ಒಂದು ಒಳ್ಳೆಯ ನುಡಿ - 122

ನಮ್ಮ ಈ ದೇಹ ಒಂದು ಅದ್ಭುತ ಮತ್ತು ವಿಸ್ಮಯ. ಒಳ್ಳೆಯದು ಕೆಟ್ಟದು ಎಲ್ಲಾ ಈ ದೇಹದಿಂದಲೇ ಎಂಬುದು ಸ್ಪಷ್ಟ. ಒಂದು ಯಂತ್ರಕ್ಕೆ ಹೋಲಿಸಬಹುದು. ಕೋಪ-ತಾಪ, ಸಿಟ್ಟು-ಸೆಡವುಗಳಿಂದ ಇನ್ನಿಲ್ಲದ ಕಾಯಿಲೆ, ಕಲ್ಮಶಗಳ ಉಗಮ ದೇಹದಲ್ಲಾಗುತ್ತದೆ. ಮನಸ್ಸಿನಲ್ಲಿ ಉಂಟಾಗುವ ಎಲ್ಲಾ ಭಾವನೆಗಳೂ ಪರಿಣಾಮ ಬೀರುವುದು ದೇಹದ ಮೇಲೆ. ಈ ಶರೀರವನ್ನು ಚೊಕ್ಕಟವಾಗಿಡುವುದು ನಮ್ಮ ಮೊದಲ ಕರ್ತವ್ಯ. ಸಂಪತ್ತು, ಭೂಮಿ, ಗಂಡ, ಹೆಂಡತಿ, ಮಕ್ಕಳು ಎಲ್ಲವನ್ನೂ ಪಡೆಯಬಹುದು. ಆದರೆ ಶರೀರವೇ ಹೋದರೆ ಮರಳಿ ಪಡೆಯಲಾಗದು.
ಒಳ್ಳೆಯ ಕಾರ್ಯಗಳನ್ನೇ ಮಾಡೋಣ. ಶರೀರವೆಂಬ ತೋಟವನ್ನು, ಮನಸ್ಸೆಂಬ ತೋಟಗಾರ ಮಾಲಿಯಂತೆ ಜವಾಬ್ದಾರಿ ನಿರ್ವಹಿಸುವ ಮೂಲಕ, ಚಟುವಟಿಕೆ ಕೆಲಸವೆಂಬ ಗೊಬ್ಬರ ಹಾಕಿ ಆರೋಗ್ಯವಾಗಿಡೋಣ. ಸೋಮಾರಿತನವ ಬಡಿದೋಡಿಸೋಣ. ಮೂಗಿದ್ದ ಮೇಲೆ ಶೀತ, ನೆಗಡಿ ಸಹಜ. ನೆಗಡಿ ಆಗದ ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅದು ಬಿಟ್ಟು ಶೀತ ನೆಗಡಿಯಾಗುವ ಮೂಗನ್ನೇ ಕತ್ತರಿಸಲಾಗದು. ನಾವು ಸೇವಿಸುವ ಆಹಾರಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ವಿಪರೀತ ಹಸಿವೆ ಆದಾಗ ನಮಗೆ ಸಿಟ್ಟು, ಕೋಪ ಬರುವುದು ಹೆಚ್ಚು. ಹಾಗಾದರೆ ಆ ಸಿಟ್ಟಿಗೆ ಪರಿಹಾರ ನಮ್ಮಲ್ಲೇ ಇದೆ. ಕಾಲಕಾಲಕ್ಕೆ ಆಹಾರ ಸೇವಿಸುವುದು. ಸೇವಿಸಬೇಕಾದರೆ ದುಡಿಯಬೇಕು, ಗಳಿಸಬೇಕು. ಎಲ್ಲಾ ಒಂದಕ್ಕೊಂದು ಸಂಬಂಧ. ‘ಸಾವಿಗೆ ಔಷಧವಿಲ್ಲ, ರೋಗಕ್ಕೆ ಔಷಧವಿದೆ’ ಈ ಪ್ರಜ್ಞೆ ನಮಗಿರಬೇಕು. ಈ ಔಷಧ ನಮ್ಮೊಳಗೆಯೇ ಇದೆ. ನಾವು ಮಾತ್ರ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿ ಎಡವಿದ್ದೇವೆ.
ತಿನ್ನುವ ಆಹಾರ ಚೆನ್ನಾಗಿದ್ದರೆ, ಸತ್ವವೂ ಇರುತ್ತದೆ, ಶರೀರಕ್ಕೆ ಪೋಷಣೆಯೂ ಸಿಗುತ್ತದೆ. ಚಿತ್ತಶುದ್ಧಿಯಾಗಿ ಸಂಕಲ್ಪ ಸಿದ್ಧಿಸುತ್ತದೆ. ಪ್ರಕೃತಿಯ ವಿಕೃತಿ ಮಾಡಿ ಇಲ್ಲದ ಕಾಯಿಲೆಗಳಿಗೆ ಆಮಂತ್ರಣಕೊಟ್ಟು ಈಗ ಹೀಗಾಯಿತಲ್ಲ ಎಂದರೆ ಹೇಗೆ? ಮೂಲ ಹುಡುಕಿ ಸರಿಪಡಿಸುವುದು ನಮ್ಮೆಲ್ಲರ ಕರ್ತವ್ಯ. ಯಾವುದೋ ಒಂದು ಆರೋಗ್ಯಸೂತ್ರ ನೆನಪಿಗೆ ಬಂತು. ಸೇವಿಸುವ ಆಹಾರ ಹೇಗಿರಬೇಕೆಂದರೆ ‘ಕಾಲು ಬೆಚ್ಚಗೆ, ಹೊಟ್ಟೆ ಮೆತ್ತಗೆ, ತಲೆ ತಣ್ಣಗೆ’ ಇರಬೇಕಂತೆ. ಇವು ಆರೋಗ್ಯದ ಸೂತ್ರಗಳಂತೆ. ಪ್ರಾಣಿಗಳು ಸಹ ಗಬಗಬ ತಿನ್ನುತ್ತವೆ. ಆದರೆ ಮತ್ತೆ ಮೆಲುಕುಹಾಕುತ್ತವೆ. ನಾವು ಗಬಗಬ ತಿಂದರೆ ನೆತ್ತಿಹತ್ತಬಹುದು. ಸಾವಧಾನವಾಗಿ ತಿನ್ನೋಣ, ಉತ್ತಮ ಆಹಾರ ಸೇವಿಸೋಣ, ನಿರೋಗಿಗಳಾಗಲು ಪ್ರಯತ್ನಿಸೋಣ. ಸದಾ ಚಟುವಟಿಕೆಯಿಂದ ಇರೋಣ. ಮನಸ್ಸು-ಆಹಾರ-ಶರೀರ ಎಲ್ಲವೂ ಒಂದಕ್ಕೊಂದು ಪೂರಕ ಮತ್ತು ಪೋಷಕ ಅರಿತು ಜೀವಿಸೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ