ಸುಲಭದಲ್ಲಿ ಎಲ್ಲಾ ಸಿಗುವ ಹಾಗಿದ್ದರೆ, ಇಂದು ಪ್ರಪಂಚ ಹೀಗಿರುತ್ತಿತ್ತೇ? ಕೆಟ್ಟ ಹಾದಿಯ ತುಳಿದವರಿಗೆ ಸಂಪತ್ತು ಒಮ್ಮೆಯೇ ಸಿಗಬಹುದು. ಅದು ಕೇವಲ ಕ್ಷಣಿಕ ಹಾರಾಟ, ಮೆರೆದಾಟ, ಮನಸ್ಸಿನೊಳಗೆ ಡವಡವ ಆಗುತ್ತಿರುತ್ತದೆ. ಏನೂ ಇಲ್ಲದವಗೆ ಎಲ್ಲವೂ ಎಲ್ಲಿಂದ ಬಂತು ಎಂಬುದನ್ನು ಪರಿಸರದವರು ಯೋಚಿಸುತ್ತಾರೆ. ಅಲ್ಲಿಂದ ಸಂಶಯಗಳು ಆರಂಭವಾಗಿ ಕಡೆಗೆ ಒಂದು ದಿನ ಬದುಕು ಛಿದ್ರವಾದಾಗ ಯಾರೂ ಬರಲಾರರು ಆತನನ್ನು ಕಾಪಾಡಲು.
ಮಾತಿಗೆ ಹೇಳುವುದಿದೆ 'ಅವನು ಚಿನ್ನದ ಚಮಚ ಬಾಯಿಯಲ್ಲಿಟ್ಟುಕೊಂಡು ಹುಟ್ಟಿದ್ದಾನೆ'. ಅಷ್ಟೂ ಐಶ್ವರ್ಯ ಇದೆ ಅವನಿಗೆ. ದುಡಿತ,ಕಷ್ಟ ಯಾವುದೂ ಗೊತ್ತೇ ಇಲ್ಲ. ಮುಂದೊಂದು ದಿನ ಎಲ್ಲವೂ ಕಳಕೊಂಡಾಗ ಆತನಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಆಗುವುದು. ಹೆತ್ತವರು ಬದುಕುವುದನ್ನು, ಜೀವನ ಶಿಕ್ಷಣವನ್ನು ಕಲಿಸಲೇ ಇಲ್ಲ. ಅವನ ತೋಳುಗಳಲ್ಲಿ ಶಕ್ತಿಯಿದೆ ಎಂಬುದು ಗೊತ್ತೇ ಇಲ್ಲ.
ಬದುಕಿನಲಿ ಹೊಯ್ದಾಟ ಸಹಜ. ಆದರೂ ಒಂದು ನಿಶ್ಚಿತ ಗುರಿ ಬೇಕು. ಸಕಾರಾತ್ಮಕ ಆಲೋಚನೆಗಳಿರಬೇಕು. ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಿ ಮುಂದೆ ಹೋಗಲು ತಯಾರಿರಬೇಕು. ನಮ್ಮ ದೌರ್ಬಲ್ಯ, ಹಿಂಜರಿಕೆ, ಹತಾಶೆಗಳನ್ನೇ ತಾಳ್ಮೆಯಿಂದ ದೂರೀಕರಿಸುವ ತಂತ್ರ ನಾವೇ ಅರಿತರೆ ಬದುಕಿನಲ್ಲಿ ಯಶಸ್ಸು ಖಂಡಿತ. ಇಲ್ಲಿ ಮನಸ್ಸು ಮಾಡುವುದು ಮುಖ್ಯ. ಶ್ರದ್ಧೆ, ನಿಶ್ಚಿತ ಗುರಿಯಿಂದ ಹಲವಾರು ಜನರ ಸಹಕಾರದಿಂದ ನಮ್ಮ ಕಷ್ಟಗಳನ್ನು ಸರಳೀಕರಿಸಿ, ಸತತ ಪರಿಶ್ರಮದಿಂದ ನೆಮ್ಮದಿಯ ಜೀವನ ಮಾಡಬಹುದು. ನಮ್ಮ ಕೈಯಲ್ಲೇ ಇದೆ. ಮನಸ್ಸು ಮುಖ್ಯ. ಬದುಕಿನ ದಾರಿಗಳನ್ನು ಕಂಡುಕೊಳ್ಳುವ ಕೌಶಲ ನಮಗೆ ಬಿಟ್ಟ ವಿಚಾರ. ಬೇಕಾದ್ದನ್ನು ಆರಿಸಿಕೊಳ್ಳೋಣ. ಯಾವತ್ತೂ ಭರವಸೆ ಕಳೆದುಕೊಳ್ಳಬಾರದು. ಒಳಮನಸ್ಸನ್ನು ಜಾಗೃತಿ ಗೊಳಿಸಿ, ಕೆಲಸವನ್ನು ಮಾಡಿದಾಗ ಪ್ರಯತ್ನಕ್ಕೆ ತಕ್ಕ ಫಲ ಸಿಗಬಹುದು. ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ನಮಗಿರಲಿ. ಸವಾಲುಗಳೇ ಶಕ್ತಿಯಾಗಲಿ, ದುಡಿಮೆಯ ಅಂಗವಾಗಲಿ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ