ಒಂದು ಒಳ್ಳೆಯ ನುಡಿ - 125

ಒಂದು ಒಳ್ಳೆಯ ನುಡಿ - 125

ನಮ್ಮ ಮನಸ್ಸು ಟೇಪ್ ರೆಕಾರ್ಡ್ ಇದ್ದ ಹಾಗೆ. ಮನಸ್ಸಿಗೆ ವಿಷಯ ವಾಸನೆಗಳು ತಲುಪಿದೊಡನೆ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಬೇಕು. ಧನಾತ್ಮಕ ಇರಲಿ, ಋಣಾತ್ಮಕ ಬಿಟ್ಟು ಬಿಡೋಣ. ಇಲ್ಲದಿದ್ದರೆ ಮನಸ್ಸು ದೊಡ್ಡ ತ್ಯಾಜ್ಯ ಗುಂಡಿಯಾಗಬಹುದು. ತ್ಯಾಜ್ಯಗಳನ್ನು ತುಂಬಾ ದಿನ ಉಳಿಸಿದರೆ ನಮಗೆ ಗೊತ್ತಿದೆ ಏನಾಗಬಹುದೆಂದು. ಪ್ರವಾಹಕ್ಕೆ ಸಿಲುಕಿದ ಸುಳಿಯ ಹಾಗೆ ಆಗಬಹುದು. ಆರೋಗ್ಯವೂ ಕೆಡಬಹುದು. ನಮ್ಮ ನೆರಳು ನಮ್ಮ ಹಿಂದೆ, ಎದುರು ಸುತ್ತುವ ಹಾಗೆ ಮನಸ್ಸು ಸಹ ಗಿರಗಿಟಿ ತಿರುಗುವ ಹಾಗೆ ಇರ್ತದೆ. ನಮ್ಮ ಕಣ್ಣುಗಳು ನಮ್ಮ ಮನಸ್ಸನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬಹುದು. ‘ಮುಖ ಮನಸ್ಸಿನ ಕನ್ನಡಿ’ ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ಹಾಗಾದರೆ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದನ ಬೇಡವೇ? ಅನಿಸಬಹುದು. ಬೇಕು. ಎಷ್ಟು ಬೇಕೋ, ಹೇಗೆ ಬೇಕೋ ಅಷ್ಟೇ ಸ್ವೀಕರಿಸುವುದು ಜಾಣತನ. ಇಲ್ಲದ್ದನ್ನೆಲ್ಲ ಸ್ವೀಕರಿಸಬಾರದು. ಸುಪ್ತಮನಸ್ಸನ್ನು ಚೇತೋಹಾರಿಯಾಗಿಡಲು, ಉಲ್ಲಾಸವಾಗಿರಲು, ನೆಮ್ಮದಿಗಾಗಿ ಧ್ಯಾನ, ಯೋಗ, ಪ್ರಾರ್ಥನೆ, ಭಜನೆ, ಸತ್ಸಂಗ, ಒಳ್ಳೆಯ ಪುಸ್ತಕಗಳನ್ನು ಓದುವುದು, ಒಳ್ಳೆಯ ವಿಷಯಗಳನ್ನು ಚಿಂತಿಸುವುದು, ಬಂಧುಗಳೊಂದಿಗೆ ಒಮ್ಮೊಮ್ಮೆ ಮಾತನಾಡುವುದು, ಯಾವಾಗಲೂ ಸಂತಸದಿಂದಿರಲು ಪ್ರಯತ್ನಿಸುವುದು, ನಡಿಗೆ ಮುಂತಾದ ಒಳ್ಳೆಯ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಬಹಳ ಉತ್ತಮ. ಒಳ್ಳೆಯ ಮನಸ್ಸಿನಲ್ಲಿ ಒಳ್ಳೆಯ ಆರೋಗ್ಯ ಅಲ್ಲವೇ? 

ನಾವೆಲ್ಲರೂ ಬದುಕಿನ ಹಾದಿಯುದ್ದಕ್ಕೂ ಹೋರಾಟ ಮಾಡುವುದು ಯಾಕಾಗಿ? ನಾವು ನಮ್ಮ ಮುಂದಿನ ನಮ್ಮ ಮಕ್ಕಳು ಚೆನ್ನಾಗಿರಬೇಕೆಂಬ ಹಂಬಲಕ್ಕಾಗಿ. ಜೊತೆಗೆ ಸುತ್ತಮುತ್ತಲಿನವರಿಗೆ ನಮ್ಮಿಂದ ತೊಂದರೆಯಾಗದಂತೆ ಜೀವನ ಯಾನವಿರಬೇಕು.ಕಾಲಕಾಲಕ್ಕೆ ಉದಯಿಸಿ ಬಂದ ಮಹಾಪುರುಷರ ಜೀವನಚರಿತ್ರೆಗಳನ್ನು ಓದಿ ಮನನ ಮಾಡಿಕೊಳ್ಳಬಹುದು. ಸಮಾಜದ ಉಳಿವಿಗಾಗಿ ಗೈದ ಹೋರಾಟ, ತ್ಯಾಗ, ಸಂಘಟನೆ ಇವುಗಳನ್ನು ನಮ್ಮ ಮಕ್ಕಳ ಅರಿವಿಗೆ ತರಬಹುದು. ಋಷಿಮುನಿಗಳ ಅಪೂರ್ವ ಜ್ಞಾನವನ್ನು ಕಂಡ ನಾಡು ನಮ್ಮದು. ಓದಿದಾಗ ಮಾತ್ರ ವಿಷಯಗಳನ್ನು ಗ್ರಹಿಸಲು ಸಾಧ್ಯ. ನಾವೇನು ಮಾಡ್ತೇವೆ ಯಾರೋ ಹೇಳಿದ್ದನ್ನು ಸತ್ಯ ಎಂದು ನಂಬಿ ನಮ್ಮ ತಲೆಯನ್ನು ಕೆಡಿಸಿಕೊಳ್ಳುತ್ತೇವೆ. ಆ ವಿಷಯದ ಎಡಬಲ ನೋಡುವುದೇ ಇಲ್ಲ. ನಮ್ಮ ಸ್ವ ಆಲೋಚನೆ ಮಾಡುವುದೇ ಇಲ್ಲ. ಇದು ಏಕಮುಖ ತೀರ್ಮಾನ ಆಗಿಬಿಡುತ್ತದೆ. ಭಗವಂತ ನಮಗೆ ನೀಡಿದ ಈ ಆಲೋಚನಾ ಶಕ್ತಿಯನ್ನು ಬಳಸಿಕೊಂಡು ಒಳ್ಳೆಯದನ್ನು ಆರಿಸಿ ಜಳ್ಳನ್ನು ಬಿಟ್ಟು ಸಂತೋಷದಲ್ಲಿರಲು ಪ್ರಯತ್ನಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ