ಒಂದು ಒಳ್ಳೆಯ ನುಡಿ - 122
![](https://saaranga-aws.s3.ap-south-1.amazonaws.com/s3fs-public/styles/article-landing/public/screen-1.jpg?itok=NFi_-HpL)
ಕಳೆದ ಕಾಲವಾಗಲಿ, ವಯಸ್ಸಾಗಲಿ, ಸಮಯವಾಗಲಿ ಮರಳಿ ನಮ್ಮ ಬದುಕಿನಲೆಂದೂ ಬರಲಾರದು. ಇನ್ನೇನು ದಶಂಬರ ೩೧ ಬಂದೇ ಬಿಟ್ಟಿತು. ಏನೇನೆಲ್ಲ ನೋಡಿದೆವು, ಓದಿದೆವು, ಆಪ್ತರನ್ನು, ಬಂಧು ಬಳಗದವರನ್ನು, ಕುಟುಂಬ ಸದಸ್ಯರನ್ನು ಕಳೆದುಕೊಂಡೆವು ವಕ್ಕರಿಸಿದ ಮಹಾಮಾರಿಗೆ. ಮಾನವನ ಬದುಕಿನ ಹಾದಿ ತಿರುವು ಮುರುವಾಯಿತು. ಮಕ್ಕಳ ಕಲಿಕಾ ಚಟುವಟಿಕೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಯಿತು. ‘ಕಾಲಾಯ ತಸ್ಮೈ ನಮಃ’ ಹೇಗೋ ಸುಧಾರಿಸಿಕೊಂಡು ಹೊಂದಾಣಿಕೆ ಮಾಡಿಕೊಂಡು ಹೋಗ್ತಾ ಇದ್ದೇವೆ.
ನಮ್ಮದೇ ಆದ ಸಾಮಾಜಿಕ ರೀತಿ ನೀತಿ, ಜವಾಬ್ದಾರಿಗಳಿವೆ. ಬದುಕು ಕಟ್ಟುವುದು ಅನಿವಾರ್ಯವಲ್ಲವೇ? ಬಾಹ್ಯ ಆಡಂಬರ ಬೇಡ. ಅದರಿಂದ ಪ್ರಯೋಜನವೂ ಇಲ್ಲ. ಆಕಳ ಕೊರಳಿಗೆ ಗಂಟೆ ಕಟ್ಟಿದರೆ ನಾದ ಕೇಳಬಹುದು. ಅದೇ ಆಕಳಿಗೆ ಬೆಲೆ ಅದರ ವಯಸ್ಸು ಮತ್ತು ಅದು ಕೊಡುವ ಹಾಲಿನ ಮೇಲೆ ನಿರ್ಧರಿಸಲ್ಪಡುತ್ತದೆ. ದುಡಿದು ಉಣ್ಣುವುದೇ ಭೂಷಣ ಮತ್ತು ಅವನ ಕರ್ತವ್ಯ ಸಹ. ‘ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು’. ಅದು ಕರಗಬಹುದು. ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನಕ್ಕೆ ಬರಬಹುದು? ದಿನಾ ಬುತ್ತಿ ಕಟ್ಟುವ ಕೆಲಸವಲ್ಲ, ಆ ಬುತ್ತಿಯೊಳಗೆ ಹೊಟ್ಟೆ ಹಸಿವನ್ನು ನೀಗಿಸಲು ಬೇಕಾದ್ದನ್ನು ತುಂಬಿಸಲಿರುವುದನ್ನು ನಾವು ಸಂಪಾದಿಸಬೇಕು. ಕಷ್ಟ ಆಯಿತೆಂದು ಸುಮ್ಮನೆ ಕುಳಿತರಾಗದು. ಹರಿಯುವ ನೀರು ಅಡೆತಡೆಗಳನ್ನು ದಾಟಿಕೊಂಡು ಹರಿಯುವುದಲ್ಲವೇ? ಹಾಗೆಯೇ ನಮ್ಮ ಬಾಳೆಂಬ ಬಂಡಿ ಸಾಗಲು ಪ್ರಯತ್ನ ಬೇಕು. ಈ ಪ್ರಯತ್ನಕ್ಕೆ ಬೇಕಾದ ಪೂರಕ ಸಾಮಾಗ್ರಿಗಳನ್ನು ನಾವೇ ಅರಸಬೇಕಷ್ಟೆ. ಅದು ನಮ್ಮ ಸಾಮರ್ಥ್ಯದಲ್ಲಿದೆ. ಸುಮ್ಮನೆ ಕಾಲಹರಣ ಮಾಡಿದರೆ ಕಾಲವಾಗಲಿ, ಸಮಯವಾಗಲಿ, ಆಯುಷ್ಯವಾಗಲಿ ನಿಲ್ಲದು. ಅದು ಅದರ ಪಾಡಿಗೆ ಹೋಗ್ತಾ ಇರುತ್ತದೆ.
ನಾವು ಗಳಿಕೆ ಮಾಡಬೇಕಾದರೆ ಒಮ್ಮೆಯೇ ಆಗದು. ಸಾವಧಾನವಾಗಿ ಗಳಿಸಬೇಕು. ’ತೆನೆ ತೆನೆ ಸೇರಿ ಅಲ್ಲವೇ ರಾಶಿಯಾಗಲು ಸಾಧ್ಯ’. ಆರಂಭದಲ್ಲೇ ದೊಡ್ಡ ಕೆಲಸ ಸಿಗಬೇಕೆಂದರೆ ಹೇಗೆ? ಸಿಕ್ಕಿದ ಕೆಲಸವನ್ನು ಶ್ರದ್ಧೆಯಲ್ಲಿ ಮಾಡಬೇಕು. ನಂತರ ಒಳ್ಳೆಯದಾಗಬಹುದೆಂಬ ಭರವಸೆಯಿರಬೇಕು. ಬುದ್ಧಿವಂತ ಯಾವತ್ತೂ ಒಂದು ಕಾಲನ್ನು ನೆಲದ ಮೇಲೆ ಊರಿದವನು ಇನ್ನೊಂದು ಕಾಲನ್ನು ಊರಿ ನಿಲ್ಲುತ್ತಾನೆ. ಮುಂದೆ ಸ್ಥಳ ಸರಿಯಿದೆಯೇ ನೋಡದೆ ವಿನಃ ಮೊದಲೂರಿದ ಕಾಲನ್ನು ತೆಗೆಯನು. ಅಷ್ಟೂ ಆಲೋಚನೆ ಅವನಿಡುವ ಹೆಜ್ಜೆಗಳಲ್ಲಿದೆ. ಅದೇ ರೀತಿ ಬಂದ ನೋವು ಕಷ್ಟ ಎಲ್ಲಾ ಮರೆತು ಇರುವುದರಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಾ ೨೦೨೨ಕ್ಕೆ ಕಾಲಿಡೋಣ. ಉತ್ತಮ ನಿರೀಕ್ಷೆಗಳೊಂದಿಗೆ ಮುಂದಡಿಯಿಟ್ಟು ಜಯಿಸಬಲ್ಲೆ ಎಂಬ ನಂಬಿಕೆಯ ಪಾಯದ ಮೇಲೆ ನಿಲ್ಲೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ