ಒಂದು ಒಳ್ಳೆಯ ನುಡಿ - 123

ಒಂದು ಒಳ್ಳೆಯ ನುಡಿ - 123

‘ನಿಂದಕರು’ ನಮ್ಮ ಹತ್ತಿರವೇ ಇರಬೇಕಂತೆ. ಎಷ್ಟು ನಮ್ಮನ್ನು ನಿಂದಿಸುವರೋ ಅಷ್ಟು ನಾವು ಗಟ್ಟಿಯಾಗಲು ನಮಗೆ ಅವಕಾಶ ಅವರೇ ಮಾಡಿಕೊಟ್ಟ ಹಾಗೆ ಆಗುವುದಂತೆ. ಕಬ್ಬಿಣವನ್ನು ಕಾಯಿಸಿ ಬಡಿದಾಗ ಅದು ಹೇಳಿದ್ದು ಕೇಳುತ್ತದೆ ನೋಡಿ. ನಾನು ಕಬ್ಬಿಣ, ನಾನು ಗಟ್ಟಿ ಎಂದು ಹೇಳುವುದಿಲ್ಲ. ತಗ್ಗಿ ಬಗ್ಗಿದಾಗಲೇ ನಾವು ಮನುಷ್ಯರಾಗಲು ಸಾಧ್ಯ. ಅದಕ್ಕೆ ಅಲ್ಲವೇ ಹೇಳುವುದು ಚಿಕ್ಕ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳಿ ಸರಿದಾರಿಗೆ ತರುವ ವಯಸ್ಸಲ್ಲಿ ತರಲೇಬೇಕು. ಇಲ್ಲದಿದ್ದರೆ ‘ಗಿಡವಾಗಿ ಬಗ್ಗದ್ದು ಬೆಳೆದು ಮರವಾದ ಮೇಲೆ ಬಗ್ಗಲುಂಟೇ?’ ತೆಗಳುವವರೇ ಇಲ್ಲ, ಕೊರತೆ ಹೇಳುವವರೇ ಇಲ್ಲ, ಮಾಡಿದ್ದೆಲ್ಲ ಸರಿ ಎಂದು ಗೋಣು ಆಡಿಸಿದರೆ ನಮಗೆ ತಿದ್ದಿಕೊಳ್ಳಲು, ಬೆಳೆಯಲು, ಪ್ರಗತಿ ಸಾಧಿಸಲು, ಇನ್ನಷ್ಟು ಉತ್ತಮರಾಗಲು ಅವಕಾಶವಿಲ್ಲ. ನಾವು ಮಾಡಿದ್ದೇ ಸರಿ ಎಂಬ ಧೋರಣೆಯಲ್ಲಿದ್ದು ಬಿಡುತ್ತೇವೆ. ಮತ್ತೆ ಜೀವಮಾನದಲ್ಲಿ ತಿದ್ದಲು ಸಾಧ್ಯವಿಲ್ಲ.

‘ಒಂದನ್ನು ಪಡೆಯಲು ಒಂದನ್ನು ತ್ಯಾಗ ಮಾಡಬೇಕಂತೆ’ ಹಾಗೆಯೇ ಉತ್ತಮ ಸಂಸ್ಕಾರ, ಆಚಾರ ವಿಚಾರ, ನ್ಯೆತಿಕಮೌಲ್ಯಗಳನ್ನು ಎಳೆಯ ಪ್ರಾಯದಲ್ಲಿ ಕಲಿಸಲೇ ಬೇಕು, ಆಗ ಸ್ವಲ್ಪ ಕಷ್ಟಪಡಬೇಕು. ಕುಳಿತಲ್ಲಿಗೆ ಎಲ್ಲವೂ ಆಗದು. ಹೊಗಳಿಕೆ, ತೆಗಳಿಕೆ, ಪ್ರೋತ್ಸಾಹ, ಕಾಲೆಳೆಯುವುದು ಇದೆಲ್ಲವೂ ಇದ್ದಾಗಲೇ ಬೆಳೆಯಲು,ಗಟ್ಟಿತನ ಮೂಡಲು ಸಾಧ್ಯ. ಮುಂದೆ ಸಮಾಜದಲ್ಲಿ ಯಾವುದೇ ಕಷ್ಟ ಬಂದರೂ ಎದುರಿಸುವ ಮನೋಭಾವನೆ ಬೆಳೆಯಲು ಸಹಕಾರಿ. ಹೇಳುವಾಗ ಮಾತ್ರ ಜಾಗ್ರತೆ ಮಾಡಬೇಕು. ಅನಾಹುತಕ್ಕೆ ಕಾರಣವಾಗಬಾರದು.

ಕೊರತೆ ಹೇಳುವ ಕ್ರಮದಲ್ಲಿ, ಧಾಟಿಯಲ್ಲಿ ಹೇಳಬೇಕು. ಮುಖಕ್ಕೆ ಹೊಡೆದ ಹಾಗೆ ಹೇಳುವ ಅಭ್ಯಾಸ ಕೆಲವರಲ್ಲಿದೆ. ಅದು ಸರಿಯಲ್ಲ. ನೋಡು, ‘ನೀನು ಹೀಗೆ ಮಾಡಿರುವಿ ಸ್ವಲ್ಪ ತಿದ್ದಿಕೊಂಡು ಹೀಗಾದರೆ ಚಂದ ಒಳ್ಳೆಯದು’ ಎಂದು ಸ್ನೇಹದಿಂದ, ಪ್ರೀತಿಯಿಂದ ಹೇಳೋಣ.

ಸಂತ ಕಬೀರದಾಸರು ಒಂದೆಡೆ ‘ನಿಂದಕರು ಸದಾ ಜೊತೆಗಿರಲಿ, ಅದೂ ಮನೆಯಂಗಳದಲ್ಲಿದ್ದರೆ ಮತ್ತೂ ಚಂದ, ಅವರಿಗೆ ನೆರಳಾಗಿ ನೀನಿರು. ಇದರಿಂದ ನಿನ್ನ ಸ್ವಭಾವ ಶುದ್ಧ ಪುತ್ಥಳಿಯಂತಾದೀತು' ಎಂದು ಓದಿದ ನೆನಪಿದೆ. ನಮ್ಮನ್ನು ಯಾರಾದರು ಹಿರಿಯವರಿರಲಿ ಕಿರಿಯವರಿರಲಿ ಏನಾದರು ಹೇಳಿದಾಗ ಬೇಸರ ಮಾಡಿಕೊಳ್ಳಬಾರದು. ಅವರು ನಮ್ಮ ಒಳಿತಿಗಾಗಿ ಹೇಳ್ತಾರೆ ಎಂದು ಭಾವಿಸಿದರೆ, ನಾವು ಮತ್ತಷ್ಟು ಎತ್ತರಕ್ಕೇರಲು ಸಾಧ್ಯ. ಜ್ಞಾನವನ್ನು, ತಿಳುವಳಿಕೆಯನ್ನು ಪಡೆಯಲು ಯಾರಾದರೇನು? ಈಗ ಬರಹಗಾರರಲ್ಲೇ ನೋಡಿದರೆ, ತುಂಬಾ ಸಣ್ಣ ವಯಸ್ಸಿನರು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನುರಿತವರಿದ್ದಾರೆ. ಒಳ್ಳೆಯದು, ಸರಿ ಎನಿಸಿದ್ದು ಕಂಡು ಬಂದರೆ  ಸಾಹಿತ್ಯ ಮತ್ತು ವಯಸ್ಸಿನಲ್ಲಿ ಎಷ್ಟು ಹಿರಿಯವನಾದರೂ ನಾವು ಸ್ವೀಕರಿಸಬಹುದು. ಅದರಲ್ಲಿ ಸಣ್ಣವರಾಗುವ ಪ್ರಶ್ನೆಯೇ ಇಲ್ಲ.

ನಮ್ಮಲ್ಲಿ ಒಂದು ಮಾತಿದೆ ‘ಬೇರೆಯವರನ್ನು ಏನಾದರು ಹೇಳದಿದ್ದರೆ ಅವನಿಗೆ /ಳಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆಂದು. ಅದೊಂದು ವರ್ಗ ಬೇರೆ. ಅವರು ಇರುವುದೇ ಇತರರನ್ನು ಆಡಿಕೊಳ್ಳಲು. ತಾನು ಮಾತ್ರ ಸರಿ ಎನ್ನುವ ವರ್ಗದವರು. ಅಂಥವರನ್ನು ನಾವು ಗಣನೆಗೆ, ಲೆಕ್ಕಕ್ಕೆ ತೆಗೆದುಕೊಳ್ಳಬಾರದು. ಹೇಳ್ತಾ ಇರ್ತಾನೆ. ನಾವು ನಮ್ಮ ಕೆಲಸವನ್ನು ಕೂಡಿದಷ್ಟು ಪ್ರಾಮಾಣಿಕವಾಗಿ ಮಾಡಿದರಾಯಿತು. ನಿಂದಕರಿಗೆ ತಲೆ ತಗ್ಗಿಸದೆ ಸತ್ಯ, ನ್ಯಾಯ, ಧರ್ಮದಲ್ಲಿ ನಡೆದರೆ ನಮಗೆ ಕ್ಷೇಮ, ನಮ್ಮ ಆರೋಗ್ಯ ಸಹ ಚೆನ್ನಾಗಿರಬಹುದು. ಯೋಚಿಸೋಣ ಸ್ನೇಹಿತರೇ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ