ಒಂದು ಒಳ್ಳೆಯ ನುಡಿ - 119
ಸಂಸಾರದಲ್ಲಿ ಜೀವನ ಎಂಬುದು ಸಾಗರವನ್ನು ದಾಟಿದಂತೆಯೇ ಸರಿ. ಸಾಗರವನ್ನು ದಾಟಲು ಸಾಧ್ಯವಿದೆಯೇ? ಮಹಾಮಹಿಮ, ಅಪ್ರತಿಮ ಬಲಶಾಲಿ ಹನುಮಂತ ಸಮುದ್ರೋಲ್ಲಂಘನ ಮಾಡಿದಷ್ಟು ಸುಲಭವಲ್ಲ. ಆತನಿಗೆ ಶ್ರೀರಾಮನ ಕಾರುಣ್ಯವಿತ್ತು, ಸ್ವತ: ಭಗವಂತನ ಪರಮಭಕ್ತ ಓದಿದ ವಿಚಾರಗಳು, ಕೇಳಿ ತಿಳಿದ ಸಂಗತಿಗಳು. ಹಾಗಾದರೆ ಮನುಷ್ಯರಾದ ನಾವುಗಳು ಈ ಶರಧಿಯನ್ನು ಹೇಗೆ ದಾಟಬಹುದು?
ತಾಯಿ ತನ್ನ ಕರುಳಕುಡಿಗೆ ಅಮೃತಸಾದೃಶವಾದ ಎದೆಹಾಲನ್ನು ಉಣಿಸಿ ಪೊರೆಯುತ್ತಾಳೋ, ಹಾಗೆ ಈ ಭೂಮಿ ತಾಯಿ ನಮ್ಮನ್ನು ಎಲ್ಲರನ್ನೂ ಹೊತ್ತಿದ್ದಾಳೆ. ನಾವು ಉತ್ತಮ ಗುಣಗಳಿಂದ ಶೋಭಿಸಿದರೆ ಹೆತ್ತವರಿಗೆ ಹೇಗೆ ಹೆಮ್ಮೆಯೋ ಹಾಗೆ ಭೂಮಿತಾಯಿ ಸಹ ಹೆಮ್ಮೆ ಪಡುತ್ತಾಳೆ ಹೊತ್ತಿದ್ದಕ್ಕೆ ಸಾರ್ಥಕವಾಯಿತೆಂದು.
ಈ ಸಂಸಾರವೆಂಬುದನ್ನು ಒಂದು ಭಯಂಕರವಾದ ಸರ್ಪಕ್ಕೆ ಹೋಲಿಸಬಹುದು. ಎಲ್ಲಾ ದಿಕ್ಕುಗಳಿಂದಲೂ ನಮ್ಮನ್ನು ಕಚ್ಚಲೋ ನುಂಗಲೋ ಬರುವಾಗ ನಾವು ಹೇಗೆ ಅದರಿಂದ ಪಾರಾಗಬಹುದೆಂದು ಯೋಚಿಸಿ, ಮುಂದಕ್ಕೆ ಕಾಲುಗಳನ್ನು ಊರಬೇಕು. ಈ ಸಂಕಟದಿಂದ ಹೊರಬರಲು ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಬೇಕು. ಅದುವೇ ಭಗವಂತನ ಸೇವೆ. ಬರಿಯ ಆಡಂಬರದ ಪೂಜೆಗಳಿಂದ ದೇವರನ್ನು ಒಲಿಸುತ್ತೇನೆ ಎಂದರಾಗದು. ಜೊತೆಗೆ ಮಾನವೀಯತೆಯೂ ಇರಬೇಕು. ಹೊರಗೆ ಆಡಂಬರ ಒಳಗೆ ಬರಿಯ ಮಸಿಕೆಂಡಂದಂತಾಗಬಾರದು. ದಾನಧರ್ಮ,ನೈತಿಕ ಪ್ರಜ್ಞೆ, ಕರುಣೆ, ಕಿರಿಯರಲ್ಲಿ ಪ್ರೀತಿ, ಹಿರಿಯರಲ್ಲಿ ಗೌರವ ಇದೆಲ್ಲ ಹೊಳೆಯುವ ನೈತಿಕ ಆಭರಣಗಳು. ಈ ರತ್ನಗಳನ್ನು ಯಾವನು ತನ್ನ ವಶ ಮಾಡಿಕೊಂಡಿರುವನೋ, ಅವನು ಸಂಸಾರವೆಂಬ ಭಯಂಕರ ಸರ್ಪದ ಹಿಡಿತದಿಂದ ಹೊರಬಂದಾನು. ಇಲ್ಲದವ ಕಚ್ಚಿಸಿಕೊಂಡು ಯಾತನೆ ಪಟ್ಟಾನು.
ಸಾಮಾನ್ಯರೋಗಕ್ಕೆ ವೈದ್ಯರು ಮದ್ದು ಕೊಡುವರು. ಆತ್ಮಜ್ಞಾನವೆಂಬ ಕಣ್ಣನ್ನು ತೆರೆಸುವ ರೋಗಕ್ಕೆ ನಮ್ಮಲ್ಲೇ ಔಷಧ ಅಡಗಿದೆ. ಮಾಡುವ ಮನಸ್ಸಿರಬೇಕಷ್ಟೆ. ಧರ್ಮ ಅಧರ್ಮ, ರಾಗ ದ್ವೇಷ, ಜನನ ಮರಣ, ಶುಭ ಅಶುಭ, ಸುಖ ದು:ಖ, ಇಷ್ಟ ಅನಿಷ್ಟ, ಪುಣ್ಯ ಪಾಪ, ಮಾನ ಅಪಮಾನ ಇವೆಲ್ಲ ಸಂಸಾರದಲ್ಲಿ ಅಡಕವಾದ ದ್ವಂದ್ವಗಳು. ಇವುಗಳನ್ನು ದಾಟಿಕೊಂಡು ಬಾಳುವುದೇ ಸಂಸಾರದ ಗುಟ್ಟು, ನಮ್ಮ ಚಾಕಚಕ್ಯತೆ. ಯಾರಿಗೂ ಯಾರನ್ನೂ ಕಾಯದೇ ನಮ್ಮ ಶಕ್ತಿ ಸಾಮರ್ಥ್ಯ ಯುಕ್ತಿಗಳ ಬಳಸಿ ನಾವು ಮಾಡುವ ಕೆಲಸಗಳಿಂದ ಎಲ್ಲಾ ಜಂಜಾಟಗಳನ್ನು ದಾಟಿ ಬದುಕು ನಡೆಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ